Site icon Vistara News

Year-ender 2022 | ಈ ವರ್ಷ ಹೆಚ್ಚು ಸುದ್ದಿಯಾದ, ಕಿಡಿ ಹೊತ್ತಿಸಿದ ಪ್ರಮುಖ ವಿವಾದಗಳು ಯಾವವು?

Controversies In India 2022

ಭಾರತಕ್ಕೂ, ವಿವಾದಗಳಿಗೂ ಎಲ್ಲಿಲ್ಲದ ನಂಟು. ದೇಶದಲ್ಲಿ ಭಾಷೆ, ಆಹಾರ, ಜಾತಿ, ಧರ್ಮ, ಪಂಥ, ಸಂಸ್ಕೃತಿ, ರಾಜಕೀಯ ಪಕ್ಷಗಳು, ಅವುಗಳ ಸಿದ್ಧಾಂತಗಳು, ಆಚಾರ-ವಿಚಾರಗಳಲ್ಲಿ ಎಷ್ಟು ವೈವಿಧ್ಯತೆ ಇದೆಯೋ, ಅಷ್ಟೇ ವೈರುಧ್ಯಗಳಿವೆ. ಹಾಗಾಗಿ, ದೇಶದಲ್ಲಿ ಬಹುತೇಕ ವಿಷಯಗಳು ವಿವಾದ ಸೃಷ್ಟಿಸುತ್ತವೆ. ರಾಜಕಾರಣಿಯೊಬ್ಬರು ನೀಡಿದ ಹೇಳಿಕೆ, ನಟಿಯೊಬ್ಬಳು ಧರಿಸಿದ ಉಡುಪು, ಸಿನಿಮಾ, ಜಾಹೀರಾತಿನ ದೃಶ್ಯಗಳು, ಇನ್ಯಾರೋ ಸೇವಿಸುವ ಆಹಾರ, ಮತ್ಯಾರದ್ದೋ ಜೀವನ ಶೈಲಿ ಕೂಡ ವಿವಾದದ (Year-ender 2022) ಕೇಂದ್ರಬಿಂದು ಆಗುತ್ತವೆ.

ಹಾಗಾದರೆ, 2022ರಲ್ಲಿ ದೇಶದಲ್ಲಿ ಸಂಚಲನ ಮೂಡಿಸಿದ ವಿವಾದಗಳು ಯಾವವು? ಯಾವ ಕಾರಣಕ್ಕಾಗಿ ವಿವಾದ ಉಂಟಾಯಿತು? ಯಾರು ವಿವಾದ ಸೃಷ್ಟಿಸಿದರು? ಆ ವಿವಾದದ ವಿರುದ್ಧ ಹೇಗೆ ಆಕ್ರೋಶ ವ್ಯಕ್ತವಾಯಿತು? ವಿವಾದಕ್ಕೆ ಕೇಂದ್ರ ಬಿಂದು ಯಾರು? ಯಾವ ಯಾವ ವಿಷಯಗಳು ವಿವಾದಕ್ಕೀಡಾದವು ಎಂಬುದು ಸೇರಿ ಹಲವು ವಿವಾದಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ. 2022ಕ್ಕೆ ವಿದಾಯ ಹೇಳಿ, ಹೊಸ ವಸಂತಕ್ಕೆ ಕಾಲಿಡುವ ಹೊತ್ತಿನಲ್ಲಿ ವಿವಾದಗಳ ಸುತ್ತ ಒಂದು ಸುತ್ತು ಗಿರಕಿ ಹೊಡೆದು ಬರೋಣ.

ಪ್ರವಾದಿ ಕುರಿತು ನೂಪುರ್‌ ಶರ್ಮಾ ಹೇಳಿಕೆ
ಕಳೆದ ಜೂನ್‌ನಲ್ಲಿ ಬಿಜೆಪಿ ಉಚ್ಚಾಟಿತ ವಕ್ತಾರೆ ನೂಪುರ್‌ ಶರ್ಮಾ ಅವರು ಪ್ರವಾದಿ ಮೊಹಮ್ಮದ್‌ ಕುರಿತು ನೀಡಿದ ಹೇಳಿಕೆಯು ದೇಶದಲ್ಲಿ ವಿವಾದ ಭುಗಿಲೇಳಲು ಕಾರಣವಾಯಿತು. ನೂಪುರ್‌ ಶರ್ಮಾ ನೀಡಿದ ಹೇಳಿಕೆ ಖಂಡಿಸಿ ಭಾರತದಾದ್ಯಂತ ಪ್ರತಿಭಟನೆಗಳು ನಡೆದವು. ಇದು ಹಿಂಸಾಚಾರಕ್ಕೂ ಕಾರಣವಾಯಿತು. ಬೇರೆ ದೇಶಗಳು ಕೂಡ ನೂಪುರ್‌ ಹೇಳಿಕೆಯನ್ನು ಖಂಡಿಸಿದವು. ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದವು. ಕೊನೆಗೆ ಬಿಜೆಪಿಯು ನೂಪುರ್‌ ಶರ್ಮಾ ಅವರನ್ನು ಪಕ್ಷದಿಂದ ವಜಾಗೊಳಿಸಿತು. ಸುಪ್ರೀಂ ಕೋರ್ಟ್‌ ಕೂಡ ಅಸಮಾಧಾನ ವ್ಯಕ್ತಪಡಿಸಿತು. ಆದರೆ, ಇದುವರೆಗೆ ಅವರ ಬಂಧನ ಮಾತ್ರ ಸಾಧ್ಯವಾಗಿಲ್ಲ.

ದಿ ಕಾಶ್ಮೀರ್‌ ಫೈಲ್ಸ್‌ ಸಿನಿಮಾ ಸುತ್ತಮುತ್ತ
ಪ್ರಸಕ್ತ ವರ್ಷದ ಮಾರ್ಚ್‌ನಲ್ಲಿ ಬಿಡುಗಡೆಯಾದ ದಿ ಕಾಶ್ಮೀರ್‌ ಫೈಲ್ಸ್‌ ಸಿನಿಮಾ ದೇಶಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ. ಕಾಶ್ಮೀರಿ ಪಂಡಿತರ ಹತ್ಯಾಕಾಂಡದ ಮಾಹಿತಿ, ಕರಾಳ ಮುಖ ಇರುವ ಸಿನಿಮಾವನ್ನು ಜನ ಮೆಚ್ಚಿದ್ದಾರೆ. ಬಾಕ್ಸ್‌ ಆಫೀಸ್‌ನಲ್ಲಿಯೂ ಉತ್ತಮ ಗಳಿಕೆ ಕಂಡಿದೆ. ಹೀಗಿದ್ದರೂ ದಿ ಕಾಶ್ಮೀರ್‌ ಫೈಲ್ಸ್‌ ಸಿನಿಮಾ ವಿವಾದಕ್ಕೀಡಾಯಿತು. ಕಾಶ್ಮೀರದಲ್ಲಿ ನಡೆದ ಹತ್ಯಾಕಾಂಡವನ್ನು ವೈಭವೀಕರಿಸಲಾಗಿದೆ, ಸುಳ್ಳು ಮಾಹಿತಿ ನೀಡಲಾಗಿದೆ, ಇದು ಬಿಜೆಪಿ ಪ್ರಾಯೋಜಿತ ಚಲನಚಿತ್ರ ಎಂಬ ಆರೋಪಗಳು ಕೇಳಿಬಂದವು. ಸಿನಿಮಾ ಬ್ಯಾನ್‌ ಮಾಡಬೇಕು ಎಂಬ ಆಕ್ರೋಶ ವ್ಯಕ್ತವಾಯಿತು. ವರ್ಷದ ಕೊನೆಯಲ್ಲಿ ಇಸ್ರೇಲ್‌ ಸಿನಿಮಾ ನಿರ್ದೇಶಕ ನಡಾವ್‌ ಲ್ಯಾಪಿಡ್‌ ಅವರು ದಿ ಕಾಶ್ಮೀರ್‌ ಫೈಲ್ಸ್‌ ಸಿನಿಮಾ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದರು. ಆಕ್ರೋಶ ವ್ಯಕ್ತವಾದ ಬಳಿಕ ಲ್ಯಾಪಿಡ್‌ ಕ್ಷಮೆಯಾಚಿಸಿದರು.

ಅಗ್ನಿಪಥ ಯೋಜನೆಗೆ ಭಾರಿ ವಿರೋಧ
ದೇಶದ ಸೇನೆಗೆ ಕಿರು ಅವಧಿಗೆ ಸೇವೆ ಸಲ್ಲಿಸುವ, ಸಾವಿರಾರು ಜನರಿಗೆ ಉದ್ಯೋಗ ನೀಡುವ ಅಗ್ನಿಪಥ ಯೋಜನೆ ಜಾರಿಗೆ ಕಳೆದ ಜೂನ್‌ನಲ್ಲಿ ಕೇಂದ್ರ ಸರ್ಕಾರ ತೀರ್ಮಾನಿಸಿತು. ಆದರೆ, ಸರ್ಕಾರದ ಯೋಜನೆಗೆ ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾಯಿತು. ಪಂಜಾಬ್‌, ಹರಿಯಾಣದಲ್ಲಂತೂ ಯುವಕರು ಬೀದಿಗಿಳಿದು ಹೋರಾಟ ನಡೆಸಿದರು. ರೈಲು ನಿಲ್ದಾಣಗಳ ಮೇಲೆ ದಾಳಿ ನಡೆಸಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯುಂಟು ಮಾಡಿದರು. ರೈಲು ಬೋಗಿಗೆ ಬೆಂಕಿ ಹಚ್ಚಿದರು. ಆದರೆ, ಇದಾವುದಕ್ಕೂ ಕೇಂದ್ರ ಸರ್ಕಾರ ಜಗ್ಗಲಿಲ್ಲ. ಈಗ ಯೋಜನೆ ಅಡಿಯಲ್ಲಿ ನೇಮಕಾತಿ ನಡೆಯುತ್ತಿದೆ. ಲಕ್ಷಾಂತರ ಜನ ಅಗ್ನಿಪಥ ಯೋಜನೆಗೆ ಅರ್ಜಿ ಹಾಕಿದ್ದಾರೆ.

ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು
ಶಿವಸೇನೆ, ಕಾಂಗ್ರೆಸ್‌ ಹಾಗೂ ಎನ್‌ಸಿಪಿ ಜತೆಗೂಡಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಿದ್ದವು. ಆಡಳಿತ ಸರಾಗವಾಗಿಯೇ ನಡೆದಿತ್ತು. ಆದರೆ, ಏಕನಾಥ್‌ ಶಿಂಧೆ ಅವರು ಜೂನ್‌ನಲ್ಲಿ ಶಿವಸೇನೆ ಶಾಸಕರನ್ನು ಕರೆದುಕೊಂಡು ಹೋಗಿ ಅಸ್ಸಾಂನ ಐಷಾರಾಮಿ ಹೋಟೆಲ್‌ನಲ್ಲಿ ಬೀಡುಬಿಟ್ಟರು. ಇದು ದೇಶಾದ್ಯಂತ ರಾಜಕೀಯ ವಿವಾದಕ್ಕೆ ಕಾರಣವಾಯಿತು. ಹಲವು ದಿನಗಳವರೆಗೆ ಬಿಕ್ಕಟ್ಟು ಸೃಷ್ಟಿಯಾಯಿತು. ಬಿಜೆಪಿಯೇ ಇದರ ರೂವಾರಿ ಎಂಬ ಆರೋಪಗಳು ಕೇಳಿಬಂದವು. ಕೊನೆಗೆ ಉದ್ಧವ್‌ ಠಾಕ್ರೆ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಬಿಜೆಪಿ ಜತೆಗೂಡಿದ ಏಕನಾಥ್‌ ಶಿಂಧೆ, ಅಚ್ಚರಿಯ ಬೆಳವಣಿಗೆಯಲ್ಲಿ ಮುಖ್ಯಮಂತ್ರಿಯಾದರು. ಈಗ ಶಿವಸೇನೆ ಎಂದರೆ ಉದ್ಧವ್‌ ಠಾಕ್ರೆ ಬಣ, ಏಕನಾಥ್‌ ಶಿಂಧೆ ಬಣ ಎಂಬಂತಾಗಿದೆ.

ಲಾಲ್‌ ಸಿಂಗ್‌ ಛಡ್ಡಾ ಸಿನಿಮಾ ವಿವಾದ
ಬಾಲಿವುಡ್‌ ನಟ ಆಮೀರ್‌ ಖಾನ್‌ ನಟಿಸಿದ ಲಾಲ್‌ ಸಿಂಗ್‌ ಛಡ್ಡಾ ಸಿನಿಮಾ ಬಿಡುಗಡೆಗೂ ಮುನ್ನ ಹಾಗೂ ಬಿಡುಗಡೆಯ ನಂತರವೂ ವಿವಾದದ ಕೇಂದ್ರಬಿಂದುವಾಯಿತು. ಭಾರತ ಸುರಕ್ಷಿತವಾಗಿಲ್ಲ ಎಂದು ಆಮೀರ್‌ ಖಾನ್‌ ಅವರು 2015ರಲ್ಲಿ ನೀಡಿದ್ದ ಹೇಳಿಕೆಯನ್ನು ಇಟ್ಟುಕೊಂಡು ಅವರ ಸಿನಿಮಾ ನಿಷೇಧಿಸಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಶುರುವಾಯಿತು. ರಾಜಕೀಯ ನಾಯಕರು ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದರು. ಸಿನಿಮಾ ನೋಡಿ ಎಂದು ಖುದ್ದು ಆಮೀರ್‌ ಖಾನ್‌ ಅವರೇ ಮನವಿ ಮಾಡಿದರು. ಆದರೆ, ಜನಾಕ್ರೋಶದ ಪರಿಣಾಮವೋ, ಆಮೀರ್‌ ಖಾನ್‌ ದುರದೃಷ್ಟವೋ ಅಥವಾ ಜನರಿಗೆ ಸಿನಿಮಾ ಹಿಡಿಸಲಿಲ್ಲವೋ ಏನೋ, ಸಿನಿಮಾ ಹಿಟ್‌ ಆಗಲಿಲ್ಲ. ಬಾಕ್ಸ್‌ ಆಫೀಸ್‌ನಲ್ಲಿ ಕಲೆಕ್ಷನ್‌ ಮಾಡಲಿಲ್ಲ.

ಭಾರತ-ಚೀನಾ ಗಡಿ ಸಂಘರ್ಷ
ಅರುಣಾಚಲ ಪ್ರದೇಶದ ತವಾಂಗ್‌ ಸೆಕ್ಟರ್‌ನಲ್ಲಿ ಇತ್ತೀಚೆಗೆ ಭಾರತ ಹಾಗೂ ಚೀನಾ ಸೈನಿಕರ ಮಧ್ಯೆ ನಡೆದ ಸಂಘರ್ಷವು ಈಗಲೂ ಚರ್ಚೆ, ವಿವಾದ, ರಾಜಕೀಯದ ವಿಷಯವಾಗಿದೆ. ಭಾರತದ ಯೋಧರೇ ಚೀನಾ ಸೈನಿಕರಿಗೆ ಹೊಡೆಯುತ್ತಿರುವ ವಿಡಿಯೊ ಲಭ್ಯವಾದರೂ, ರಾಹುಲ್‌ ಗಾಂಧಿ ಅವರು, “ನಮ್ಮ ಸೈನಿಕರು ಪೆಟ್ಟು ತಿನ್ನುತ್ತಿದ್ದಾರೆ” ಎಂದು ಹೇಳುವ ಮೂಲಕ ವಿವಾದ ಹುಟ್ಟಿಸಿದರು. ಇದು ನೆಹರು ಅವರು ಪ್ರಧಾನಿಯಾಗಿದ್ದಾಗ ಚೀನಾ ವಿರುದ್ಧದ ಯುದ್ಧದಲ್ಲಿ ಭಾರತ ಸೋತ ವಿಷಯದವರೆಗೆ ಚರ್ಚೆಗೆ ಗ್ರಾಸವಾಯಿತು. ಸಂಸತ್ತಿನಲ್ಲೂ ಇದೇ ವಿಷಯ ಇಟ್ಟುಕೊಂಡು ಪ್ರತಿಪಕ್ಷಗಳು ಗಲಾಟೆ ಮಾಡಿದವು. ಬಿಜೆಪಿ ನಾಯಕರು ಕೂಡ ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದರು.

ವಿದೇಶದಲ್ಲಿ ನಡೆದ ಪ್ರಮುಖ ಘಟನೆ, ದುರಂತ, ಬೆಳವಣಿಗೆಗಳು
|
ಉಕ್ರೇನ್‌ ಮೇಲೆ ಯುದ್ಧ ಸಾರಿದ ರಷ್ಯಾ ಜಗತ್ತಿನ ತಲೆನೋವಾಗಿ ಪರಿಣಮಿಸಿದೆ. ಉಕ್ರೇನ್‌ನಲ್ಲಿ ರಾಕೆಟ್‌, ಕ್ಷಿಪಣಿ, ಗುಂಡಿನ ದಾಳಿ ಮೂಲಕ ಸಾವಿರಾರು ಜನರ ಹತ್ಯೆ, ಲಕ್ಷಾಂತರ ಜನರ ವಲಸೆಗೆ ರಷ್ಯಾ ಕಾರಣವಾಗಿದೆ. ಜಗತ್ತಿನ ರಾಷ್ಟ್ರಗಳು ರಷ್ಯಾ ಮೇಲೆ ನಿರ್ಬಂಧ ಹೇರಿದರೂ ಸೇನೆ ವಾಪಸ್‌ಗೆ ವ್ಲಾಡಿಮಿರ್‌ ಪುಟಿನ್‌ ಮನಸ್ಸು ಮಾಡುತ್ತಿಲ್ಲ.
| ಆಸ್ಕರ್‌ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ವಿವಾದಕ್ಕೆ ಕಾರಣವಾಯಿತು. ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ ಹಾಸ್ಯ ಕಲಾವಿದ ಕ್ರಿಸ್‌ ರಾಕ್‌ ಅವರು ತಮ್ಮ ಪತ್ನಿಯ ಬಗ್ಗೆ ಜೋಕ್‌ ಮಾಡಿದರು ಎಂದು ನಟ ವಿಲ್‌ ಸ್ಮಿತ್‌ ಅವರು ರಾಕ್‌ ಅವರಿಗೆ ಕಪಾಳಮೋಕ್ಷ ಮಾಡಿದರು. ಇದು ಜಗತ್ತಿನಾದ್ಯಂತ ಚರ್ಚೆಗೆ ಗ್ರಾಸವಾಯಿತು.
| ಬ್ರಿಟನ್‌ ರಾಜಕೀಯ ಬಿಕ್ಕಟ್ಟು ಭಾರತ ಮಾತ್ರವಲ್ಲ ವಿಶ್ವದ ಗಮನ ಸೆಳೆಯಿತು. ಬೋರಿಸ್‌ ಜಾನ್ಸನ್‌ ರಾಜೀನಾಮೆ ಬಳಿಕ ಸುದೀರ್ಘ ಸಮಯದವರೆಗೆ ಚುನಾವಣೆ ನಡೆಯಿತು. ಗೆಲುವು ಸಾಧಿಸಿದ ಲಿಜ್‌ ಟ್ರಸ್‌ ಅವರು ಎರಡೇ ತಿಂಗಳಿಗೆ ರಾಜೀನಾಮೆ ನೀಡಿದರು. ಈಗ ಭಾರತ ಮೂಲದ ರಿಷಿ ಸುನಕ್‌ ಅವರು ಪ್ರಧಾನಿಯಾಗಿದ್ದಾರೆ.
| ಟೆಸ್ಲಾ ಕಂಪನಿ ಸಿಇಒ, ಜಾಗತಿಕ ಉದ್ಯಮಿ ಎಲಾನ್‌ ಮಸ್ಕ್‌ ಅವರು ಟ್ವಿಟರ್‌ ಜಾಲತಾಣವನ್ನು ಖರೀದಿಸಿದ್ದು, ಅದರ ಸುತ್ತಲಿನ ಬೆಳವಣಿಗೆಗಳು ಕೂಡ ಜಗತ್ತಿನ ಗಮನ ಸೆಳೆದವು. ಮೊದಲು ಖರೀದಿಸುವೆ ಎಂದು, ಬಳಿಕ ಒಲ್ಲೆ ಎಂದು, ಕೊನೆಗೆ ಖರೀದಿಸಿದ ಮಸ್ಕ್‌ ಈಗ, ಉದ್ಯೋಗಿಗಳ ವಜಾ, ನಿಯಮ ಬದಲಾವಣೆ ಮೂಲಕ ಸುದ್ದಿಯಲ್ಲಿದ್ದಾರೆ.

ಇದನ್ನೂ ಓದಿ | Year-ender | 2022ರಲ್ಲಿ ಭಾರತ ಕ್ರಿಕೆಟ್​ ಕ್ಷೇತ್ರದ ಏಳು ಬೀಳಿನ ಹಾದಿ ಹೀಗಿತ್ತು

Exit mobile version