Site icon Vistara News

Congress Crisis | ಅಧಿಕಾರ ಇದ್ದಾಗ ಮುಖಂಡರಿಗೆ ಕಾಂಗ್ರೆಸ್‌ ಅಂದರೆ ಭೂಷಣ, ಈಗ ಪಲಾಯನ!

Congress Crisis

ಮಲ್ಲಿಕಾರ್ಜುನ ತಿಪ್ಪಾರ, ಬೆಂಗಳೂರು
Success has many fathers, failure is an orphan! ಈ ಮಾತು ಕಾಂಗ್ರೆಸ್‌ನ ಇಂದಿನ ಪರಿಸ್ಥಿತಿಗೆ ಬಹಳ ಸೂಕ್ತವಾಗಿ ಹೊಂದುತ್ತದೆ. ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿದ್ದಾಗ ಎಲ್ಲ ಅಧಿಕಾರಗಳನ್ನು, ಹುದ್ದೆಗಳನ್ನು, ಸೌಲಭ್ಯ, ಸವಲತ್ತುಗಳನ್ನು ಅನುಭವಿಸಿದ ಹಿರಿಯ ನಾಯಕರು ಈಗ ಪಕ್ಷವನ್ನು ಒಬ್ಬೊಬ್ಬರಾಗಿ ತೊರೆಯುತ್ತಿದ್ದಾರೆ. ಹೀಗೆ ತೊರೆದವರೆಲ್ಲ ಕಾಂಗ್ರೆಸ್ ನಾಯಕತ್ವವನ್ನು ತೆಗಳಿಯೇ ಹೊರಟಿದ್ದಾರೆ. ಇಷ್ಟು ವರ್ಷ ಕಾಲ ಪಕ್ಷದೊಂದಿಗೆ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡವರು, ಪಕ್ಷ ಬಿಕ್ಕಟ್ಟು (Congress Crisis) ಎದುರಿಸುತ್ತಿರುವಾಗ ತಮ್ಮ ಸ್ವಹಿತಾಸಕ್ತಿಕ್ಕಾಗಿಯೋ, ಪ್ರತಿಷ್ಠೆಗಾಗಿಯೋ, ಆಮಿಷಕ್ಕಾಗಿಯೋ ತೊರೆಯುತ್ತಿರುವುದು ಸೋಜಿಗ!

ಕಾಂಗ್ರೆಸ್ ಪಕ್ಷವನ್ನು ತೊರೆದವವರೆನ್ನೆಲ್ಲ ಸುಮ್ಮನೆ ಒಮ್ಮೆ ಕಣ್ಣಾಡಿಸಿ. ಎಸ್ ಎಂ ಕೃಷ್ಣ, ಕ್ಯಾಪ್ಟನ್ ಅಮರೀಂದರ್ ಸಿಂಗ್, ಜ್ಯೋತಿರಾಧಿತ್ಯ ಸಿಂಧಿಯಾ, ಗುಲಾಂ ನಬಿ ಆಜಾದ್, ಕಪಿಲ್ ಸಿಬಲ್, ಅಶ್ವನಿ ಕುಮಾರ್, ಸುನೀಲ್ ಜಾಖಡ್, ಆರ್‌ಪಿಎನ್ ಸಿಂಗ್, ಕುಲ್ದೀಪ್ ಬಿಷ್ಣೋಯಿ, ಪಿ ಸಿ ಚಾಕೋ, ಜಿತಿನ್ ಪ್ರಸಾದ್ ಮುಂತಾದವರು. ಈ ಪಟ್ಟಿ ಇನ್ನೂ ಬೆಳೆಯುತ್ತಿದೆ!

ಹೀಗೆ ಪಕ್ಷ ಬಿಟ್ಟು ಹೋದವರ ಪೈಕಿ ಬಹುತೇಕರು ಬಿಜೆಪಿ ಪಕ್ಷವನ್ನೇ ಸೇರಿದ್ದಾರೆ. ಇನ್ನು ಕೆಲವರು ಸ್ವಂತ ಪಕ್ಷ ಸ್ಥಾಪಿಸಿ ಬಳಿಕ ಬಿಜೆಪಿಯೊಂದಿಗೆ ಪಕ್ಷವನ್ನು ವಿಲೀನಗೊಳಿಸಿದ್ದಾರೆ. ಮತ್ತೊಂದಿಷ್ಟು ನಾಯಕರು ಬೇರೆ ಪಕ್ಷಗಳಿಗೆ ಶರಣಾಗಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಸಮಾಜವಾದ, ನೆಹರುವಾದ, ಜಾತ್ಯತೀತ ತತ್ವಗಳ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುತ್ತಿದ್ದ ನಾಯಕರೆಲ್ಲರೂ ಈಗ ಏಕ್ದಮ್ ಸೈದ್ಧಾಂತಿಕವಾಗಿ ಸ್ಥಳಾಂತರಗೊಂಡಿದ್ದಾರೆ! ಇರಲಿ, ಅದೆಲ್ಲ ವೈಯಕ್ತಿಕ ಸಂಗತಿಗಳು. ಯಾರಿಗೂ ಯಾವ ಸಿದ್ಧಾಂತವೂ ಬಹಿಷ್ಕೃತವಲ್ಲ. ಆದರೆ, ಇಷ್ಟು ದಿನ ತಮಗೊಂದು ಇಮೇಜ್ ನೀಡಿದ ಪಕ್ಷವನ್ನು ಹಿಗ್ಗಾಮುಗ್ಗಾ ಟೀಕಿಸಿ, ಪಕ್ಷದ ಕಾರ್ಯಕರ್ತರ ಆತ್ಮವಿಶ್ವಾಸವನ್ನು ಮತ್ತಷ್ಟು ಕುಗ್ಗಿಸಿ ಹೋಗುತ್ತಿರುವುದು ಈಗಿನ ಸಮಸ್ಯೆ.

ಹಿರಿಯ ನಾಯಕರು ಹಾಗೂ ತೀರಾ ಮಹತ್ವಾಕಾಂಕ್ಷಿ ನಾಯಕರೆಲ್ಲರೂ ಪಕ್ಷದೊಳಗೇ ತಾವು ಬಯಸಿದ ಹುದ್ದೆಯೋ, ಅಧಿಕಾರವೋ ಸಿಗದಿದ್ದಕ್ಕೆ ಹೋಗಿರುವುದು ರಹಸ್ಯವಲ್ಲ. ಬಿಡುವಾಗ ಥರೇಹವಾರಿಯಾಗಿ ಪಕ್ಷ ಹಾಗೂ ಪಕ್ಷದ ನಾಯಕತ್ವದ ವಿರುದ್ಧ ಆರೋಪ ಮಾಡಿದರೂ, ಇದುವೇ ಸತ್ಯ. ಹಾಗೆಯೇ, ಬಿಟ್ಟು ಹೋದ ನಾಯಕರಿಂದಲೂ ಪಕ್ಷಕ್ಕೆ ಲಾಭವಾಗಿದೆ ಎಂಬುದನ್ನೂ ಅಲ್ಲಗಳೆಯುವಂತಿಲ್ಲ.

ಆಜಾದ್‌ಗೆ ಪಿಎಂ ಹುದ್ದೆಯೊಂದೇ ಬಾಕಿ!
1970ರ ದಶಕದ ಆರಂಭದಲ್ಲಿ ಕಾಂಗ್ರೆಸ್ ಮೂಲಕವೇ ಗುಲಾಂ ನಬಿ ಆಜಾದ್ ಅವರು ರಾಜಕಾರಣ ಆರಂಭಿಸಿದರು. ಮೊದಲಿಗೆ ಯುವ ಕಾಂಗ್ರೆಸ್ ನಾಯಕರಾಗಿ, ಆ ಮೇಲೆ ಜಮ್ಮು ಕಾಶ್ಮೀರದ ಕಾಂಗ್ರೆಸ್‌ನ ಪ್ರಮುಖ ನಾಯಕರಾಗಿ ದೇಶದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದರು. ಇದಕ್ಕೆಲ್ಲ ಕಾಂಗ್ರೆಸ್ ವೇದಿಕೆಯಾಗಿದೆ. ಆಜಾದ್, ಜಮ್ಮು ಮತ್ತು ಕಾಶ್ಮೀರದವರಾದರೂ ಪಕ್ಷವು ಅವರಿಗೆ ಮಹಾರಾಷ್ಟ್ರದ ವಾಸಿಮ್‌ ಕ್ಷೇತದಿಂದ ಟಿಕೆಟ್ ನೀಡಿ ಗೆಲ್ಲಿಸಿತು. ಅಷ್ಟೇ ಅಲ್ಲ 1982ರಲ್ಲಿ ಸಚಿವರೂ ಆದರು. ಆ ನಂತರ ಅವರ ಲೋಕಸಭೆ ಇಲ್ಲವೇ ರಾಜ್ಯಸಭೆ ಮೂಲಕ ಸತತವಾಗಿ ಸಂಸತ್ ಪ್ರವೇಶಿಸಿದ್ದಾರೆ. ಮಧ್ಯೆ, ಕಾಂಗ್ರೆಸ್‌ನಿಂದಲೇ ಕಾಶ್ಮೀರ ಮುಖ್ಯಮಂತ್ರಿಯೂ ಆಗಿದ್ದಾರೆ. ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕರೂ ಆಗಿದ್ದರು.

ಕಾಂಗ್ರೆಸ್‌ನಿಂದ ಅವರು ಯಾವೆಲ್ಲ ಖಾತೆಯ ಸಚಿವರಾಗಿದ್ದರು ಎನ್ನುವುದನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಅವರು ಕೈಯಾಡಿಸದೇ ಇಲಾಖೆಗಳೇ ಇಲ್ಲ! ಕಾನೂನು, ನ್ಯಾಯ, ಕಂಪನಿ ಅಫೇರ್ಸ್, ವಾರ್ತಾ ಸಚಿವ, ಸಂಸದೀಯ ವ್ಯವಹಾರ, ಗೃಹ ಇಲಾಖೆ, ಆಹಾರ ಮತ್ತು ನಾಗರಿಕ ಪೂರೈಕೆ, ವಿಮಾನಯಾನ ಮತ್ತು ಪ್ರವಾಸೋದ್ಯಮ, ನಗರಾಭಿವೃದ್ಧಿ… ಹೀಗೆ ಪ್ರಧಾನಿ ಹುದ್ದೆಯೊಂದನ್ನು ಬಿಟ್ಟು ಎಲ್ಲ ಹುದ್ದೆಗಳನ್ನು ಅನುಭವಿಸಿದ್ದಾರೆ. ಕೊನೆಗೆ ಪಕ್ಷ ಅಧಿಕಾರ ಇಲ್ಲದಿದ್ದಾಗ ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕರೂ ಆಗಿದ್ದರು. ಇಷ್ಟೆಲ್ಲ ಅಧಿಕಾರ ಅನುಭವಿಸಿ ಈಗ ಕಾಂಗ್ರೆಸ್ ತೊರೆದಿದ್ದು ಯಾಕೆ ಗೊತ್ತಾ? ರಾಜ್ಯಸಭೆಗೆ ಮತ್ತೆ ಸ್ಪರ್ಧಿಸಲು ಕಾಂಗ್ರೆಸ್ ನಾಯಕತ್ವ ಒಪ್ಪಿಗೆ ನೀಡದಿರುವುದು. ಅಂದಿನಿಂದಲೇ ನಾಯಕತ್ವದಲ್ಲಿ ಘನಘೋರ ತಪ್ಪುಗಳು ಕಾಣಲಾರಂಭಿಸಿದವು ಆಜಾದ್‌ಗೆ!

ಕೃತಘ್ನ ಅಶ್ವನಿ ಕುಮಾರ್
ಹೆಚ್ಚುವರಿ ಸಾಲಿಸಿಟರ್ ಜನರಲ್ ಆಫ್ ಇಂಡಿಯಾ ಸ್ಥಾನಕ್ಕೇರಿದ ಅತ್ಯಂತ ಕಿರಿಯ ವ್ಯಕ್ತಿ ‌ ಎಂಬ ದಾಖಲೆ ಅಶ್ವನಿ ಕುಮಾರ್ ಹೆಸರಿನಲ್ಲಿದೆ. ಇವರು ಪಂಜಾಬ್ ಮೂಲದವರು. ಯುಪಿಎ ಸರ್ಕಾರದಲ್ಲಿ ಕಾನೂನು ಮತ್ತು ನ್ಯಾಯ ಸಚಿವರಾಗಿದ್ದರು. ಯೋಜನೆ, ವಿಜ್ಞಾನ ಮತ್ತು ತಂತ್ರಜ್ಞಾನ, ಭೂ ವಿಜ್ಞಾನ ಇಲಾಖೆಗಳ ನಿರ್ವಹಣೆ ಹೊತ್ತಿದ್ದರು. ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾಗಿದ್ದರು. ಅವರ ಅಭ್ಯುದಯಕ್ಕೆ ಕಾಂಗ್ರೆಸ್ ಪಕ್ಷವೇ ಕಾರಣವಾಗಿತ್ತು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಸಚಿವ ಸ್ಥಾನಗಳು ಮಾತ್ರವಲ್ಲದೇ ಅನೇಕ ನಿಯೋಗಳು, ಆಯೋಗಗಳು, ಸ್ಥಾಯಿ ಸಮಿತಿಗಳಲ್ಲಿ ಕಾರ್ಯನಿರ್ವಹಿಸಲು ಪಕ್ಷವು ಅವಕಾಶ ಕಲ್ಪಿಸಿತ್ತು. ಆದರೆ, ಅಶ್ವನಿ ಕುಮಾರ್ ಅವರಿಗೆ ಹೊರಹೋಗುವಾಗ ಇದಾವುದು ನೆನಪಿಗೆ ಬರಲೇ ಇಲ್ಲ.

‘ರಾಷ್ಟ್ರವಾದಿ’ ಕ್ಯಾ. ಅಮರೀಂದರ್ ಸಿಂಗ್
ರಾಜೀವ್ ಗಾಂಧಿಯ ಶಾಲಾ ಸ್ನೇಹಿತ ಮತ್ತು ಅವರಿಂದಾಗಿಯೇ ರಾಜಕಾರಣಕ್ಕೆ ಬಂದವರು ಕ್ಯಾ. ಅಮರೀಂದರ್ ಸಿಂಗ್. 1984ರಲ್ಲಿ ಕಾಂಗ್ರೆಸ್ ಮೂಲಕವೇ ಲೋಕಸಭೆ ಸದಸ್ಯರಾದರು. ಆಪರೇಷನ್ ಬ್ಲೂ ಸ್ಟಾರ್ ಕಾರ್ಯಾಚರಣೆ ವಿರೋಧಿಸಿ ಕಾಂಗ್ರೆಸ್ ತೊರೆದು ಅಕಾಲಿದಳ ಸೇರಿದರು. ಅಲ್ಲಿಂದಲೂ ಹೊರ ಬಂದು ತಮ್ಮದೇ ಆದ ಶಿರೋಮಣಿ ಅಕಾಲಿ ದಳ(ಫ್ಯಾಂಥಿಕ್) ಪಕ್ಷ ಸ್ಥಾಸಿದರು. 1998ರಲ್ಲಿ ತಮ್ಮ ಪಕ್ಷವನ್ನು ಕಾಂಗ್ರೆಸ್‌ನೊಂದಿಗೆ ವಿಲೀನ ಮಾಡಿದರು. ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥರಾಗಿ ಮೂರು ಅವಧಿಗೆ ಕೆಲಸ ಮಾಡಿದ್ದಾರೆ. ಎರಡು ಬಾರಿ ಕಾಂಗ್ರೆಸ್‌ನಿಂದಲೇ ಪಂಜಾಬ್ ಸಿಎಂ ಆಗಿದ್ದರು ಎಂಬುದನ್ನು ಅವರೀಗ ಮರೆತಿರುವ ಹಾಗಿದೆ. ಇದರ ಮಧ್ಯೆಯೇ ಲೋಕಸಭೆಗೂ ಆಯ್ಕೆಯಾಗಿದ್ದರು. ಕಾಂಗ್ರೆಸ್ ಉನ್ನತ ಸಮಿತಿಯಲ್ಲೂ ಅವರಿದ್ದರು. ಆದರೆ ಕಳೆದ ಎಲೆಕ್ಷನ್ ಮುಂಚೆ, ಸಿಎಂ ಹುದ್ದೆ ಬಿಟ್ ಬಿಡಿ ಎಂದ ಕೂಡಲೇ ಅವರಿಗೆ ಎಲ್ಲವೂ ತಪ್ಪಾಗಿ ಕಾಣಲಾರಂಭಿಸಿತು. ಮೊನ್ನೆಯ ಚುನಾವಣೆ ಮುಂಚೆ ತಮ್ಮದೇ ಹೊಸ ಪಕ್ಷ ಸ್ಥಾಪಿಸಿ, ಎಲೆಕ್ಷನ್ ಬಳಿಕ ಬಿಜೆಪಿಯಲ್ಲಿ ವಿಲೀನ ಮಾಡಿದ್ದಾರೆ.

ಸುನೀಲ್ ಜಾಖಡ್ ಹೊಸ ಜ್ಞಾನೋದಯ
ಐದು ದಶಕಗಳ ಕಾಲ ಕಾಂಗ್ರೆಸ್‌ನಲ್ಲಿದ್ದವರು. ಆದರೆ, ತೀರಾ ಇತ್ತೀಚೆಗೆ ಇವರಿಗೆ ನ್ಯಾಷನಲೀಸಮ್ ಬಗ್ಗೆ ಜ್ಞಾನೋದಯವಾಗಿ ಬಿಜೆಪಿ ಸೇರಿದ್ದಾರೆ! ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥರಾಗಿದ್ದ ಇವರನ್ನು, ಸಿಎಂ ಹುದ್ದೆಗೆ ಪರಿಗಣಿಸಲಿಲ್ಲ ಎಂಬ ಕಾರಣಕ್ಕೆ ಪಕ್ಷವನ್ನು ಬಿಟ್ಟು ಹೊರಟು ಹೋದರು. ಅದಕ್ಕೂ ಮೊದಲು ವಿಧಾನಸಭೆಯಲ್ಲಿ ಕಾಂಗ್ರೆಸ್‌ನಿಂದಲೇ ಪ್ರತಿಪಕ್ಷದ ನಾಯಕರಾಗಿದ್ದು. ಪಕ್ಷದಿಂದಲೇ ಶಾಸಕರಾಗಿ, ಸಂಸದರಾಗಿ ಅಧಿಕಾರವನ್ನು ಅನುಭವಿಸಿದ್ದಾರೆ.

ಕ್ಷೇತ್ರ ಗೆಲ್ಲಲಾಗದ ಕಪಿಲ್ ಸಿಬಲ್
ದೇಶದ ಅಗ್ರಮಾನ್ಯ ವಕೀಲರಾಗಿರುವ ಕಪಿಲ್ ಸಿಬಲ್ ಅವರಿಗೂ ಕಾಂಗ್ರೆಸ್‌ನಿಂದ ಬಹಳಷ್ಟು ದಕ್ಕಿದೆ. ಈಗಲೂ ನ್ಯಾಯಾಲಯಗಳಲ್ಲಿ ಕಾಂಗ್ರೆಸ್ ಅನ್ನು ಪ್ರತಿನಿಧಿಸುತ್ತಿದ್ದಾರೆ. ರಾಜ್ಯಸಭೆಗೆ ಮತ್ತೆ ಆಯ್ಕೆ ಮಾಡಲು ನಿರಾಕರಿಸಿದ್ದೇ ತಡ ಕಾಂಗ್ರೆಸ್ ಬಿಟ್ಟು ಹೊರ ಬಂದರು. ಸಮಾಜವಾದಿ ಪಕ್ಷದ ಬೆಂಬಲದೊಂದಿಗೆ ರಾಜ್ಯಸಭೆಗೆ ಆಯ್ಕೆಯಾದರು. ಇಲ್ಲಿ ಅವರ ಸ್ವಹಿತಾಸಕ್ತಿ ಮತ್ತು ಅವಕಾಶತನವೇ ಎದ್ದು ಕಾಣುತ್ತದೆ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಕಪಿಲ್ ಸಿಬಲ್ ಅವರು ಯಾವೆಲ್ಲ ಇಲಾಖೆಗೆ ಸಚಿವರು ಆಗಿದ್ದರು ನೋಡಿ- ಕಮ್ಯುನಿಕೇಷನ್ ಮತ್ತು ಇನ್ಫಾರ್ಮೇಷನ್ ಟೆಕ್ನಾಲಜಿ, ಮಾನವ ಸಂಪನ್ಮೂಲ, ಸೈನ್ಸ್ ಮತ್ತು ಟೆಕ್ನಾಲಜಿ, ಅರ್ಥ್ ಸೈನ್ಸ್, ಕಾನೂನು ಮತ್ತು ನ್ಯಾಯ… ಹೀಗೆ ಹಲವಾರು ಇಲಾಖೆಗಳು. ಆಗೆಲ್ಲ ಕಾಂಗ್ರೆಸ್‌ ಕಪಿಲ್ ಸಿಬಲ್ ಅವರಿಗೆ ಆಪ್ತವಾಗಿತ್ತು. ಕಾಂಗ್ರೆಸ್‌ನಿಂದಲೇ ಇಷ್ಟೊಂದು ಹುದ್ದೆಗಳನ್ನು ಅಲಂಕರಿಸಿದರೂ ದಿಲ್ಲಿಯಲ್ಲಿ ತಮ್ಮ ಕ್ಷೇತ್ರವನ್ನು ಗೆಲ್ಲಲು ಆಗಲಿಲ್ಲ! ಇಂಥ ನಾಯಕರು ಕಾಂಗ್ರೆಸ್‌ಗೆ ಇನ್ನೆಷ್ಟು ಸಂಸದರನ್ನು ಗೆದ್ದು ತಂದಾರು?

ಹೀಗೆ ಕಾಂಗ್ರೆಸ್ ಬಿಟ್ಟು ಹೋದ ಹಿರಿಯರ ಪೈಕಿ ಬಹುತೇಕ ಎಲ್ಲವನ್ನೂ ಅನುಭವಿಸಿಯೇ ಹೋಗಿದ್ದಾರೆ. ಇದಕ್ಕೆ ನಮ್ಮ ರಾಜ್ಯದವರೇ ಆದ ಎಸ್ ಎಂ ಕೃಷ್ಣ ಕೂಡ ಹೊರತಲ್ಲ. ಕಾಂಗ್ರೆಸ್‌ನಿಂದಲೇ ರಾಜ್ಯದ ಮುಖ್ಯಮಂತ್ರಿಯಾದರು. ವಿದೇಶಾಂಗ ಸಚಿವರಾದರು, ಮಹಾರಾಷ್ಟ್ರದ ರಾಜ್ಯಪಾಲರಾದರು. ಆದರೆ ಕೊನೆಗೆ ಕಾಂಗ್ರೆಸ್ ನೀಡಿದ ಯಾವ ಅವಕಾಶ, ಗೌರವವನ್ನೂ ಗಣನೆಗೆ ತೆಗೆದುಕೊಳ್ಳದೇ ಬಿಜೆಪಿ ಸೇರಿ, ಕಾಂಗ್ರೆಸ್‌ಗೆ ಭವಿಷ್ಯ ಇಲ್ಲ ಎಂದು ಷರಾ ಬರೆದರು. ಹಾಗಂತ ಬಿಜೆಪಿಯಲ್ಲಿ ಇವರಿಗೇನೂ ಉನ್ನತ ಹುದ್ದೆ ಈವರೆಗೆ ಸಿಕ್ಕಿಲ್ಲ!

ಇದೇ ರೀತಿಯಲ್ಲಿ ಆರ್‌ಪಿಎನ್ ಸಿಂಗ್, ಜತಿನ್ ಪ್ರಸಾದ್, ಪಿ ಸಿ ಚಾಕೋ ಸೇರಿದಂತೆ ಅನೇಕರು ಪಕ್ಷ ದ್ರೋಹ ಬಗೆದಿದ್ದಾರೆ, ಯಾವಾಗ ಪಕ್ಷಕ್ಕೆ ನಾಯಕರ ಅಗತ್ಯವಿತ್ತೋ ಆಗ ಪಕ್ಷವನ್ನು ನಡುನೀರಿನಲ್ಲಿ ಕೈ ಬಿಟ್ಟು ಹೊರ ನಡೆದಿದ್ದಾರೆ!

ಇವರೆಲ್ಲ ಅತಿ ಮಹತ್ವಾಕಾಂಕ್ಷಿಗಳು!
ಹಿರಿಯರು ಅಧಿಕಾರ ಅನುಭವಿಸಿ ಪಕ್ಷದಿಂದ ಹೊರ ಹೋಗಿದ್ದು ಅನ್ಯಾಯ ಎನ್ನಬಹುದು. ಆದರೆ, ಮಧ್ಯಪ್ರದೇಶದ ಜ್ಯೋತಿರಾಧಿತ್ಯ, ಗುಜರಾತ್‌ನ ಹಾರ್ದಿಕ್ ಪಟೇಲ್, ರಾಜಸ್ಥಾನದ ಸಚಿನ್ ಪೈಲಟ್(ಆಗಾಗ ಬಂಡಾಯ ಏಳುತ್ತಾರೆ) ಮುಂತಾದವರು ಕಾಂಗ್ರೆಸ್ ತೊರೆಯಲು ಕಾರಣ ಏನೆಂದು ಕೇಳಬಹುದು. ಇದಕ್ಕೆಲ್ಲ ಒಂದೇ ಉತ್ತರ- ಅತಿ ಮಹತ್ವಾಕಾಂಕ್ಷೆ! ವಯಸ್ಸಿನಲ್ಲಿ ಕಿರಿಯರಾಗಿರುವ ಈ ನಾಯಕರಿಗೆ ತಕ್ಷಣವೇ ಯಾವುದಾದರೂ ದೊಡ್ಡ ಹುದ್ದೆ ಬೇಕಾಗಿದೆ. ಕಮಲನಾಥ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗಲೇ ಸಿಎಂ ಆಗಬೇಕೆಂಬ ಮಹತ್ವಾಕಾಂಕ್ಷೆ ಸಿಂಧಿಯಾ ಅವರದ್ದು. ಅಂತಿಮವಾಗಿ ಅವರು ಪಕ್ಷವನ್ನೇ ಒಡೆದು ಬಿಜೆಪಿ ಸೇರಿದರು. ಇತ್ತ ಹಾರ್ದಿಕ್ ಕೂಡ ಮಹತ್ವಾಕಾಂಕ್ಷಿಯೇ. ಅವರಿಗೂ ಅವರದ್ದೇ ಸಮಸ್ಯೆಗಳಿವೆ. ಮತ್ತೊಂದೆಡೆ ಸಚಿನ್ ಪೈಲಟ್ ಅವರಿಗೂ ಅರ್ಜೆಂಟ್ ಆಗಿ ಮುಖ್ಯಮಂತ್ರಿಯಾಗಬೇಕಿದೆ. ಇನ್ನೂ ಹಲವರು ತಮ್ಮದೇ ಕೆಲವು ಕಾರಣಕ್ಕಾಗಿ ಪಕ್ಷ ತೊರೆದರೂ, ತಪ್ಪನ್ನೆಲ್ಲ ಪಕ್ಷ ಹಾಗೂ ನಾಯಕತ್ವದ ಮೇಲೆ ಹಾಕಿದ್ದಾರೆ!

ನಿಯತ್ತಿನ ಪ್ರಶ್ನೆ
2014 ಮತ್ತು 2019ರಲ್ಲಿ ಹೀನಾಯವಾಗಿ ಸೋತಿರುವ ಕಾಂಗ್ರೆಸ್‌ಗೆ ಈ ಎಲ್ಲ ನಾಯಕರು ಶಕ್ತಿ ತುಂಬಬೇಕಿತ್ತು. ಆ ಸಾಮರ್ಥ್ಯ ಕೆಲವರಿಗಾದರೂ ಇದೆ. ಆದರೆ, ಅವರು ಹಾಗೆ ಮಾಡಲಿಲ್ಲ. ಮುಳುಗುತ್ತಿರುವ ಹಡಗು ಎಂದು ಜಂಪ್ ಮಾಡಿ, ಬೆಳಗುತ್ತಿರುವ ಐಷಾರಾಮಿ ಬಿಜೆಪಿ ಹಡಗು ಸೇರಿದರು! ತಾಂತ್ರಿಕವಾಗಿ ಇದರಲ್ಲೇನೂ ತಪ್ಪಿಲ್ಲ. ಆದರೆ, ಹೋಗುವಾಗ ಪಕ್ಷದ ಬಗ್ಗೆ ಪುಂಖಾನುಪುಂಖ ಆರೋಪ ಮಾಡಿರುವ ಬಗ್ಗೆ ಪಕ್ಷದ ನಿಷ್ಠಾವಂತರು ಇವರ ನಿಯತ್ತಿನ ಪ್ರಶ್ನೆ ಎತ್ತುತ್ತಿರುವುದೂ ಸಹಜವಾಗಿಯೇ ಇದೆ.

ಇದನ್ನೂ ಓದಿ | Congress President Election | ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಅಕ್ಟೋಬರ್​ 17ಕ್ಕೆ; ಮತ ಎಣಿಕೆ 19ಕ್ಕೆ

Exit mobile version