ನವ ದೆಹಲಿ: ಬಿಜೆಪಿ ಟಿಕೆಟ್ ಸೇಲ್‌ಗೆ ಇಲ್ಲ (BJP ticket is not for sale) ಎನ್ನುವುದು ಚೈತ್ರಾ ಕುಂದಾಪುರ (Chaitra Kundapura) ವಂಚನೆ ಪ್ರಕರಣದಲ್ಲಿ ಸಾಬೀತಾಗಿದೆ. ಇದನ್ನೂ ಮೀರಿ ಯಾರಾದರೂ ಯಾರಿಗಾದರೂ ದುಡ್ಡು ಕೊಡುತ್ತೇವೆ ಅಂತ ಹೋದ್ರೆ ʻಗೋವಿಂದʼ ಪೂಜಾರಿ (Govinda Poojari) ಆಗ್ತೀರಿ ಅಷ್ಟೆ ಎಂದು ಬಿಜೆಪಿಯ ಹಿರಿಯ ನಾಯಕ ಸಿ.ಟಿ. ರವಿ (CT Ravi) ಹೇಳಿದ್ದಾರೆ. ನವ ದೆಹಲಿಯಲ್ಲಿ ಮಾಧ್ಯಮಗಳ ಜತೆ ಅವರು ಮಾತನಾಡಿದರು.
ಬಿಜೆಪಿಯಲ್ಲಿ ಯಾವತ್ತೂ ಟಿಕೆಟ್ ಮಾರಾಟಕ್ಕೆ ಇಲ್ಲ. ಬಿಜೆಪಿಯಲ್ಲಿ ಹಣ ಕೊಟ್ಟು ಟಿಕೆಟ್ ಖರೀದಿ ಸಾಧ್ಯವಿಲ್ಲ. ಈಗ ನಡೆದಿರುವುದು ಸಂದರ್ಭದ ದುರ್ಬಳಕೆ. ಹಣದ ಮೂಲಕ ಟಿಕೆಟ್ ಪಡೆಯಲಾಗದು ಎನ್ನುವುದು ಇಲ್ಲಿ ಸಾಬೀತಾಗಿದೆ. ಹೀಗಾಗಿ ಹಣದ ಮೂಲಕ ಟಿಕೆಟ್ ಪಡೆಯುವ ಪ್ರಯತ್ನ ಮುಂದೆ ಯಾರು ಮಾಡಬಾರದು. ಒಂದು ವೇಳೆ ಮಾಡಿದ್ರೆ ಮತ್ತೊಮ್ಮೆ ಗೋವಿಂದ ಪೂಜಾರಿ ಆಗ್ತೀರಿ ಎಂದು ಅವರು ಸ್ಪಷ್ಟಪಡಿಸಿದರು.
ʻʻಕೆಲವರು ದೊಡ್ಡವರ ಹೆಸರು ಬಳಕೆ ಮಾಡುತ್ತಾರೆ. ಮೋಸ ಮಾಡಲೆಂದೇ ಈ ಕೆಲಸ ನಡೆಯುತ್ತದೆʼʼ ಎಂದು ಹೇಳಿದ ಅವರು, ʻʻಒಂದು ಪಕ್ಷದಲ್ಲಿ ಚುನಾವಣಾ ಸಮಿತಿಯಲ್ಲಿದ್ದವರಿಗೇ ಒಬ್ಬನಿಗೆ ಟಿಕೆಟ್ ಕೊಡಲು ಸಾಧ್ಯವಾಗುವುದಿಲ್ಲ. ಯಾಕೆಂದರೆ, ಸಭೆಯಲ್ಲಿ ಚರ್ಚೆಯ ಬಳಿಕ ಒಮ್ಮತ ನಿರ್ಧಾರದ ಮೇಲೆ ಟಿಕೆಟ್ ನೀಡಲಾಗುತ್ತದೆʼʼ ಎಂದು ಸಿ.ಟಿ. ರವಿ ವಿವರಿಸಿದರು. ʻʻಬಿಜೆಪಿಯ ಎಲ್ಲ ಪ್ರಮುಖರು ದಕ್ಷಿಣ ಕನ್ನಡದಲ್ಲಿ ಇದ್ದಾರೆ ಅವರ ಗಮನಕ್ಕೂ ತಂದಿಲ್ಲʼʼ ಎಂದು ಸಿ.ಟಿ. ರವಿ ನುಡಿದರು.
ʻʻಬಿಜೆಪಿ ದೊಡ್ಡ ಪಕ್ಷವಾಗಿದೆ, ಹೀಗಾಗಿ ಇಲ್ಲಿ ಎಲ್ಲ ಥರದ ಜನರು ಇದ್ದಾರೆ. ಸಿದ್ಧಾಂತದ ಹೆಸರಲ್ಲಿ ಕೆಲವರು ಬರ್ತಾರೆ. ಸೇವೆ ಮಾಡುತ್ತೇವೆ ಎಂದು ಬರ್ತಾರೆ ಜನಪ್ರತಿನಿಧಿಯಾಗಲು ಬರ್ತಾರೆ. ಕೆಲವರು ಸಮಯದ ದುರ್ಬಳಕೆ ಮಾಡಿಕೊಳ್ಳಲು ಪಕ್ಷಕ್ಕೆ ಬರ್ತಾರೆʼʼ ಎಂದು ಹೇಳಿದ ಅವರು, ʻʻಬಿಜೆಪಿ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಚಪ್ಪಲಿ ಹಾಕದ ಬರಿಗಾಲ ಕಾರ್ಯಕರ್ತನಿಗೆ ಟಿಕೆಟ್ ನೀಡಿದೆ. ಇದಕ್ಕಿಂತ ಇನ್ನೇನು ಬೇಕುʼʼ ಎಂದು ಕೇಳಿದರು.
ʻʻಇದಕ್ಕೂ ಮುನ್ನ ಇಂತಹ ವಿಷಯ ನಮ್ಮ ಗಮನಕ್ಕೆ ಬಂದಿಲ್ಲ. ಘಟನೆ ಚಿಕ್ಕಮಗಳೂರಿನಲ್ಲೆ ನಡೆದಿಲ್ಲ, ವಯಾ ಚಿಕ್ಕಮಗಳೂರು ನಡೆದಿದೆʼʼ ಎಂದು ತಮಗೂ ಇದಕ್ಕೂ ಸಂಬಂಧವಿಲ್ಲ ಎಂದರು.
ಇದನ್ನೂ ಓದಿ: Chaitra Kundapura : ನಂಗೆ ಟಿಕೆಟ್ ಕೊಡ್ಬೇಕೋ, ಬಿಡ್ಬೇಕೋ ಅಂತ ಡಿಸೈಡ್ ಮಾಡಲು ಚೈತ್ರಾ ಯಾರು?; ಶೋಭಾ ಕರಂದ್ಲಾಜೆ ಕಿಡಿ
ಅಧಿಕಾರ ಕಳೆದುಕೊಂಡಾಗ ಕೆಲವರು ಹೋಗುವುದು ಸಹಜ ಎಂದ ರವಿ
ಬೆಂಗಳೂರಿನ ಕೆಲವು ಬಿಬಿಎಂಪಿ ಕಾರ್ಪೊರೇಟರ್‌ಗಳು, ನಾಯಕರು ಕಾಂಗ್ರೆಸ್ ಸೇರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ʻʻನಾವು ಈಗ ಅಧಿಕಾರ ಕಳೆದುಕೊಂಡಿದ್ದೇವೆ. ಅಧಿಕಾರ ಕಳೆದುಕೊಂಡಾಗ ಕೆಲವರು ಪಕ್ಷದಿಂದ ಹೋಗಬಹುದು. ರಾಜಕಾರಣದಲ್ಲಿ ಮೇಲು ಕೆಳಗೆ ಆಗುವುದು ಸಾಮಾನ್ಯ. ಇದಕ್ಕಿಂತ ಕಷ್ಟ ಕಾಲದಲ್ಲಿ ಪಕ್ಷ ಕಟ್ಟಿದ್ದೇವೆʼʼ ಎಂದರು.
ʻʻಡಿ.ಕೆ. ಶಿವಕುಮಾರ್ ಅವರು ಹಲವಾರು ಮಂದಿ ಕಾಂಗ್ರೆಸ್ ಪಕ್ಷ ಬಿಟ್ಟು ಹೋಗುವುದನ್ನು ನೋಡಿದ್ದಾರೆ. ಈಗ ಪಕ್ಷಕ್ಕೆ ಸೇರುತ್ತಿರುವುದು ನೋಡುತ್ತಿದ್ದಾರೆ. ಹಾಲಿ ಶಾಸಕರು, ಸಚಿವರು ಅವರದೇ ಪಕ್ಷ ಇದ್ದಾಗ ಬಿಜೆಪಿ ಸೇರಿದ್ದಾರೆ. ಈಗ ಮಾಜಿಗಳು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ. ಹಾಲಿಗಳನ್ನು ಸೇರಿಸಿಕೊಂಡ ನಾವೇ ಅಧಿಕಾರಕ್ಕೆ ಬರಲಿಲ್ಲ. ನೀವು ಮಾಜಿಗಳನ್ನು ಸೇರಿಸಿಕೊಂಡು ಅಧಿಕಾರಕ್ಕೆ ಬರ್ತಿರಾ? ಈ ಸತ್ಯದ ಅರಿವು ಡಿ.ಕೆ ಶಿವಕುಮಾರ್ ಅವರಿಗೆ ಇರಬೇಕುʼʼ ಎಂದು ಕಿವಿಮಾತು ಹೇಳಿದರು.
ಮೈತ್ರಿಯ ಬಗ್ಗೆ ನನಗೆ ಏನೇನೂ ಗೊತ್ತಿಲ್ಲ, ಏನೋ ಆಗ್ತಿದೆ ಎಂಬ ಊಹೆ ಮಾತ್ರ
ʻʻಬಿಜೆಪಿ-ಜೆಡಿಎಸ್ ಮೈತ್ರಿಯ ಬಗ್ಗೆ ನನಗೆ ಏನೇನೂ ಗೊತ್ತಿಲ್ಲ. ಪಕ್ಷದ ಹಿರಿಯ ನಾಯಕರು ಮೈತ್ರಿ ಬಗ್ಗೆ ನಮಗೆ ಯಾವುದೇ ಮಾಹಿತಿ ನೀಡಿಲ್ಲ. ನಾನು ಬಿ.ಎಸ್. ಯಡಿಯೂರಪ್ಪ ಅವರು, ಎಚ್.ಡಿ. ಕುಮಾರಸ್ವಾಮಿ, ಎಚ್.ಡಿ ದೇವೇಗೌಡರ ಮಾತುಗಳನ್ನು ಕೇಳಿಸಿಕೊಂಡಿದ್ದೇನೆ. ಅದನ್ನು ಕೇಳಿದಾಗ ಏನೋ ಚರ್ಚೆ ನಡೆಯುತ್ತಿರಬಹುದು ಎಂದು ನನಗೆ ಅನಿಸಿದೆʼʼ ಎಂದು ಹೇಳಿದರು ಸಿ.ಟಿ. ರವಿ.
ʻʻನನ್ನಂತ ಕಾರ್ಯಕರ್ತ ಪಕ್ಷದ ನಿರ್ಧಾರ ಅನುಷ್ಠಾನ ಮಾಡುತ್ತೇವೆ. ನಮ್ಮ ಗಮನ ಆ ಕಡೆ ಮಾತ್ರ. ಒಂದು ವೇಳೆ ಸಾಧಕ ಬಾಧಕ ಏನಾದ್ರೂ ಕೇಳಿದರೆ, ಪಕ್ಷದ ಕಾರ್ಯಕರ್ತರ ಭಾವನೆ ಏನಿದೆ, ತಳಮಟ್ಟದಲ್ಲಿ ಏನಾಗ್ತಿದೆ ಎಂಬ ವಿಚಾರವನ್ನು ತಲುಪಿಸುತ್ತೇನೆ. ಮುಂದೆ ಪಕ್ಷ ಏನೇ ತೀರ್ಮಾನ ತೆಗೆದುಕೊಂಡರೂ ಅದಕ್ಕೆ ಬದ್ಧನಾಗಿರುತ್ತೇನೆ. ನನ್ನ ಕೆಲಸ ಇಷ್ಟೇʼʼ ಎಂದು ರವಿ ಸ್ಪಷ್ಟಪಡಿಸಿದರು.
ʻʻಈ ಮೊದಲು ಜೆಡಿಎಸ್-ಬಿಜೆಪಿ ಚುನಾವಣಾ ಪೂರ್ವ ಹೊಂದಾಣಿಕೆ ಮಾಡಿಕೊಂಡಿಲ್ಲ. ನಮಗೆ ಅದರ ಅನುಭವ ಇಲ್ಲ. ಏನಾಗುತ್ತೆ ಎಂದು ಭವಿಷ್ಯ ಹೇಳುವುದು ಸೂಕ್ತವಲ್ಲ. ನಿಜವೆಂದರೆ, ಪಕ್ಷಗಳನ್ನು ಒಗ್ಗೂಡಿಸುವುದಕ್ಕಿಂತಲೂ ಕಾರ್ಯಕರ್ತರನ್ನು ಮಾನಸಿಕವಾಗಿ ಒಗ್ಗೂಡಿಸಬೇಕು. ಹಿಂದೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಾಗ ಈ ವಿಚಾರದಲ್ಲಿ ಸೋತಿತ್ತು. ಒಂದು ವೇಳೆ ಮೈತ್ರಿ ಮಾಡಿಕೊಳ್ಳುವುದೇ ಆದರೆ ನನ್ನಂಥವರ ಕೆಲಸ ಕಾರ್ಯಕರ್ತರನ್ನು ಮಾನಸಿಕವಾಗಿ ಒಗ್ಗೂಡಿಸುವುದೇ ಆಗಿರುತ್ತದೆʼʼ ಎಂದು ಸಿ.ಟಿ. ರವಿ ಹೇಳಿದರು.