ನವ ದೆಹಲಿ: ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಭಾರತ್ ಜೋಡೋ ಪಾದಯಾತ್ರೆ ನವ ದೆಹಲಿಯನ್ನು ಪ್ರವೇಶಿಸಿದೆ. ಆದರೆ ಕೇಂದ್ರ ಸರ್ಕಾರಕ್ಕೆ ಭರವಸೆ ನೀಡಿದಂತೆ ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಇತ್ಯಾದಿಗಳು ಈ ಯಾತ್ರೆಯಲ್ಲಿ ಕಂಡುಬಂದಿಲ್ಲ.
ಚೀನಾದಲ್ಲಿ ಕೋವಿಡ್‌ನ ಹೊಸ ಓಮಿಕ್ರಾನ್ ರೂಪಾಂತರಿಯಿಂದಾಗಿ ಸೃಷ್ಟಿಯಾಗಿರುವ ಸಾಂಕ್ರಾಮಿಕ ಅಲೆಯ ಹಿನ್ನೆಲೆಯಲ್ಲಿ, ಭಾರತದಲ್ಲಿ ಅದನ್ನು ತಡೆಯಲು ಕೇಂದ್ರ ಸರ್ಕಾರ ಏರ್‌ಪೋರ್ಟ್‌ಗಳಲ್ಲಿ ಬಿಗಿ ತಪಾಸಣೆ, ಯಾದೃಚ್ಛಿಕ ಪರೀಕ್ಷೆ ಇತ್ಯಾದಿಗಳನ್ನು ಏರ್ಪಡಿಸಿದೆ. ಇದೇ ಹಿನ್ನೆಲೆಯಲ್ಲಿ, ಹಿಮಾಚಲ ಪ್ರದೇಶದಿಂದ ದೆಹಲಿಯತ್ತ ಆಗಮಿಸಿರುವ ಭಾಋತ್ ಜೋಡೋ ಪಾದಯಾತ್ರೆಯಲ್ಲಿ ಕೋವಿಡ್ ತಡೆ ಉಪಕ್ರಮಗಳನ್ನು ಅಳವಡಿಸಿಕೊಳ್ಳುವಂತೆ, ಇಲ್ಲವೇ ಪಾದಯಾತ್ರೆಯನ್ನು ಕೈಬಿಡುವಂತೆ ಕೇಂದ್ರ ಸರ್ಕಾರ ಸೂಚಿಸಿತ್ತು.
ಇದು ಕಾಂಗ್ರೆಸ್‌ನ ಪಾದಯಾತ್ರೆಯನ್ನು ನಿಲ್ಲಿಸಲು ಆಡಳಿತ ಪಕ್ಷ ಮಾಡುತ್ತಿರುವ ಹುನ್ನಾರ, ಪಾದಯಾತ್ರೆ ನಿಲ್ಲಿಸಲು ಬಿಜೆಪಿ ಕಾರಣಗಳನ್ನು ಹುಡುಕುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು. ತದನಂತರ, ಪಾದಯಾತ್ರೆಯಲ್ಲಿ ಎಲ್ಲರಿಗೂ ಮಾಸ್ಕ್ ಧರಿಸುವ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಭರವಸೆ ನೀಡಿದ್ದರು.
ಇದನ್ನೂ ಓದಿ | coronavirus | ಒಮಿಕ್ರಾನ್ ಬಿಎಫ್.7ನಿಂದ ಭಾರತೀಯರಿಗೆ ಗಂಭೀರ ಅಪಾಯ ಇಲ್ಲ ಎಂದ ತಜ್ಞರು
ಆದರೆ ನವ ದೆಹಲಿಯನ್ನು ಪ್ರವೇಶಿಸಿರುವ ಪಾದಯಾತ್ರೆಯ ಫೋಟೋ ಅಥವಾ ವಿಡಿಯೋಗಳನ್ನು ಪರಿಶೀಲಿಸಲಾಗಿ, ಅಂಥ ಯಾವುದೇ ಮಾಸ್ಕ್ ಧಾರಣೆ ಕಂಡುಬಂದಿಲ್ಲ. ರಾಹುಲ್ ಗಾಂಧಿಯವರೂ ಸೇರಿದಂತೆ ಹಲವು ಪ್ರಮುಖ ನಾಯಕರು ಹೆಗಲಿಗೆ ಹೆಗಲು ತಾಗಿಸಿ ನಡೆಯುತ್ತಿದ್ದು, ಯಾರೂ ಮಾಸ್ಕ್ ಧರಿಸಿಲ್ಲ.
ನವ ದೆಹಲಿಗೆ ಮುನ್ನ ಪಾದಯಾತ್ರೆ ಹಿಮಾಚಲ ಪ್ರದೇಶ ರಾಜ್ಯವನ್ನು ಹಾದು ಬಂದಿದೆ. ಅಲ್ಲಿನ ಮುಖ್ಯಮಂತ್ರಿ ಸುಕ್ವಿಂದರ್ ಸಿಂಗ್ ಸುಖು ಅವರು ಕೋವಿಡ್ ಸೋಂಕಿತರಾಗಿದ್ದಾರೆ. ಯಾತ್ರೆಯಲ್ಲಿ ಅವರು ಹಾಗೂ ರಾಹುಲ್ ಗಾಂಧಿ ಅಕ್ಕಪಕ್ಕದಲ್ಲಿ ನಡೆದಿದ್ದರು. ಈ ಹಿನ್ನೆಲೆಯಲ್ಲಿ, ರಾಹುಲ್ ಅವರು ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆಯೇ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಪ್ರಶ್ನಿಸಿದ್ದರು.
ಇದನ್ನೂ ಓದಿ | Coronavirus | ಭಾರತದಲ್ಲಿ ಹೊಸ ರೂಪಾಂತರಿಯ ಅಲೆ ಬಾರದು: ವೈರಾಣುತಜ್ಞೆ ಅಭಯ