ಪಶ್ಚಿಮ ಬಂಗಾಳ:ಲೋಕಸಭಾ ಚುನಾವಣೆ(Lok sabha Election 2024)ಯ ಮೂರನೇ ಹಂತದ ಮತದಾನಕ್ಕೆ ಒಂದು ದಿನ ಇರುವಾಗಲೇ ಪಶ್ಚಿಮ ಬಂಗಾಳ(West Bengal)ದಲ್ಲಿ ಬಾಂಬ್ ಸ್ಫೋಟಗೊಂಡಿದೆ. ಹೂಗ್ಲಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಮಗುವೊಂದು ಮೃತಪಟ್ಟಿದ್ದು, ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಪಾಂಡುವಾ ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಕಚ್ಚಾ ಬಾಂಬ್(Crude Bomb) ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ ಎನ್ನಲಾಗಿದೆ.
ಘಟನೆಯ ವಿವರ:
ಇನ್ನು ರಸ್ತೆ ಬದಿಯಲ್ಲಿ ಆಟವಾಡುತ್ತಿದ್ದ ಮಕ್ಕಳು ಆಕಸ್ಮಿಕವಾಗಿ ಕಚ್ಚಾ ಬಾಂಬ್ ಅನ್ನು ಚೆಂಡು ಎಂದು ಭಾವಿಸಿ ಎತ್ತಿಕೊಂಡಿದ್ದಾರೆ. ಆಗ ಅದು ಸ್ಫೋಟಗೊಂಡಿದೆ. ಘಟನೆಯಲ್ಲಿ ಪುಟ್ಟ ಕಂದಮ್ಮ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದು, ಗಾಯಗೊಂಡ ಇಬ್ಬರಲ್ಲಿ ಒಬ್ಬ ತನ್ನ ಬಲಗೈಯನ್ನೇ ಕಳೆದುಕೊಂಡಿದ್ದಾನೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ. ಇನ್ನು ಈ ಕಚ್ಚಾ ಬಾಂಬ್ ಎಲ್ಲಿಂದ ಬಂತು? ಯಾರು ಎಸೆದರು ಎಂಬುದು ತನಿಖೆಯಲ್ಲಿ ತಿಳಿಯಬೇಕಾಗಿದೆ.
#WATCH | West Bengal: Two children critically injured in a mysterious blast in Tinna Netaji Colony at Pandua, Hooghly. The blast occurred at the spot where they were playing. The injured have been admitted to hospital. Police investigation is underway. Details awaited. pic.twitter.com/cb2Pou7lXr
— ANI (@ANI) May 6, 2024
ಇನ್ನು ಲೋಕಸಭಾ ಚುನಾವಣೆ ಹಿನ್ನೆಲೆ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಇಂದು ಇದೇ ಪ್ರದೇಶದಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮ ಕೈಗೊಳ್ಳಬೇಕಿತ್ತು. ಬೃಹತ್ ಸಾರ್ವಜನಿಕ ಸಭೆಯನ್ನೂ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಅದಕ್ಕೂ ಮುನ್ನ ಈ ಘಟನೆ ನಡೆದಿರುವುದು ಎಲ್ಲರಲ್ಲೂ ಆತಂಕ ಮೂಡಿಸಿದೆ. ಇನ್ನು ನಾಳೆ ನಡೆಯಲಿರುವ ಮೂರನೇ ಹಂತ ಚುನಾವಣೆಯಲ್ಲಿ ರಾಜ್ಯ ನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.
ಕಳೆದ ವಾರ ಪಶ್ಚಿಮ ಬಂಗಾಳದ ರಾಜ್ಯ ರಾಜಧಾನಿ ಕೋಲ್ಕತ್ತಾದಲ್ಲಿ ತೃಣಮೂಲ ಕಾಂಗ್ರೆಸ್ (Trinmool Congress)ನ ಎರಡು ಗುಂಪುಗಳ ನಡುವೆ ಘರ್ಷಣೆ ಏರ್ಪಟ್ಟು, ಟಿಎಂಸಿ(TMC)ಯ ಕಾರ್ಯಕರ್ತನನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಅರ್ಜುನ್‌ಪುರದ ಪಶ್ಚಿಮ್‌ಪುರ ಪ್ರದೇಶದಲ್ಲಿ ಟಿಎಂಸಿಯ ಒಂದು ಬಣ ಕರೆಂಟ್ ಕಟ್ ಮಾಡಿದ ವಿಚಾರಕ್ಕೆ ಜಗಳ ಶುರುವಾಗಿತ್ತು. ಎರಡೂ ತಂಡಗಳ ಜಗಳ ತಾರಕಕ್ಕೇರಿ ಮಾರಾಮಾರಿ ನಡೆದಿದೆ. ಪರಸ್ಪರ ದೊಣ್ಣೆ, ಕಲ್ಲಿನಿಂದ ಬಡಿದಾಟ ನಡೆದಿತ್ತು. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಸಂಜೀವ್‌ನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಗೆ ದಾಖಲಾಗುವ ಮೊದಲೇ ಆತ ಕೊನೆಯುಸಿರೆಳೆದಿದ್ದ.
ಕಲ್ಲೇಟು ಬಿದ್ದು ಕೆಳಗೆ ಬಿದ್ದಿದ್ದ ಸಂಜೀವ್ ಮೇಲೆ ದುಷ್ಕರ್ಮಿಗಳು ರಾಡ್‌ನಿಂದ ದಾಳಿ ನಡೆಸಿದ್ದರು ಎನ್ನಲಾಗಿದೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 13 ಜನರ ವಿರುದ್ಧ ಕೇಸ್ ದಾಖಲಾಗಿದ್ದು, ಅವರನ್ನು ಅರೆಸ್ಟ್ ಮಾಡಲಾಗಿದೆ. ಘಟನೆ ಸಂಬಂಧ ತನಿಖೆ ಮುಂದುವರೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಇನ್ನು ಸಂಜೀವ್ ದಾಸ್ ಹತ್ಯೆಗೆ ಖಂಡನೆ ವ್ಯಕ್ತಪಡಿಸಿರುವ ಅವರ ಕುಟುಂಬಸ್ಥರು ದುರ್ಘಟನೆಗೆ ಟಿಎಂಸಿಯನ್ನೇ ಹೊಣೆಯನ್ನಾಗಿದೆ.
ಇದನ್ನೂ ಓದಿ:ED Raid: ಇಡಿ ಭರ್ಜರಿ ಬೇಟೆ; ಕಾಂಗ್ರೆಸ್ ಮುಖಂಡನ ಆಪ್ತ ಕಾರ್ಯದರ್ಶಿ ಮನೆಯಿಂದ 25 ಕೋಟಿ ರೂ. ವಶ
ಮತ್ತೊಂದೆಡೆ ಅದೇ ದಿನ ದಕ್ಷಿಣ ಕೋಲ್ಕತಾದ ಆನಂದಪುರದಲ್ಲಿ ಬಿಜೆಪಿ ನಾಯಕಿ ಸರಸ್ವತಿ ಸರ್ಕಾರ್ ಮೇಲೆಯೂ ಮಾರಣಾಂತಿಕ ಹಲ್ಲೆ ನಡೆದಿದೆ. ಟಿಎಂಸಿ ಕಾರ್ಯಕರ್ತರು ಸರಸ್ವತಿ ಮೇಲೆ ಹರಿತವಾದ ಆಯುಧದಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಚುನಾವಣಾ ಬ್ಯಾನರ್ ಕಟ್ಟುವ ವಿಚಾರಕ್ಕೆ ಬಿಜೆಪಿ ಮತ್ತು ಟಿಎಂಸಿ ನಾಯಕರ ನಡುವೆ ಮಾರಾಮಾರಿ ನಡೆದಿದ್ದು, ಈ ವೇಳೆ ಆಕೆಯ ತಲೆಗೆ ಗಂಭೀರ ಗಾಯಗಳಾಗಿವೆ.