ಹೃದಯಸ್ತಂಭನ, ಹೃದಯವೈಫಲ್ಯ, ಹೃದಯಾಘಾತದಿಂದ ಆಗುವ ಸಾವುಗಳು ಕೊರೊನಾ ಸೋಂಕಿನ ಕಾಲದ ಬಳಿಕ ಉುಲ್ಬಣಗೊಂಡಿರುವುದು ಇಂದು ಕಳವಳದ ಅಂಶವಾಗಿದೆ. ಆದರೆ ಇದನ್ನು ಸಾಬೀತುಪಡಿಸುವ ಅಂಕಿಅಂಶಗಳು ಸಿಕ್ಕಿರಲಿಲ್ಲ. ಈಗ ಅದೂ ದೊರೆತಿದೆ. 30 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವಜನರಲ್ಲಿ ಹೃದಯಾಘಾತದ ಸಾವುಗಳು 2018 ಮತ್ತು 2022ರ ನಡುವೆ 40%ರಷ್ಟು ಹೆಚ್ಚಾಗಿರುವುದು ಕಂಡುಬಂದಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ನೀಡಿದ ವಾರ್ಷಿಕ ವರದಿ (NCRB records) ತಿಳಿಸಿದೆ. ಎನ್‌ಸಿಆರ್‌ಬಿ ನೀಡಿದ ʼಭಾರತದಲ್ಲಿ ಅಪಘಾತ ಸಾವುಗಳು ಮತ್ತು ಆತ್ಮಹತ್ಯೆಗಳು’ ವರದಿಯಲ್ಲಿ, ಒಟ್ಟಾರೆ ಹೃದಯಾಘಾತದ ಸಾವುಗಳಲ್ಲಿ 26%ರಷ್ಟು ಹೆಚ್ಚಳ ಕಂಡುಬಂದಿರುವುದನ್ನೂ ದಾಖಲಿಸಿದೆ. 2022ರಲ್ಲಿ 32,410 ಜನರ ಸಾವಿಗೆ ಕಾರಣವಾದ 32,457 ಹೃದಯಾಘಾತ ಘಟನೆಗಳು ಸಂಭವಿಸಿವೆ. 2018ರಲ್ಲಿ 25,764 ಹೃದಯಾಘಾತದ ಸಾವುಗಳು ಸಂಭವಿಸಿವೆ. 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ, ಹೃದಯಾಘಾತದ ಸಾವುಗಳು 2018ರಲ್ಲಿ 2,371 ಇತ್ತು. 2022ರಲ್ಲಿ ಅದು 3,329ಕ್ಕೆ ಏರಿದೆ. 30 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಹೃದಯಾಘಾತದ ಸಾವುಗಳು 23,392ರಿಂದ 29,081ಕ್ಕೆ ಏರಿದೆ ಎಂದು ವರದಿ ಹೇಳಿದೆ. ಇದೀಗ ಈ ಬಗ್ಗೆ ಇನ್ನಷ್ಟು ಆಳವಾಗಿ ಚಿಂತಿಸಲು, ಅಧ್ಯಯನ ನಡೆಸಲು ಸಕಾಲವಾಗಿದೆ.
ಕೋವಿಡ್-19 ನಂತರ ಹಠಾತ್ ಸಾವುಗಳು ಹೆಚ್ಚಾಗುತ್ತಿರುವುದು ವರದಿಯಾಗಿವೆ. ಆದರೆ ಅಂತಹ ಸಾವುಗಳಿಗೆ ಕೊರೊನಾವೇ ಮೂಲ ಎಂದು ಖಚಿತಪಡಿಸಲು ಸಾಕಷ್ಟು ಪುರಾವೆಗಳು ಲಭ್ಯವಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಇತ್ತೀಚೆಗೆ ಲೋಕಸಭೆಗೆ ತಿಳಿಸಿತ್ತು. ಕೋವಿಡ್-19 ರ ನಂತರ ಹೆಚ್ಚುತ್ತಿರುವ ಹೃದಯ ಸ್ತಂಭನ ಪ್ರಕರಣಗಳ ಬಗ್ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ICMR) ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ (NIE) ಅಧ್ಯಯನವನ್ನು ನಡೆಸಿವೆ. 18-45 ವರ್ಷ ವಯಸ್ಸಿನ, ಯಾವುದೇ ಕೊಮೊರ್ಬಿಡಿಟಿ ಕಾಯಿಲೆಗಳಿಲ್ಲದ ಜನರ ಹಠಾತ್ ಸಾವುಗಳ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ. ಇದೇ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯ (ICMR) ಕೆಲವು ತಿಂಗಳ ಹಿಂದೆ ಒಂದು ಅಧ್ಯಯನ ವರದಿ ನೀಡಿತ್ತು. ಅದರ ಪ್ರಕಾರ, ಹೃದಯಾಘಾತದ ಭೀತಿ ಇರುವ ಕಾರಣ ಒಂದಷ್ಟು ಸಮಯದವರೆಗೆ ಕೊರೊನಾ ಸೋಂಕಿತರು ಹೆಚ್ಚು ಸಮಯದವರೆಗೆ ಅಥವಾ ಹೆಚ್ಚು ಭಾರ ಹೊರುವ ಕೆಲಸ ಮಾಡಬಾರದು. ಒಂದು ವರ್ಷ ಅಥವಾ ಎರಡು ವರ್ಷಗಳವರೆಗೆ ಇಂತಹ ವ್ಯಕ್ತಿಗಳು ಅತಿಯಾದ ವ್ಯಾಯಾಮ, ಜಿಮ್‌ನಲ್ಲಿ ವರ್ಕೌಟ್ ಕೂಡ ಮಾಡಬಾರದು ಎಂದು ಹೇಳಿತ್ತು.
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಕುಸ್ತಿಪಟುಗಳ ಆಂತರಿಕ ಕುಸ್ತಿ ನಿಲ್ಲಲಿ, ಕ್ರೀಡೆಯ ಮಾನ ಉಳಿಯಲಿ
ಕೊರೊನಾ ಸೋಂಕಿನ ನಂತರ ಹೃದಯಾಘಾತ ಪ್ರಮಾಣ ಏರಿಕೆಯಾಗಿರುವುದನ್ನು ಜಾಗತಿಕ ವರದಿಗಳೇ ದೃಢಪಡಿಸಿವೆ. ಜಾಗತಿಕ ವರದಿಯೊಂದರ ಪ್ರಕಾರ, ಸಾಂಕ್ರಾಮಿಕದ ನಂತರ 24-45 ವರ್ಷದೊಳಗಿನವರಲ್ಲಿ ಹೃದಯಾಘಾತ ಪ್ರಮಾಣ ಶೇ.30ರಷ್ಟು ಏರಿಕೆಯಾಗಿದೆ. ಆ ಮೂಲಕ ಅಂತಾರಾಷ್ಟ್ರೀಯವಾಗಿಯೂ ಕೊರೊನಾ ನಂತರ ಹೃದಯಾಘಾತ ಪ್ರಮಾಣ ಹೆಚ್ಚಾಗಿದೆ ಎಂಬುದು ದೃಢಪಟ್ಟಿದೆ. ಕೊರೊನಾ ನಂತರ ಹೃದಯಾಘಾತ ಪ್ರಮಾಣ ಶೇ.3ರಿಂದ ಶೇ.5ರಷ್ಟು ಏರಿಕೆಯಾಗಿದೆ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಕೂಡ ಹೇಳಿದ್ದರು. ಈಗ ಯುವಕರಿಗೂ ಹೃದಯಾಘಾತ ಹೆಚ್ಚುತ್ತಿದೆ. ಅಧಿಕ ಒತ್ತಡ, ಜೀವನ ಶೈಲಿ, ಆಹಾರ ಶೈಲಿ ಇದಕ್ಕೆ ಕಾರಣವಾಗಿದೆ ಎಂದಿದ್ದಾರೆ. ಈ ಬಗ್ಗೆ ಸಮಗ್ರವಾದ ಅಧ್ಯಯನ ನಡೆಯುವುದು ಅಗತ್ಯವಾಗಿದೆ. ಕೋವಿಡ್ ಸೋಂಕು ಒಂದು ಸಾರ್ವಜನಿಕ ತುರ್ತುಸ್ಥಿತಿ. ಅದರಿಂದ ಉಂಟಾಗಿರಬಹುದಾದ ಹೃದಯ ಸಮಸ್ಯೆಗಳನ್ನೂ ಇನ್ನೊಂದು ತುರ್ತುಸ್ಥಿತಿ ಎಂದೇ ತಿಳಿದು ಸರ್ಕಾರ ಕಾರ್ಯಪ್ರವೃತ್ತವಾಗಬೇಕು. ದುಡಿದು ದೇಶದ ಅಮೂಲ್ಯ ಸೊತ್ತಾಗಬೇಕಾದ ಯುವಜನ ಮಾಗುವ ಮೊದಲೇ ಬಿದ್ದುಹೋಗುವುದು ಅನ್ಯಾಯ.
ಕೊರೊನಾದಿಂದಾಗಿ ತುಂಬಾ ಪೀಡಿತರಾದವರಂತೂ ಈ ಬಗ್ಗೆ ಅತೀವ ಎಚ್ಚರ ವಹಿಸಲೇಬೇಕಿದೆ. ಇತ್ತೀಚೆಗೆ 45 ವರ್ಷದ ಒಳಗಿನ ಮಹಿಳೆಯರು ಹಾಗೂ ಪುರುಷರಲ್ಲಿ ಕೂಡಾ ಸಡನ್ ಹಾರ್ಟ್ ಅಟ್ಯಾಕ್ ಕಂಡು ಬರುತ್ತಿದೆ. ಆಹಾರ ಪದ್ಧತಿಯಲ್ಲಿ ಬದಲಾವಣೆ ಹಾಗೂ ವೇಗವಾಗಿ ದೇಹ ತೂಕ ಇಳಿಸಿಕೊಳ್ಳಬೇಕು ಎನ್ನುವ ತವಕಗಳಿಂದಾಗಿ ಅಡ್ಡ ದಾರಿಗಳನ್ನು ಹಿಡಿಯುವ ಕಾರಣ ಹೃದಯ ಸಂಬಂಧಿಸಿದ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಕುಟುಂಬದಲ್ಲಿ ಹೃದಯ ಸಮಸ್ಯೆಯ ಇತಿಹಾಸ ಇರುವವರಂತೂ ಹೆಚ್ಚಿನ ಎಚ್ಚರ ವಹಿಸಬೇಕು. ಜೀವನಶೈಲಿಯಿಂದಾಗಿಯೂ ಹೃದಯ ಸಮಸ್ಯೆಗಳು ಉಂಟಾಗುತ್ತವೆ. ಅತಿಯಾದ ಉಪ್ಪಿನ ಸೇವನೆ, ಜಂಕ್‌ಫುಡ್ ಸೇವನೆ, ಧೂಮಪಾನಗಳು ಜೀವ ಹಿಂಡಬಹುದು. ಸೂಕ್ತ ಆಹಾರ ಸೇವನೆ, ವ್ಯಾಯಾಮ ಸೇರಿದಂತೆ ಆರೋಗ್ಯಕರ ಜೀವನಶೈಲಿಯನ್ನು ಬರಮಾಡಿಕೊಳ್ಳಬೇಕು. ಸರ್ಕಾರ ಎಷ್ಟೇ ಆರೋಗ್ಯಸೇವೆ ನೀಡಿದರೂ ವ್ಯಕ್ತಿ ತನ್ನ ಆರೋಗ್ಯವನ್ನು ನೋಡಿಕೊಳ್ಳದಿದ್ದರೆ ಯಾರೂ ಏನೂ ಮಾಡಲು ಸಾಧ್ಯವಿಲ್ಲ.