Site icon Vistara News

Covid 19: ಕೊರೊನಾ ವೈರಸ್‌ ಇನ್ನು ನಮ್ಮ ಜೀವನದ ಭಾಗ, ಅದರೊಂದಿಗೇ ಜೀವಿಸಬೇಕು ಎಂದ ತಜ್ಞರು!

corona virus

corona virus

ನವದೆಹಲಿ: ಮತ್ತೊಮ್ಮೆ ಜನರನ್ನು ಭಯಭೀತಗೊಳಿಸಿ ದೇಶದಲ್ಲಿ ಕೋವಿಡ್‌ 19(Covid 19)ರ ನೂತನ ರೂಪಾಂತರಿ ಜೆಎನ್‌.1 (Covid JN.1 subvariant) ಹರಡುತ್ತಿದೆ. ಈ ಮಧ್ಯೆ ತಜ್ಞರು ಭಯಪಡಬೇಕಾದ ಅಗತ್ಯವಿಲ್ಲ ಎಂದು ಅಭಯ ನೀಡಿದ್ದಾರೆ. ʼʼಭಯ ಬಿಟ್ಟು ಕೊರೊನಾ ವೈರಸ್‌ ಜೀವನದ ಶಾಶ್ವತ ಭಾಗ ಎನ್ನುವ ಅಂಶವನ್ನು ಅರಗಿಸಿಕೊಳ್ಳಬೇಕುʼʼ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್)ಯ ಮಾಜಿ ವಿಜ್ಞಾನಿ ಡಾ. ರಾಮನ್ ಗಂಗಾಖೇಡ್ಕರ್ ಕರೆ ನೀಡಿದ್ದಾರೆ.

“ವೈರಸ್ ನಮ್ಮೊಂದಿಗೆ ವಾಸಿಸುತ್ತಲೇ ಇರುತ್ತದೆ ಮತ್ತು ಕೆಲವು ಸಮಯಗಳ ನಂತರ ಹೊಸ ರೂಪಾಂತರವಾಗಿ ಬದಲಾಗುತ್ತಲೇ ಇರುತ್ತದೆ. ಎಲ್ಲಿಯವರೆಗೆ ಆಸ್ಪತ್ರೆಗೆ ದಾಖಲಾಗುವ ಮತ್ತು ಸಾವಿನ ಪ್ರಕರಣಗಳು ಹೆಚ್ಚಾಗುವುದಿಲ್ಲವೋ ಅಲ್ಲಿಯವರೆಗೆ ಭಯಪಡಬೇಕಾಗಿಲ್ಲʼʼ ಎಂದು ಅವರು ತಿಳಿಸಿದ್ದಾರೆ. “ವಯಸ್ಸಾದವರು ಮತ್ತು ಅನಾರೋಗ್ಯ ಪೀಡಿತರಲ್ಲಿ ರೋಗ ಲಕ್ಷಣ ಹೆಚ್ಚಾದಾಗ ಮುಂಜಾಗರೂಕತೆ ವಹಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು” ಎಂದು ಅವರು ಸಲಹೆ ನೀಡಿದ್ದಾರೆ. ಗುರುವಾರ (ಡಿಸೆಂಬರ್‌ 21) ಭಾರತದಲ್ಲಿ 594 ಹೊಸ ಕೋವಿಡ್ -19 ಸೋಂಕುಗಳು ಪತ್ತೆಯಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 2,311ರಿಂದ 2,669ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಭಯಪಡಬೇಕಾದ ಅಗತ್ಯವಿಲ್ಲ

ಡಾ. ರಾಮನ್ ಪ್ರಕಾರ ಅಮೆರಿಕದಲ್ಲಿ ಜೆಎನ್ .1 ರೂಪಾಂತರವು ಒಟ್ಟು ಕೋವಿಡ್‌ ಪ್ರಕರಣಗಳ ಪೈಕಿ ಶೇ. 31ರಷ್ಟು ಮಂದಿಯಲ್ಲಿ ಕಾಣಿಸಿಕೊಂಡಿದೆ. ಅಂದರೆ ಪ್ರತಿ ಮೂರು ವ್ಯಕ್ತಿಗಳ ಪೈಕಿ ಒಬ್ಬರಲ್ಲಿ ಕಂಡುಬಂದಿದೆ. ಈ ರೂಪಾಂತರವು ಮೊದಲು ಸೆಪ್ಟಂಬರ್‌ನಲ್ಲಿ ಅಮೆರಿಕದಲ್ಲಿ ಪತ್ತೆಯಾಯಿತು. ಈಗ ವಿಶ್ವದಾದ್ಯಂತ ಸುಮಾರು 40 ದೇಶಗಳಲ್ಲಿ ಹರಡಿದೆ. “ಅಮೆರಿಕದಲ್ಲಿ ಈ ವೈರಸ್‌ ಸೋಂಕು ಹೆಚ್ಚಿನ ಸಾವಿಗೆ ಕಾರಣವಾಗಿಲ್ಲ ಎನ್ನುವುದು ಗಮನಾರ್ಹʼʼ ಎಂದವರು ತಿಳಿಸಿದ್ದಾರೆ.

ʼʼಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ನಿಮ್ಮನ್ನು ಕೋವಿಡ್ -19 ಸೋಂಕಿನಿಂದ ರಕ್ಷಿಸುವುದು ಮಾತ್ರವಲ್ಲದೆ ಈ ಹವಾಮಾನ ವೈಪರೀತ್ಯ ಮತ್ತು ಮಾಲಿನ್ಯದ ಸಮಯದಲ್ಲಿ ಹರಡುವ ಹಲವು ಉಸಿರಾಟದ ಸಮಸ್ಯೆಗಳಿಂದ ನಿಮ್ಮನ್ನು ಕಾಪಾಡುತ್ತದೆʼʼ ಎಂದು ಅವರು ಹೇಳಿದ್ದಾರೆ.

“ದೇಶಾದ್ಯಂತ ಆಸ್ಪತ್ರೆಗಳನ್ನು ಸಜ್ಜುಗೊಳಿಸುವುದು ಮತ್ತು ಸಾವಿನ ಪ್ರಮಾಣದ ಕಣ್ಗಾವಲು ಇರಿಸುವುದು ಕೋವಿಡ್-19 ಪ್ರಕರಣಗಳ ತಡೆಯುವಿಕೆಯಲ್ಲಿ ಪ್ರಧಾನ ಪಾತ್ರ ವಹಿಸುವ ಘಟಕಗಳು. ಇದು ಕಡಿಮೆ ವೆಚ್ಚದ ಮತ್ತು ಹೆಚ್ಚು ಪರಿಣಾಮಕಾರಿ ಮಾರ್ಗʼʼ ಎಂದು ಗಂಗಾಖೇಡ್ಕರ್ ತಿಳಿಸಿದ್ದಾರೆ. ʼʼನಾವು ವೈರಸ್ ಅನ್ನು ನಾಶಗೊಳಿಸಲು ಪ್ರಯತ್ನಿಸಿದಷ್ಟೂ ಹೊಸ ತಳಿಗಳು ಹೊರಹೊಮ್ಮುತ್ತಲೇ ಇರುತ್ತದೆ. ಆದಾಗ್ಯೂ ಪ್ರಸ್ತುತ ಯಾವುದೇ ಗಮನಾರ್ಹ ಬೆದರಿಕೆ ಇಲ್ಲʼʼ ಎಂದು ಅವರು ಪುನರಾವರ್ತಿಸಿದ್ದಾರೆ.

ಇದನ್ನೂ ಓದಿ: Covid 19: ಎಲ್ಲ ಸಾಂಕ್ರಾಮಿಕ ರೋಗಗಳು ಮೊದಲು ಕೇರಳದಲ್ಲೇ ಕಾಣಿಸಿಕೊಳ್ಳುವುದೇಕೆ?

“ವೈರಸ್ ರೂಪಾಂತರಗೊಳ್ಳುತ್ತಿರುವ ರೀತಿಯನ್ನು ನೋಡಿದರೆ ಡೆಲ್ಟಾ ಅಲೆಯ ನಂತರ ಸೌಮ್ಯವಾಗಿ ಬದಲಾಗುತ್ತಿರುವುದು ಕಂಡು ಬಂದಿದೆ. ಜೆಎನ್.1 ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ಅದರ ಸ್ಪೈಕ್ ಪ್ರೋಟೀನ್‌ನಲ್ಲಿರುವ ವ್ಯತ್ಯಾಸವು ಬಹುಶಃ ಅದನ್ನು ಹೆಚ್ಚು ಹರಡುವಂತೆ ಮಾಡುತ್ತದೆ. ಆದ್ದರಿಂದ ದುರ್ಬಲರು, ವಯಸ್ಸಾದವರು ಎಚ್ಚರಿಕೆ ವಹಿಸಬೇಕಿದೆ. ನಮ್ಮ ಜೀವನಶೈಲಿಯನ್ನು ವೈರಸ್‌ಗೆ ಹೊಂದಿಸಿಕೊಳ್ಳಬೇಕುʼʼ ಎಂದು ಡಾ. ರಾಮನ್‌ ಸಲಹೆ ನೀಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version