ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ಶೀಘ್ರವೇ ಸಿಹಿ ಸುದ್ದಿ ನೀಡಲಿದೆ. ಕೇಂದ್ರ ಸರ್ಕಾರವು ನೌಕರರಿಗೆ (Central Government Employees) ನೀಡುವ ತುಟ್ಟಿ ಭತ್ಯೆಯನ್ನು (Dearness Allowance) ಶೇ.3ರಷ್ಟು ಏರಿಕೆ ಮಾಡಲಿದೆ ಎಂದು ತಿಳಿದುಬಂದಿದೆ. ಘೋಷಣೆಯಾದರೆ ನೌಕರರಿಗೆ ಶೇ.42ರ ಬದಲು ಶೇ.45ರಷ್ಟು ತುಟ್ಟಿ ಭತ್ಯೆ (DA Hike 2023) ಸಿಗಲಿದೆ. ಅದರಲ್ಲೂ, ಜುಲೈ 1ರಿಂದಲೇ ಅನ್ವಯವಾಗುವಂತೆ ತುಟ್ಟಿ ಭತ್ಯೆ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಸರ್ಕಾರದ ನೌಕರರು ಹಾಗೂ ಪಿಂಚಣಿದಾರರಿಗೆ ಸದ್ಯ ಶೇ.42ರಷ್ಟು ತುಟ್ಟಿಭತ್ಯೆ ನೀಡಲಾಗುತ್ತದೆ. ಇದಕ್ಕೆ ಈಗ ಶೇ.3ರಷ್ಟು ತುಟ್ಟಿ ಭತ್ಯೆ ಸೇರಲಿದೆ. ಹಾಗಾಗಿ, ದೇಶದ ಒಂದು ಕೋಟಿಗೂ ಅಧಿಕ ನೌಕರರು ಹಾಗೂ ಪಿಂಚಣಿದಾರರು ತುಟ್ಟಿ ಭತ್ಯೆ ಹೆಚ್ಚಳದ ಲಾಭ ಪಡೆಯಲಿದ್ದಾರೆ. ನೌಕರರ ಪ್ರಸಕ್ತ ಸಂಬಳ, ಜೀವನ ವೆಚ್ಚದ ಹೆಚ್ಚಳ ಆಧರಿಸಿ ಹಾಗೂ ಕನ್ಸುಮರ್ ಪ್ರೈಸ್ ಇಂಡೆಕ್ಸ್ ಫಾರ್ ಇಂಡಸ್ಟ್ರಿಯಲ್ ವರ್ಕರ್ಸ್ (CPI-IW) ನೀಡುವ ಮಾಸಿಕ ವರದಿ ಅನ್ವಯ ತುಟ್ಟಿ ಭತ್ಯೆಯನ್ನು ಹೆಚ್ಚಿಸಲಾಗುತ್ತದೆ.
ದೇಶದಲ್ಲಿ ಸದ್ಯ 47.58 ಲಕ್ಷ ಕೇಂದ್ರ ಸರ್ಕಾರಿ ನೌಕರರಿದ್ದರೆ, 69.76 ಲಕ್ಷ ಪಿಂಚಣಿದಾರರಿದ್ದಾರೆ. ಆದಾಗ್ಯೂ, ಆಲ್ ಇಂಡಿಯಾ ರೈಲ್ವೆಮೆನ್ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಗೋಪಾಲ್ ಮಿಶ್ರಾ ಅವರು ತುಟ್ಟಿ ಭತ್ಯೆ ಏರಿಕೆ ಕುರಿತು ಪ್ರತಿಕ್ರಿಯಿಸಿದ್ದು, “ನಾವು ಶೇ.4ರಷ್ಟು ತುಟ್ಟಿ ಭತ್ಯೆ ಏರಿಕೆ ಮಾಡಬೇಕು” ಎಂಬುದಾಗಿ ಬೇಡಿಕೆ ಇಟ್ಟಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: DA Hike News : ಕಳೆದ ಐದು ತಿಂಗಳ ಬಾಕಿ ತುಟ್ಟಿ ಭತ್ಯೆ; ಯಾವ ವೇತನ ಶ್ರೇಣಿಯವರಿಗೆ ಎಷ್ಟು ಹಣ ಲಭ್ಯ?
ಕೇಂದ್ರ ಸರ್ಕಾರವು ವರ್ಷದಲ್ಲಿ ಎರಡು ಬಾರಿ ತುಟ್ಟಿ ಭತ್ಯೆ ಏರಿಕೆ ಮಾಡುತ್ತದೆ. ಈ ವರ್ಷದ ಮೊದಲ ತುಟ್ಟಿ ಭತ್ಯೆ ಏರಿಕೆಯನ್ನು ಕಳೆದ ಮಾರ್ಚ್ 24ರಂದು ಘೋಷಿಸಲಾಗಿತ್ತು. ಜನವರಿ 1ರಿಂದಲೇ ಅನ್ವಯವಾಗುವಂತೆ ತುಟ್ಟಿ ಭತ್ಯೆಯನ್ನು ಏರಿಕೆ ಮಾಡಲಾಗಿತ್ತು. ಶೇ.38ರಷ್ಟು ಇದ್ದ ತುಟ್ಟಿ ಭತ್ಯೆಯನ್ನು ಕೇಂದ್ರ ಸರ್ಕಾರವು ಶೇ.4ರಷ್ಟು ಏರಿಕೆ ಮಾಡಿ, ಒಟ್ಟು ಶೇ.42ರಷ್ಟು ತುಟ್ಟಿ ಭತ್ಯೆ ನೀಡಿತ್ತು. ಕಳೆದ ಬಾರಿಯಂತೆ ಈ ಬಾರಿಯೂ ಶೇ.4ರಷ್ಟು ಏರಿಕೆ ಮಾಡಬೇಕು ಎಂಬುದು ಗೋಪಾಲ್ ಮಿಶ್ರಾ ಬೇಡಿಕೆಯಾಗಿದೆ.