ನವದೆಹಲಿ: ಭಾರತಕ್ಕೆ ಹಲವು ಅಪರಾಧಗಳ ಮೂಲಕ ಕಂಟಕವಾಗಿದ್ದ, ಭಾರತದ ತನಿಖಾ ಸಂಸ್ಥೆಗಳಿಗೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು (Dawood Ibrahim) ಪಾಕಿಸ್ತಾನದ ಕರಾಚಿಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನುವ ಸುದ್ದಿ ಸಂಚಲನ ಮೂಡಿಸಿದೆ. ವಿಷಪ್ರಸಾನಕ್ಕೊಳಗಾಗಿರುವ ಆತನ ಪರಿಸ್ಥಿತಿ ಚಿಂತಾಜನಕ ಎನ್ನಲಾಗುತ್ತಿದೆ. ದಾವೂದ್ ವಿಶ್ವದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬನಾಗಿದ್ದು, ಭಾರತ ಮತ್ತು ಅಮೆರಿಕ ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿವೆ. ಇಂಟರ್‌ಪೋಲ್‌ನ ರೆಡ್ ನೋಟಿಸ್ ಪಟ್ಟಿಯಲ್ಲಿಯೂ ಆತನ ಹೆಸರಿದ್ದು, ದಾವೂದ್ ತಲೆಗೆ 25 ಮಿಲಿಯನ್ ಅಮೆರಿಕನ್ ಡಾಲರ್ ಬಹುಮಾನ ಘೋಷಿಸಲಾಗಿದೆ.
ದಾವೂದ್ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ (ISI) ಮತ್ತು ಭಯೋತ್ಪಾದಕ ಗುಂಪು ಲಷ್ಕರ್-ಎ-ತಯ್ಬಾ (Lashkar-e-Taiba)ದೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದಾನೆ ಎಂದು ಹೇಳಲಾಗಿದೆ. ಅಲ್ಲದೆ ಅನೇಕ ನಕಲಿ ಪಾಸ್‌ಪೋರ್ಟ್ ಹೊಂದಿದ್ದಾನೆ ಮತ್ತು ಪದೇಪದೆ ತನ್ನ ವಾಸಸ್ಥಳವನ್ನು ಬದಲಾಯಿಸುತ್ತಾನೆ ಎಂದು ಊಹಿಸಲಾಗಿದೆ. ಈತ ಪಾಕಿಸ್ತಾನದ ಕರಾಚಿಯಲ್ಲಿ ಶೇಖ್ ದಾವೂದ್ ಹಸನ್ ಎಂಬ ಹೆಸರಿನಲ್ಲಿ ವಾಸಿಸುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ.
1993ರ ಮುಂಬೈ ಸ್ಫೋಟದಿಂದ ಹಿಡಿದು 2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣ ಸೇರಿದಂತೆ ಹಲವು ಘೋರ ಅಪರಾಧಗಳ ಮಾಸ್ಟರ್ ಮೈಂಡ್ ಈತ. ಅಂತಾರಾಷ್ಟ್ರೀಯ ಮಾದಕವಸ್ತು ಕಳ್ಳ ಸಾಗಣೆ, ನಕಲಿ ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆಯಲ್ಲೂ ಭಾಗಿಯಾಗಿದ್ದ. ದಾವೂದ್ ನಡೆಸಿದ ಅಪರಾಧಗಳ ಪಟ್ಟಿ ಇಲ್ಲಿದೆ.
1993ರ ಮುಂಬೈ ಸ್ಫೋಟ
ಭಾರತದ ಅತೀ ದೊಡ್ಡ ದುರಂತಗಳಲ್ಲಿ 1993ರ ಮುಂಬೈ ಸ್ಫೋಟವೂ ಒಂದು. ಈ ಪ್ರಕರಣದಲ್ಲಿ 257ಕ್ಕೂ ಹೆಚ್ಚು ಮಂದಿ ಮೃತಪಟ್ಟು, 700ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಇದರ ಪ್ರಮುಖ ಆರೋಪಿ ದಾವೂದ್ ಇಬ್ರಾಹಿಂ. ಆತ ಮತ್ತು ಆತನ ಸಹಚರರು ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಲಷ್ಕರ್-ಎ-ತಯ್ಬಾದ ಸಹಾಯದಿಂದ ಸ್ಫೋಟಗಳನ್ನು ನಡೆಸಿದ್ದರು. ಅವರು ಅಪರಾಧಿಗಳಿಗೆ ಸ್ಫೋಟಕಗಳು, ಶಸ್ತ್ರಾಸ್ತ್ರಗಳನ್ನು ಪೂರೈಸಿದ್ದು ಮಾತ್ರವಲ್ಲ ತರಬೇತಿಯನ್ನೂ ಒದಗಿಸಿದ್ದರು. ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್, ಏರ್ ಇಂಡಿಯಾ ಕಟ್ಟಡ ಮತ್ತು ಶಿವಸೇನೆ ಪ್ರಧಾನ ಕಚೇರಿ ಸೇರಿದಂತೆ ಮುಂಬೈಯ 12 ಸ್ಥಳಗಳನ್ನು ಗುರಿಯಾಗಿಸಿಕೊಂಡು ಈ ಸ್ಫೋಟಗಳು ನಡೆದಿದ್ದವು. ಸ್ಫೋಟದ ನಂತರ ದಾವೂದ್ ಇಬ್ರಾಹಿಂ ದುಬೈಗೆ ಪಲಾಯನ ಮಾಡಿ ನಂತರ ಪಾಕಿಸ್ತಾನಕ್ಕೆ ತೆರಳಿದ್ದ. ಆತನನ್ನು ಹಸ್ತಾಂತರಿಸುವಂತೆ ಭಾರತ ಪದೇಪದೇ ಪಾಕಿಸ್ತಾನವನ್ನು ಒತ್ತಾಯಿಸಿದೆ. ಆದರೆ ಪಾಕಿಸ್ತಾನವು ತನ್ನಲ್ಲಿ ಆತ ಇರುವುದನ್ನು ನಿರಾಕರಿಸುತ್ತಲೇ ಬಂದಿದೆ.
2008ರ ಮುಂಬೈ ದಾಳಿ
2008ರಲ್ಲಿ ನಡೆದ ನಡೆದ ಮುಂಬೈ ದಾಳಿಯಲ್ಲಿ 166 ಜನರು ಸಾವಿಗೀಡಾಗಿ 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಇದರ ಹಿಂದೆಯೂ ದಾವೂದ್‌ನ ಕೈವಾಡದ ಶಂಕೆ ವ್ಯಕ್ತವಾಗಿದೆ. ಲಷ್ಕರ್-ಎ-ತಯ್ಬಾದ 10 ಉಗ್ರರು ಸಮುದ್ರದ ಮೂಲಕ ಮುಂಬೈಗೆ ಬಂದು ತಾಜ್ ಮಹಲ್ ಹೋಟೆಲ್, ಒಬೆರಾಯ್ ಟ್ರೈಡೆಂಟ್ ಹೋಟೆಲ್, ಛತ್ರಪತಿ ಶಿವಾಜಿ ಟರ್ಮಿನಸ್ ಮತ್ತು ನಾರಿಮನ್ ಹೌಸ್‌ಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದರು. ವರದಿಗಳ ಪ್ರಕಾರ ದಾವೂದ್ ಇಬ್ರಾಹಿಂ ದಾಳಿಕೋರರಿಗೆ ಆರ್ಥಿಕ ಬೆಂಬಲವನ್ನು ಒದಗಿಸಿದ್ದ ಎನ್ನಲಾಗಿದೆ.
2010ರ ಪುಣೆಯ ಜರ್ಮನ್ ಬೇಕರಿ ಸ್ಫೋಟ
2010ರ ಪುಣೆ ಜರ್ಮನ್ ಬೇಕರಿ ಸ್ಫೋಟದಲ್ಲಿ 17 ಮಂದಿ ಮೃತಪಟ್ಟು, 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಪುಣೆಯ ಕೋರೆಗಾಂವ್ ಪಾರ್ಕ್ ಪ್ರದೇಶದ ಜನಪ್ರಿಯ ಜರ್ಮನ್ ಬೇಕರಿಯಲ್ಲಿ ಈ ಸ್ಫೋಟ ಸಂಭವಿಸಿತ್ತು. ಇದು ವಿದೇಶಿಯರು ಮತ್ತು ಪ್ರವಾಸಿಗರು ಆಗಾಗ ಭೇಟಿ ನೀಡುವ ಸ್ಥಳವಾಗಿದ್ದರಿಂದ ಇಲ್ಲೇ ಸ್ಫೋಟ ನಡೆಸಲಾಗಿತ್ತು. ಮೊಬೈಲ್ ಫೋನ್‌ನಿಂದ ಆಪರೇಟ್ ಮಾಡಿ ಬಾಂಬ್ ಸ್ಫೋಟಗೊಳ್ಳುವಂತೆ ಮಾಡಲಾಗಿತ್ತು. ದಾವೂದ್ ಇಬ್ರಾಹಿಂ ಮತ್ತು ಲಷ್ಕರ್-ಎ-ತಯ್ಬಾದೊಂದಿಗೆ ನಂಟು ಹೊಂದಿರುವ ಭಯೋತ್ಪಾದಕ ಸಂಘಟನೆ ಇಂಡಿಯನ್ ಮುಜಾಹಿದ್ದೀನ್ ಈ ಸ್ಫೋಟದ ಹೊಣೆ ಹೊತ್ತುಕೊಂಡಿತ್ತು. ದಾವೂದ್ ಇಬ್ರಾಹಿಂ ಸ್ಫೋಟಕಗಳು ಮತ್ತು ಮೊಬೈಲ್ ಫೋನ್ ಅನ್ನು ಒದಗಿಸಿದ್ದ ಎಂದು ಮೂಲಗಳು ತಿಳಿಸಿವೆ.
2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್
ಭಾರತೀಯ ಕ್ರಿಕೆಟ್ ಜಗತ್ತನ್ನು ಬೆಚ್ಚಿಬೀಳಿಸಿದ 2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲೂ ದಾವೂದ್ ಇಬ್ರಾಹಿಂನ ಛಾಯೆ ಕಂಡು ಬಂದಿದೆ. ರಾಜಸ್ಥಾನ್ ರಾಯಲ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ಆಧಾರದಲ್ಲಿ ಫಿಕ್ಸಿಂಗ್ ಮಾಡಲಾಗಿತ್ತು. ದಾವೂದ್ ಇಬ್ರಾಹಿಂ ಮತ್ತು ಆತನ ಸಹಚರ ಛೋಟಾ ಶಕೀಲ್‌ಗಾಗಿ ಕೆಲಸ ಮಾಡುತ್ತಿದ್ದ ಬುಕ್ಕಿಗಳು ಮತ್ತು ಫಿಕ್ಸರ್‌ಗಳೊಂದಿಗೆ ಆಟಗಾರರು ಸಂಪರ್ಕದಲ್ಲಿದ್ದರು ಎಂದು ಆರೋಪ ಕೇಳಿ ಬಂದಿತ್ತು. ದಾವೂದ್ ಇಬ್ರಾಹಿಂ ಮತ್ತು ಛೋಟಾ ಶಕೀಲ್ ಬೆಟ್ಟಿಂಗ್ ದಂಧೆಯನ್ನು ನಿಯಂತ್ರಿಸುತ್ತಿದ್ದರು ಮತ್ತು ಅಕ್ರಮ ಜೂಜಾಟದಿಂದ ಭಾರಿ ಲಾಭ ಗಳಿಸಿದ್ದರು ಎಂದು ಆರೋಪಿಸಲಾಗಿದೆ. ಅವರು ಆಟಗಾರರು ಮತ್ತು ತಂಡದ ಮಾಲಕರಿಗೆ ಬೆದರಿಕೆ ಒಡ್ಡಿದ್ದರು ಎನ್ನುವ ಆರೋಪವೂ ಇದೆ.
ಇತರ ಪ್ರಕರಣಗಳು ಏನೇನು?
ಈ ಪ್ರಮುಖ ಪ್ರಕರಣಗಳಲ್ಲದೆ, ದಾವೂದ್ ಇಬ್ರಾಹಿಂ ಕೊಲೆ, ಸುಲಿಗೆ, ಅಪಹರಣ ಮತ್ತು ಕಳ್ಳಸಾಗಣೆ ಸೇರಿದಂತೆ ಇನ್ನೂ ಹಲವಾರು ಅಪರಾಧಗಳಲ್ಲಿ ಭಾರತಕ್ಕೆ ಬೇಕಾಗಿದ್ದಾನೆ. 2011ರಲ್ಲಿ ಪತ್ರಕರ್ತ ಜ್ಯೋತಿರ್ಮಯ್ ಡೇ ಅವರನ್ನು ದಾವೂದ್ ಇಬ್ರಾಹಿಂನ ಹಿಂಬಾಲಕರು ಹತ್ಯೆ ಮಾಡಿದ್ದರು. 1997ರಲ್ಲಿ ದಾವೂದ್ ಇಬ್ರಾಹಿಂನ ಕಡೆಯವರು ಸುಲಿಗೆ ಹಣ ನೀಡಲು ನಿರಾಕರಿಸಿದ್ದಕ್ಕಾಗಿ ಸಂಗೀತ ಉದ್ಯಮಿ ಗುಲ್ಶನ್ ಕುಮಾರ್ ಅವರನ್ನು ಹತ್ಯೆ ಮಾಡಿದ್ದರು. 2000ನೇ ಇಸವಿಯಲ್ಲಿ ಉದ್ಯಮಿ ಪರೀಕ್ಷಿತ್ ಠಕ್ಕರ್ ಅವರನ್ನು ದಾವೂದ್ ಇಬ್ರಾಹಿಂ ಗ್ಯಾಂಗ್ ಅಪಹರಿಸಿ ಹತ್ಯೆ ಮಾಡಿತ್ತು. ಹೀಗೆ ದಾವೂದ್ ಇಬ್ರಾಹಿಂ ಭಾರತದ ಪಾಲಿಗೆ ಮಗ್ಗುಲ ಮುಳ್ಳಾಗಿ ಬೆಳೆದಿದ್ದಾನೆ.
ಇದನ್ನೂ ಓದಿ: Dawood Ibrahim: ದಾವೂದ್ ಇಬ್ರಾಹಿಂಗೆ ವಿಷಪ್ರಾಶನ? ಆಸ್ಪತ್ರೆಗೆ ದಾಖಲು