Site icon Vistara News

Cyber Crime: ಆನ್‌ಲೈನ್‌ ಉದ್ಯೋಗದ ಹೆಸರಿನಲ್ಲಿ ವಂಚಿಸುತ್ತಿದ್ದ 100 ವೆಬ್‌ಸೈಟ್‌ಗಳನ್ನು ನಿಷೇಧಿಸಿದ ಕೇಂದ್ರ

cyber crime

cyber crime

ನವದೆಹಲಿ: ಆನ್‌ಲೈನ್‌ ವಂಚನೆಯ (Cyber Crime) ವಿರುದ್ಧ ಸಮರ ಸಾರಿರುವ ಕೇಂದ್ರ ಸರ್ಕಾರ (Central Government) ಸುಮಾರು 100 ವೆಬ್‌ಸೈಟ್‌ಗಳನ್ನು (100 websites) ನಿಷೇಧಿಸಿದೆ. ಇವು ಆರ್ಥಿಕ ವಂಚನೆಗಳಲ್ಲಿ ಭಾಗಿಯಾಗಿದ್ದವು ಮತ್ತು ಈ ಆದಾಯವನ್ನು ಭಾರತದಿಂದ ಹೊರಗೆ ವರ್ಗಾಯಿಸುತ್ತಿದ್ದವು ಎಂದು ಕೇಂದ್ರ ಗೃಹ ಸಚಿವಾಲಯ (Union home ministry) ಬುಧವಾರ ತಿಳಿಸಿದೆ.

ಗೃಹ ವ್ಯವಹಾರಗಳ ಸಚಿವಾಲಯದ ಅಧೀನದಲ್ಲಿರುವ ರಾಷ್ಟ್ರೀಯ ಸೈಬರ್ ಕ್ರೈಮ್ ಬೆದರಿಕೆ ವಿಶ್ಲೇಷಣಾ ಘಟಕದ (ಎನ್‌ಸಿಟಿಎಯು) ಶಿಫಾರಸಿನ ಮೇರೆಗೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಎಂಇಐಟಿವೈ) ಈ ವೆವ್‌ಸೈಟ್‌ಗಳನ್ನು ನಿರ್ಬಂಧಿಸಿದೆ ಎಂದು ಮೂಲಗಳು ತಿಳಿಸಿವೆ.

“ಎನ್‌ಸಿಟಿಎಯು ಕಳೆದ ವಾರ ಸಂಘಟಿತ ಹೂಡಿಕೆ, ಅರೆಕಾಲಿಕ ಉದ್ಯೋಗ ವಂಚನೆಗಳಲ್ಲಿ ತೊಡಗಿರುವ 100ಕ್ಕೂ ಹೆಚ್ಚು ವೆಬ್‌ಸೈಟ್‌ಗಳನ್ನು ಗುರುತಿಸಿತ್ತು ಮತ್ತು ನಿಷೇಧಕ್ಕೆ ಶಿಫಾರಸು ಮಾಡಿತ್ತು. 2000ರ ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ತನ್ನ ಅಧಿಕಾರವನ್ನು ಬಳಸಿಕೊಂಡು ಎಂಇಐಟಿವೈ ಈ ವೆಬ್‌ಸೈಟ್‌ಗಳನ್ನು ನಿರ್ಬಂಧಿಸಿದೆ” ಎಂದು ಗೃಹ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಈ ವೆಬ್‌ಸೈಟ್‌ಗಳು ಆನ್‌ಲೈನ್‌ ಅಪರಾಧಗಳಿಗೂ ಕಾರಣವಾಗಿದ್ದವು. ಇದಕ್ಕಾಗಿ ವಿದೇಶಿ ನಟರು, ಡಿಜಿಟಲ್ ಜಾಹೀರಾತು, ಚಾಟ್ ಮೆಸೆಂಜರ್‌ ಮತ್ತಿತರ ವಿಧಾನಗಳನ್ನು ಬಳಸಲಾಗುತ್ತಿತ್ತು. ಈ ರೀತಿಯ ವಂಚನೆಗಳಿಂದ ಗಳಿಸಿದ ಆದಾಯವನ್ನು ಕಾರ್ಡ್ ನೆಟ್‌ವರ್ಕ್‌, ಕ್ರಿಪ್ಟೋ ಕರೆನ್ಸಿ, ಸಾಗರೋತ್ತರ ಎಟಿಎಂ ವಿತ್‌ ಡ್ರಾ ಮತ್ತು ಅಂತಾರಾಷ್ಟ್ರೀಯ ಫಿನ್ಟೆಕ್ ಕಂಪನಿಗಳನ್ನು ಬಳಸಿಕೊಂಡು ಭಾರತದಿಂದ ಹೊರಗೆ ಸಾಗಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಈ ವಂಚನೆಗಳಿಗೆ ಸಂಬಂಧಿಸಿದಂತೆ ಸಹಾಯವಾಣಿ (1930) ಮತ್ತು ಎನ್‌ಸಿಆರ್‌ಪಿ (ರಾಷ್ಟ್ರೀಯ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್) ಮೂಲಕ ಹಲವು ದೂರು ದಾಖಲಿಸಿಲಾಗಿದೆ. “ಈ ಅಪರಾಧಗಳು ನಾಗರಿಕರಿಗೆ ಬೆದರಿಕೆಗಳನ್ನು ಒಡ್ಡುವುದಷ್ಟೇ ಅಲ್ಲದೆ ಮತ್ತು ಡೇಟಾ ಭದ್ರತೆಗೆ ಅಪಾಯಕಾರಿʼʼ ಎಂದು ಮೂಲಗಳು ತಿಳಿಸಿವೆ.

ವಂಚಿಸುವುದು ಹೇಗೆ?

ದೇಶದಲ್ಲಿ ಉದ್ಯೋಗಕ್ಕೆ ಬೇಡಿಕೆ ಇದೆ. ಇದನ್ನೇ ಬಂಡವಾಳವಾಗಿಸಿಕೊಂಡು ವಂಚಕರು ಕಾರ್ಯ ಪ್ರವೃತ್ತರಾಗುತ್ತಾರೆ. ಗೂಗಲ್ ಮತ್ತು ಮೆಟಾದಂತಹ ಫ್ಲಾಟ್‌ಫಾರ್ಮ್‌ಗಳನ್ನು ಇದಕ್ಕಾಗಿ ಬಳಸಲಾಗುತ್ತದೆ. ʼಮನೆಯಲ್ಲಿ ಕುಳಿತು ನಿರ್ವಹಿಸಬಹುದಾದ ಉದ್ಯೋಗಗಳುʼ, ʼಮನೆಯಲ್ಲಿ ಕುಳಿತು ಹಣವನ್ನು ಸಂಪಾದಿಸುವುದು ಹೇಗೆ?ʼ ಮುಂತಾದ ಜಾಹೀರಾತುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಗುತ್ತದೆ. ನಿವೃತ್ತ ಉದ್ಯೋಗಿಗಳು, ಮಹಿಳೆಯರು ಮತ್ತು ಅರೆಕಾಲಿಕ ಉದ್ಯೋಗಗಳನ್ನು ಹುಡುಕುತ್ತಿರುವವರೇ ಇವರ ಮುಖ್ಯ ಗುರಿ.

ಬಳಕೆದಾರರು ಜಾಹೀರಾತಿನ ಮೇಲೆ ಕ್ಲಿಕ್ ಮಾಡಿದ ನಂತರ, ವಾಟ್ಸ್‌ಆ್ಯಪ್‌ / ಟೆಲಿಗ್ರಾಮ್ ಬಳಸುವ ಏಜೆಂಟ್‌ಗಳು ಕರೆ ಮಾಡಲು ಪ್ರಾರಂಭಿಸುತ್ತಾರೆ. ಆರಂಭದಲ್ಲಿ ‘ವಿಡಿಯೊ ಲೈಕ್’ನಂತಹ ಕೆಲವು ಕಾರ್ಯಗಳನ್ನು ನಿರ್ವಹಿಸಲು ಸೂಚಿಸುತ್ತಾರೆ. ಕೆಲಸ ಪೂರ್ಣಗೊಂಡಾಗ, ಕಮಿಷನ್ ನೀಡಲಾಗುತ್ತದೆ. ಬಳಿಕ ಹೆಚ್ಚಿನ ಆದಾಯಕ್ಕಾಗಿ ಅಧಿಕ ಹೂಡಿಕೆ ಮಾಡಲು ಕೇಳಲಾಗುತ್ತದೆ. ಒಂದು ವೇಳೆ ದೊಡ್ಡ ಮೊತ್ತವನ್ನು ಠೇವಣಿ ಇಟ್ಟರೆ ಅದನ್ನು ಸ್ಥಗಿತಗೊಳಿಸಲಾಗುತ್ತದೆ. ಮತ್ತೆ ಅವರು ಸಂಪರ್ಕಕ್ಕೇ ಸಿಗುವುದಿಲ್ಲ ಎಂದು ತಜ್ಞರು ವಿವರಿಸುತ್ತಾರೆ.

ಇದನ್ನೂ ಓದಿ: Cyber Crime: ದೇಶದ 81.5 ಕೋಟಿ ನಾಗರಿಕರ ಕೋವಿಡ್‌ ಪರೀಕ್ಷಾ ಮಾಹಿತಿ ರಹಸ್ಯ ಮಾರಾಟ! ನಿಮ್ಮದೂ ಇರಬಹುದು!

“ಸೈಬರ್ ಕ್ರೈಮ್‌ ನಿಯಂತ್ರಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಬದ್ಧರಾಗಿದ್ದಾರೆ. ವಂಚಕರು ಬಳಸುವ ಫೋನ್ ಸಂಖ್ಯೆ ಮತ್ತು ಸೋಷಿಯಲ್‌ ಮೀಡಿಯಾ ಖಾತೆಗಳ ಬಗ್ಗೆ www.cybercrime.gov.in ವೆಬ್‌ಸೈಟ್‌ಗೆ ತಕ್ಷಣ ವರದಿ ಮಾಡುವಂತೆ ಸೂಚಿಸಲಾಗಿದೆʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version