Site icon Vistara News

Crude Oil Price: ಇಸ್ರೇಲ್-ಪ್ಯಾಲೆಸ್ತೀನ್‌ ಯುದ್ಧ; ಕಚ್ಚಾ ತೈಲ ಬೆಲೆ ಏರಿಕೆ, ಭಾರತದ ಮೇಲೆ ಪರಿಣಾಮ ನಿಶ್ಚಿತ?

crude oil

Crude Oil prices jump 4% after Hamas attack on Israel; Will It Effect India?

ನವದೆಹಲಿ: ಇಸ್ರೇಲ್‌ ಮೇಲೆ ಪ್ಯಾಲೆಸ್ತೀನ್‌ನ ಹಮಾಸ್‌ ಉಗ್ರರು ಸಾವಿರಾರು ರಾಕೆಟ್‌ಗಳೊಂದಿಗೆ ದಾಳಿ ಆರಂಭಿಸಿದ ಬಳಿಕ (Israel Palestine War) ಇಸ್ರೇಲ್‌ ಕೂಡ ವಾಯುದಾಳಿ ಮೂಲಕ ಗಾಜಾಪಟ್ಟಿ ಉಗ್ರರಿಗೆ ತಿರುಗೇಟು ನೀಡಿದೆ. ಇಸ್ರೇಲ್‌ ಹಾಗೂ ಹಮಾಸ್‌ ದಾಳಿ-ಪ್ರತಿದಾಳಿ ದಿನೇದಿನೆ ತೀವ್ರವಾಗುತ್ತಿದೆ. ಸಂಘರ್ಷ, ದಾಳಿ, ಪ್ರತಿದಾಳಿಯು ಎರಡು ರಾಷ್ಟ್ರಗಳಿಗೆ ಮಾತ್ರವಲ್ಲ ಜಗತ್ತಿಗೇ ಪರಿಣಾಮ ಬೀರುವ ಲಕ್ಷಣಗಳು ಗೋಚರಿಸಿವೆ. ಇಸ್ರೇಲ್-‌ಪ್ಯಾಲೆಸ್ತೀನ್‌ ಸಂಘರ್ಷದ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆಯು (Crude Oil Price) ಏಕಾಏಕಿ ಶೇ.4ರಷ್ಟು ಏರಿಕೆಯಾಗಿದೆ. ಇದರ ಪರಿಣಾಮವು ಭಾರತದ ಮೇಲೂ ಬೀಳಲಿದೆ ಎಂದು ತಿಳಿದುಬಂದಿದೆ.

ಜಾಗತಿಕ ಮಾರುಕಟ್ಟೆಗೆ ಪ್ಯಾಲೆಸ್ತೀನ್‌ನಿಂದ ಭಾರಿ ಪ್ರಮಾಣದ ಕಚ್ಚಾತೈಲದ ಪೂರೈಕೆಯಾಗುತ್ತದೆ. ಆದರೆ, ಹಮಾಸ್‌ ಉಗ್ರರು ಇಸ್ರೇಲ್‌ ಮೇಲೆ ದಾಳಿ ನಡೆಸಿರುವ ಕಾರಣ ಪ್ಯಾಲೆಸ್ತೀನ್‌ಗೆ ಜಾಗತಿಕ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ತೈಲ ಪೂರೈಕೆ ಮಾಡುವುದು ಕಷ್ಟವಾಗುತ್ತಿದೆ. ವಿಶ್ವ ಮಾರುಕಟ್ಟೆಗೆ ಕಚ್ಚಾತೈಲದ ಸಮರ್ಪಕ ಪೂರೈಕೆಯಾಗದ ಕಾರಣ ಬ್ರೆಂಟ್‌ ಕಚ್ಚಾತೈಲದ ಬೆಲೆಯು ಶೇ.4ರಷ್ಟು ಏರಿಕೆಯಾಗಿದೆ.

ಭಾರತದ ಮೇಲೆ ಪರಿಣಾಮ?

ಬ್ರೆಂಟ್‌ ಕಚ್ಚಾತೈಲದ ಬೆಲೆಯು ಒಂದು ಬ್ಯಾರೆಲ್‌ಗೆ ವರ್ಷದಲ್ಲಿ ಇದೇ ಮೊದಲ ಬಾರಿಗೆ 95 ಡಾಲರ್‌ ಆಗಿದೆ. ರಷ್ಯಾ ಹಾಗೂ ಉಕ್ರೇನ್‌ ಸಂಘರ್ಷದ ಬಳಿಕ ತಹಬಂದಿಗೆ ಬಂದಿದ್ದ ಕಚ್ಚಾತೈಲದ ಬೆಲೆಯು ಏಕಾಏಕಿ ಏರಿಕೆಯಾಗಿರುವುದು ಕಚ್ಚಾತೈಲದ ಮೇಲೆಯೇ ಅವಲಂಬಿತವಾಗಿರುವ ಭಾರತದಂತಹ ರಾಷ್ಟ್ರಗಳ ಮೇಲೆ ಹೆಚ್ಚಿನ ಪ್ರಮಾಣದ ಪರಿಣಾಮ ಬೀರಲಿದೆ ಎಂದೇ ತಜ್ಞರು ವಿಶ್ಲೇಷಿಸಿದ್ದಾರೆ. ಹಾಗಾಗಿ, ಮುಂದಿನ ದಿನಗಳಲ್ಲಿ ಭಾರತದಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಹೆಚ್ಚಾದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.

ಇದನ್ನೂ ಓದಿ: Israel Palestine War: ಸಾವಿನ ಮನೆಯಂತಾದ ಇಸ್ರೇಲ್-ಪ್ಯಾಲೆಸ್ತೀನ್; ದಾಳಿಗೆ‌ 1,100 ಮಂದಿ ಬಲಿ

ಸಾವಿರ ದಾಟಿದ ಸಾವಿನ ಸಂಖ್ಯೆ

ಇಸ್ರೇಲ್‌ ಹಾಗೂ ಪ್ಯಾಲೆಸ್ತೀನ್‌ ಸಂಘರ್ಷ ಆರಂಭವಾದಾಗಿನಿಂದ ಇದುವರೆಗೆ 1,100 ಜನ ಮೃತಪಟ್ಟಿದ್ದಾರೆ. ಹಮಾಸ್‌ ಉಗ್ರರ ದಾಳಿಯಿಂದ ಇಸ್ರೇಲ್‌ನಲ್ಲಿ 44 ಯೋಧರು ಸೇರಿ 700ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಮತ್ತೊಂದೆಡೆ, ಇಸ್ರೇಲ್‌ ನಡೆಸಿದ ವಾಯುದಾಳಿಯಿಂದ ಗಾಜಾಪಟ್ಟಿಯಲ್ಲಿ 413 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ. ಅದರಲ್ಲೂ, “ಇದು ಸುದೀರ್ಘ ಹಾಗೂ ಸವಾಲಿನ ಯುದ್ಧ” ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಹೇಳಿರುವುದು ಶೀಘ್ರದಲ್ಲೇ ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ಕಾಳಗ ನಿಲ್ಲುವ ಲಕ್ಷಣಗಳು ಇಲ್ಲ ಎನ್ನಲಾಗಿದೆ.

Exit mobile version