ನ್ಯೂಯಾರ್ಕ್: ಎರಡನೇ ಬಾರಿಗೆ ಅಮೆರಿಕದ ಅಧ್ಯಕ್ಷರಾಗುವ (US president) ಕನಸನ್ನು ಹೊತ್ತಿರುವ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು, ಭಾರತದ ತೆರಿಗೆ (India tax) ವಿಚಾರವನ್ನು ಮತ್ತೆ ಪ್ರಸ್ತಾಪಿಸಿದ್ದಾರೆ. ಭಾರತದ ಆಮದು ಸಾಮಗ್ರಿಗಳ ಮೇಲೆ ಸೇಡಿನ ತೆರಿಗೆ (ರೆಸಿಪ್ರೋಕಲ್ ಟ್ಯಾಕ್ಸ್ – Reciprocal tax) ವಿಧಿಸುವ ಮಾತನಾಡಿದ್ದಾರೆ.
ಪ್ರತಿಷ್ಠಿತ ಹಾರ್ಲೆ-ಡೇವಿಡ್ಸನ್ (Harley Davidson) ಮೋಟಾರ್ ಸೈಕಲ್‌ಗಳ ಮೇಲೆ ಭಾರತ ವಿಧಿಸಿರುವ ಹೆಚ್ಚಿನ ತೆರಿಗೆಯ ಬಗ್ಗೆ ಅವರು ಪ್ರಸ್ತಾಪಿಸಿದ್ದಾರೆ. ಫಾಕ್ಸ್ ಬ್ಯುಸಿನೆಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ, ಟ್ರಂಪ್ ಭಾರತದ ತೆರಿಗೆ ದರಗಳು ತುಂಬಾ ದುಬಾರಿಯಾಗಿವೆ ಎಂದು ಆರೋಪಿಸಿದ್ದಾರೆ.
ತಾವು ಅಧಿಕಾರಕ್ಕೆ ಬಂದರೆ ಅದಕ್ಕೆ ಎದುರಾಗಿ ತೆರಿಗೆ ವಿಧಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಯುಎಸ್ ಅಧ್ಯಕ್ಷರಾಗಿದ್ದಾಗಲೇ ಟ್ರಂಪ್ ಭಾರತವನ್ನು ʼಸುಂಕಗಳ ರಾಜʼ ಎಂದು ಬಣ್ಣಿಸಿದ್ದರು. ಮೇ 2019ರಲ್ಲಿ, ಭಾರತವು ಅದರ ಮಾರುಕಟ್ಟೆಗಳಿಗೆ ʼಸಮಾನ ಮತ್ತು ಸಮಂಜಸವಾದ ಪ್ರವೇಶʼವನ್ನು ಅಮೆರಿಕಕ್ಕೆ ನೀಡಿಲ್ಲ ಎಂದು ಆರೋಪಿಸಿ ಅವರು ಯುನೈಟೆಡ್ ಸ್ಟೇಸ್ಟ್‌ನ “ಆದ್ಯತೆಯ ರಾಷ್ಟ್ರಗಳʼ ಪಟ್ಟಯಿಂದ ಭಾರತವನ್ನು ಹೊರಗಿಟ್ಟಿದ್ದರು.
ʼಭಾರತವು ನಮಗೆ ಹೆಚ್ಚಿನ ಸುಂಕ ವಿಧಿಸಿದರೆ ನಾನು ಸೇಡಿತ ತೆರಿಗೆ ಹಾಕಬಯಸುತ್ತೇನೆ. ಭಾರತದಲ್ಲಿ ಸುಂಕ ತುಂಬಾ ಹೆಚ್ಚಿದೆ. ಇದನ್ನು ಹಾರ್ಲೆ-ಡೇವಿಡ್ಸನ್ ವಿಚಾರದಲ್ಲಿ ನೋಡಬಹುದು. ಭಾರತದಂತಹ ಸ್ಥಳದಲ್ಲಿ ನೀವು ಹೇಗೆ ಮಾರುಕಟ್ಟೆ ಮಾಡುತ್ತೀರಿ ಎಂದು ಪ್ರಶ್ನಿಸಿದಾಗ ಆ ಸಂಸ್ಥೆ, ಅಲ್ಲಿ ಶೇ. 100, 150, 200ರಷ್ಟು ಸುಂಕ ವಿಧಿಸುತ್ತಾರೆ ಎಂದಿದ್ದರುʼ ಎಂದು ಟ್ರಂಪ್ ಹೇಳಿದರು.
ಭಾರತ ತನ್ನ ಬೈಕುಗಳನ್ನು ನಮ್ಮಲ್ಲಿ ಮಾರಬಯಸುತ್ತದೆ. ಅದಕ್ಕೆ ಇಲ್ಲಿ ನಾವು ಯಾವುದೇ ತೆರಿಗೆ ಹಾಕುವುದಿಲ್ಲ. ಆದರೆ ನಮ್ಮ ಬೈಕುಗಳಿಗೆ ದುಪ್ಪಟ್ಟು, ಮೂರು ಪಟ್ಟು ತೆರಿಗೆ ಹಾಕುತ್ತಾರೆ. ಅವರ ಬೈಕು ಮಾರಾಟವಾಗಲಿ ಎಂದು ಬಯಸುತ್ತಾರೆ. ಅದು ಹೇಗೆ ಸಾಧ್ಯ? ಆದರೆ ನಾವು ಭಾರತವನ್ನು ಕಡೆಗಣಿಸಲು ಸಾಧ್ಯವಿಲ್ಲ. ಯಾಕೆಂದರೆ ಅದು ಅಷ್ಟು ದೊಡ್ಡ ದೇಶ ಎಂದು ಟ್ರಂಪ್ ನುಡಿದರು.
ಮಾಜಿ ಅಧ್ಯಕ್ಷ ಟ್ರಂಪ್ ಹಲವಾರು ನ್ಯಾಯಾಲಯ ಪ್ರಕರಣಗಳು ಮತ್ತು ದೋಷಾರೋಪಣೆಗಳ ಸರಣಿಯನ್ನು ಎದುರಿಸುತ್ತಿದ್ದಾರೆ. ಮುಂದಿನ ಅವಧಿಯ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಮುಖ ರಾಷ್ಟ್ರೀಯ ಸಮೀಕ್ಷೆಗಳ ಪ್ರಕಾರ ಪಕ್ಷದ ಮತಗಳಲ್ಲಿ ಅರ್ಧಕ್ಕಿಂತ ಹೆಚ್ಚನ್ನು ಇವರು ಹೊಂದಿದ್ದಾರೆ.
ಇದನ್ನೂ ಓದಿ: Donald Trump: ಟ್ರಂಪ್ ವಿರುದ್ಧ ಮತ್ತೊಂದು ಕೇಸ್! ಅಮೆರಿಕ ಅಧ್ಯಕ್ಷ ಎಲೆಕ್ಷನ್ ಸ್ಪರ್ಧಿಸುವ ಆಸೆ ಠುಸ್