Site icon Vistara News

Crime News: ದೆಹಲಿ ಪೊಲೀಸ್ ಸಹಾಯಕ ಆಯುಕ್ತರ ಪುತ್ರನನ್ನು ಕೊಂದ ಸ್ನೇಹಿತರು; ಕಾರಣವೇನು?

crime news

crime news

ನವದೆಹಲಿ: ದೆಹಲಿ ಪೊಲೀಸ್ ಸಹಾಯಕ ಆಯುಕ್ತ (Delhi Police assistant commissioner) ಯಶ್‌ಪಾಲ್‌ ಸಿಂಗ್‌ ಅವರ ಪುತ್ರ ಲಕ್ಷ್ಯ ಚೌಹಾಣ್ (26) ಅವರನ್ನು ಸ್ನೇಹಿತರೇ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಹರಿಯಾಣದ ಪಾಣಿಪತ್‌ನಲ್ಲಿ ಘಟನೆ ನಡೆದಿದ್ದು, ಇಬ್ಬರು ಸ್ನೇಹಿತರು ಸೇರಿ ಕಾಲುವೆಗೆ ತಳ್ಳಿ ಕೊಲೆ ಮಾಡಿದ್ದಾರೆ. ಮೂವರು ಮದುವೆ ಸಮಾರಂಭವೊಂದರಲ್ಲಿ ಭಾಗವಹಿಸಲು ಹರಿಯಾಣಕ್ಕೆ ತೆರಳಿದ್ದರು. ಈ ವೇಳೆ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ (Crime news).

ತಿಸ್ ಹಜಾರಿ ನ್ಯಾಯಾಲಯದಲ್ಲಿ ವಕೀಲರಾಗಿರುವ ಲಕ್ಷ್ಯ ಚೌಹಾಣ್ ಅವರನ್ನು ಇಬ್ಬರು ಸ್ನೇಹಿತರಾದ ವಿಕಾಸ್ ಭಾರದ್ವಾಜ್ ಮತ್ತು ಅಭಿಷೇಕ್ ಕೊಲೆ ಮಾಡಿದ್ದಾರೆ ಎನ್ನುವುದು ತನಿಖೆ ವೇಳೆ ತಿಳಿದು ಬಂದಿದೆ. ಈ ಪೈಕಿ ಅಭಿಷೇಕ್‌ನನ್ನು ಬಂಧಿಸಲಾಗಿದ್ದು, ಪರಾರಿಯಾದ ಭಾರದ್ವಾಜ್‌ನ ಪತ್ತೆಗೆ ತೀವ್ರ ಶೋಧ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಲಕ್ಷ್ಯ ಚೌಹಾಣ್ ಜನವರಿ 22ರಂದು ತಮ್ಮಿಬ್ಬರು ಸ್ನೇಹಿತರಾದ ಭಾರದ್ವಾಜ್ ಮತ್ತು ಅಭಿಷೇಕ್ ಅವರೊಂದಿಗೆ ಸೋನೆಪತ್‌ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಭಾಗವಹಿಸಲು ತೆರಳಿದ್ದಾಗ ಈ ಘಟನೆ ನಡೆದಿತ್ತು. ಲಕ್ಷ್ಯ ಚೌಹಾಣ್ ಮನೆಗೆ ಹಿಂದಿರುಗದ ಕಾರಣ ಎಸಿಪಿ ಯಶ್‌ಪಾಲ್‌ ಸಿಂಗ್ ನಾಪತ್ತೆಯ ದೂರು ದಾಖಲಿಸಿದ್ದರು. ಬಳಿಕ ಶೋಧ ಕಾರ್ಯಾಚರಣೆ ಆರಂಭಿಸಲಾಗಿತ್ತು. ಈ ವೇಳೆ ಸ್ನೇಹಿತರ ಮೇಲೆ ಸಂಶಯ ಮೂಡಿತ್ತು.

ಕಾರಣ ಏನು?

ತನಿಖೆಯ ವೇಳೆ ಲಕ್ಷ್ಯ ಚೌಹಾಣ್ ಮತ್ತು ಭಾರದ್ವಾಜ್ ನಡುವಿನ ಹಣಕಾಸಿನ ವಿವಾದವು ಬೆಳಕಿಗೆ ಬಂದಿದೆ. ಕೆಲವು ಸಮಯಗಳ ಹಿಂದೆ ಲಕ್ಷ್ಯ ಚೌಹಾಣ್ ಅವರು ಭಾರದ್ವಾಜ್ ಬಳಿಯಿಂದ ಸಾಲ ಪಡೆದುಕೊಂಡಿದ್ದರು. ಆದರೆ ಮರುಪಾವತಿ ಮಾಡಲು ನಿರಾಕರಿಸುತ್ತಲೇ ಬಂದಿದ್ದರು. ಮಾತ್ರವಲ್ಲ ಮರಳಿ ಕೇಳಿದಾಗೆಲ್ಲ ಕೆಟ್ಟದಾಗಿ ವರ್ತಿಸುತ್ತಿದ್ದರು. ಇದು ಇಬ್ಬರ ನಡುವೆ ವಾದ ವಿವಾದಕ್ಕೆ ಕಾರಣವಾಗಿತ್ತು. ಈ ವಿಚಾರವನ್ನು ಭಾರದ್ವಾಜ್‌ ತನ್ನ ಇನ್ನೊಬ್ಬ ಸ್ನೇಹಿತ ಅಭಿಷೇಕ್‌ ಬಳಿ ಹೇಳಿಕೊಂಡಿದ್ದ. ಹೀಗಾಗಿ ಇಬ್ಬರು ಸೇರಿ ಲಕ್ಷ್ಯ ಚೌಹಾನ್‌ನನ್ನು ಕಾಲುವೆ ತಳ್ಳಿ ಕೊಲೆ ಮಾಡಿದ್ದಾರೆ.

ಘಟನೆ ವಿವರ

ತನಿಖೆಯ ವೇಳೆ ಅಭಿಷೇಕ್‌ ಘಟನೆಯ ಬಗ್ಗೆ ಬಾಯಿ ಬಿಟ್ಟಿದ್ದಾನೆ. ಸೋಮವಾರ ಮಧ್ಯಾಹ್ನ ಭಾರದ್ವಾಜ್ ತನಗೆ ಕರೆ ಮಾಡಿ, ಸೋನಿಪತ್‌ನಲ್ಲಿ ನಡೆಯುವ ವಿವಾಹ ಸಮಾರಭವೊಂದಕ್ಕೆ ತನ್ನ ಮತ್ತು ಚೌಹಾಣ್ ಜತೆ ಭಾಗವಹಿಸುವಂತೆ ಕೇಳಿಕೊಂಡಿದ್ದ. ಅದರಂತೆ ಮೂವರು ಕಾರಿನಲ್ಲಿ ಹೊರಟಿದ್ದರು. ಮದುವೆ ಮುಗಿಸಿ ಹಿಂದಿರುಗುವಾಗ ಮೂತ್ರ ವಿಸರ್ಜನೆಗಾಗಿ ಮುನಾಕ್ ಕಾಲುವೆಯ ಬಳಿ ಕಾರನ್ನು ನಿಲ್ಲಿಸಿದ್ದರು. ಈ ವೇಳೆ ಭಾರದ್ವಾಜ್ ಮತ್ತು ಅಭಿಷೇಕ್ ಇಬ್ಬರೂ ಸೇರಿ ಚೌಹಾಣ್ ಅವರನ್ನು ಕಾಲುವೆಗೆ ತಳ್ಳಿ ತಮ್ಮ ಕಾರಿನಲ್ಲಿ ಸ್ಥಳದಿಂದ ಪರಾರಿಯಾಗಿದ್ದರು.

ಇದನ್ನೂ ಓದಿ: Father Kills son : ಕುಡಿಯಲು ಹಣ ಕೊಡದ ಕೋಪ; ಮಗನನ್ನೇ ಗುಂಡಿಕ್ಕಿ ಕೊಂದ ಧೂರ್ತ ತಂದೆ

ಇದೀಗ ಅಭಿಷೇಕ್‌ನನ್ನು ಗುರುವಾರ ನರೇಲಾದಿಂದ ವಶಕ್ಕೆ ಪಡೆಯಲಾಗಿದೆ. “ಚೌಹಾಣ್ ಅವರನ್ನು ಸುಮಾರು 16 ಅಡಿ ಆಳದ ಮುನಾಕ್ ಕಾಲುವೆಗೆ ತಳ್ಳಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡ ನಂತರ ನಾವು ಅಭಿಷೇಕ್‌ನನ್ನು ಬಂಧಿಸಿದ್ದೇವೆ. ಚೌಹಾಣ್ ಅವರ ಶವಕ್ಕಾಗಿ ಶೋಧ ಮುಂದುವರೆದಿದೆ. ಭಾರದ್ವಾಜ್ ಬಂಧನಕ್ಕೆ ಬಲೆ ಬೀಸಿದ್ದೇವೆʼʼ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version