Site icon Vistara News

Narendra Modi: ಕರ್ನಾಟಕದಲ್ಲಿ ಮುಸ್ಲಿಮರಿಗೆ ಒಬಿಸಿ ಮೀಸಲಾತಿ; ಕಾಂಗ್ರೆಸ್‌ ಒಬಿಸಿ ವಿರೋಧಿ ಎಂದ ಮೋದಿ

Narendra Modi

Congress biggest enemy of OBCs: PM Narendra Modi after Karnataka includes Muslims in quota

ಭೋಪಾಲ್‌: ಎಲ್ಲ ಧರ್ಮಗಳಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಗಳಿಗೆ ನೀಡಬೇಕಾದ ಒಬಿಸಿ ಮೀಸಲಾತಿ ಪಟ್ಟಿಗೆ (OBC Reservation) ಕರ್ನಾಟಕ ಸರ್ಕಾರವು (Karnataka Government) ಎಲ್ಲ ಮುಸ್ಲಿಮರನ್ನು ಸೇರಿಸಿದೆ. ಇದರ ವಿರುದ್ಧ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗವು (NCBC) ಅಸಮಾಧಾನ ವ್ಯಕ್ತಪಡಿಸಿದೆ. “ಇದು ಸಾಮಾಜಿಕ ನ್ಯಾಯ ತತ್ವದ ವಿರುದ್ಧವಾದ ನಡೆ” ಎಂದಿದೆ. ಇದರ ಬೆನ್ನಲ್ಲೇ, ಒಬಿಸಿ ಪಟ್ಟಿಗೆ ಮುಸ್ಲಿಮರನ್ನು ಸೇರಿಸಿದ ಕಾಂಗ್ರೆಸ್‌ ವಿರುದ್ಧ ಪ್ರಧಾನಿ ನರೇಂದ್ರ ಮೋದಿ (Narendra Modi) ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಇತರೆ ಹಿಂದುಳಿದ ವರ್ಗಗಳಿಗೆ ಕಾಂಗ್ರೆಸ್‌ ಎಂದಿಗೂ ಶತ್ರು” ಎಂದು ಪ್ರಧಾನಿ ಟೀಕಿಸಿದ್ದಾರೆ.

ಮಧ್ಯಪ್ರದೇಶದ ಸಾಗರ್‌ ಜಿಲ್ಲೆಯಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಒಬಿಸಿ ಮೀಸಲಾತಿ ಕುರಿತು ನರೇಂದ್ರ ಮೋದಿ ಮಾತನಾಡಿದರು. “ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯದ ಎಲ್ಲರನ್ನೂ ಕಾಂಗ್ರೆಸ್‌ ಸರ್ಕಾರವು ಒಬಿಸಿ ಪಟ್ಟಿಗೆ ಸೇರಿಸಿದೆ. ಆ ಮೂಲಕ ಧರ್ಮದ ಆಧಾರದ ಮೇಲೆ ಹಿಂಬಾಗಿಲಿನಿಂದ ಮೀಸಲು ನೀಡಿದೆ. ಭವಿಷ್ಯದ ಪೀಳಿಗೆಗಳನ್ನು ನಾಶಪಡಿಸುವುದೇ ಕಾಂಗ್ರೆಸ್‌ ಉದ್ದೇಶವಾಗಿದೆ. ಅದರಲ್ಲೂ, ಕಾಂಗ್ರೆಸ್‌ ಎಂದಿಗೂ ಒಬಿಸಿ ಸಮುದಾಯದವರ ಶತ್ರು ಎಂಬುದು ಇದರಿಂದ ಸಾಬೀತಾಗಿದೆ” ಎಂದು ಮೋದಿ ಕುಟುಕಿದ್ದಾರೆ.

“ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡುವುದನ್ನು ನಮ್ಮ ಸಂವಿಧಾನವು ನಿರ್ಬಂಧಿಸುತ್ತದೆ. ಬಾಬಾಸಾಹೇಬ್‌ ಅಂಬೇಡ್ಕರ್‌ ಅವರೇ ಇದರ ವಿರುದ್ಧ ನಿಲುವು ತಾಳಿದ್ದರು. ಆದರೆ, ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲು ಕೆಲ ವರ್ಷಗಳ ಹಿಂದೆಯೇ ಕಾಂಗ್ರೆಸ್‌ ನಿರ್ಣಯ ತೆಗೆದುಕೊಂಡಿತ್ತು. ಇಂತಹ ಕಳ್ಳಾಟಗಳ ಮೂಲಕ ಕಾಂಗ್ರೆಸ್‌ ಜನರನ್ನು ಮೂರ್ಖರನ್ನಾಗಿಸಲು ಯತ್ನಿಸುತ್ತಿದೆ. ಆದರೆ, ಒಬಿಸಿ ಸಮುದಾಯದವರ ಹಕ್ಕುಗಳನ್ನು ಕಸಿದುಕೊಂಡ ಕಾಂಗ್ರೆಸ್‌ಗೆ ಜನರೇ ಸರಿಯಾದ ಪಾಠ ಕಲಿಸಬೇಕು” ಎಂದು ಮೋದಿ ಚಾಟಿ ಬೀಸಿದ್ದಾರೆ.

ದಾಖಲೆ ಕೊಟ್ಟ ಎನ್‌ಸಿಬಿಸಿ

ಕರ್ನಾಟಕ ಸರ್ಕಾರವು ಮುಸ್ಲಿಮರನ್ನು ಒಬಿಸಿಗೆ ಸೇರಿಸಿರುವ ಕುರಿತು ಎನ್‌ಸಿಬಿಸಿಯು ದಾಖಲೆಗಳನ್ನೂ ನೀಡಿದೆ. ಮಾಹಿತಿ ಪ್ರಕಾರ, “ಕರ್ನಾಟಕಲ್ಲಿ ಮುಸ್ಲಿಮರ ಸಂಖ್ಯೆ ಶೇ.12.92ರಷ್ಟಿದೆ. ಕೆಟಗರಿ II-B ಅನ್ವಯ ಕರ್ನಾಟಕದಲ್ಲಿರುವ ಎಲ್ಲ ಮುಸ್ಲಿಮರು ಒಬಿಸಿ ಕೆಟಗರಿ ವ್ಯಾಪ್ತಿಗೆ ಸೇರುತ್ತಾರೆ. ಕೆಟಗರಿ 1ರಲ್ಲಿ 17 ಮುಸ್ಲಿಂ ಸಮುದಾಯಗಳು, 2ಎ ಕೆಟಗರಿಯಲ್ಲಿ 19 ಮುಸ್ಲಿಂ ಸಮುದಾಯಗಳು ಬರುತ್ತವೆ. ಇದು ಸಾಮಾಜಿಕ ನ್ಯಾಯ ತತ್ವದ ವಿರುದ್ಧದ ತೀರ್ಮಾನವಾಗಿದೆ” ಎಂಬುದಾಗಿ ಎನ್‌ಸಿಬಿಸಿ ತಿಳಿಸಿದೆ.

“ಹಿಂದುಗಳು, ಮುಸ್ಲಿಮರು ಸೇರಿ ಎಲ್ಲ ಧರ್ಮಗಳಲ್ಲಿಯೇ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯದವರಿಗೆ ಮಾತ್ರ ಒಬಿಸಿ ಮೀಸಲಾತಿ ನೀಡಲಾಗುತ್ತಿದೆ. ಆದರೆ, ಒಂದಿಡೀ ಧರ್ಮಕ್ಕೇ ಒಬಿಸಿ ಮೀಸಲಾತಿ ನೀಡುವುದು ಆ ಮೀಸಲಾತಿಯ ತತ್ವಕ್ಕೆ ವಿರುದ್ಧವಾಗಿದೆ. ಆದರೆ, ಎಲ್ಲ ಮುಸ್ಲಿಂ ಸಮುದಾಯದವರನ್ನು ಒಬಿಸಿಗೆ ಸೇರ್ಪಡೆ ಮಾಡುವ ಮೂಲಕ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಒಬಿಸಿ ಕೆಟಗರಿ ವ್ಯಾಪ್ತಿಯ ಹಿಂದುಳಿದ ಸಮುದಾಯದವರ ಹಕ್ಕುಗಳನ್ನು ಕಸಿದುಕೊಂಡಿದೆ. ಹಾಗೆಯೇ, ಮೀಸಲಾತಿ ನೀಡಿರುವ ಕುರಿತು ಯಾವುದೇ ಮಾಹಿತಿಯನ್ನೂ ರಾಜ್ಯ ಸರ್ಕಾರ ಒದಗಿಸಿಲ್ಲ” ಎಂಬುದಾಗಿ ಎನ್‌ಸಿಬಿಸಿ ಅಸಮಾಧಾನ ವ್ಯಕ್ತಪಡಿಸಿದೆ.

ಮೀಸಲಾತಿ ಕೊಟ್ಟಿದ್ದು ನಿಜ ಎಂದ ಸಿದ್ದರಾಮಯ್ಯ

ಮುಸ್ಲಿಮರಿಗೆ ಒಬಿಸಿ ಮೀಸಲಾತಿ ಕೊಟ್ಟಿದ್ದು ನಿಜ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಿದ್ದಾರೆ. ” ಈ ಕುರಿತು ಎಕ್ಸ್‌ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು, “ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಸ್ಥಾಪಿಸಿದ ಚಿನ್ನಪ್ಪ ರೆಡ್ಡಿ ಆಯೋಗದ ವರದಿ ಆಧಾರದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಯನ್ನು ಗಮನಕ್ಕೆ ತೆಗೆದುಕೊಂಡು ಮುಸ್ಲಿಮರನ್ನು ಹಿಂದುಳಿದ ಜಾತಿಗಳ 2ಬಿ ವರ್ಗಕ್ಕೆ ಸೇರಿಸಲಾಗಿರುವುದು ನಿಜ. ಕಳೆದ ಮೂರು ದಶಕಗಳಿಂದ ರಾಜ್ಯದಲ್ಲಿ ಈ ಮೀಸಲಾತಿ ಜಾರಿಯಲ್ಲಿದೆ. ಕೇಂದ್ರದಲ್ಲಿ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರವಾಗಲಿ, ಕಳೆದ ಹತ್ತು ವರ್ಷಗಳಿಂದ ಅಧಿಕಾರದಲ್ಲಿರವ ನರೇಂದ್ರ ಮೋದಿ ಅವರ ಸರ್ಕಾರವಾಗಲಿ ಇಲ್ಲಿಯ ವರೆಗೆ ಈ ಮೀಸಲಾತಿಯನ್ನು ಪ್ರಶ್ನಿಸಿಲ್ಲ. ಬಿಜೆಪಿಯೂ ಸೇರಿದಂತೆ ಯಾರೂ ಇದನ್ನು ನ್ಯಾಯಾಲಯದಲ್ಲೂ ಪ್ರಶ್ನಿಸಿಲ್ಲ” ಎಂದಿದ್ದಾರೆ.

ಇದನ್ನೂ ಓದಿ: Muslims OBC Quota: ಎಲ್ಲ ಮುಸ್ಲಿಮರನ್ನು ಒಬಿಸಿಗೆ ಸೇರಿಸಿದ ಸಿದ್ದರಾಮಯ್ಯ ಸರ್ಕಾರ; ರಾಷ್ಟ್ರೀಯ ಆಯೋಗ ಕೆಂಡ!

Exit mobile version