ನವ ದೆಹಲಿ: ಕೋವಿಡ್‌ನಿಂದ ಉಂಟಾಗುತ್ತಿರುವ ದೀರ್ಘಕಾಲೀನ ಪರಿಣಾಮಗಳ ಬಗ್ಗೆ ೬೫ ವರ್ಷಕ್ಕೆ ಮೇಲ್ಪಟ್ಟ ೬೦ ಲಕ್ಷ ಮಂದಿಯಲ್ಲಿ ಅಧ್ಯಯನ ನಡೆಸಲಾಗಿದ್ದು, ಕೋವಿಡ್‌ಗೆ ತುತ್ತಾದ ಒಂದು ವರ್ಷದಲ್ಲಿ ನರರೋಗ ಅಲ್ಜೈಮರ್ಸ್ (Alzheimer’s) ಲಕ್ಷಣಗಳನ್ನು ತೋರಿಸಿದವರ ಪ್ರಮಾಣ ಶೇ. ೫೦ರಿಂದ ೮೦ಕ್ಕೇರಿದೆ ಎನ್ನಲಾಗಿದೆ. ಅದರಲ್ಲೂ ೮೫ ವರ್ಷಕ್ಕೆ ಮೇಲ್ಪಡ್ಡ ಮಹಿಳೆಯರಲ್ಲಿ ಈ ಅಪಾಯ ಹೆಚ್ಚಿದೆ ಎಂದು ಜರ್ನಲ್ ಆಫ್ ಅಲ್ಜೈಮರ್ಸ್ ಡಿಸೀಜ್ ಎಂಬ ನಿಯತಕಾಲಿಕದಲ್ಲಿ ಪ್ರಕಟವಾಗಿರುವ ವರದಿ ಹೇಳಿದೆ.
ಅಮೆರಿಕದಲ್ಲಿ ಫೆಬ್ರವರಿ ೨೦೨೦ರಿಂದ ಮೇ ೨೦೨೧ರವರೆಗೆ ಚಿಕಿತ್ಸೆ ಪಡೆದುಕೊಂಡ ೬೦.೨ ಲಕ್ಷ ವೃದ್ಧರ ಆರೋಗ್ಯ ದಾಖಲೆಗಳನ್ನು ಪರಿಶೀಲಿಸಲಾಗಿತ್ತು. ಇವರೆಲ್ಲ ಈ ಮೊದಲು ಅಲ್ಜೈಮರ್ಸ್ ಲಕ್ಷಣಗಳನ್ನು ತೋರಿಸದೆ ಇರುವವರಾಗಿದ್ದರು. ಆದರೆ ಇವರಲ್ಲಿ ಹೊಸದಾಗಿ ಅಲ್ಜೈಮರ್ಸ್ ರೋಗ ಉದ್ಭವವಾಯಿತೇ ಅಥವಾ ಮೌನವಾಗಿದ್ದ ಲಕ್ಷಣಗಳು ತೀವ್ರಗತಿಯಲ್ಲಿ ಪ್ರಕಟಗೊಂಡವೇ ಎಂಬುದು ಇನ್ನೂ ದೃಢಪಟ್ಟಿಲ್ಲ.
ಸಾರ್ಸ್-ಕೋವ್೨ ಸೋಂಕಿನಿಂದ ಕೇಂದ್ರ ನರವ್ಯೂಹವೂ ಸೇರಿದಂತೆ ದೇಹದೆಲ್ಲೆಡೆ ಉರಿಯೂತದ ಸಮಸ್ಯೆ ತೀವ್ರಗೊಳ್ಳುವ ಬಗ್ಗೆ ಸಾಕ್ಷ್ಯಗಳಿವೆ. ಈ ನಿಟ್ಟಿನಲ್ಲಿ ಕೋವಿಡ್ ಸೋಂಕಿನಿಂದ ಅಲ್ಜೈಮರ್ಸ್ ರೋಗದ ಮೇಲಾಗುವ ಪರಿಣಾಮಗಳ ಬಗ್ಗೆ ಅಧ್ಯಯನವನ್ನು ನಡೆಸಲಾಗಿತ್ತು ಎಂದು ಅಧ್ಯಯನದಲ್ಲಿ ಹೇಳಲಾಗಿದೆ.
ಈ ಸಂಶೋಧನೆಗಾಗಿ ಎರಡು ಪ್ರತ್ಯೇಕ ಪ್ರಾಯೋಗಿಕ ಗುಂಪುಗಳನ್ನು ಪರಿಗಣಿಸಲಾಗಿತ್ತು. ಮೊದಲ ಗುಂಪಿನಲ್ಲಿ ಕೋವಿಡ್‌ಗೆ ತುತ್ತಾದ ೪ ಲಕ್ಷ ಮಂದಿ ಹಾಗೂ ಎರಡನೇ ಗುಂಪಿನಲ್ಲಿ ಕೋವಿಡ್ ಲಕ್ಷಣಗಳನ್ನು ಹೊಂದಿರದ ೫೮ ಲಕ್ಷ ಮಂದಿ ಇದ್ದರು. ಇದೀಗ ಆರಂಭಿಕ ಅಧ್ಯಯನವಾಗಿದ್ದು, ಈ ಬಗ್ಗೆ ಸಂಶೋಧನೆ ಮುಂದುವರಿಯಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಇದನ್ನೂ ಓದಿ | Viral Video | ಚೀನಾದಲ್ಲೀಗ ಮನುಷ್ಯರಿಗೆ ಮಾತ್ರವಲ್ಲ, ಮೀನು, ಕಪ್ಪೆಗಳಿಗೂ ಕೋವಿಡ್ ಟೆಸ್ಟ್