ಹೊಸದಿಲ್ಲಿ: ತಕ್ಷಣವೇ ಸರ್ಕಾರಿ ವಸತಿ ಗೃಹಗಳನ್ನು ಖಾಲಿ ಮಾಡುವಂತೆ ನಿರ್ದೇಶಿಸಿದ ಆದೇಶಕ್ಕೆ ತಡೆ ನೀಡುವಂತೆ ಕೋರಿದ ತೃಣಮೂಲ ಸಂಸದೆ ಮಹುವಾ ಮೊಯಿತ್ರಾ (Trinamool Congress Lok sabha MP Mahua Moitra) ಅವರ ಮನವಿಯನ್ನು ದಿಲ್ಲಿ ಉಚ್ಚ ನ್ಯಾಯಾಲಯ (Delhi High court) ವಜಾಗೊಳಿಸಿದೆ.
ಸರ್ಕಾರಿ ನಿವಾಸವನ್ನು ತೆರವು ಮಾಡುವಂತೆ ನೀಡಲಾದ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಮಹುವಾ ಕೋರಿದ್ದರು. ಇತ್ತೀಚೆಗೆ ಲೋಕಸಭೆಯಿಂದ ಉಚ್ಛಾಟಿತರಾದ ಮಹುವಾ ಮೊಯಿತ್ರಾ ಅವರ ಸರ್ಕಾರಿ ವಸತಿಯನ್ನು ರದ್ದುಗೊಳಿಸಲಾಗಿತ್ತು. 2024ರ ಜನವರಿ 7ರೊಳಗೆ ಮನೆಯನ್ನು ಖಾಲಿ ಮಾಡುವಂತೆ ಆದೇಶಿಸಲಾಗಿತ್ತು. ಇದನ್ನು ಪ್ರಶ್ನಿಸಿ ಮಹುವಾ ದೆಹಲಿ ಹೈಕೋರ್ಟ್‌ಗೆ ಮೊರೆ ಹೋಗಿದ್ದರು.
ಮೊಯಿತ್ರಾ ಅವರನ್ನು ಸಂಸತ್ತಿನಿಂದ ಉಚ್ಚಾಟಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಆಲಿಸುವವರೆಗೆ ಮೊಯಿತ್ರಾ ಅವರ ಈ ಅರ್ಜಿಯ ಕುರಿತು ತೀರ್ಪು ನೀಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಈ ಮೊದಲೇ ಹೇಳಿತ್ತು. ಆದರೆ ಸಂಸದೆ ಈ ಕುರಿತು ಮತ್ತೆ ಮನವಿ ಮಾಡಿದ್ದರು. ಡಿಸೆಂಬರ್ 11ರಂದು ವಸತಿ ನಿರ್ದೇಶನಾಲಯ ನಿವಾಸದ ತೆರವು ಕುರಿತು ಆದೇಶ ನೀಡಿದೆ. ಇದನ್ನು ರದ್ದುಗೊಳಿಸಬೇಕು ಅಥವಾ 2024ರ ಲೋಕಸಭಾ ಚುನಾವಣೆಯ ಫಲಿತಾಂಶಗಳು ಪ್ರಕಟವಾಗುವವರೆಗೆ ಟಿಎಂಸಿ ನಾಯಕಿಯ ಅಧಿಕೃತ ನಿವಾಸವನ್ನು ಉಳಿಸಿಕೊಳ್ಳಲು ಅವಕಾಶ ನೀಡಬೇಕೆಂದು ಮೊಯಿತ್ರಾ ಅವರ ಅರ್ಜಿಯು ಕೇಳಿತ್ತು.
ಉದ್ಯಮಿ ದರ್ಶನ್ ಹಿರಾನಂದಾನಿ ಅವರಿಂದ ಲಂಚ ಹಾಗೂ ಉಡುಗೊರೆಗಳನ್ನು ಸ್ವೀಕರಿಸಿ, ಸಂಸತ್ತಿನ ಸಂಸದರ ಬಳಕೆಯ ವೆಬ್‌ಸೈಟ್‌ನ ಬಳಕೆದಾರರ ಐಡಿ ಮತ್ತು ಪಾಸ್‌ವರ್ಡ್ ಅನ್ನು ಅವರೊಂದಿಗೆ ಹಂಚಿಕೊಂಡಿದ್ದಕ್ಕಾಗಿ ಮೊಯಿತ್ರಾ ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಲಾಗಿದೆ ಮತ್ತು ಡಿಸೆಂಬರ್ 8, 2023ರಂದು ಲೋಕಸಭೆಯಿಂದ ಹೊರಹಾಕಲಾಗಿದೆ.
ತನ್ನನ್ನು ಪದಚ್ಯುತಗೊಳಿಸುವಂತೆ ಶಿಫಾರಸು ಮಾಡಿದ ನೈತಿಕ ಸಮಿತಿಯ ವರದಿಯನ್ನು ಲೋಕಸಭೆಯು ಅಂಗೀಕರಿಸಿದ ನಂತರ ಮಹುವಾ ಅವರು ಸುಪ್ರೀಂ ಕೋರ್ಟ್‌ನಲ್ಲಿ ತನ್ನ ಉಚ್ಚಾಟನೆಯನ್ನು ಪ್ರಶ್ನಿಸಿದ್ದರು. ಸುಪ್ರೀಂ ಕೋರ್ಟ್ ಈ ವಿಚಾರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಆದರೆ, ʼʼಸಂಸತ್ತಿನ ಆಂತರಿಕ ವಿಚಾರಗಳಲ್ಲಿ ತಾನು ಮೂಗು ತೂರಿಸಲಾಗದುʼʼ ಎಂದು ಹೇಳಿದೆ. ಜೊತೆಗೆ ಈ ವಿಚಾರದಲ್ಲಿ ಸಂಸತ್ತಿನ ಕಾರ್ಯಾಲಯದಿಂದ ವಿವರವಾದ ವರದಿಯನ್ನು ಕೇಳಿದೆ.
ತನ್ನನ್ನು ಲೋಕಸಭೆಯಿಂದ ಹೊರಹಾಕಿದ ನಂತರ ವಸತಿ ನಿರ್ದೇಶನಾಲಯದ ಆದೇಶವನ್ನು ಹೊರಡಿಸಲಾಗಿದೆ. ನನ್ನ ಉಚ್ಚಾಟನೆಯ ಸಿಂಧುತ್ವವು ಸರ್ವೋಚ್ಚ ನ್ಯಾಯಾಲಯದ ಮುಂದೆ ತೀರ್ಪಿಗೆ ಬಾಕಿಯಿರುವುದರಿಂದ ವಸತಿ ತೆರವು ಆದೇಶವನ್ನು ರದ್ದುಪಡಿಸಬೇಕು ಎಂದು ಮಹುವಾ ಅವರು ದಿಲ್ಲಿ ಹೈಕೋರ್ಟ್‌ನಲ್ಲಿ ಕೋರಿದ್ದರು. ಸರ್ವೋಚ್ಚ ನ್ಯಾಯಾಲಯದ ಮುಂದೆ ಮುಖ್ಯ ಪ್ರಕರಣ ಬಾಕಿ ಇರುವುದರಿಂದ, ವಸತಿ ನಿರ್ದೇಶನಾಲಯವು ತನ್ನನ್ನು ಹೊರಹಾಕಲು ಸಾರ್ವಜನಿಕ ಆವರಣ (ಅನಧಿಕೃತ ನಿವಾಸಿಗಳ ತೆರವು) ಕಾಯಿದೆ- 1971ರ ಅಡಿಯಲ್ಲಿ ಪ್ರಕ್ರಿಯೆಗಳನ್ನು ಪ್ರಾರಂಭಿಸಲು ಸಾಧ್ಯವಿಲ್ಲ ಎಂದು ಮನವಿಯಲ್ಲಿ ಹೇಳಲಾಗಿದೆ. ಅವಧಿ ಮುಗಿದ ಸಂಸದರು ಮುಂದಿನ ಚುನಾವಣೆ ಪೂರ್ತಿಗೊಂಡು ಹೊಸ ಸಂಸದರು ಬರುವವರೆಗೂ ಅಧಿಕೃತ ನಿವಾಸದಲ್ಲಿ ಇರುವುದು ರೂಢಿಯಲ್ಲಿ ನಡೆದುಬಂದಿದೆ. ಇದನ್ನೂ ಅರ್ಜಿಯಲ್ಲಿ ತಿಳಿಸಲಾಗಿದೆ.