ಪಟನಾ: ಶಾಲಾ ಮಕ್ಕಳೊಂದಿಗೆ ಬೇಜವಾಬ್ದಾರಿಯಾಗಿ ಮತ್ತು ಉಡಾಫೆಯಾಗಿ ಮಾತನಾಡಿದ ಹಿರಿಯ ಐಎಎಸ್ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಹೇಳಿದ್ದಾರೆ. ಮಹಿಳಾ ಐಎಎಸ್ ಅಧಿಕಾರಿಯೊಬ್ಬರು ಕಾಂಡೋಮ್ (Condom Remarks) ಕುರಿತು ಶಾಲಾ ಮಕ್ಕಳೊಂದಿಗೆ ಅಸೂಕ್ಷ್ಮವಾಗಿ ನಡೆದುಕೊಂಡಿರುವ ಬಗ್ಗೆ ಅವರು ಗರಂ ಆಗಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಹುಡುಗಿಯೊಬ್ಬಳು ಐಎಎಸ್ ಅಧಿಕಾರಿಯೊಬ್ಬರಿಗೆ ಅಗ್ಗದ ದರದಲ್ಲಿ ನ್ಯಾನಿಟರಿ ನ್ಯಾಪ್‌ಕಿನ್ಸ್ ಒದಗಿಸಲು ಸಾಧ್ಯವೇ ಎಂದು ಕೇಳಿದ್ದರು. ಇದಕ್ಕೆ ಉತ್ತರಿಸಿದ್ದ ಅಧಿಕಾರಿ ಹಜ್ರೋತ್ ಕೌರ ಭಮ್ರಾ ಅವರು, ಅಗ್ಗದ ದರಕ್ಕೆ ಇಂದು ಸ್ಯಾನಿಟಿರಿ ನ್ಯಾಪ್‌ಕಿನ್ಸ್ ಕೇಳುತ್ತೀರಿ, ನಾಳೆ ಕಾಂಡೋಮ್ಸ್ ಕೇಳುತ್ತೀರಿ ಎಂದು ಉತ್ತರಿಸಿದ್ದರು. ಐಎಎಸ್ ಅಧಿಕಾರಿಯ ಈ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಚರ್ಚೆಗೊಳಗಾಗುತ್ತಿದೆ.
ಈ ಹೇಳಿಕೆಯು ವಿವಾದಕ್ಕೆ ತಿರುಗುತ್ತಿದ್ದಂತೆ ಹಿರಿಯ ಐಎಎಸ್ ಅಧಿಕಾರಿ ಈ ಬಗ್ಗೆ ಕ್ಷಮೆ ಕೋರಿದ್ದಾರೆ. ಏತನ್ಮಧ್ಯೆ, ಅಸೂಕ್ಷ್ಮವಾಗಿ ನಡೆದುಕೊಂಡಿರುವ ಅಧಿಕಾರಿಯ ವಿರುದ್ಧ ಕ್ರಮದ ಸುಳಿವನ್ನು ನೀಡಿದ್ದಾರೆ ಸಿಎಂ ನಿತೀಶ್ ಕುಮಾರ್ ಅವರು. ಮತ್ತೊಂದೆಡೆ, ರಾಷ್ಟ್ರೀಯ ಮಹಿಳಾ ಆಯೋಗ ಕೂಡ ಈ ಕುರಿತು ದೂರು ದಾಖಲಿಸಿಕೊಂಡಿದೆ. ಲಿಖಿತ ಹೇಳಿಕೆಯನ್ನು ನೀಡುವಂತೆ ಅಧಿಕಾರಿಗೆ ಆಯೋಗವು ಸೂಚಿಸಿದೆ.
ನಿತೀಶ್ ಕುಮಾರ್ ಹೇಳಿದ್ದೇನು?
ಐಎಎಸ್ ಅಧಿಕಾರಿಯ ಮಾತುಗಳು ಅಸೂಕ್ಷ್ಮವಾಗಿವೆ. ಇಂಥ ನಡವಳಿಕೆಯನ್ನು ಪ್ರದರ್ಶಿಸಿದ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ, ಮಹಿಳೆಯರಿಗೆ ಅಗ್ಗದ ದರದಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್ ಒದಗಿಸುವ ಬಗ್ಗೆ ಚರ್ಚಿಸಲು ಅಧಿಕಾರಿಗಳ ಸಭೆ ಕೂಡ ಕರೆಯಲಾಗಿದೆ. ಮಹಿಳಾ ಸಬಲೀಕರಣಕ್ಕೆ ನಾವು ಕಂಕಣಬದ್ಧರಾಗಿದ್ದೇವೆ. ನಾನು ಎಲ್ಲವನ್ನೂ ಮತ್ತು ಪ್ರತಿಯೊಂದನ್ನು ಮಾನಿಟರಿಂಗ್ ಮಾಡುತ್ತಿರುತ್ತೇನೆ. ಅಧಿಕಾರಿಯ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಸಿಎಂ ನಿತೀಶ್ ಕುಮಾರ್ ಅವರು ತಿಳಿಸಿದ್ದಾರೆ.
ಏನಿದು ವಿವಾದ?
ಪಟನಾ ಶಾಲೆಯೊಂದರಲ್ಲಿ ಕಾರ್ಯಕ್ರಮದಲ್ಲಿ ಹಿರಿಯ ಐಎಎಸ್ ಅಧಿಕಾರಿ ಹಜ್ರೋತ್ ಕೌರ ಭಮ್ರಾ ಅವರು ಪಾಲ್ಗೊಂಡಿದ್ದರು. ಈ ವೇಳೆ, ಶಾಲಾ ಬಾಲಕಿ ರಿಯಾಕುಮಾರಿ , ಅಗ್ಗದ ದರದಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್ಸ್ ಒದಗಿಸಬಹುದೇ ಎಂದು ಕೇಳಿದ್ದಳು. ಇದಕ್ಕೆ ಉತ್ತರಿಸಿದ ಅಧಿಕಾರಿ, ಇವತ್ತು ಸ್ಯಾನಿಟರಿ ಕೇಳುತ್ತಿದ್ದೀರಿ. ನಾಳೆ ಜೀನ್ಸ್ ಕೇಳುತ್ತೀರಿ, ಉತ್ತಮ ಶೂ ಕೊಡಿ ಎನ್ನುತ್ತೀರಿ. ಯಾವಾಗ ಫ್ಯಾಮಿಲೀ ಪ್ಲ್ಯಾನಿಂಗ್ ವಿಚಾರ ಬರುತ್ತದೋ ಆಗ ಕಾಂಡೋಮ್ಸ್ ಕೊಡಿ ಅಂತಾನೂ ಕೇಳುತ್ತೀರಿ ನೀವು ಎಂದಿದ್ದರು. ಈ ಹೇಳಿಕೆಯು ಭಾರೀ ವಿವಾದ ಹುಟ್ಟು ಹಾಕಿತ್ತು.
ಇದನ್ನೂ ಓದಿ |ಐಎಎಸ್ ಅಧಿಕಾರಿಗೆ ಬೆದರಿಕೆ ಕರೆ ಮಾಡಿದ ಆರೋಪಿಯ ಬಂಧನ