ಹೊಸದಿಲ್ಲಿ: ನಿನ್ನೆ ಒಂದೇ ದಿನದಲ್ಲಿ 21 ಭಾರತೀಯ ವಿದ್ಯಾರ್ಥಿಗಳನ್ನು (Indian students) ಅಮೆರಿಕದಿಂದ ಗಡಿಪಾರು (Deportation) ಮಾಡಲಾಗಿದೆ. ಸಮರ್ಪಕ ವಲಸೆ ದಾಖಲೆಗಳಿಲ್ಲದ ಕಾರಣ ಇವರನ್ನು ಆಚೆ ಕಳುಹಿಸಲಾಗಿದೆ.
ವೀಸಾ ದಾಖಲಾತಿಯಲ್ಲಿ (USA visa documents) ವ್ಯತ್ಯಯವಾದ ವರದಿಗಳು ಬಂದಿದ್ದರಿಂದ ಒಂದೇ ದಿನದಲ್ಲಿ 21 ಭಾರತೀಯ ವಿದ್ಯಾರ್ಥಿಗಳನ್ನು ಅಮೆರಿಕದಿಂದ ಗಡಿಪಾರು ಮಾಡಲಾಗಿದೆ. ಇವರಲ್ಲಿ ಹೆಚ್ಚಿನವರು ಆಂಧ್ರಪ್ರದೇಶದ ವಿದ್ಯಾರ್ಥಿಗಳು. ಇವರು ತಮ್ಮ ಸ್ನಾತಕೋತ್ತರ ಕೋರ್ಸ್‌ಗಾಗಿ ಯುನೈಟೆಡ್ ಸ್ಟೇಟ್ಸ್‌ಗೆ ಆಗಮಿಸಿದ್ದರು. ವೀಸಾ ದಾಖಲೆಗಳ ಕೊರತೆ ಮತ್ತು ಇತರ ಬಾಕಿ ಉಳಿದಿರುವ ಅಧಿಕೃತ ಔಪಚಾರಿಕ ಕ್ರಮಗಳಿಂದಾಗಿ ಗಡೀಪಾರು ಮಾಡಲಾದ ಅವರಲ್ಲಿ ಹಲವರು ಈಗ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ.
ಆಗಸ್ಟ್ 16, 2023ರಂದು ಅಮೆರಿಕದ ಮೂರು ವಿಮಾನ ನಿಲ್ದಾಣಗಳಲ್ಲಿ- ಅಟ್ಲಾಂಟಾ, ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಚಿಕಾಗೋಗಳಲ್ಲಿ ಈ ಘಟನಗಳು ನಡೆದಿವೆ. US ವಲಸೆ ಮತ್ತು ಕಸ್ಟಮ್ಸ್ ಎನ್‌ಫೋರ್ಸ್‌ಮೆಂಟ್ (ICE) ಅಧಿಕಾರಿಗಳು ವಿದ್ಯಾರ್ಥಿಗಳ ದಾಖಲೆಗಳನ್ನು ಪರಿಶೀಲಿಸಿದ್ದರು. ಅವರ ಲ್ಯಾಪ್‌ಟಾಪ್, ಸಾಮಾಜಿಕ ಮೀಡಿಯಾ ಖಾತೆಗಳನ್ನು ಪರಿಶೀಲಿಸಿದರು ಮತ್ತು ಹಿಂತಿರುಗಲು ಸೂಚಿಸಿದರು.
ತಮ್ಮನ್ನು ಏಕೆ ವಾಪಸ್ ಕಳುಹಿಸಲಾಗಿದೆ ಎಂಬ ಬಗ್ಗೆ ಸಮರ್ಪಕ ಮಾಹಿತಿ ನೀಡಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ವೀಸಾ ದಾಖಲಾತಿ ಕಾರಣ ಇರಬಹುದು ಎಂದು ಭಾವಿಸಲಾಗಿದೆ. ಕೆಲವು ವಿದ್ಯಾರ್ಥಿಗಳು ತಮ್ಮ ಫೋನ್ ಮತ್ತು ವಾಟ್ಸ್ಯಾಪ್ ಚಾಟ್‌ಗಳನ್ನು ಪರಿಶೀಲಿಸಲಾಗಿದೆ ಎಂದು ಹೇಳಿದ್ದಾರೆ.
ಇನ್ನು ಕೆಲವರು, ಈ ಕುರಿತು ಆಕ್ಷೇಪಣೆ ಸಲ್ಲಿಸಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಕಸ್ಟಮ್ಸ್ ಅಧಿಕಾರಿಗಳು ಬೆದರಿಕೆ ಹಾಕಿದ್ದಾರೆ ಎಂದಿದ್ದಾರೆ. USA ನಿಯಮದ ಪ್ರಕಾರ ಗಡೀಪಾರು ಮಾಡಿದರೆ ಈ ವಿದ್ಯಾರ್ಥಿಗಳ ಅಪಾರ ಸಮಯ, ಹಣದ ನಷ್ಟವಾಗಲಿದೆ. ಐದು ವರ್ಷ ದೇಶಕ್ಕೆ ಎಂಟ್ರಿ ನಿಷೇಧವಾಗಲಿದೆ.
ಇದನ್ನೂ ಓದಿ: China Stapled Visa: ವೀಸಾ ನೀಡಲು ಕುತಂತ್ರ; ಚೀನಾಗೆ ತೆರಳದ ಭಾರತದ ವುಶು ಕ್ರೀಡಾಪಟುಗಳು