Site icon Vistara News

Coronavirus | ಭಾರತ ಇನ್ನೊಂದು ಚೀನಾ ಆಗದು: ವೈದ್ಯಕೀಯ ವಿಜ್ಞಾನಿಗಳ ಅಭಯ

samiran panda

ನವ ದೆಹಲಿ: ಒಮಿಕ್ರಾನ್‌ BF.7 ರೂಪಾಂತರಿ ವೈರಸ್‌ ಅತಿ ವೇಗದ ಸಾಂಕ್ರಾಮಿಕ, ಆದರೆ ಭಯಾನಕವಲ್ಲ. ಭಾರತೀಯರು ʼಹೈಬ್ರಿಡ್ ಇಮ್ಯುನಿಟಿʼ ಹೊಂದಿರುವುದರಿಂದ ನಮ್ಮ ದೇಶ ಇನ್ನೊಂದು ಚೀನಾ ಆಗದು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್)‌ಯ ನಿವೃತ್ತ ವಿಜ್ಞಾನಿ ಡಾ. ಸಮೀರನ್‌ ಪಾಂಡ ಹೇಳಿದ್ದಾರೆ.

ಸರ್ಕಾರ ಕೋವಿಡ್‌ ಸಂಭಾವ್ಯ ಅಲೆಯನ್ನು ತಡೆಗಟ್ಟಲು ಪರೀಕ್ಷೆ ಹೆಚ್ಚಳದಂಥ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದು ಸ್ವಾಗತಾರ್ಹ. ಆದರೆ ಅದರ ಜತೆಗೆ, ʼಅಪಾಯಕಾರಿ ಅಲೆʼ ಎಂಬ ಮಿಥ್ಯಾಪ್ರಚಾರವನ್ನು ತಡೆಗಟ್ಟಲು ಹೆಚ್ಚಿನ ಕ್ರಮ ತೆಗೆದುಕೊಳ್ಳಬೇಕಿದೆ. ವಾಟ್ಸ್ಯಾಪ್‌ನಂಥ ಮಾಧ್ಯಮಗಳಲ್ಲಿ ಯಾವುದೋ ಸುಳ್ಳು ಸುದ್ದಿ ಹಾಗೂ ವಿಡಿಯೋಗಳನ್ನು ನೂತನ ಅಲೆಯ ಪರಿಣಾಮ ಎಂದು ಹರಡಲಾಗುತ್ತಿರುವುದರಿಂದ ಜನ ಆತಂಕಿತರಾಗುತ್ತಿದ್ದಾರೆ ಎಂದು ಸಮೀರ್‌ ಹೇಳಿದ್ದಾರೆ.‌

ಇದನ್ನೂ ಓದಿ | coronavirus | ಒಮಿಕ್ರಾನ್ ಬಿಎಫ್.7ನಿಂದ ಭಾರತೀಯರಿಗೆ ಗಂಭೀರ ಅಪಾಯ ಇಲ್ಲ ಎಂದ ತಜ್ಞರು

ಡಾ.ಸಮೀ‌ರನ್‌, ಐಸಿಎಂಆರ್‌ನ ಸಾಂಕ್ರಾಮಿಕ ರೋಗ ಹಾಗೂ ಸೋಂಕು ರೋಗಗಳ ವಿಭಾಗದ ಮುಖ್ಯಸ್ಥರಾಗಿದ್ದು, ಹೆಚ್ಚುವರಿ ಮಹಾನಿರ್ದೇಶಕರಾಗಿದ್ದು ನಿವೃತ್ತರಾಗಿದ್ದಾರೆ.

ನೂತನ ರೂಪಾಂತರಿ ತುಂಬಾ ಹೊಸತೇನಲ್ಲ. ಅದು ಹೆಚ್ಚಿನ ವೇಗದಿಂದ ಹರಡುತ್ತದೆ. ಆದರೆ ಮಾರಕವಲ್ಲ. ಈ ರೂಪಾಂತರಿಯಿಂದ ಪೀಡಿತರಾದ ನಾಲ್ಕಾರು ಮಂದಿ ಭಾರತದಲ್ಲಿ ಈಗಾಗಲೇ ಪತ್ತೆಯಾಗಿದ್ದು, ಸಾಧಾರಣ ರೋಗಲಕ್ಷಣಗಳನ್ನು ಹೊಂದಿದ್ದು ಚೇತರಿಸಿಕೊಂಡಿದ್ದಾರೆ. ಭಾರತದ ಜನತೆ ಸಹಜವಾಗಿಯೇ ಅಧಿಕ ಸಂಖ್ಯೆಯಲ್ಲಿ ಈಗಾಗಲೇ ಸೋಂಕಿತರಾಗಿರುವುದರಿಂದ ಹಾಗೂ ಎರಡು ಪ್ಲಸ್‌ ಡೋಸ್‌ ಲಸಿಕೆ ಪಡೆದಿರುವುದರಿಂದ ಹೈಬ್ರಿಡ್‌ ಇಮ್ಯುನಿಟಿ ಹೊಂದಿದ್ದಾರೆ. ಹಾಗೂ ಕೇಂದ್ರ ಸರ್ಕಾರ ಕಳೆದ ಎರಡೂವರೆ ವರ್ಷಗಳಲ್ಲಿ ಇದನ್ನು ನಿಭಾಯಿಸುವಲ್ಲಿ ಸಾಕಷ್ಟು ಅನುಭವ ಹೊಂದಿದೆ. ಹೀಗಾಗಿ ಭಾರತ ಇನ್ನೊಂದು ಚೀನಾ ಆಗುವುದಿಲ್ಲ ಎಂದವರು ಭರವಸೆ ನೀಡಿದ್ದಾರೆ.

ಇದನ್ನೂ ಓದಿ | Fact Check | ಕೋವಿಡ್ ಒಮಿಕ್ರಾನ್ ಎಕ್ಸ್‌ಬಿಬಿ ವೇರಿಯಂಟ್ ಇದೆಯೇ? ಆರೋಗ್ಯ ಇಲಾಖೆ ಹೇಳಿದ್ದೇನು?

Exit mobile version