ಹೊಸದಿಲ್ಲಿ: ಕೊರೊನಾ ವೈರಸ್ (Corona Virus) ನೂತನ ರೂಪಾಂತರಿ (Covid JN.1 subvariant) ಪ್ರಕರಣಗಳ ಹೆಚ್ಚಳ ಭಾರತದಲ್ಲಿ ಕಂಡುಬರುತ್ತಿದೆ. ನಿನ್ನೆ ಕೋವಿಡ್‌ನಿಂದಾಗಿ (Covid 19) ದೇಶದಲ್ಲಿ 6 ಮಂದಿ ಸತ್ತಿದ್ದಾರೆ.
ಭಾರತದಲ್ಲಿ ಶುಕ್ರವಾರ 328 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಗುರುವಾರ ಆರು ಕೋವಿಡ್ ಸಾವುಗಳು ಮತ್ತು 594 ಹೊಸ ಕೊರೋನಾ ವೈರಸ್ (Corona Virus) ಸೋಂಕಿನ ಪ್ರಕರಣಗಳು ವರದಿಯಾಗಿದ್ದವು. ಈ ಪೈಕಿ ಕೇರಳದಲ್ಲಿ ಮೂರು, ಕರ್ನಾಟಕದಲ್ಲಿ ಇಬ್ಬರು ಮತ್ತು ಪಂಜಾಬ್‌ನಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಗಂಭೀರ ಅನಾರೋಗ್ಯದಿಂದ ಬಳಲುತ್ತಿರುವ ಜನರಲ್ಲಿ ಕೋವಿಡ್ ಸಾವುಗಳು ಹೆಚ್ಚಾಗಿ ವರದಿಯಾಗುತ್ತಿವೆ ಎಂದು ಆರೋಗ್ಯ ಸಚಿವಾಲಯದ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
ಕೊರೊನಾ ವೈರಸ್‌ನ ಹೊಸ JN.1 ರೂಪಾಂತರಿಯು ಭಾರತ ಸೇರಿದಂತೆ ಪ್ರಪಂಚದಾದ್ಯಂತ ಕೋವಿಡ್-19 ಪ್ರಕರಣಗಳಲ್ಲಿ ಇತ್ತೀಚಿನ ಹೆಚ್ಚಳವನ್ನು ಉಂಟುಮಾಡಿದೆ. ಹೆಚ್ಚಿನ ರಾಜ್ಯಗಳು ಇದರ ಪ್ರಸರಣವನ್ನು ಪತ್ತೆಹಚ್ಚಲು ಪತ್ತೆಯಾದ ಪಾಸಿಟಿವ್ ಪ್ರಕರಣಗಳ ಜೀನೋಮ್ ಸೀಕ್ವೆನ್ಸ್ (genome sequence) ಪರೀಕ್ಷೆಗೆ ಮುಂದಾಗಿವೆ.
ದೆಹಲಿ, ಉತ್ತರಾಖಂಡ ಮತ್ತು ಮಹಾರಾಷ್ಟ್ರಗಳು ಈಗಾಗಲೇ ಆರ್‌ಟಿಪಿಸಿಆರ್ ಪರೀಕ್ಷೆಗಾಗಿ ಸಾಕಷ್ಟು ಕೋವಿಡ್ ಮಾದರಿಗಳನ್ನು ಕಳುಹಿಸಲು ಮತ್ತು ಎಲ್ಲಾ ಮಾದರಿಗಳ ಜೀನೋಮ್ ಅನುಕ್ರಮವನ್ನು ನಡೆಸಲು ಅಧಿಕಾರಿಗಳಿಗೆ ಆದೇಶಿಸಿವೆ.
ಕೋವಿಡ್ ಪ್ರಕರಣಗಳಲ್ಲಿ ಹಠಾತ್ ಏರಿಕೆಯಿಂದಾಗಿ ವಿಮಾನ ಪ್ರಯಾಣಿಕರಿಗೆ ಕಡ್ಡಾಯ ಕೋವಿಡ್ ಪರೀಕ್ಷೆ ಸೇರಿದಂತೆ ವಿವಿಧ ಪ್ರಯಾಣ ನಿರ್ಬಂಧಗಳು ಮರಳಿ ಬರಬಹುದು ಎನ್ನಲಾಗಿದೆ. ಆದರೆ ಆರೋಗ್ಯ ಸಚಿವಾಲಯದ ಪ್ರಕಾರ, ಪ್ರಯಾಣಿಕರಿಗೆ ವಿಮಾನ ನಿಲ್ದಾಣಗಳಲ್ಲಿ ಕೋವಿಡ್- 19ಗಾಗಿ ಆರ್‌ಟಿ-ಪಿಸಿಆರ್ ಪರೀಕ್ಷೆಯನ್ನು (RT-PCR test) ಕಡ್ಡಾಯಗೊಳಿಸುವ ಯಾವುದೇ ಚಿಂತನೆ ಸದ್ಯಕ್ಕೆ ಇಲ್ಲ.
ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ ಮತ್ತು JN.1 ವೇರಿಯೆಂಟ್ ದೇಶದಲ್ಲಿ ಪತ್ತೆಯಾಗಿದೆ. ಹೆಚ್ಚಿನ ರೋಗಿಗಳು ಸೌಮ್ಯವಾದ ರೋಗಲಕ್ಷಣಗಳನ್ನು ಹೊಂದಿರುವುದರಿಂದ ತಕ್ಷಣದ ಕಳವಳಕ್ಕೆ ಕಾರಣವಿಲ್ಲ ಎಂದು ಆರೋಗ್ಯ ಸಚಿವಾಲಯದ ವರದಿಗಳು ಸೂಚಿಸಿವೆ.
ಕರ್ನಾಟಕದಲ್ಲಿ ನಿನ್ನೆ ಕೋವಿಡ್ ಸ್ಥಿತಿಗತಿ ಪರಿಶೀಲನೆಯ ಬಗ್ಗೆ ಸಿಎಂ ಹಾಗೂ ಆರೋಗ್ಯ ಸಚಿವರ ಸಭೆ ನಡೆಸಲಾಗಿದೆ. ಗಡಿಯಲ್ಲಿ ಹೆಚ್ಚಿನ ನಿಗಾ ಇಡಲು ಸೂಚಿಸಲಾಗಿದೆ. ಮಾಸ್ಕ್ ಧಾರಣೆಯನ್ನು ಆದ್ಯತೆಯ ಮೇರೆಗೆ ಮಾಡಲು ಕರೆ ನೀಡಲಾಗಿದೆ. ಇಂದು ಮಹಾರಾಷ್ಟ್ರದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಕುರಿತು ಚರ್ಚಿಸಲು ಸರ್ಕಾರದ ಸಭೆ ಕರೆಯಲಾಗಿದೆ.
ವೃದ್ಧರಿಗೆ ಎಚ್ಚರಿಕೆ
“ಹೊಸ JN.1 ಸ್ಟ್ರೈನ್ ವೈರಸ್, ವೃದ್ಧರಿಗೆ ಹಾಗೂ ಹಲವು ಕೊಮೊರ್ಬಿಡಿಟಿ (comorbidity) ಕಾಯಿಲೆಗಳನ್ನು ಹೊಂದಿರುವವರಿಗೆ ಹೆಚ್ಚಿನ ಸಮಸ್ಯೆ ಉಂಟುಮಾಡಬಹುದು” ಎಂದುಐಎಂಎ ಕೋವಿಡ್ ಟಾಸ್ಕ್ ಫೋರ್ಸ್ ಸಹ-ಅಧ್ಯಕ್ಷ, ತಜ್ಞ ಡಾ ರಾಜೀವ್ ಜಯದೇವನ್ ಹೇಳಿದ್ದಾರೆ. “JN.1 ವೇಗವಾಗಿ ಹರಡುವ ರೂಪಾಂತರಿಯಾಗಿದೆ. ಇದು ಮುಂದಿನ ಹಂತಕ್ಕೆ ಹೋಗಬಹುದು. ದುರ್ಬಲ ಆರೋಗ್ಯದವರು, ಹಿರಿಯ ನಾಗರಿಕರು ಮತ್ತು ಬಹು ಕೊಮೊರ್ಬಿಡಿಟಿ ಕಾಯಿಲೆಗಳನ್ನು ಹೊಂದಿರುವವರು ಇದರ ಬಗ್ಗೆ ಎಚ್ಚರ ವಹಿಸಬೇಕು” ಎಂದಿದ್ದಾರೆ.
ಬ್ರಿಟನ್‌ನಲ್ಲಿ 24ರಲ್ಲಿ ಒಬ್ಬ ಕೋವಿಡ್ ಪಾಸಿಟಿವ್
ಇಂಗ್ಲೆಂಡ್ ಮತ್ತು ಸ್ಕಾಟ್‌ಲ್ಯಾಂಡ್‌ನಲ್ಲಿ ಪ್ರತಿ 24 ಜನರಲ್ಲಿ ಒಬ್ಬರಿಗೆ ಕೋವಿಡ್-19 ಹರಡಿದೆ. ಲಂಡನ್‌ನಲ್ಲಿ ಅತಿ ಹೆಚ್ಚು ಸೋಂಕು ತಗುಲಿರುವ JN.1 ರೂಪಾಂತರಿಯು ವೇಗವಾಗಿ ಹರಡುತ್ತಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ. ಇಂಗ್ಲೆಂಡ್ ಮತ್ತು ಸ್ಕಾಟ್‌ಲ್ಯಾಂಡ್‌ನಾದ್ಯಂತ ಒಟ್ಟಾರೆ ಕೋವಿಡ್ ಹರಡುವಿಕೆಯ ಪ್ರಮಾಣ 4.2%ರಷ್ಟಿದೆ. ಲಂಡನ್ 6.1%ದಷ್ಟು ಹೆಚ್ಚು ಪೀಡಿತ ಪ್ರದೇಶವಾಗಿದೆ.
ಇದನ್ನೂ ಓದಿ: Covid Subvariant JN.1 : ಜನವರಿಯಲ್ಲಿ ರಾಜ್ಯದಲ್ಲಿ ಕೊರೊನಾ ಸ್ಫೋಟ; ತಜ್ಞರ ಎಚ್ಚರಿಕೆ