ನವ ದೆಹಲಿ: ನಮ್ಮೆಲ್ಲ ವ್ಯವಹಾರಗಳು, ಸಾಧನೆಗಳು, ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಆಧುನಿಕತೆಯ ಗುರಿಯಿದೆ. ಮೂಲಸೌಕರ್ಯ ಎಂದರೆ ಕೇವಲ ರಸ್ತೆ, ಫ್ಲೈಓವರ್ ನಿರ್ಮಾಣವಲ್ಲ. ಆಧುನಿಕ ಭಾರತದಲ್ಲಿ ಮೂಲಸೌಕರ್ಯಕ್ಕೆ ಹಿರಿದಾದ ಅರ್ಥವಿದೆ; ಬೇರೆ ಆಯಾಮವಿದೆ. ಸಾಮಾಜಿಕ ಮೂಲಸೌಕರ್ಯ, ಸಾರಿಗೆ ಮೂಲಸೌಕರ್ಯ, ಡಿಟಿಟಲ್ ಮೂಲಸೌಕರ್ಯಗಳಿವೆ. ಆದರೆ, ಬಹಳ ಜನರು ದೇಶದಲ್ಲಾಗುತ್ತಿರುವ ಸಾಂಸ್ಕೃತಿಕ ಮೂಲಸೌಕರ್ಯ ಅಭಿವೃದ್ಧಿ ಬಗ್ಗೆ ಗಮನಿಸಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
ಗುರುವಾರ ಸಂಜೆ ಕರ್ತವ್ಯಪಥ(ಈ ಮೊದಲು ರಾಜಪಥ)ವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಮೋದಿ ಅವರು, “ಸಾಮಾಜಿಕ ಮೂಲಸೌಕರ್ಯ ದೇಶದಲ್ಲಿ ಹೆಚ್ಚಾಗುತ್ತಿದೆ. ನಮ್ಮ ರಾಷ್ಟ್ರದಲ್ಲಿ ಈಗ ಏಮ್ಸ್‌ಗಳಲ್ಲಿ ಮೂರು ಪಟ್ಟು ಹೆಚ್ಚಳವಾಗಿದೆ; ಶೇ.50ರಷ್ಟು ಮೆಡಿಕಲ್ ಕಾಲೇಜುಗಳು ಹೆಚ್ಚಿವೆ. ಐಐಟಿಗಳ ಸಂಖ್ಯೆ ಅಧಿಕವಾಗುತ್ತಿದೆ. ಮೂರು ವರ್ಷಗಳಲ್ಲಿ 6.5 ಕೋಟಿ ಗ್ರಾಮೀಣ ಮನೆಗಳಿಗೆ ನೀರು ಪೂರೈಸಲಾಗಿದೆ. 75 ಅಮೃತ ಸರೋವರಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದೆಲ್ಲವೂ ಸಾಮಾಜಿಕ ಮೂಲಸೌಕರ್ಯದ ಭಾಗವಾಗಿದೆ” ಎಂದು ಹೇಳಿದರು.
ಟಾನ್ಸ್‌ಪೋರ್ಟ್ ಇನ್ಫ್ರಾಸ್ಟ್ರಕ್ಚರ್
ಸಾರಿಗೆ ಸಂಪರ್ಕ ಮೂಲಸೌಕರ್ಯದಲ್ಲೂ ದೇಶ ದಾಪುಗಾಲು ಹಾಕುತ್ತಿದೆ. ದಾಖಲೆ ಅವಧಿಯಲ್ಲಿ ಗ್ರಾಮೀಣ ಭಾಗದಲ್ಲಿ ಹೇಗೆ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆಯೋ ಅಷ್ಟೇ ವೇಗದಲ್ಲಿ ಎಕ್ಸ್‌ಪ್ರೆಸ್ ವೇಗಳೂ ನಿರ್ಮಾಣವಾಗುತ್ತಿವೆ. ರೈಲು ಮಾರ್ಗಗಳು ವಿಸ್ತರಣೆಯಾಗುತ್ತಿರುವ ರೀತಿಯಲ್ಲಿ ಬೇರೆ ಬೇರೆ ನಗರಗಳಲ್ಲಿ ಮೆಟ್ರೋ ಕೂಡ ವಿಸ್ತಾರವಾಗುತ್ತಿದೆ. ಏರ್‌ಪೋರ್ಟ್‌ಗಳು ನಿರ್ಮಾಣ ಹೆಚ್ಚಾದಂತೆ, ಜಲಸಂಚಾರ ಮಾರ್ಗ ಕೂಡ ಅಭಿವೃದ್ಧಿ ಕಾಣುತ್ತಿದೆ ಎಂದರು.
ಡಿಜಿಟಲ್ ಇನ್ಫ್ರಾಸ್ಟ್ರಕ್ಚರ್
ನಮ್ಮ ದೇಶದ ಡಿಜಿಟಲ್ ಇನ್ಫ್ರಾಸ್ಟ್ರಕ್ಚರ್ ಸಾಧನೆಯ ಬಗ್ಗೆ ಇಡೀ ಜಗತ್ತಿಗೇ ತಿಳಿದಿದೆ. ದೇಶದ 1.5 ಕೋಟಿ ಗ್ರಾಮಪಂಚಾಯ್ತಿಗಳಿಗೆ ಆಪ್ಟಿಕಲ್ ಫೈಬರ್ ಅಳವಡಿಸಲಾಗಿದೆ. ಡಿಜಿಟಲ್ ಪೇಮೆಂಟ್‌ಗಳಲ್ಲಿ ದಾಖಲೆ ಬರೆಯುತ್ತಿದ್ದೇವೆ. ಭಾರತದಲ್ಲಿ ಡಿಜಿಟಲ್ ಕ್ರಾಂತಿಯೇ ಆಗುತ್ತಿದೆ ಎಂದು ಪ್ರಧಾನಿ ಹೆಮ್ಮೆಯಿಂದ ಹೇಳಿದರು.
ಕಲ್ಚರಲ್ ಇನ್ಫ್ರಾಸ್ಟ್ರಕ್ಚರ್
ಸಾಂಸ್ಕೃತಿಕ ಮೂಲಸೌಕರ್ಯ ಬಗ್ಗೆ ಹೆಚ್ಚೇನೂ ಚರ್ಚೆಯಾಗುತ್ತಿಲ್ಲ. ಆದರೆ, ಹೊಸ ಭಾರತದಲ್ಲಿ ಸಾಂಸ್ಕೃತಿಕ ಮೂಲಸೌಕರ್ಯವೂ ವೇಗದಲ್ಲಾಗುತ್ತಿದೆ. ಕಾಶಿ ವಿಶ್ವನಾಥ ಮಂದಿರ ಪುನರುತ್ಥಾನದಿಂದ ಹಿಡಿದು ಕೇದಾರನಾಥ, ಕರ್ತಾರಪುರ ಕ್ಷೇತ್ರದವರೆಗೂ ಅಭಿವೃದ್ಧಿಯಾಗುತ್ತಿದೆ. ಮಹಾನ್ ನಾಯಕರಿಗೆ ಅಭೂತಪೂರ್ವ ಗೌರವ ನೀಡಲಾಗುತ್ತಿದೆ. ಸರ್ದಾರ್ ಪಟೇಲ್ ಭವ್ಯ ಪ್ರತಿಮೆ, ಇಂಡಿಯಾಗೇಟ್ ಬಳಿ ನೇತಾಜಿ ಸುಭಾಶ್ ಚಂದ್ರ ಬೋಸ್ ಪ್ರತಿಮೆ ಪ್ರತಿಷ್ಠಾಪನೆ, ನ್ಯಾಷನಲ್ ಪೊಲೀಸ್ ಮೆಮೋರಿಯಲ್, ನ್ಯಾಷನಲ್ ವಾರ್ ಮೆಮೋರಿಯಲ್, ಪಿಎಂ ಮೆಮೋರಿಯಲ್ ಹೀಗೆ ಸಾಗುತ್ತದೆ ಪಟ್ಟಿ. ಅದಕ್ಕೀಗ ಕರ್ತವ್ಯಪಥ ಕೂಡ ಸೇರ್ಪಡೆಯಾಗಿದೆ ಎಂದು ಹೇಳಿದರು.
ಇಂಡಿಯಾ ಗೇಟ್‌ನಲ್ಲೀಗ ಬೋಸ್
ಇಂಡಿಯಾ ಗೇಟ್‌ನಲ್ಲಿ ರಾಷ್ಟ್ರ ನಾಯಕ ಸುಭಾಶ್ ಚಂದ್ರಬೋಸ್ ಅವರ ವಿಶಾಲ ಪ್ರತಿಮೆ ಸ್ಥಾಪಿಸಲಾಗಿದೆ. ಯಾವ ಜಾಗದಲ್ಲಿ ಬ್ರಿಟಿಷ್ ರಾಜನ ಪ್ರತಿಮೆ ಇತ್ತೋ ಅದೇ ಜಾಗದಲ್ಲೀಗ ಬೋಸ್ ಅವರ ಪ್ರತಿಮೆ ಇದೆ. ಇದು ಆಧುನಿಕ ಭಾರತ ಹಾಗೂ ಸಶಕ್ತ ಭಾರತದ ಪ್ರತೀಕವಾಗಿದೆ ಎಂದು ಪ್ರಧಾನಿ ಹೇಳಿದರು.
ಇಡೀ ವಿಶ್ವವೇ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರನ್ನು ನೇತಾಜಿ ಎಂದು ಕರೆಯುತ್ತಿತ್ತು. ನೇತಾಜಿ ಸಾಹಸ, ಸ್ವಾಭಿಮಾನ, ನಾಯಕತ್ವದ ಪ್ರತೀಕರಾಗಿದ್ದರು. ಅವರು ಪರಂಪರಗೆ ಗೌರವ ನೀಡುತ್ತಿದ್ದರು. ಭಾರತವನ್ನು ಆಧುನಿಕ ರಾಷ್ಟ್ರವನ್ನು ಮಾಡುವ ಕನಸು ಕಂಡಿದ್ದರು. ಸ್ವಾತಂತ್ರ್ಯ ಸಿಕ್ಕ ಬಳಿಕ ಭಾರತವೇನಾದರೂ ಬೋಸ್ ಅವರ ವಿಚಾರಗಳ ಅನುಸಾರ ನಡೆದುಕೊಂಡಿದ್ದರೆ ಇಷ್ಟೊತ್ತಿಗೆ ಭಾರತವು ಆಧುನಿಕ ರಾಷ್ಟ್ರವಾಗಿ ಬದಲಾಗುತ್ತಿತ್ತು ಎಂದು ಹೇಳಿದರು.
ಇದನ್ನೂ ಓದಿ | Kartavyapath | ಹೊಸ ಸಂಸತ್ ಭವನದಲ್ಲಿ ಶ್ರಮಿಕರ ಗ್ಯಾಲರಿ: ಪ್ರಧಾನಿ ನರೇಂದ್ರ ಮೋದಿ