ನವದೆಹಲಿ: ಅಕ್ರಮ ಹಣ ವರ್ಗಾವಣೆ ಸೇರಿ ಹಲವು ಪ್ರಕರಣಗಳಲ್ಲಿ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ಜೈಲುಪಾಲಾಗಿದ್ದಾರೆ. ದೇಶಾದ್ಯಂತ ಹಲವು ರಾಜಕಾರಣಿಗಳ ಮನೆ, ಕಚೇರಿಗಳ ಮೇಲೆ ಇ.ಡಿ, ಸಿಬಿಐ ದಾಳಿ ನಡೆಸತ್ತಿದೆ. ಇನ್ನು, “ಕೇಂದ್ರೀಯ ತನಿಖಾ ಸಂಸ್ಥೆಗಳ ಮೂಲಕ ಕೇಂದ್ರ ಸರ್ಕಾರವು ಪ್ರತಿಪಕ್ಷಗಳನ್ನು ಹಣಿಯಲು ಯತ್ನಿಸುತ್ತಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ” ಎಂಬುದಾಗಿ ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ. ಇದರ ಬೆನ್ನಲ್ಲೇ, ಭ್ರಷ್ಟಾಚಾರದ ಕುರಿತು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಾತನಾಡಿದ್ದು, “ಯಾವುದೇ ಕಾರಣಕ್ಕೂ ಭ್ರಷ್ಟಾಚಾರಿಗಳನ್ನು ಬಿಡಲ್ಲ. ತನಿಖಾ ಸಂಸ್ಥೆಗಳ ದಾಳಿಗಳು (Central Agencies) ನಿಲ್ಲುವುದಿಲ್ಲ” ಎಂದು ಖಡಕ್ ಸಂದೇಶ ರವಾನಿಸಿದ್ದಾರೆ.
“ದೇಶದ ಜನರ ಮೇಲೆ ಭ್ರಷ್ಟಾಚಾರವು ಪರಿಣಾಮ ಬೀರಲು ಬಿಡುವುದಿಲ್ಲ. ಜನರ ಕಲ್ಯಾಣಕ್ಕಾಗಿ ಮೀಸಲಿರುವ ದುಡ್ಡನ್ನು ಕೊಳ್ಳೆ ಹೊಡೆಯಲು ಆಸ್ಪದ ನೀಡುವುದಿಲ್ಲ. ಭ್ರಷ್ಟಾಚಾರದ ವಿರುದ್ಧ ನಾವು ಸಾರಿರುವ ಸಮರವು ನಿಲ್ಲುವುದಿಲ್ಲ. ಪ್ರಜಾಪ್ರಭುತ್ವದ ಮಾರ್ಗದಲ್ಲಿಯೇ ಕೇಂದ್ರೀಯ ತನಿಖಾ ಸಂಸ್ಥೆಗಳು ಭ್ರಷ್ಟಾಚಾರಿಗಳ ಮೇಲೆ ತನಿಖೆ ನಡೆಸುತ್ತವೆ. ಕಳೆದ 10 ವರ್ಷಗಳಿಂದಲೂ ಭ್ರಷ್ಟರ ವಿರುದ್ಧ ನಮ್ಮ ಸಮರ ನಡೆದಿದೆ. ಮುಂದೆಯೂ ನಡೆಯುತ್ತದೆ” ಎಂಬುದಾಗಿ ನರೇಂದ್ರ ಮೋದಿ ಅವರು ಹಿಂದುಸ್ತಾನ್ ಟೈಮ್ಸ್ ಜತೆಗಿನ ಸಂದರ್ಶನದ ವೇಳೆ ಎಚ್ಚರಿಕೆ ನೀಡಿದ್ದಾರೆ.
ರಾಜಕಾರಣಿಗಳ ಮೇಲೆ ಮಾತ್ರ ಇ.ಡಿ ದಾಳಿ ನಡೆಸುತ್ತಿದೆ ಎಂಬ ಆರೋಪವನ್ನು ನರೇಂದ್ರ ಮೋದಿ ಅವರು ಅಲ್ಲಗಳೆದರು. “ಇ.ಡಿ ಅಧಿಕಾರಿಗಳ ದಾಳಿ, ತನಿಖೆಯು ರಾಜಕಾರಣಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಇ.ಡಿ ತನಿಖೆ ನಡೆಸುತ್ತಿರುವ ಪ್ರಕರಣಗಳಲ್ಲಿ ಕೇವಲ ಶೇ.3ರಷ್ಟು ಮಾತ್ರ ರಾಜಕಾರಣಿಗಳಿಗೆ ಸಂಬಂಧಿಸಿದ ಕೇಸ್‌ಗಳಾಗಿವೆ. ಬಿಜೆಪಿ ಆಡಳಿತದ ರಾಜ್ಯಗಳಲ್ಲೂ ಇ.ಡಿ ದಾಳಿ ನಡೆಸುತ್ತಿದೆ. ರಾಜಕೀಯ ದುರುದ್ದೇಶದಿಂದಾಗಿ ಕೇಂದ್ರೀಯ ತನಿಖಾ ಸಂಸ್ಥೆಗಳ ಮೇಲೆ ಪ್ರತಿಪಕ್ಷಗಳು ಆರೋಪ ಮಾಡುತ್ತಿವೆ” ಎಂದು ಹೇಳಿದರು.
ಗೆಲುವಿನ ವಿಶ್ವಾಸ
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುವ ಕುರಿತು ನರೇಂದ್ರ ಮೋದಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. “ಕಳೆದ 10 ವರ್ಷಗಳಲ್ಲಿ ನಾವು ಉತ್ತಮ ಆಡಳಿತ ನೀಡಿದ್ದೇವೆ. ಭ್ರಷ್ಟಾಚಾರ, ದಲ್ಲಾಳಿಗಳ ಮಧ್ಯಸ್ಥಿಕೆ ಇಲ್ಲದೆ ಪಾರದರ್ಶಕವಾದ ಆಡಳಿತ ನೀಡದ್ದೇವೆ. ದಾಖಲೆ ಮಟ್ಟದಲ್ಲಿ ಅಭಿವೃದ್ಧಿ, ಜನ ಕಲ್ಯಾಣ ಯೋಜನೆಗಳು, ಮೂಲ ಸೌಕರ್ಯಗಳ ಅಭಿವೃದ್ಧಿ, ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ 370ನೇ ವಿಧಿ ರದ್ದು, ರಾಮಮಂದಿರ ನಿರ್ಮಾಣ ಸೇರಿ ನಮ್ಮ ಯೋಜನೆಗಳನ್ನು ಮೆಚ್ಚಿ ಜನ ಮತ್ತೆ ಗೆಲ್ಲಿಸಲಿದ್ದಾರೆ” ಎಂದರು.
ಇದನ್ನೂ ಓದಿ: Narendra Modi: ದೇಶದ ಟಾಪ್ ಗೇಮರ್‌ಗಳ ಜತೆ ವಿಡಿಯೊಗೇಮ್ ಆಡಿದ ಮೋದಿ; Video ಇಲ್ಲಿದೆ