Site icon Vistara News

Crime News: ಮದುವೆಯಾಗಲು ಟಿವಿ ನಿರೂಪಕನನ್ನೇ ಅಪಹರಿಸಿದ ಮಹಿಳೆ!

women arrested

women arrested

ಹೈದರಾಬಾದ್‌: ಮದುವೆಯಾಗುವ ಉದ್ದೇಶದಿಂದ ಮಹಿಳಾ ಉದ್ಯಮಿಯೊಬ್ಬರು(Business woman) ಮ್ಯೂಸಿಕ್‌ ಚಾನಲ್‌ ಒಂದರ ನಿರೂಪಕನನ್ನು (TV music channel anchor) ಅಪಹರಿಸಿ ಸದ್ಯ ಪೊಲೀಸರ ಅತಿಥಿಯಾಗಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಮಹಿಳೆಗೆ ನೆರವಾದ ನಾಲ್ವರನ್ನು ಕೂಡ ಪೊಲೀಸರು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ (Crime News).

ʼʼಮಹಿಳೆ ಎಷ್ಟು ಕರಾರುವಕ್ಕಾಗಿ ಸಂಚು ರೂಪಿಸಿದ್ದಳು ಎಂದರೆ ಟಿವಿ ನಿರೂಪಕನನ್ನು ಹಿಂಬಾಲಿಸಲು ಮತ್ತು ಚಲನವಲನಗಳನ್ನು ಮೇಲ್ವಿಚಾರಣೆ ಮಾಡಲು ಆತನ ಕಾರಿನಲ್ಲಿ ಟ್ರ್ಯಾಕಿಂಗ್ ಉಪಕರಣ ಅಳವಡಿಸಿದ್ದಳುʼʼ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ವಿವರ

ʼʼಡಿಜಿಟಲ್ ಮಾರ್ಕೆಟಿಂಗ್ ವ್ಯವಹಾರವನ್ನು ನಡೆಸುತ್ತಿರುವ 31 ವರ್ಷದ ಮಹಿಳೆ ಟಿವಿ ನಿರೂಪಕನ ಫೋಟೊಗಳನ್ನು ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ನೋಡಿದ್ದಳು. ಆದರೆ ಅದು ನಿರೂಪಕನ ಪೊಫೈಲ್‌ ಆಗಿರಲಿಲ್ಲ. ಆದರೆ ಆರಂಭದಲ್ಲಿ ಈ ಬಗ್ಗೆ ತಿಳಿದಿರದ ಮಹಿಳೆ ಎರಡು ವರ್ಷಗಳ ಹಿಂದೆ ಆತನ ಜತೆ ಚಾಟ್ ಮಾಡಲು ಪ್ರಾರಂಭಿಸಿದ್ದಳು. ಆ ಖಾತೆದಾರನು ತನ್ನ ಸ್ವಂತ ಫೋಟೋದ ಬದಲು ಟಿವಿ ನಿರೂಪಕನ ಚಿತ್ರವನ್ನು ಪ್ರೊಫೈಲ್ ಫೋಟೊವನ್ನಾಗಿ ಬಳಸುತ್ತಿರುವ ವಿಚಾರ ಆಕೆಗೆ ಬಳಿಕ ತಿಳಿದು ಬಂದಿತ್ತುʼʼ ಎಂದು ಪೊಲೀಸರು ಹೇಳಿದ್ದಾರೆ.

ʼʼಬಳಿಕ ಆಕೆ ನಿರೂಪಕನ ಫೋನ್ ನಂಬರ್‌ ಹುಡುಕಿ ತೆಗೆದಿದ್ದಳು. ನಿರೂಪಕನಿಗೆ ಮೆಸೇಜ್‌ ಮಾಡಿ, ತಮ್ಮ ಫೋಟೊವನ್ನು ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ಬೇರೊಬ್ಬರು ಬಳಸುತ್ತಿದ್ದಾರೆ ಎಂದು ತಿಳಿಸಿದ್ದಳು. ಅದರಂತೆ ನಿರೂಪಕ ತನ್ನ ಫೋಟೊವನ್ನು ದುರ್ಬಳಕೆ ಮಾಡುತ್ತಿರುವ ಬಗ್ಗೆ ಸೈಬರ್‌ ಕ್ರೈಮ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದʼʼ.

ʼʼಇದಾಗಿ ಹಲವು ದಿನಗಳವರೆಗೆ ಆ ಮಹಿಳೆ ನಿರೂಪಕನಿಗೆ ಮೆಸೆಜ್‌ ಕಳುಹಿಸುತ್ತಿದ್ದಳು. ಬೇಸತ್ತ ಆತ ಆಕೆಯ ನಂಬರ್‌ ಅನ್ನು ಬ್ಲಾಕ್‌ ಮಾಡಿದ್ದ. ಇದರಿಂದ ಹತಾಶಳಾದ ಮಹಿಳೆ ನಿರೂಪಕನನ್ನು ಮದುವೆಯಾಗಲು ಅಪಹರಣದ ಸಂಚು ರೂಪಿಸಿದ್ದಳುʼʼ ಎಂದು ಪೊಲೀಸರು ತಿಳಿಸಿದ್ದಾರೆ.

4 ಮಂದಿಯ ನಿಯೋಜನೆ

ʼʼನಿರೂಪಕನ ಅಪಹರಣಕ್ಕೆ ನಾಲ್ಕು ಮಂದಿಯನ್ನು ನಿಯೋಜಿಸಿದ ಮಹಿಳೆ, ಆತನ ಚಲನವಲನವನ್ನು ಗಮನಿಸಲು ಕಾರಿಗೆ ಟ್ರ್ಯಾಕಿಂಗ್‌ ಉಪಕರಣ ಅಳವಡಿಸಿದ್ದಳು. ಅದರಂತೆ ಫೆಬ್ರವರಿ 11ರಂದು ನಾಲ್ವರು ನಿರೂಪಕನ್ನು ಅಪರಿಹರಿಸಿ ಮಹಿಳೆಯ ಕಚೇರಿಗೆ ಕರೆ ತಂದಿದ್ದರು. ಅಲ್ಲದೆ ನಿರೂಪಕನಿಗೆ ಸರಿಯಾಗಿ ಥಳಿಸಿದ್ದರು. ಜೀವ ಬೆದರಿಕೆಯಿಂದಾಗಿ ಟಿವಿ ನಿರೂಪಕ ಮಹಿಳೆಯ ಕರೆಗಳಿಗೆ ಪ್ರತಿಕ್ರಿಯಿಸಲು ಒಪ್ಪಿಕೊಂದ ಬಳಿಕವಷ್ಟೇ ಆತನನ್ನು ಬಿಡುಗಡೆ ಮಾಡಲಾಗಿತ್ತುʼʼ ಎಂದು ಪೊಲೀಸರು ವಿವರಿಸಿದ್ದಾರೆ.

ಇದನ್ನೂ ಓದಿ: Kidnap Case: ಹಾನಗಲ್‌ನಲ್ಲಿ ಮುಸ್ಲಿಂ ಮಹಿಳೆ ರೇಪ್ ಕೇಸ್‌ ಬೆನ್ನಲ್ಲೇ ಹಿಂದು ಯುವತಿಯ ಕಿಡ್ನ್ಯಾಪ್‌!

ದೂರು ದಾಖಲು

ಅಪಹರಣಕಾರರ ಬಳಿಯಿಂದ ಹೊರಬಂದ ನಿರೂಪಕ ಬಳಿಕ ಉಪ್ಪಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, 363 (ಅಪಹರಣ), 341, 342 (ಅಕ್ರಮ ಬಂಧನ) ಮತ್ತು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಮಹಿಳೆ ಮತ್ತು ಆಕೆ ನೇಮಿಸಿದ ನಾಲ್ವರು ಅಪಹರಣಕಾರರನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version