Site icon Vistara News

ʼಮೂರು ವಾರ ಸಮಯ ಕೇಳಿದೆ, ಆದರೆ ಕೊಡಲಿಲ್ಲʼ: ಇಡಿ ವಿಚಾರಣೆಗೆ ಹಾಜರಾದ ನಂತರ ಡಿ.ಕೆ. ಶಿವಕುಮಾರ್‌ ಮಾತು

d k shivakumar ed

ನವದೆಹಲಿ: ಯಂಗ್‌ ಇಂಡಿಯಾ ಅಕ್ರಮ ವ್ಯವಹಾರ ಆರೋಪದಕ್ಕೆ ಸಂಬಂದಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ನವದೆಹಲಿಯಲ್ಲಿ ಜಾರಿ ನಿರ್ದೇಶನಾಲಯದ(ಇಡಿ) ವಿಚಾರಣೆಗೆ ಸೋಮವಾರ ಹಾಜರಾದರು.

ಸೆಪ್ಟೆಂಬರ್‌ 19ರಂದು ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಈ ಹಿಂದೆ ಸಮನ್ಸ್‌ ನೀಡಿತ್ತು. ಆದರೆ ಭಾರತ್‌ ಜೋಡೋ ಯಾತ್ರೆಯಲ್ಲಿ ಭಾಗಿಯಾಗಿದ್ದರಿಂದ ತೆರಳಿರಲಿಲ್ಲ.

ಇದೀಗ ಸೋಮವಾರ ವಿಚಾರಣೆಗೆ ಹಾಜರಾಗಿದ್ದಾರೆ. ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ನಾನು ಮೂರು ವಾರ ಸಮಯ ಕೇಳಿದ್ದೆ, ಆದರೆ ಅವರು ನೀಡಿಲ್ಲ. ಇವತ್ತೇ ಬರಬೇಕು ಎಂದು ಹೇಳಿದ್ದರು. ಉಜ್ಜಯಿನಿ ಮಹಾಕಾಲೇಶ್ವರ ದೇವಸ್ಥಾನದಿಂದ ನೇರವಾಗಿ ನಾನು ಇಲ್ಲಿಗೆ ಬಂದಿದ್ದೇನೆ. ಅದೆಲ್ಲ ಏನೇ ಇರಲಿ, ನಾವು ಸಂಸ್ಥೆಯನ್ನು ಹಾಗೂ ಸಮನ್ಸ್‌ ಅನ್ನು ಗೌರವಿಸುತ್ತೇವೆ. ಅವರ ಎಲ್ಲ ಪ್ರಶೆಗಳಿಗೂ ನಾನು ಉತ್ತರಿಸುತ್ತೇನೆ” ಎಂದರು.

ಯಂಗ್‌ ಇಂಡಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಇಡಿ ಮತ್ತೊಮ್ಮೆ ಸಮನ್ಸ್‌ ನೀಡಿದೆ. ನಾನು ಅನೇಕ ಕಾಗದಪತ್ರಗಳನ್ನು ಕಳಿಸಿದ್ದೆ, ಆದರೆ ಅವರು ತೃಪ್ತರಾಗಿರಲಿಲ್ಲ. ಇದೀಗ ಎಲ್ಲ ದಾಖಲೆಗಳನ್ನೂ ಒದಗಿಸಿದ್ದೇನೆ. ನಾವು ಸಾರ್ವಜನಿಕ ಜೀವನದಲ್ಲಿದ್ದೇವೆ. ಮರೆಮಾಡಲು ಏನೂ ಇಲ್ಲ. ನಾನಷ್ಟೇ ಅಲ್ಲ, ಯಂಗ್‌ ಇಂಡಿಯಾದ ಅನೇಕ ಹಿತೈಷಿಗಳು ದೇಣಿಗೆ ನೀಡಿದ್ದಾರೆ. ದತ್ತಿ ಕೆಲಸಕ್ಕಾಗಿ ದೇಣಿಗೆ ನೀಡಿದ್ದೇವೆ” ಎಂದಿದ್ದಾರೆ.

ಈ ಹಿಂದೆ ಅಕ್ರಮ ಸಂಪತ್ತಿನ ಗಳಿಕೆ ಕುರಿತಂತೆ ಡಿ.ಕೆ. ಶಿವಕುಮಾರ್‌ ಬಂಧನಕ್ಕೊಳಗಾಗಿದ್ದರು ಹಾಗೂ ಅನೇಕ ಬಾರಿ ವಿಚಾರಣೆಗೂ ಹಾಜರಾಗಿದ್ದರು. ಆದರೆ ಯಂಗ್‌ ಇಂಡಿಯಾ ಪ್ರಕರಣದಲ್ಲಿ ಇತ್ತೀಚೆಗೆ ಹೊಸ ಪ್ರಕರಣವನ್ನು ದಾಖಲಿಸಲಾಗಿದೆ.

ಸೆಪ್ಟೆಂಬರ್‌ನಲ್ಲಿ ಸಮನ್ಸ್‌ ಕುರಿತು ಟ್ವೀಟ್‌ ಮಾಡಿದ್ದ ಶಿವಕುಮಾರ್‌, ಭಾರತ್‌ ಜೋಡೊ ಯಾತ್ರೆ ಹಾಗೂ ವಿಧಾನಸಭೆ ಅಧಿವೇಶನ ನಡೆಯುತ್ತಿರುವ ಮಧ್ಯೆಯೇ ಮತ್ತೊಮ್ಮೆ ಇಡಿ ನನಗೆ ಸಮನ್ಸ್‌ ನೀಡಿದೆ. ನಾನು ಸಹಕರಿಸಲು ಸಿದ್ಧ. ಆದರೆ ಈ ಸಮನ್ಸ್‌ ನೀಡಿರುವ ಸಮಯ, ಹಾಗೂ ಮೇಲಿಂದ ಮೇಲೆ ನೀಡುತ್ತಿರುವ ಕಿರುಕುಳದಿಂದಾಗಿ ನನ್ನ ಸಾಂವಿಧಾನಿಕ ಮತ್ತು ರಾಜಕೀಯ ಕರ್ತವ್ಯಗಳನ್ನು ನಿರ್ವಹಿಸಲು ತೊಂದರೆಯಾಗುತ್ತಿದೆ ಎಂದಿದ್ದರು.

ಇದನ್ನೂ ಓದಿ | ಇಡಿ ಚಾರ್ಜ್‌ಶೀಟ್‌ ಸಲ್ಲಿಕೆಯಲ್ಲಿ ರಾಜಕಾರಣ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆರೋಪ

Exit mobile version