Site icon Vistara News

Donald Trump Gifts: ಮೋದಿ ಕೊಟ್ಟಿದ್ದು ಸೇರಿ 2 ಕೋಟಿ ರೂ. ಮೌಲ್ಯದ ಉಡುಗೊರೆಗಳ ಮಾಹಿತಿ ನೀಡದ ಟ್ರಂಪ್‌

Donald Trump failed to disclose 17 gifts from India, including Narendra Modi Gift

ಡೊನಾಲ್ಡ್‌ ಟ್ರಂಪ್‌

ವಾಷಿಂಗ್ಟನ್‌: ಜಾಗತಿಕ ನಾಯಕರು ಅಧಿಕಾರದಲ್ಲಿದ್ದಾಗ ಬೇರೆ ದೇಶಗಳ ನಾಯಕರಿಂದ ಪಡೆದ ಉಡುಗೊರೆಗಳೇ ಅವರಿಗೆ ಸಮಸ್ಯೆಯುಂಟು ಮಾಡುತ್ತಿವೆ ಅಥವಾ ಅವರೇ ಸಮಸ್ಯೆ ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ವಿದೇಶಿ ನಾಯಕರಿಂದ ಸಿಕ್ಕ ಉಡುಗೊರೆಗಳನ್ನು ದುಬಾರಿ ಬೆಲೆಗೆ ಮಾರಿಕೊಂಡ ಆರೋಪದಲ್ಲಿ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರು ತೋಷಖಾನಾ (ಖಜಾನೆ) ಪ್ರಕರಣದಲ್ಲಿ ಜೈಲು ಸೇರುವುದು ಒಂದೇ ಬಾಕಿ ಇದೆ. ಈಗ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump Gifts) ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿ ಜಗತ್ತಿನ ಹಲವು ನಾಯಕರಿಂದ ಪಡೆದ ಉಡುಗೊರೆಗಳ ಮಾಹಿತಿಯನ್ನು ಬಹಿರಂಗಪಡಿಸದೆ ವಿವಾದಕ್ಕೆ ಸಿಲುಕಿದ್ದಾರೆ.

ನರೇಂದ್ರ ಮೋದಿ ಸೇರಿ ಭಾರತದ ಹಲವು ನಾಯಕರು ನೀಡಿದ ಉಡುಗೊರೆಗಳನ್ನು ಒಳಗೊಂಡು ಜಗತ್ತಿನ ಹಲವು ರಾಷ್ಟ್ರಗಳ ನಾಯಕರು ನೀಡಿದ 2.06 ಕೋಟಿ ರೂ. ಮೌಲ್ಯದ (2.5 ಲಕ್ಷ ಡಾಲರ್)‌ 117 ಉಡುಗೊರೆಗಳ ಕುರಿತು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸುವಲ್ಲಿ ಡೊನಾಲ್ಡ್‌ ಟ್ರಂಪ್‌ ಹಾಗೂ ಅವರ ಕುಟುಂಬಸ್ಥರು ವಿಫಲರಾಗಿದ್ದಾರೆ ಎಂದು ಆಡಳಿತ ಪಕ್ಷವಾದ ಡೆಮಾಕ್ರಟಿಕ್‌ನ ಸಮಿತಿ ನೀಡಿದ ವರದಿ ಬಹಿರಂಗಪಡಿಸಿದೆ.

ಭಾರತದ ನಾಯಕರು ಕೊಟ್ಟ ಉಡುಗೊರೆ ಯಾವವು?

ಡೊನಾಲ್ಡ್‌ ಟ್ರಂಪ್‌ ಭಾರತಕ್ಕೆ ಬಂದಾಗ ನರೇಂದ್ರ ಮೋದಿ ಅವರು 1.57 ಲಕ್ಷ ರೂ. ಮೌಲ್ಯದ ಕಫ್‌ಲಿಂಕ್‌ಗಳನ್ನು ನೀಡಿದ್ದರು. ಹಾಗೆಯೇ, ಆಗ ರಾಷ್ಟ್ರಪತಿ ಆಗಿದ್ದ ರಾಮನಾಥ್‌ ಕೋವಿಂದ್‌ ಅವರು ಅವರು 3.8 ಲಕ್ಷ ರೂ. ಮೌಲ್ಯದ ತಾಜ್‌ಮಹಲ್‌ ಕಲಾಕೃತಿ ನೀಡಿದ್ದರು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು 7 ಲಕ್ಷ ರೂ. ಮೌಲ್ಯದ ಮಕ್ರಾನ ಮಾರ್ಬಲ್‌ಅನ್ನು ಉಡುಗೊರೆ ನೀಡಿದರು. ಮೋದಿ ಅವರು ಟ್ರಂಪ್‌ ಪತ್ನಿ ಮೆಲಾನಿಯಾ ಟ್ರಂಪ್‌ ಅವರಿಗೂ ಬ್ರೇಸ್‌ಲೆಟ್‌ ಉಡುಗೊರೆ ನೀಡಿದ್ದರು. ಹೀಗೆ, ಭಾರತದ ನಾಯಕರು ನೀಡಿದ ಸುಮಾರು 41 ಲಕ್ಷ ರೂ. ಮೌಲ್ಯದ 17 ಉಡುಗೊರೆಗಳ ಮಾಹಿತಿಯನ್ನು ಟ್ರಂಪ್‌ ಬಹಿರಂಗಪಡಿಸಿಲ್ಲ ಎಂದು ವರದಿ ತಿಳಿಸಿದೆ.

ಭಾರತ ಮಾತ್ರವಲ್ಲ ಡೊನಾಲ್ಡ್‌ ಟ್ರಂಪ್‌ ಹಾಗೂ ಅವರ ಕುಟುಂಬಸ್ಥರು ಜಪಾನ್‌, ಸೌದಿ ಅರೇಬಿಯಾ ಸೇರಿ ಹಲವು ರಾಷ್ಟ್ರಗಳಿಂದ ಪಡೆದ ಉಡುಗೊರೆಗಳ ಕುರಿತು ಮಾಹಿತಿ ನೀಡಿಲ್ಲ. ಇವುಗಳಲ್ಲಿ ಕೆಲವು ಉಡುಗೊರೆಗಳು ನಾಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಸಾಮಾನ್ಯವಾಗಿ ಯಾವುದೇ ಜಾಗತಿಕ ನಾಯಕರು ಉಡುಗೊರೆಗಳನ್ನು ಪಡೆದರೆ, ಅವುಗಳನ್ನು ದೇಶದ ಮ್ಯೂಸಿಯಂ ಅಥವಾ ಖಜಾನೆಗಳಿಗೆ ನೀಡುತ್ತಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ತಮಗೆ ನೀಡಲಾದ ಉಡುಗೊರೆಗಳನ್ನು ಹರಾಜು ಹಾಕಿ, ಅದರ ಹಣವನ್ನು ನಮಾಮಿ ಗಂಗೆ ಯೋಜನೆಗೆ ನೀಡಿದ್ದಾರೆ.

ಇದನ್ನೂ ಓದಿ: Donald Trump: ಮಾರ್ಚ್‌ 21ರಂದು ನನ್ನ ಬಂಧನ ಎಂದ ಡೊನಾಲ್ಡ್‌ ಟ್ರಂಪ್‌, ಪ್ರತಿಭಟನೆಗೆ ಕರೆ; ಏನಿದು ಕೇಸ್?‌

Exit mobile version