ನವ ದೆಹಲಿ: ಕ್ರಿಪ್ಟೋಕರೆನ್ಸಿ (cryptocurrency) ವಹಿವಾಟು ಹಾಗೂ ವರ್ಚುವಲ್ ಡಿಜಿಟಲ್ ಆಸ್ತಿ (ವಿಡಿಎ) ವಹಿವಾಟುಗಳನ್ನು ಕೇಂದ್ರ ಸರ್ಕಾರ ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ (ಪ್ರಿವೆನ್ಷನ್ ಆಫ್ ಮನಿ ಲಾಂಡರಿಂಗ್ ಆಕ್ಟ್- PMLA) ಅಡಿ ಸೇರಿಸಿದೆ.
ವರ್ಚುವಲ್ ಡಿಜಿಟಲ್ ಸ್ವತ್ತುಗಳೆಂದರೆ ನಿರ್ದಿಷ್ಟ ಕರೆನ್ಸಿ ಮೌಲ್ಯವನ್ನು ಹೊಂದಿರುವ ಕೋಡ್ ಅಥವಾ ಗಣಕಸಂಖ್ಯೆ. ಕ್ರಿಪ್ಟೋಕರೆನ್ಸಿಯಂತೆಯೇ ಇದು ಕೂಡ ಬ್ಲಾಕ್‌ಚೈನ್ ವಿಧಾನದಿಂದ ವ್ಯವಹರಿಸಲ್ಪಡುತ್ತದೆ. ಹಣಕಾಸು ಸಚಿವಾಲಯ ಹೊರಡಿಸಿದ ಗೆಜೆಟ್ ಅಧಿಸೂಚನೆಯ ಪ್ರಕಾರ, ಕ್ರಿಪ್ಟೋ ವ್ಯವಹಾರ, ಕ್ರಿಪ್ಟೋ ಇಟ್ಟುಕೊಳ್ಳುವಿಕೆ ಮತ್ತು ಸಂಬಂಧಿತ ಹಣಕಾಸು ಸೇವೆಗಳಿಗೆ ಈ ಕಾಯಿದೆಯನ್ನು ಅನ್ವಯಿಸಲಾಗಿದೆ. ಇದರೊಂದಿಗೆ, ಭಾರತೀಯ ಕ್ರಿಪ್ಟೋ ವ್ಯವಹಾರಗಳು ಹಣಕಾಸು ಅನುಮಾನಾಸ್ಪದ ಚಟುವಟಿಕೆಗಳ ವ್ಯಾಪ್ತಿಗೆ ಒಳಪಡುತ್ತವೆ.
ವರ್ಚುವಲ್ ಡಿಜಿಟಲ್ ಸ್ವತ್ತುಗಳು ಮತ್ತು ಫಿಯೆಟ್ ಕರೆನ್ಸಿಗಳ ನಡುವಿನ ವಿನಿಮಯ, ಒಂದು ಅಥವಾ ಹೆಚ್ಚಿನ ರೀತಿಯ ವರ್ಚುವಲ್ ಡಿಜಿಟಲ್ ಸ್ವತ್ತುಗಳ ನಡುವೆ ವಿನಿಮಯ, ಅವುಗಳ ವರ್ಗಾವಣೆ, ಅವುಗಳ ಸುರಕ್ಷತಾ ವ್ಯವಸ್ಥೆ, ನಿರ್ವಹಣೆ, ಅವನ್ನು ಸಕ್ರಿಯಗೊಳಿಸುವ ಸಾಧನಗಳು, ವರ್ಚುವಲ್ ಡಿಜಿಟಲ್ ಆಸ್ತಿಯ ಮಾರಾಟಕ್ಕೆ ಸಂಬಂಧಿಸಿದ ಸೇವೆಗಳು ಈಗ PMLA ವ್ಯಾಪ್ತಿಗೆ ಒಳಪಡುತ್ತವೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಬ್ಯಾಂಕ್‌ಗಳು, ಸ್ಟಾಕ್ ಬ್ರೋಕರ್‌ಗಳು ಮತ್ತಿತರ ನಿಯಂತ್ರಿತ ಘಟಕಗಳಂತೆಯೇ ಇನ್ನು ಮುಂದೆ ಡಿಜಿಟಲ್ ಸ್ವತ್ತು ಪ್ಲಾಟ್‌ಫಾರ್ಮ್‌ಗಳು ಕೂಡ ಅಕ್ರಮ ಹಣ ವಹಿವಾಟನ್ನು ತಡೆಯಬೇಕಿವೆ. ಡಿಜಿಟಲ್ ಕರೆನ್ಸಿ ಮತ್ತು ಎನ್‌ಎಫ್‌ಟಿಗಳಂತಹ ಸ್ವತ್ತುಗಳು ಕೆಲವು ವರ್ಷಗಳಿಂದ ಜಾಗತಿಕ ಟ್ರೆಂಡ್ ಆಗಿ ಬೆಳೆಯುತ್ತಿದೆ. ಕ್ರಿಪ್ಟೋಕರೆನ್ಸಿ ಎಕ್ಸ್‌ಚೇಂಜ್‌ಗಳಿಂದ ಈ ಸ್ವತ್ತುಗಳ ವಹಿವಾಟು ಬಹುಪಟ್ಟು ಹೆಚ್ಚಾಗಿದೆ. ಆದರೆ ಭಾರತ ಇಂತಹ ಆಸ್ತಿ ವರ್ಗಾವಣೆಗಳ ನಿಯಂತ್ರಣ ಅಥವಾ ಇವುಗಳಿಗೆ ತೆರಿಗೆ ವಿಧಿಸುವ ಬಗ್ಗೆ ಸ್ಪಷ್ಟ ನೀತಿಯನ್ನು ಇನ್ನೂ ಹೊಂದಿಲ್ಲ.
ಇದನ್ನೂ ಓದಿ: Cryptocurrency | ವರ್ಚುವಲ್ ಕರೆನ್ಸಿ ನಿಷೇಧಕ್ಕೆ ರಿಸರ್ವ್ ಬ್ಯಾಂಕ್ ಒಲವು