Site icon Vistara News

Mahua Moitra: ವಸತಿ ತೆರವು ಆದೇಶಕ್ಕಿಲ್ಲ ತಡೆ, ಮಹುವಾ ಮೋಯಿತ್ರಾಗೆ ದಿಲ್ಲಿ ಹೈಕೋರ್ಟ್‌ನಲ್ಲೂ ಹಿನ್ನಡೆ

Ethics Panel Approves Mahua Moitra's Expulsion From Parliament in cash for query case

ಹೊಸದಿಲ್ಲಿ: ದಿಲ್ಲಿ ಹೈಕೋರ್ಟ್‌ನಲ್ಲೂ (Delhi High court) ತೃಣಮೂಲ ಕಾಂಗ್ರೆಸ್‌ನ ಲೋಕಸಭೆ ಸದಸ್ಯೆ ಮಹುವಾ ಮೊಯಿತ್ರಾ (Trinamool Congress Lok sabha MP Mahua Moitra) ಅವರಿಗೆ ಹಿನ್ನಡೆಯಾಗಿದೆ. ಸರ್ಕಾರಿ ನಿವಾಸವನ್ನು ತೆರವು ಮಾಡುವಂತೆ ನೀಡಲಾದ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಕೋರಿದ್ದ ಮಹುವಾ ಅವರ ಅರ್ಜಿಯ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಮುಂದೂಡಿದೆ.

ಇತ್ತೀಚೆಗೆ ಲೋಕಸಭೆಯಿಂದ ಉಚ್ಛಾಟಿತರಾದ ಮಹುವಾ ಮೊಯಿತ್ರಾ ಅವರ ಸರ್ಕಾರಿ ವಸತಿಯನ್ನು ರದ್ದುಗೊಳಿಸಲಾಗಿತ್ತು. 2024ರ ಜನವರಿ 7ರೊಳಗೆ ಮನೆಯನ್ನು ಖಾಲಿ ಮಾಡುವಂತೆ ಆದೇಶಿಸಲಾಗಿತ್ತು. ಇದನ್ನು ಪ್ರಶ್ನಿಸಿ ಮಹುವಾ ದೆಹಲಿ ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ಮೊಯಿತ್ರಾ ಅವರನ್ನು ಸಂಸತ್ತಿನಿಂದ ಉಚ್ಚಾಟಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಆಲಿಸುವವರೆಗೆ ಮೊಯಿತ್ರಾ ಅವರ ಈ ಅರ್ಜಿಯ ಕುರಿತು ತೀರ್ಪು ನೀಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ.

ಡಿಸೆಂಬರ್ 11ರಂದು ವಸತಿ ನಿರ್ದೇಶನಾಲಯ ನಿವಾಸದ ತೆರವು ಕುರಿತು ಆದೇಶ ನೀಡಿದೆ. ಇದನ್ನು ರದ್ದುಗೊಳಿಸಬೇಕು ಅಥವಾ 2024ರ ಲೋಕಸಭಾ ಚುನಾವಣೆಯ ಫಲಿತಾಂಶಗಳು ಪ್ರಕಟವಾಗುವವರೆಗೆ ಟಿಎಂಸಿ ನಾಯಕಿಯ ಅಧಿಕೃತ ನಿವಾಸವನ್ನು ಉಳಿಸಿಕೊಳ್ಳಲು ಅವಕಾಶ ನೀಡಬೇಕೆಂದು ಮೊಯಿತ್ರಾ ಅವರ ಅರ್ಜಿಯು ಕೇಳಿತ್ತು.

ಉದ್ಯಮಿ ದರ್ಶನ್ ಹಿರಾನಂದಾನಿ ಅವರಿಂದ ಲಂಚ ಹಾಗೂ ಉಡುಗೊರೆಗಳನ್ನು ಸ್ವೀಕರಿಸಿ, ಸಂಸತ್ತಿನ ಸಂಸದರ ಬಳಕೆಯ ವೆಬ್‌ಸೈಟ್‌ನ ಬಳಕೆದಾರರ ಐಡಿ ಮತ್ತು ಪಾಸ್‌ವರ್ಡ್ ಅನ್ನು ಅವರೊಂದಿಗೆ ಹಂಚಿಕೊಂಡಿದ್ದಕ್ಕಾಗಿ ಮೊಯಿತ್ರಾ ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಲಾಗಿದೆ ಮತ್ತು ಡಿಸೆಂಬರ್ 8, 2023ರಂದು ಲೋಕಸಭೆಯಿಂದ ಹೊರಹಾಕಲಾಗಿದೆ.

ತನ್ನನ್ನು ಪದಚ್ಯುತಗೊಳಿಸುವಂತೆ ಶಿಫಾರಸು ಮಾಡಿದ ನೈತಿಕ ಸಮಿತಿಯ ವರದಿಯನ್ನು ಲೋಕಸಭೆಯು ಅಂಗೀಕರಿಸಿದ ನಂತರ ಮಹುವಾ ಅವರು ಸುಪ್ರೀಂ ಕೋರ್ಟ್‌ನಲ್ಲಿ ತನ್ನ ಉಚ್ಚಾಟನೆಯನ್ನು ಪ್ರಶ್ನಿಸಿದ್ದಾರೆ. ಪ್ರಕರಣದ ವಿಚಾರಣೆಯನ್ನು ಜನವರಿ 3ಕ್ಕೆ ನಿಗದಿಪಡಿಸಲಾಗಿದೆ.

ತನ್ನನ್ನು ಲೋಕಸಭೆಯಿಂದ ಹೊರಹಾಕಿದ ನಂತರ ವಸತಿ ನಿರ್ದೇಶನಾಲಯದ ಆದೇಶವನ್ನು ಹೊರಡಿಸಲಾಗಿದೆ. ನನ್ನ ಉಚ್ಚಾಟನೆಯ ಸಿಂಧುತ್ವವು ಸರ್ವೋಚ್ಚ ನ್ಯಾಯಾಲಯದ ಮುಂದೆ ತೀರ್ಪಿಗೆ ಬಾಕಿಯಿರುವುದರಿಂದ ವಸತಿ ತೆರವು ಆದೇಶವನ್ನು ರದ್ದುಪಡಿಸಬೇಕು ಎಂದು ಮಹುವಾ ಅವರು ಕೋರಿದ್ದರು. ಸರ್ವೋಚ್ಚ ನ್ಯಾಯಾಲಯದ ಮುಂದೆ ಮುಖ್ಯ ಪ್ರಕರಣ ಬಾಕಿ ಇರುವುದರಿಂದ, ವಸತಿ ನಿರ್ದೇಶನಾಲಯವು ತನ್ನನ್ನು ಹೊರಹಾಕಲು ಸಾರ್ವಜನಿಕ ಆವರಣ (ಅನಧಿಕೃತ ನಿವಾಸಿಗಳ ತೆರವು) ಕಾಯಿದೆ- 1971ರ ಅಡಿಯಲ್ಲಿ ಪ್ರಕ್ರಿಯೆಗಳನ್ನು ಪ್ರಾರಂಭಿಸಲು ಸಾಧ್ಯವಿಲ್ಲ ಎಂದು ಮನವಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ: Mahua Moitra: ಮಹುವಾ ಮೋಯಿತ್ರಾ ವಿರುದ್ಧ ಸರ್ಕಾರಿ ತನಿಖೆಗೆ ಸದನ ಸಮಿತಿ ಶಿಫಾರಸು

Exit mobile version