Site icon Vistara News

Disney Star: 11 ಸಾವಿರ ಕೋಟಿ ರೂ. ಡೀಲ್‌ ಬೇಡವೆಂದ ಜೀ‌ ವಿರುದ್ಧ ಡಿಸ್ನಿ ಕೇಸ್

Zee And Disney Star

Disney Star Mulls Legal Action Against Zee For Backing Out From $1.4 Billion Deal

ನವದೆಹಲಿ: ಸುಮಾರು 11,636 ಕೋಟಿ ರೂ. (1.4 ಶತಕೋಟಿ ಡಾಲರ್)‌ ಮೊತ್ತದ ಒಪ್ಪಂದದಿಂದ ಕೊನೇ ಕ್ಷಣದಲ್ಲಿ ದೂರ ಸರಿದ ಜೀ ಎಂಟರ್‌ಟೇನ್‌ಮೆಂಟ್‌ (Zee Entertainment) ಸಂಸ್ಥೆ ವಿರುದ್ಧ ಕಾನೂನು ಹೋರಾಟ ನಡೆಸಲು ಡಿಸ್ನಿ ಸ್ಟಾರ್‌ (Disney Star) ತೀರ್ಮಾನಿಸಿದೆ. ಈಗಾಗಲೇ ಸೋನಿ ಗ್ರೂಪ್‌ (Sony Group) ಸಂಸ್ಥೆಯಿಂದ ಕಾನೂನು ಕ್ರಮ ಎದುರಿಸುತ್ತಿರುವ ಜೀ ಎಂಟರ್‌ಟೇನ್‌ಮೆಂಟ್‌ ಎಂಟರ್‌ಪ್ರೈಸಸ್‌ ಲಿಮಿಟೆಡ್‌ ಸಂಸ್ಥೆಗೆ ಈಗ ಮತ್ತೊಂದು ಸಂಸ್ಥೆಯಿಂದ ಕಾನೂನು ಸಮರ ಎದುರಾಗಿದೆ.

ಏನಿದು ಪ್ರಕರಣ?

ಭಾರತದಲ್ಲಿ ನಡೆಯುವ ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯಗಳ ನೇರಪ್ರಸಾರಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿಯಿಂದ (ICC) ಡಿಸ್ನಿ ಸ್ಟಾರ್‌ ಕಂಪನಿಯು ಹಕ್ಕುಗಳನ್ನು ಖರೀದಿಸಿದೆ. ಈ ನೇರ ಪ್ರಸಾರದ ಹಕ್ಕುಗಳನ್ನು ಡಿಸ್ನಿ ಸ್ಟಾರ್‌ನಿಂದ ಜೀ ಎಂಟರ್‌ಟೇನ್‌ಮೆಂಟ್‌ ಸಂಸ್ಥೆಯು ಸುಮಾರು 11,636 ಕೋಟಿ ರೂ.ಗೆ ಖರೀದಿಸಬೇಕಿತ್ತು. 2024ರಿಂದ ನಾಲ್ಕು ವರ್ಷಗಳವರೆಗೆ ಡಿಸ್ನಿ ಸ್ಟಾರ್‌ನಿಂದ ಜೀ ಎಂಟರ್‌ಟೇನ್‌ಮೆಂಟ್‌ ಕಂಪನಿ ಹಕ್ಕುಗಳನ್ನು ಖರೀದಿಸುವ ಕುರಿತ ಒಪ್ಪಂದಕ್ಕೆ ಸಹಿ ಹಾಕಬೇಕಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಜೀ ಎಂಟರ್‌ಟೇನ್‌ಮೆಂಟ್‌ ಕಂಪನಿಯು ಒಪ್ಪಂದದಿಂದ ಹಿಂದೆ ಸರಿದಿದೆ.

ಒಪ್ಪಂದದ ಕುರಿತು ನಡೆಸಿದ ಆರಂಭಿಕ ಮಾತುಕತೆಯ ಪ್ರಕಾರ, ಈಗಾಗಲೇ ಡಿಸ್ನಿ ಸ್ಟಾರ್‌ಗೆ ಜೀ ಕಂಪನಿಯು ಮೊದಲ ಕಂತಿನ ಹಣವನ್ನೂ ನೀಡಬೇಕಿತ್ತು. ಆದರೆ, ಮೊದಲ ಕಂತಿನ ಹಣವನ್ನೂ ನೀಡದ ಜೀ, ಒಪ್ಪಂದದಿಂದಲೇ ಹಿಂದೆ ಸರಿಯುವ ತೀರ್ಮಾನಕ್ಕೆ ಬಂದಿದೆ. ಹಾಗಾಗಿ, ಜೀ ಎಂಟರ್‌ಟೇನ್‌ಮೆಂಟ್‌ ಸಂಸ್ಥೆ ವಿರುದ್ಧ ಅಮೆರಿಕದ ದಿ ವಾಲ್ಟ್‌ ಡಿಸ್ನಿ ಕಂಪನಿಯ ಭಾರತದ ಘಟಕವಾದ ಡಿಸ್ನಿ ಸ್ಟಾರ್‌ ಕಾನೂನು ಹೋರಾಟಕ್ಕೆ ಮುಂದಾಗಿದೆ. ಕೊನೆಯ ಕ್ಷಣದಲ್ಲಿ ಒಪ್ಪಂದ ರದ್ದುಗೊಳಿಸಿದ ಕಾರಣ ಪರಿಹಾರ ನೀಡಬೇಕು ಎಂದು ಡಿಸ್ನಿ ಸ್ಟಾರ್‌ ಅರ್ಜಿ ಸಲ್ಲಿಸಲು ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: 24,789 ಕೋಟಿಗೆ ವಿಶ್ವಕಪ್‌ ಪ್ರಸಾರ ಹಕ್ಕು ಪಡೆದಿದ್ದ ಡಿಸ್ನಿ; 2.2 ಲಕ್ಷ ಕೋಟಿ ರೂ. ಆದಾಯ!

ಸೋನಿ ಗ್ರೂಪ್‌ ಜತೆ ವಿಲೀನಗೊಳಿಸುವ ದಿಸೆಯಲ್ಲಿ ಜೀ ಎಂಟರ್‌ಟೇನ್‌ಮೆಂಟ್‌ ಎಂಟರ್‌ಪ್ರೈಸಸ್‌ ಹಾಗೂ ಸೋನಿ ಗ್ರೂಪ್‌ ಮಧ್ಯೆ ಒಪ್ಪಂದದ ಕುರಿತು ಮಾತುಕತೆ ನಡೆದಿತ್ತು. ಆದರೆ, ಆಗಲೂ ಕೊನೆಯ ಕ್ಷಣದಲ್ಲಿ ಜೀ ಕಂಪನಿಯು ಒಪ್ಪಂದದಿಂದ ಹಿಂದೆ ಸರಿದ ಕಾರಣ 90 ದಶಲಕ್ಷ ಡಾಲರ್‌ (ಸುಮಾರು 750 ಕೋಟಿ ರೂ.) ಪರಿಹಾರ ನೀಡಬೇಕು ಎಂದು ಸೋನಿ ಗ್ರೂಪ್‌ ಮೊಕದ್ದಮೆ ಹೂಡಿದೆ. ಇದರ ಮಧ್ಯೆಯೇ ಜೀ ಕಂಪನಿಗೆ ಡಿಸ್ನಿ ಸ್ಟಾರ್‌ ಕಂಪನಿಯ ಕಾನೂನು ಸವಾಲು ಕೂಡ ಎದುರಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version