ನವ ದೆಹಲಿ: ಮೋದಿ ಸರ್ಕಾರದಿಂದ ದೇಶದಲ್ಲಿ ಮೂಲಸೌಕರ್ಯ, ಗ್ರಾಮೀಣಾಭಿವೃದ್ಧಿ, ಆರೋಗ್ಯ, ಶಿಕ್ಷಣ, ಸಾಮಾಜಿಕ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ನಾನಾ ಅಭಿವೃದ್ಧಿ ಯೋಜನೆಗಳು ನಡೆಯುತ್ತಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಯೋಗ, ಆಯುರ್ವೇದ ಈಗ ಆಕರ್ಷಣೀಯವಾಗಿದೆ ಎಂದು ರಾಜ್ಯಸಭೆಯ ಸದಸ್ಯ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆ ರಾಜ್ಯಸಭೆಯಲ್ಲಿ ಗುರುವಾರ ಮೆಚ್ಚುಗೆ ವ್ಯಕ್ತಪಡಿಸಿದರು.
ರಾಷ್ಟ್ರಪತಿಯವರ ಭಾಷಣದ ಮೇಲಿನ ವಂದನಾನಿರ್ಣಯದ ಚರ್ಚೆಯ ವೇಳೆ ರಾಜ್ಯಸಭೆಯಲ್ಲಿ ಮಾತನಾಡಿದ ವೀರೇಂದ್ರ ಹೆಗ್ಗಡೆ ಅವರು, ಭಾರತದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಯೋಜನೆಗಳು ಜನಪರವಾಗಿವೆ. ಅವರ ಜೀವನದ ಗುಣಮಟ್ಟ ವೃದ್ಧಿಗೆ ಸಹಕಾರಿಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸ್ವಾಮಿತ್ವ ಯೋಜನೆಯ ಅಡಿಯಲ್ಲಿ ಕಂದಾಯ ಇಲಾಖೆಯು ತಂತ್ರಜ್ಞಾನದ ಸಹಕಾರದಿಂದ ಕೃಷಿ ಮತ್ತು ಭೂಮಿಯ ಮ್ಯಾಪಿಂಗ್ ಮಾಡುತ್ತಿರುವುದರಿಂದ ಭೂ ದಾಖಲೆಯು ವ್ಯವಸ್ಥಿತವಾಗುತ್ತಿದೆ. ರೈತರಿಗೆ ಇದರಿಂದ ಅನುಕೂಲವಾಗುತ್ತಿದೆ ಎಂದರು.
ಪುಣ್ಯಕ್ಷೇತ್ರ ಕಾಶಿಗೆ ಮೊನ್ನೆ ಹೋಗಿದ್ದೆ. ಅಲ್ಲಿ ಆಗಿರುವ ಅಭಿವೃದ್ಧಿ ನೋಡಿ ನನಗೆ ವಿಸ್ಮಯವಾಯಿತು. ಮೋದಿಯವರ ಸರ್ಕಾರ ಅಭಿವೃದ್ಧಿ ಮಂತ್ರ ಪಠಿಸುತ್ತಿದೆ. ಭಾಷೆಗಳು ನಮ್ಮನ್ನು ಒಂದುಗೂಡಿಸುತ್ತಿವೆ ಹೊರತು ಬೇರೆ ಮಾಡಲ್ಲ. ಎಲ್ಲ ಪ್ರಾದೇಶಿಕ ಭಾಷೆಗಳ ಸಂರಕ್ಷಣೆಗೆ ಕೇಂದ್ರ ಸರ್ಕಾರ ಆದ್ಯತೆ ನೀಡಿದೆ. ಏಕ್ ಭಾರತ್ ಶ್ರೇಷ್ಠ ಭಾರತ್ ಕಲ್ಪನೆಯನ್ನು ಪ್ರಧಾನಿ ನಮಗೆ ಕಟ್ಟಿಕೊಟ್ಟಿದ್ದಾರೆ ಎಂದರು.
ಕೇಂದ್ರ ಸರ್ಕಾರದ ಕಾರ್ಯವೈಖರಿಗಳಲ್ಲಿ ಪ್ರಾಮಾಣಿಕತೆ ಮತ್ತು ಪಾರದರ್ಶಕತೆ ಎರಡನ್ನೂ ಕಾಣಬಹುದು. ಹೀಗಾಗಿ ಭವಿಷ್ಯದಲ್ಲಿ ಭಾರತಕ್ಕೆ ಒಳ್ಳೆಯ ಭವಿಷ್ಯ ಇದೆ. ಸರ್ಕಾರದಿಂದ ಮತ್ತಷ್ಟು ಅಭಿವೃದ್ಧಿಪರ ಯೋಜನೆಗಳು ಆಗಲಿ ಎಂದು ದೇಶದ ಜನತೆ ಹಾರೈಸುತ್ತಿದ್ದಾರೆ ಎಂದು ಹೆಗ್ಗಡೆಯವರು ವಿವರಿಸಿದರು.