Site icon Vistara News

Dawood Ibrahim: ದಾವೂದ್ ಇಬ್ರಾಹಿಂ ನಿಧನ?; ಫ್ಯಾಕ್ಟ್‌ಚೆಕ್‌ ಹೇಳೋದೇನು?

davood

davood

ನವದೆಹಲಿ: ಪಾಕಿಸ್ತಾನದ ಕರಾಚಿಯಲ್ಲಿ ಭಾರತಕ್ಕೆ ಬೇಕಾಗಿರುವ ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂ (Dawood Ibrahim) ಸಾವಿಗೀಡಾಗಿದ್ದಾನೆ ಎನ್ನುವ ಸುದ್ದಿ ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದೆ. ವಿಷ ಪ್ರಾಶನದಿಂದ ತೀವ್ರವಾಗಿ ಅಸ್ವಸ್ಥಗೊಂಡಿದ್ದ ದಾವೂದ್‌ ಇಬ್ರಾಹಿಂಗೆ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾನೆ ಎನ್ನುವ ವಿಚಾರ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಬಂದಿದೆ. ಪಾಕಿಸ್ತಾನದ ಉಸ್ತುವಾರಿ ಪ್ರಧಾನಿ ಅನ್ವರ್ ಉಲ್ ಹಕ್ ಕಾಕರ್ ಅವರ ಸೋಷಿಯಲ್‌ ಮೀಡಿಯಾ ಖಾತೆಯ ಸ್ಕ್ರೀನ್‌ ಶಾಟ್‌ಗಳನ್ನು ಹಲವರು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ದಾವೂದ್ ಸತ್ತಿದ್ದಾನೆ ಎಂದು ಉಲ್ಲೇಖಿಸಲಾಗಿದೆ. ಆದರೆ ಈ ಸಂದೇಶವು ನಕಲಿ ಎನ್ನುವುದು ತಿಳಿದು ಬಂದಿದೆ. ಇದು ಕಾಕರ್ ಅವರ ಖಾತೆಯಲ್ಲ ಮತ್ತು ದಾವೂದ್ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲ ಎನ್ನುವ ವಿಚಾರ ಬೆಳಕಿಗೆ ಬಂದಿದೆ (Fact-Check).

“ಪ್ರತಿಯೊಬ್ಬ ಪಾಕಿಸ್ತಾನಿ ಹೃದಯಕ್ಕೂ ಪ್ರಿಯ, ನಮ್ಮ ಪ್ರೀತಿಯ ದಾವೂದ್ ಇಬ್ರಾಹಿಂ ಅಪರಿಚಿತರಿಂದಾದ ವಿಷಪ್ರಾಶನದಿಂದ ನಿಧನರಾದರು. ಕರಾಚಿಯ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು. ಅವರಿಗೆ ಜನ್ನತ್‌ನಲ್ಲಿ ಅತ್ಯುನ್ನತ ಸ್ಥಾನ ಸಿಗಲಿʼʼ ಎಂದು ವೈರಲ್‌ ಪೋಸ್ಟ್‌ನಲ್ಲಿ ಬರೆಯಲಾಗಿದೆ. ಆದರೆ ಸ್ವತಂತ್ರ ಸತ್ಯಶೋಧನಾ ವೆಬ್‌ಸೈಟ್‌ (Fact-checking website) ಡಿಎಫ್ಆರ್‌ಸಿ ಈ ಬಗ್ಗೆ ಮಾಹಿತಿ ನೀಡಿ, ವೈರಲ್‌ ಆದ ಸಾಮಾಜಿಕ ಜಾಲತಾಣ ಎಕ್ಸ್‌ನ ಈ ಪೋಸ್ಟ್‌ನಲ್ಲಿ ಕಂಡು ಬರುವ ಬಳಕೆದಾರರ ಹೆಸರಿಗೂ, ಕಾಕರ್ ಅವರ ಅಧಿಕೃತ ಖಾತೆಗೆ ಹೋಲಿಕೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಸ್ಕ್ರೀನ್‌ಶಾಟ್‌ನಲ್ಲಿರುವ ಬಳಕೆದಾರರ ಹೆಸರು ಹೆಚ್ಚುವರಿ ಕೆ (K) ಅಕ್ಷರವನ್ನು ಹೊಂದಿದೆ. ಕಾಕರ್ ಡಿಸೆಂಬರ್ 16ರಂದು ತಮ್ಮ ಎಕ್ಸ್ ಖಾತೆಯಲ್ಲಿ ಕೊನೆಯ ಪೋಸ್ಟ್ ಹಂಚಿಕೊಂಡಿದ್ದರು ಎಂದು ಡಿಎಫ್ಆರ್‌ಸಿ ಹೇಳಿದೆ.

ಅಲ್ಲದೆ ದಾವೂದ್ ಇಬ್ರಾಹಿಂ ಸಹಚರ ಛೋಟಾ ಶಕೀಲ್ ಕೂಡ ಸ್ಪಷ್ಟನೆ ನೀಡಿ, ʼʼದಾವೂದ್ ಇಬ್ರಾಹಿಂ ಜೀವಂತವಾಗಿದ್ದು, ಆರೋಗ್ಯವಾಗಿದ್ದಾನೆ. ದಾವೂದ್ ಮೃತಪಟ್ಟಿದ್ದಾನೆ ಎಂಬ ಫೇಕ್ ನ್ಯೂಸ್ ನೋಡಿ ನನಗೂ ಶಾಕ್ ಆಯ್ತು. ನಿನ್ನೆಯಷ್ಟೇ ಅನೇಕ ಬಾರಿ ದಾವೂದ್‌ನನ್ನು ಭೇಟಿ ಮಾಡಿದ್ದೇನೆʼʼ ಎಂದು ಹೇಳಿದ್ದಾನೆ.

1955ರಲ್ಲಿ ಜನಿಸಿದ ದಾವೂದ್ ಮುಂಬೈನ ಡೊಂಗ್ರಿ ಕೊಳೆಗೇರಿ ಪ್ರದೇಶದಲ್ಲಿ ವಾಸಿಸುತ್ತಿದ್ದ. ಬಳಿಕ ಭೂಗತ ಲೋಕದ ಅಧಿಪತಿಯಾಗಿ ಬೆಳೆದಿದ್ದ. ತೀವ್ರ ಸ್ವರೂಪದ ಕಾಯಿಲೆಯಿಂದ ಬಳಲುತ್ತಿರುವ ದಾವೂದ್ ಇಬ್ರಾಹಿಂಗೆ ವಿಷಪ್ರಾಶನ ಮಾಡಲಾಗಿದೆ ಎಂದು ವರದಿಯಾಗಿದೆ. ಭಾರತ ಹಾಗೂ ಪಾಕಿಸ್ತಾನದ ತನಿಖಾ ಅಧಿಕಾರಿಗಳು ದಾವೂದ್ ಇಬ್ರಾಹಿಂ ಆಸ್ಪತ್ರೆಗೆ ದಾಖಲಾಗಿರುವ ವಿಚಾರ ಖಚಿತಪಡಿಸಿಲ್ಲ. ಹಠಾತ್ ಆರೋಗ್ಯ ಹದಗೆಡಲು ವಿಷವೇ ಕಾರಣ ಎಂಬ ಊಹಾಪೋಹಗಳು ದಟ್ಟವಾಗಿದ್ದು, ಕರಾಚಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗಿದೆ.

ಮೋಸ್ಟ್‌ ವಾಂಟೆಡ್‌ ಕ್ರಿಮಿನಲ್‌

1993ರಲ್ಲಿ ಮುಂಬೈಯಲ್ಲಿ ನಡೆದ ಭೀಕರ ಮುಂಬೈ ಸ್ಫೋಟದ ಮಾಸ್ಟರ್ ಮೈಂಡ್ ದಾವೂದ್ ಇಬ್ರಾಹಿಂ. ಈ ಸ್ಫೋಟದಲ್ಲಿ 250ಕ್ಕೂ ಹೆಚ್ಚು ಅಮಾಯಕ ನಾಗರಿಕರು ಸಾವನ್ನಪ್ಪಿದ್ದರು. 750ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಭಾರತ ಮತ್ತು ಅಮೆರಿಕದಿಂದ ಅಂತಾರಾಷ್ಟ್ರೀಯ ಭಯೋತ್ಪಾದಕ ಎಂದು ಗುರುತಿಸಲ್ಪಟ್ಟಿರುವ ದಾವೂದ್ ಇಬ್ರಾಹಿಂ ಪಾಕಿಸ್ತಾನದ ಕರಾಚಿಯಲ್ಲಿ ನೆಲೆಸಿದ್ದಾನೆ. ದಾವೂದ್ ಇಬ್ರಾಹಿಂ ತಲೆಗೆ ಎನ್‌ಐಎ 25 ಲಕ್ಷ ಬಹುಮಾನವನ್ನೂ ಘೋಷಿಸಿದೆ. ಭಾರತಕ್ಕೆ ಬೇಕಾಗಿರುವ ಉಗ್ರರ ಪಟ್ಟಿಯಲ್ಲಿ ದಾವೂದ್ ಇಬ್ರಾಹಿಂ ಅಗ್ರಸ್ಥಾನದಲ್ಲಿದ್ದಾನೆ.

ಇದನ್ನೂ ಓದಿ: Dawood Ibrahim: ಮೋಸ್ಟ್ ವಾಂಟೆಡ್ ದಾವೂದ್ ಇಬ್ರಾಹಿಂ; ಭಾರತದಲ್ಲಿ ಈತನ ಪಾತಕ ಕೃತ್ಯಗಳೇನು?

Exit mobile version