Site icon Vistara News

Deepavali Gift: ನೌಕರರ ಖಾತೆಗೆ ಪಿಎಫ್ ಬಡ್ಡಿ ಜಮೆ ಆರಂಭ; ಬ್ಯಾಲೆನ್ಸ್‌ ಹೀಗೆ ಪರಿಶೀಲಿಸಿ

notes new

notes new

ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಸ್ಥೆ (Employees’ Provident Fund Organisation-EPFO) ಪಿಎಫ್ ಖಾತೆಗಳಿಗೆ ಬಡ್ಡಿಯನ್ನು ಜಮಾ ಮಾಡಲು ಪ್ರಾರಂಭಿಸಿದೆ ಎಂದು ಮೂಲಗಳು ತಿಳಿಸಿವೆ. ಈ ಮೂಲಕ ನೌಕರರಿಗೆ ದೀಪಾವಳಿ ಉಡುಗೊರೆ ಸಿಕ್ಕಂತಾಗಿದೆ (Deepavali Gift). 2022-23ರ ಹಣಕಾಸು ವರ್ಷದಲ್ಲಿ ಪಿಎಫ್ ಖಾತೆ ಹೂಡಿಕೆಯ ಮೇಲಿನ ಬಡ್ಡಿದರ 8.15% ಇದೆ.

ಕೆಲವು ಬಳಕೆದಾರರ ಖಾತೆಗಳಿಗೆ ಈಗಾಗಲೇ ಬಡ್ಡಿ ದರ ಪಾವತಿಸಲಾಗಿದೆ. ಎಲ್ಲ ಖಾತೆಗಳಲ್ಲಿ ಬಡ್ಡಿ ದರ ಒದಗಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಎಂದು ಇಪಿಎಫ್ಒ ಹೇಳಿದೆ. ʼʼಬಡ್ಡಿದರ ಪಾವತಿಸುವ ಪ್ರಕ್ರಿಯೆ ಆರಂಭವಾಗಿದೆ. ಬಡ್ಡಿಯನ್ನು ಪೂರ್ಣವಾಗಿ ಎಲ್ಲ ಖಾತೆಗಳಿಗೆ ಪಾವತಿಸಲಾಗುತ್ತದೆ. ಯಾರಿಗೂ ನಷ್ಟವಾಗುವುದಿಲ್ಲ. ದಯವಿಟ್ಟು ತಾಳ್ಮೆಯಿಂದ ನಿರೀಕ್ಷಿಸಿʼʼ ಎಂದು ಇಪಿಎಫ್ಒ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ತಿಳಿಸಿದೆ.

ಕೇಂದ್ರ ಕಾರ್ಮಿಕ ಸಚಿವ ಭೂಪೇಂದರ್ ಯಾದವ್ ಮಾತನಾಡಿ, ʼʼಈಗಾಗಲೇ 24 ಕೋಟಿ ಖಾತೆಗಳಿಗೆ ಬಡ್ಡಿ ಹಣವನ್ನು ಜಮಾ ಮಾಡಲಾಗಿದೆʼʼ ಎಂದು ತಿಳಿಸಿದ್ದಾರೆ. ಬಡ್ಡಿ ಜಮೆ ಆದ ಬಳಿಕ ಅದರ ಮಾಹಿತಿ ವ್ಯಕ್ತಿಯ ಪಿಎಫ್ ಖಾತೆಯಲ್ಲಿ ಗೊತ್ತಾಗಲಿದೆ. ಭವಿಷ್ಯ ನಿಧಿ ಖಾತೆಯ ಬ್ಯಾಲೆನ್ಸ್ ಅನ್ನು ಸಂದೇಶ, ಮಿಸ್ಡ್ ಕಾಲ್, ಉಮಾಂಗ್ (UMANG) ಅಪ್ಲಿಕೇಶನ್ ಮತ್ತು ಇಪಿಎಫ್ಒ ವೆಬ್‌ಸೈಟ್‌ ಮೂಲಕ ಅನೇಕ ರೀತಿಯಲ್ಲಿ ಪರಿಶೀಲಿಸಬಹುದು.

ಹಣಕಾಸು ಸಚಿವಾಲಯದೊಂದಿಗೆ ಸಮಾಲೋಚನೆ ನಡೆಸಿ ಇಪಿಎಫ್ಒನ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿಸ್ (Central Board of Trustees-CBT) ಪ್ರತಿ ವರ್ಷ ಪಿಎಫ್ ಬಡ್ಡಿದರವನ್ನು ನಿರ್ಧರಿಸುತ್ತದೆ. ಈ ವರ್ಷ ಇಪಿಎಫ್ಒ ಬಡ್ಡಿದರವನ್ನು ಜುಲೈಯಲ್ಲಿ ಘೋಷಿಸಿತ್ತು.

ಕಳೆದ ವರ್ಷ ಇಪಿಎಫ್ಒ ತನ್ನ ಗ್ರಾಹಕರಿಗೆ ಬಡ್ಡಿದರವನ್ನು ನಾಲ್ಕು ದಶಕಗಳ ಕನಿಷ್ಠ ಶೇ. 8.10ಕ್ಕೆ ಇಳಿಸಿತ್ತು. 1977-78ರಲ್ಲಿ ಇಪಿಎಫ್ ಬಡ್ಡಿದರವು ಶೇ. 8ರಷ್ಟಿದ್ದ ನಂತರ ಇದು ಅತ್ಯಂತ ಕಡಿಮೆ ದರವಾಗಿತ್ತು.

ಬ್ಯಾಲೆನ್ಸ್‌ ಹೀಗೆ ಚೆಕ್‌ ಮಾಡಿ

ಎಸ್‌ಎಂಎಸ್‌ ಮೂಲಕ: ನಿಮ್ಮ ಮೊಬೈಲ್‌ ನಂಬರ್‌ ಯುಎಎನ್ ಇಪಿಎಫ್ಒನಲ್ಲಿ ನೋಂದಾಯಿಸಲ್ಪಟ್ಟಿದ್ದರೆ, 7738299899 ಎಸ್ಎಂಎಸ್ ಕಳುಹಿಸುವ ಮೂಲಕ ಪಿಎಫ್ ಬ್ಯಾಲೆನ್ಸ್ ವಿವರಗಳನ್ನು ನೀವು ಪಡೆಯಬಹುದು. 7738299899 ನಂಬರ್‌ಗೆ EPFOHO UAN ENG ಎಂದು ಸಂದೇಶ ಕಳುಹಿಸಿ.

ಮಿಸ್ಡ್ ಕಾಲ್ ಮೂಲಕ: ಮಿಸ್ಡ್ ಕಾಲ್ ಕೊಡುವ ಮೂಲಕವೂ ಪಿಎಫ್ ಬ್ಯಾಲೆನ್ಸ್ ಪರಿಶೀಲಿಸಬಹುದು. ಅದಕ್ಕಾಗಿ ನೀವು 011-22901406 ನಂಬರ್‌ಗೆ ನೋಂದಾಯಿಸಿದ ಮೊಬೈಲ್‌ ನಂಬರ್‌ನಿಂದ ಮಿಸ್ಡ್ ಕಾಲ್ ಕೊಡಿ.

ಉಮಾಂಗ್ ಆ್ಯಪ್‌ ಮೂಲಕ: ಗೂಗಲ್‌ ಪ್ಲೇ ಸ್ಟೋರ್‌ ಅಥವಾ ಆ್ಯಪಲ್‌ ಆ್ಯಪ್‌ ಸ್ಟೋರ್‌ನಲ್ಲಿ ‘UMANG’ ಆ್ಯಪ್‌ ಡೌನ್‌ಲೋಡ್‌ ಮಾಡಿ. ಬಳಿಕ ನಿಮ್ಮ ಹೆಸರು ನೋಂದಾಯಿಸಿ. ‘Service’ ಆಯ್ಕೆ ಕ್ಲಿಕ್‌ ಮಾಡಿ. ನಂತರ ‘View Passbook’ ಕ್ಲಿಕ್‌ ಮಾಡಿ. ಅದಾದ ಬಳಿಕ ‘Employee-centric service’ ಆಪ್ಶನ್‌ ಆಯ್ಕೆ ಮಾಡಿ. ಮುಂದಿನ ಹಂತದಲ್ಲಿ ಮತ್ತೊಂದು ಹೊಸ ಪುಟ ತೆರೆಯುತ್ತದೆ. ಇಪಿಎಫ್ಒನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸಲಾಗಿದೆ ಎಂಬ ಸಂದೇಶ ಇದರಲ್ಲಿ ಮೂಡುತ್ತದೆ. ಒಮ್ಮೆ ನೀವು ಒಟಿಪಿಯನ್ನು ನಮೂದಿಸಿ ಮತ್ತು ‘OK’ ಬಟನ್ ಕ್ಲಿಕ್ ಮಾಡಿದ ನಂತರ, ಹೊಸ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ನಿಮ್ಮ ಇಪಿಎಫ್ ಪಾಸ್‌ಬುಕ್‌ ಅನ್ನು ನೋಡಬಹುದು ಮತ್ತು ನಿಮ್ಮ ಇಪಿಎಫ್ ಬ್ಯಾಲೆನ್ಸ್ ಪರಿಶೀಲಿಸಬಹುದು.

ಇದನ್ನೂ ಓದಿ: KSET Exam : ನ. 26ರಂದು ನಡೆಯಬೇಕಿದ್ದ ಕೆ-ಸೆಟ್‌ ಪರೀಕ್ಷೆ ಮುಂದೂಡಿಕೆ; Next Date ಯಾವಾಗ?

ಇಪಿಎಫ್ಒ ವೆಬ್‌ಸೈಟ್‌ ಮೂಲಕ: www.epfindia.gov.in ವೆಬ್‌ಸೈಟ್‌ಗೆ ಭೇಟಿ ನೀಡಿ. ಬಳಿಕ ‘Our Services’ ಆಯ್ಕೆಯ ಒಳಗೆ ಬರುವ ‘For Employees’ ಅನ್ನು ಸೆಲೆಕ್ಟ್‌ ಮಾಡಿ. ನಂತರ ‘Services’ ಆಯ್ಕೆ ಕ್ಲಿಕ್‌ ಮಾಡಿ ‘Member Passbook’ ಸೆಲೆಕ್ಟ್‌ ಮಾಡಿದರೆ ವಿವರ ಲಭ್ಯವಾಗುತ್ತದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version