Site icon Vistara News

ಕಾಶ್ಮೀರ ಉಗ್ರರದ್ದು ಸ್ವಾತಂತ್ರ್ಯ ಹೋರಾಟ ಎಂದ ನಿತಾಶಾ ವಾಪಸ್;‌ ಬಿಜೆಪಿ-ಕಾಂಗ್ರೆಸ್‌ ವಾಕ್ಸಮರ

Nitasha Kaul

Congress vs BJP after UK writer Nitasha Kaul claims denied entry into India

ಬೆಂಗಳೂರು/ನವದೆಹಲಿ: ಬೆಂಗಳೂರಿನಲ್ಲಿ ನಡೆದ ಸಂವಿಧಾನ ಮತ್ತು ರಾಷ್ಟ್ರೀಯ ಏಕತಾ ಸಮ್ಮೇಳನದಲ್ಲಿ ಭಾಗವಹಿಸಲು ಆಗಮಿಸಿದ್ದ ಲಂಡನ್‌ ಮೂಲದ ಲೇಖಕಿ ನಿತಾಶಾ ಕೌಲ್ (Nitasha Kaul) ಅವರನ್ನು ವಲಸೆ ಅಧಿಕಾರಿಗಳು (Immigration Officers) ಬೆಂಗಳೂರು ವಿಮಾನ ನಿಲ್ದಾಣದಿಂದ ವಾಪಸ್‌ ಕಳುಹಿಸಿದ ಬೆನ್ನಲ್ಲೇ ಬಿಜೆಪಿ ಹಾಗೂ ಕಾಂಗ್ರೆಸ್‌ ನಾಯಕರ ಮಧ್ಯೆ ವಾಕ್ಸಮರ ಶುರುವಾಗಿದೆ. ಭಾರತ ವಿರೋಧಿ ಮನಸ್ಥಿತಿಯ ಲೇಖಕಿಯನ್ನು ವಾಪಸ್‌ ಕಳುಹಿಸಲಾಗಿದೆ ಎಂದ ಬಿಜೆಪಿ (BJP) ಹೇಳಿದರೆ, ಕೇಂದ್ರ ಸರ್ಕಾರವು ರಾಜ್ಯಕ್ಕೆ ಮಾಡಿದ ಅವಮಾನ ಎಂದು ಕಾಂಗ್ರೆಸ್‌ (Congress) ದೂರಿದೆ.

“ನಿತಾಶಾ ಕೌಲ್‌ ಅವರು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಆದರೆ, ಸಮರ್ಪಕವಾದ ಕಾರಣ ನೀಡದೆ ಅವರನ್ನು ವಾಪಸ್‌ ಕಳುಹಿಸಲಾಗಿದೆ. ಭಾರತ ಮೂಲದ ಲೇಖಕಿಯನ್ನು ಒಕ್ಕೂಟ ವ್ಯವಸ್ಥೆಯ ರಾಜ್ಯ ಸರ್ಕಾರವೊಂದು ಆಹ್ವಾನಿಸಿದೆ. ಆದರೆ, ಅವರನ್ನು ವಾಪಸ್‌ ಕಳುಹಿಸಿರುವುದು ಕೇಂದ್ರ ಸರ್ಕಾರವು ರಾಜ್ಯಕ್ಕೆ ಮಾಡಿದ ಅವಮಾನವಾಗಿದೆ. ದೇಶವೀಗ ನಿರಂಕುಶ ಪ್ರಭುತ್ವದಲ್ಲಿದೆಯೇ? ಸಂವಿಧಾನದ ಬಗ್ಗೆ ಚರ್ಚಿಸುವ ಅಭಿವ್ಯಕ್ತಿ ಸ್ವಾತಂತ್ರ್ಯವೂ ದೇಶದಲ್ಲಿಲ್ಲವೇ” ಎಂದು ಕಾಂಗ್ರೆಸ್‌ ಶಾಸಕ ರಿಜ್ವಾನ್‌ ಅರ್ಷದ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಿರುಗೇಟು ಕೊಟ್ಟ ಬಿಜೆಪಿ

ಕಾಂಗ್ರೆಸ್‌ ಆರೋಪಗಳಿಗೆ ಬಿಜೆಪಿ ತಿರುಗೇಟು ನೀಡಿದೆ. “ಸಿದ್ದರಾಮಯ್ಯನವರಿಗೆ ನಾಚಿಕೆ ಇಲ್ಲವೇ? ನೀವು ಸಂವಿಧಾನಕ್ಕೆ ಸವಾಲು ಹಾಕಲು, ಭಾರತದ ಏಕತೆ ಮತ್ತು ಸಮಗ್ರತೆಗೆ ಬೆದರಿಕೆ ಹಾಕಲು ಪ್ರಯತ್ನಿಸುತ್ತಿದ್ದೀರಾ? ಕಾಂಗ್ರೆಸ್ ಪಕ್ಷವು ತನ್ನ ವಿಭಜಕ ಅಜೆಂಡಾಗಳಿಗೆ ನೆಲವನ್ನು ಸಿದ್ಧಪಡಿಸಲು ಕರ್ನಾಟಕವನ್ನು ತನ್ನ ಪ್ರಯೋಗಾಲಯವನ್ನಾಗಿ ಬಳಸಿಕೊಳ್ಳುತ್ತಿದೆʼ ಇದು ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಯನ್ನು ದುರ್ಬಲಗೊಳಿಸುವುದು ಈಗ ಸ್ಪಷ್ಟವಾಗಿದೆ. ಕರ್ನಾಟಕ ತೆರಿಗೆ ಪಾವತಿದಾರರ ವೆಚ್ಚದಲ್ಲಿ, ಕಾಂಗ್ರೆಸ್ ಸರ್ಕಾರವು ಭಯೋತ್ಪಾದಕ ಸಹಾನುಭೂತಿಗಳು, ನಗರ ನಕ್ಸಲರು, ರಾಷ್ಟ್ರವಿರೋಧಿಗಳು, ಗಲಭೆ ಆಪಾದಿತರಿಗೆ ಮಣೆ ಹಾಸುತ್ತಿದ್ದು, ಚುನಾವಣೆಗೆ ಮುಂಚಿತವಾಗಿ ಭಾರತವನ್ನು ಅಸ್ಥಿರಗೊಳಿಸಲು ಹಣವನ್ನು ಹರಿಸುತ್ತಿದೆʼʼ ಎಂದು ಬಿಜೆಪಿ ಟೀಕಿಸಿದೆ.

ಏನಿದು ಪ್ರಕರಣ?

ನಿತಾಶಾ ಕೌಲ್ ಅವರನ್ನು ಫೆಬ್ರವರಿ 24 ಮತ್ತು 25 ರಂದು ಬೆಂಗಳೂರಿನಲ್ಲಿ ಆಯೋಜಿಸಿದ್ದ ‘ಸಂವಿಧಾನ ಮತ್ತು ರಾಷ್ಟ್ರೀಯ ಏಕತಾ ಸಮಾವೇಶ’ದಲ್ಲಿ ಪ್ರತಿನಿಧಿಯಾಗಿ ಭಾಗವಹಿಸಲು ಕಾಂಗ್ರೆಸ್ ಸರ್ಕಾರ ಆಹ್ವಾನಿಸಿತ್ತು. ಈ ಬಗ್ಗೆ ಕೌಲ್ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹದೇವಪ್ಪ ಅವರು ಕಳುಹಿಸಿದ ಆಹ್ವಾನದ ಪ್ರತಿ ಮತ್ತು ನೋಂದಣಿ ವಿವರಗಳನ್ನು ಎಕ್ಸ್ ಮೂಲಕ ಹಂಚಿಕೊಂಡಿದ್ದರು.

ಕಾಶ್ಮೀರಿ ಪಂಡಿತೆಯಾಗಿರುವ ನಿತಾಶಾ ಕೌಲ್, ಆರೆಸ್ಸೆಸ್‌ನ ಕಟು ಟೀಕಾಕಾರರಾಗಿದ್ದಾರೆ. ಕೌಲ್ ಭಾರತೀಯ ಪ್ರಜೆಯೂ ಆಗಿದ್ದಾರೆ. ಆದರೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಂದ ಕೌಲ್ ಅವರನ್ನು ಬೆಂಗಳೂರು ವಿಮಾನ ನಿಲ್ದಾಣದಿಂದಲೇ ವಾಪಸ್ ಕಳಿಸಲಾಗಿದೆ. ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಕೌಲ್, “ನಾವು ಏನೂ ಮಾಡಲು ಸಾಧ್ಯವಿಲ್ಲ. ದಿಲ್ಲಿಯಿಂದ ಆದೇಶ ಬಂದಿದೆ ಎಂಬ ಮಾತು ಹೊರತುಪಡಿಸಿ ಬೇರಾವ ಕಾರಣವನ್ನೂ ಅಧಿಕಾರಿಗಳು ನನಗೆ ನೀಡಲಿಲ್ಲ. ನಾನು ಭಾರತ ಪ್ರವೇಶಿಸಲು ಸಾಧ್ಯವಿಲ್ಲ ಎಂಬ ಯಾವುದೇ ಪೂರ್ವಭಾವಿ ಮಾಹಿತಿ ಅಥವಾ ನೋಟಿಸ್ ಅನ್ನು ನನಗೆ ನೀಡಲಾಗಿರಲಿಲ್ಲ” ಎಂದು ಬರೆದುಕೊಂಡಿದ್ದಾರೆ.

ನಾನು ಬೆಂಗಳೂರಿಗೆ ಬಂದಿಳಿದ 24 ಗಂಟೆಯ ನಂತರ ಬ್ರಿಟಿಷ್ ಏರ್‌ವೇಸ್ ವಿಮಾನದ ಮೂಲಕ ನನ್ನನ್ನು ಲಂಡನ್‌ಗೆ ವಾಪಸ್‌ ಕಳುಹಿಸಿದರು. ನಾನು ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ 12 ಗಂಟೆಗಳನ್ನು ಕಳೆದಿದ್ದೇನೆ. ಹಲವಾರು ಗಂಟೆಗಳ ಕಾಲ ನನ್ನನ್ನು ವಿಚಾರಣೆ ನಡೆಸಿದರು ಮತ್ತು 24 ಗಂಟೆಗಳ ನಂತರ ವಾಪಸ್ ಕಳುಹಿಸಿದರು ಎಂದು ಕೌಲ್ ಆರೋಪಿಸಿದ್ದರು. ಆದರೆ, ಇದಕ್ಕೂ ಮೊದಲು ಕಾಶ್ಮೀರ ವಿಷಯದಲ್ಲಿ ಮೂಗು ತೂರಿಸಿದ್ದ ನಿತಾಶಾ, ಜಮ್ಮು-ಕಾಶ್ಮೀರದಲ್ಲಿ ಉಗ್ರರು ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದಾರೆ ಎಂದಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version