ನವದೆಹಲಿ: ಮೂಗಿನ ಮೂಲಕ ತೆಗೆದುಕೊಳ್ಳುವ ಕೋವಿಡ್ ಲಸಿಕೆಯು ( iNCOVACC ಅಥವಾ BBV154 ) ಶುಕ್ರವಾರ ಸಂಜೆಯಿಂದಲೇ, ಮೊದಲಿಗೆ ಖಾಸಗಿ ಆಸ್ಪತ್ರೆಗಳಲ್ಲಿ ದೊರೆಯಲಿದೆ. ಬಳಿಕ ಸರ್ಕಾರಿ ಆಸ್ಪತ್ರೆಗಳಲ್ಲಿಯೂ (Coronavirus ) ಸಿಗಲಿದೆ.
ಇದು ವಿಶ್ವದ ಮೊದಲ ಇಂಟ್ರಾನಾಸಲ್ ಕೋವಿಡ್ ಲಸಿಕೆ ಎಂಬ ಹೆಗ್ಗಳಿಕೆಗೆ iNCOVACC ಅಥವಾ BBV154 ಲಸಿಕೆಯು ಪಾತ್ರವಾಗಿದೆ. ಭಾರತ್ ಬಯೋಟೆಕ್ ಈ ಲಸಿಕೆಯನ್ನು ವಾಷಿಂಗ್ಟನ್ ಯೂನಿವರ್ಸಿಟಿ ಸೇಂಟ್ ಲೂಯಿಸ್ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿದೆ. ಕೇಂದ್ರ ಸರ್ಕಾರ ಈ ಕುರಿತ ಸಂಶೋಧನೆಗೆ ಅನುದಾನ ನೆರವು ನೀಡಿದೆ.
ಭಾರತ್ ಬಯೋಟೆಕ್‌ನ ಇಂಟ್ರಾನಾಸಲ್ (ಮೂಗಿನ ಮೂಲಕ ನೀಡುವ) ಕೊರೊನಾ ನಿರೋಧಕ ಬೂಸ್ಟರ್ ಡೋಸ್ ಲಸಿಕೆಯ (Intranasal Vaccine) ತುರ್ತು ಬಳಕೆಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಅನುಮತಿ ನೀಡಿದೆ. coWIN app ನಲ್ಲೂ ಈ ಲಸಿಕೆ ಲಭ್ಯವಾಗಲಿದೆ.
“ತುರ್ತು ಸಂದರ್ಭಗಳಲ್ಲಿ ಮೂಗಿನ ಮೂಲಕ ನೀಡುವ iNCOVACC ಲಸಿಕೆಯ ಬಳಕೆಗೆ ಅನುಮತಿ ನೀಡಲಾಗಿದೆ. ಕೊವ್ಯಾಕ್ಸಿನ್ ಅಥವಾ ಕೋವಿಶೀಲ್ಡ್ ಲಸಿಕೆಯ ಎರಡೂ ಡೋಸ್ ಪಡೆದ ವಯಸ್ಕರು ಮೂರನೇ ಅಥವಾ ಬೂಸ್ಟರ್ ಡೋಸ್ ಆಗಿ ಇದನ್ನು ಪಡೆಯಬಹುದಾಗಿದೆ.
ಅನುಕೂಲಗಳೇನು?
ಮೂಗಿನ ಮೂಲಕವೇ ಕೊರೊನಾ ಸೋಂಕು ದೇಹವನ್ನು ಪ್ರವೇಶಿಸುವುದರಿಂದ ಈ ಲಸಿಕೆಯನ್ನು ಮೂಗಿನಿಂದ ನೀಡಲಾಗುತ್ತದೆ. ಇದಕ್ಕಾಗಿ ಸೂಜಿಯನ್ನು ಬಳಸದ ಕಾರಣ ಲಸಿಕೆ ನೀಡಿಕೆಯು ಸುಲಭವಾಗಿದೆ. ಹಾಗೆಯೇ, ಇದು ಸೋಂಕು ನಿಗ್ರಹಿಸುವಲ್ಲಿ ಪ್ರಭಾವಶಾಲಿ ಎಂಬುದು ಕ್ಲಿನಿಕಲ್ ಪ್ರಯೋಗಗಳಿಂದ ದೃಢಪಟ್ಟಿದೆ.
ದರ ನಿಗದಿ ಶೀಘ್ರ:
ಮೂಗಿನ ಮೂಲಕ ತೆಗೆದುಕೊಳ್ಳುವ ಲಸಿಕೆಯ ದರ ಶೀಘ್ರದಲ್ಲಿಯೇ ನಿಗದಿಯಾಗಲಿದೆ.
ಯಾರು ತೆಗೆದುಕೊಳ್ಳಬಹುದು?
ಕೊವ್ಯಾಕ್ಸಿನ್ ಅಥವಾ ಕೋವಿಶೀಲ್ಡ್ ಲಸಿಕೆಯ ಎರಡೂ ಡೋಸ್ ಪಡೆದ, 18 ವರ್ಷ ಮೇಲ್ಪಟ್ಟ ವಯಸ್ಕರು ಬೂಸ್ಟರ್ ಡೋಸ್ ಆಗಿ ಇದನ್ನು ಪಡೆಯಬಹುದಾಗಿದೆ. ಎರಡು ಹನಿ ನಾಸಲ್ ಲಸಿಕೆಯನ್ನು ( iNCOCACC) ತೆಗೆದುಕೊಳ್ಳಬಹುದು.