Site icon Vistara News

Nirmala Sitharaman: ಕಾಂಗ್ರೆಸ್‌ ಅವಧಿ ಬಜೆಟ್‌ನಲ್ಲಿ 26 ರಾಜ್ಯಗಳ ಹೆಸರೇ ಇರಲಿಲ್ಲ; ನಿರ್ಮಲಾ ಸೀತಾರಾಮನ್‌ ಟಾಂಗ್

Nirmala Sitharaman

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ಕೆಲ ದಿನಗಳ ಹಿಂದೆ ಮಂಡಿಸಿದ ಬಜೆಟ್‌ನಲ್ಲಿ (Union Budget 2024) ಕರ್ನಾಟಕಕ್ಕೆ ಹೆಚ್ಚಿನ ಅನುದಾನ ಕೊಟ್ಟಿಲ್ಲ ಎಂದು ರಾಜ್ಯ ಕಾಂಗ್ರೆಸ್‌ ನಾಯಕರು ಆರೋಪಿಸುತ್ತಿದ್ದಾರೆ. ಜನರು ಕೂಡ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ದಕ್ಷಿಣ ಭಾರತದ ಹಲವು ರಾಜ್ಯಗಳು ಟೀಕಿಸುತ್ತಿದ್ದಾರೆ. ಇದರ ಬೆನ್ನಲ್ಲೇ, ಸಂಸತ್‌ನಲ್ಲಿ ನಿರ್ಮಲಾ ಸೀತಾರಾಮನ್‌ ಅವರು ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದ್ದು, “ಕಾಂಗ್ರೆಸ್‌ ನೇತೃತ್ವದ ಯುಪಿಎ ಅವಧಿಯ ಬಜೆಟ್‌ನಲ್ಲೂ 26 ರಾಜ್ಯಗಳ ಹೆಸರು ಇರಲಿಲ್ಲ. ಹಾಗಂತ, ಆ ರಾಜ್ಯಗಳಿಗೆ ಅನುದಾನ ನೀಡಿಲ್ಲ ಎಂದು ಅರ್ಥವೇ” ಎಂಬುದಾಗಿ ಪ್ರಶ್ನಿಸಿದ್ದಾರೆ.

“ಬಜೆಟ್‌ ಭಾಷಣದಲ್ಲಿ ಕೆಲ ರಾಜ್ಯಗಳ ಹೆಸರು ಇಲ್ಲದ ಕಾರಣ, ಕೇಂದ್ರ ಸರ್ಕಾರವು ಆ ರಾಜ್ಯಗಳಿಗೆ ಅನುದಾನವನ್ನೇ ಕೊಟ್ಟಿಲ್ಲ ಎಂಬ ರೀತಿ ಪ್ರತಿಪಕ್ಷಗಳು ಬಿಂಬಿಸುತ್ತಿಲ್ಲ. ಆದರೆ, ನಾನು 2004-05ರಿಂದಲೂ ಮಂಡಿಸಿದ ಬಜೆಟ್‌ ಪ್ರತಿಗಳನ್ನು ಗಮನಿಸಿದ್ದೇನೆ. 2004-05ರ ಬಜೆಟ್‌ನಲ್ಲಿ ಅಂದರೆ ಯುಪಿಎ ಅವಧಿಯಲ್ಲಿ ಪ್ರಸ್ತುತಪಡಿಸಿದ ಬಜೆಟ್‌ ಭಾಷಣದಲ್ಲಿ 17 ರಾಜ್ಯಗಳ ಹೆಸರು ಇರಲಿಲ್ಲ. 2006-07ರಲ್ಲಿ 16, 2009ರಲ್ಲಿ 26 ರಾಜ್ಯಗಳ ಹೆಸರುಗಳೇ ಇರಲಿಲ್ಲ. ಹಾಗಂತ, ಈ ರಾಜ್ಯಗಳಿಗೆ ಹಣವೇ ನೀಡಲಿಲ್ಲವೇ” ಎಂಬುದಾಗಿ ಬಜೆಟ್‌ ಕುರಿತ ಚರ್ಚೆಯ ವೇಳೆ ನಿರ್ಮಲಾ ಸೀತಾರಾಮನ್‌ ಅವರು ಪ್ರತಿಪಕ್ಷಗಳನ್ನು ಪ್ರಶ್ನಿಸಿದ್ದಾರೆ.

“ಸಂಸತ್‌ನ ಎಲ್ಲ ಸದಸ್ಯರಿಗೂ ನಾನು ಒಂದು ಮನವಿ ಮಾಡುತ್ತೇನೆ. ಬಜೆಟ್‌ ಭಾಷಣದಲ್ಲಿ ಯಾವುದಾದರೂ ರಾಜ್ಯಗಳ ಹೆಸರು ಇಲ್ಲ ಎಂದರೆ, ಆ ರಾಜ್ಯಗಳಿಗೆ ಹಣ ನೀಡುವುದಿಲ್ಲ ಎಂದು ಅರ್ಥವಲ್ಲ. ಸುಳ್ಳು ಹಾಗೂ ಜನರ ದಾರಿ ತಪ್ಪಿಸುವ ರೀತಿ ಅಭಿಯಾನ ಆರಂಭಿಸಲಾಗುತ್ತಿದೆ. ಒಂದು ರಾಜ್ಯದ ಹೆಸರನ್ನು ಬಜೆಟ್‌ ಭಾಷಣದಲ್ಲಿ ಪ್ರಸ್ತಾಪಿಸಿಲ್ಲ ಎಂದ ಮಾತ್ರಕ್ಕೆ, ಆ ರಾಜ್ಯಕ್ಕೆ ಅನುದಾನವನ್ನೇ ನೀಡಿಲ್ಲ ಎಂಬ ರೀತಿ ಹೇಳುತ್ತಿರುವುದು ನೋವು ತಂದಿದೆ” ಎಂಬುದಾಗಿ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ಬಜೆಟ್‌ನಲ್ಲಿ ಕರ್ನಾಟಕಕ್ಕೆ ಅನುದಾನ ನೀಡಿಲ್ಲ ಎಂಬುದಾಗಿ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ನಿರ್ಮಲಾ ಸೀತಾರಾಮನ್‌ ಅವರು ಸ್ಪಷ್ಟನೆ ನೀಡಿದ್ದರು. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಕ್ರೋಶ ವ್ಯಕ್ತಪಡಿಸಿದ್ದರು. ಆಯವ್ಯಯದ ಲೆಕ್ಕಾಚಾರದ ಮೂಲಪಾಠವೇ ಗೊತ್ತಿಲ್ಲದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ತಕ್ಷಣ ಸಂಪುಟದಿಂದ ಕೈಬಿಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗ್ರಹಿಸಿದ್ದರು.

ನಿರ್ಮಲಾ ಸೀತಾರಾಮನ್ ಅವರ ಪ್ರಕಾರ ಹಿಂದಿನ ಯುಪಿಎ ಸರ್ಕಾರ (2004-2014) ಹತ್ತು ವರ್ಷಗಳ ಅವಧಿಯಲ್ಲಿ ಕರ್ನಾಟಕಕ್ಕೆ ನೀಡಿರುವ ಅನುದಾನ ರೂ.60,779 ಕೋಟಿ. ಎನ್‌ಡಿಎ ಸರ್ಕಾರ (2014-2024) ಹತ್ತು ವರ್ಷಗಳ ಅವಧಿಯಲ್ಲಿ ನೀಡಿದ್ದ ಹಣ ರೂ.2,36,955 ಕೋಟಿ ಎಂದು ಸಚಿವೆ ಹೇಳಿದ್ದಾರೆ. ಆದರೆ ಹತ್ತು ವರ್ಷಗಳ ಅವಧಿಯಲ್ಲಿ ಕೇಂದ್ರ ಸರ್ಕಾರದ ಬಜೆಟ್ ಗಾತ್ರ ಎಷ್ಟು ಪಟ್ಟು ಹೆಚ್ಚಾಗಿದೆ ಎನ್ನುವುದನ್ನು ಅವರು ಮರೆತಿದ್ದಾರೆ. ಇದು ಅವರ ಅಜ್ಞಾನವೋ, ಇಲ್ಲವೇ ಜನತೆಯ ದಾರಿ ತಪ್ಪಿಸುವ ಹುನ್ನಾರವೋ? ಎಂಬುದನ್ನು ಅವರೇ ಸ್ಪಷ್ಟಪಡಿಸಬೇಕು ಎಂದು ಸಿದ್ದರಾಮಯ್ಯ ಹೇಳಿದ್ದರು.

ಇದನ್ನೂ ಓದಿ: HD Devegowda: ಮೋದಿ ಬಜೆಟ್‌ಗೆ ಎಚ್‌.ಡಿ.ದೇವೇಗೌಡರ ಮೆಚ್ಚುಗೆ; ಬೆಂಗಳೂರು ನೀರಿನ ಸಮಸ್ಯೆ ಬಗೆಹರಿಸಲು ಮನವಿ

Exit mobile version