ಗಾಂಧಿನಗರ: ಸಾಮಾನ್ಯವಾಗಿ ಕತ್ತೆ ಎಂದರೆ ಹೀಯಾಳಿಸುವವರೇ ಅಧಿಕ. ಆದರೆ ಈಗ ಕತ್ತೆಗೂ ಬೇಡಿಕೆ ಸೃಷ್ಟಿಯಾಗಿದೆ. ಯಾಕೆಂದರೆ ಕತ್ತೆಯ ಹಾಲಿ(Donkey Milk)ನಲ್ಲಿ ಅಪಾರ ಔಷಧೀಯ ಗುಣಗಳಿದ್ದು, ಜನರು ನಿಧಾನವಾಗಿ ಇದರತ್ತ ಮುಖ ಮಾಡುತ್ತಿದ್ದಾರೆ. ಪರಿಣಾಮವಾಗಿ ಕತ್ತೆ ಹಾಲು ಇತರ ಹಾಲಿಗಿಂತ ಸುಮಾರು 70 ಪಟ್ಟು ಅಧಿಕ ದರ ಹೊಂದಿದೆ. ಗುಜರಾತ್‌ನ ರೈತರೊಬ್ಬರು ಕತ್ತೆ ಹಾಲು ಮಾರಾಟದಿಂದ ಪ್ರತಿ ತಿಂಗಳು ಸುಮಾರು 2-3 ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ ಎಂದರೆ ನೀವು ನಂಬಲೇ ಬೇಕು (Viral News).
ಗುಜರಾತ್‌ನ ಪಟಾನ್ ಜಿಲ್ಲೆಯ ಧೀರೇನ್ ಸೋಲಂಕಿ 42 ಕತ್ತೆಗಳನ್ನು ಸಾಕುತ್ತಿದ್ದಾರೆ. ಕತ್ತೆ ಫಾರ್ಮ್ ಹೊಂದಿರುವ ಅವರು, ದಕ್ಷಿಣದ ರಾಜ್ಯಗಳ ಗ್ರಾಹಕರಿಗೆ ಕತ್ತೆ ಹಾಲನ್ನು ಪೂರೈಸುವ ಮೂಲಕ ತಿಂಗಳಿಗೆ 2-3 ಲಕ್ಷ ರೂ. ಗಳಿಸುತ್ತಿದ್ದಾರೆ.
ಧೀರೇನ್ ಸೋಲಂಕಿ ಹಿನ್ನೆಲೆ
ಈ ಯಶಸ್ಸಿನ ಪಯಣವನ್ನು ಧೀರೇನ್ ವಿವರಿಸುವುದು ಹೀಗೆ: ʼʼನಾನು ಆರಂಭದಲ್ಲಿ ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನ ಪಡುತ್ತಿದೆ. ಆದರೆ ಸಿಕ್ಕಿರಲಿಲ್ಲ. ಖಾಸಗಿ ಕಂಪೆನಿಯೊಂದರಲ್ಲಿ ಸಿಕ್ಕ ಉದ್ಯೋಗ ನನ್ನ ಖರ್ಚಿಗೆ ಸಾಕಾಗುತ್ತಿರಲಿಲ್ಲ. ಇದೇ ವೇಳೆ ನನಗೆ ದಕ್ಷಿಣ ಭಾರತದಲ್ಲಿ ಕತ್ತೆ ಹಾಲು ಜನಪ್ರಿಯವಾಗಿರುವ ಬಗ್ಗೆ ತಿಳಿಯಿತು. ಈ ಬಗ್ಗೆ ಅನುಭವಿರುವ ಕೆಲವು ವ್ಯಕ್ತಿಗಳನ್ನು ಭೇಟಿಯಾಗಿ ಹೆಚ್ಚಿನ ವಿವರ ತಿಳಿದುಕೊಂಡೆ. ಅದರಂತೆ ಸುಮಾರು 8 ತಿಂಗಳ ಹಿಂದೆ ನನ್ನ ಹಳ್ಳಿಯಲ್ಲಿ ಈ ಕತ್ತೆ ಫಾರ್ಮ್ ಅನ್ನು ಸ್ಥಾಪಿಸಿದೆ” ಎಂದು ಅವರು ಹೇಳಿದ್ದಾರೆ. ಆರಂಭದಲ್ಲಿ 20 ಕತ್ತೆಗಳೊಂದಿಗೆ ಫಾರ್ಮ್ ಆರಂಭಿಸಿದ್ದ ಅವರು ಅದಕ್ಕಾಗಿ 22 ಲಕ್ಷ ರೂ.ಗಳ ಬಂಡವಾಳ ಹೂಡಿಕೆ ಮಾಡಿದ್ದರು.
ಕಷ್ಟದ ಹಾದಿ
ಆದರೆ ಧೀರೇನ್ ಅವರ ಆರಂಭಿಕ ದಿನಗಳು ಸುಲಭದ್ದಾಗಿರಲಿಲ್ಲ. ಗುಜರಾತ್‌ನಲ್ಲಿ ಕತ್ತೆ ಹಾಲಿಗೆ ಹೆಚ್ಚಿನ ಬೇಡಿಕೆ ಇರಲಿಲ್ಲ. ಮೊದಲ 5 ತಿಂಗಳು ಯಾವುದೇ ಆದಾಯ ಬಂದಿರಲಿಲ್ಲ. ಬಳಿಕ ಅವರು ಕತ್ತೆ ಹಾಲಿಗೆ ಬೇಡಿಕೆ ಇರುವ ದಕ್ಷಿಣ ಭಾರತದ ಕಂಪೆನಿಗಳನ್ನು ಸಂಪರ್ಕಿಸಿದರು. ಈಗ ಅವರು ಕರ್ನಾಟಕ ಮತ್ತು ಕೇರಳದ ಗ್ರಾಹಕರಿಗೆ ಕತ್ತೆ ಹಾಲನ್ನು ಪೂರೈಸುತ್ತಿದ್ದಾರೆ. ಕೆಲವು ಸೌಂದರ್ಯ ವರ್ಧಕ ಕಂಪೆನಿಗಳು ತಮ್ಮ ಉತ್ಪನ್ನಗಳಲ್ಲಿ ಕತ್ತೆ ಹಾಲನ್ನು ಬಳಕೆ ಮಾಡುತ್ತಿವೆ. ಹೀಗಾಗಿ ಧೀರೇನ್ ಅವರ ಉದ್ಯಮ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದೆ.
ದುಬಾರಿ ದರ
ದರದ ಬಗ್ಗೆ ವಿವರಿಸುವ ಅವರು, ಕತ್ತೆ ಹಾಲಿಗೆ ಸದ್ಯ ಲೀಟರ್‌ಗೆ 5,000 ರೂ.ಯಿಂದ 7,000 ರೂ.ವರೆಗೆ ಇದೆ ಎಂದು ಹೇಳುತ್ತಾರೆ. ಹಾಲನ್ನು ಒಣಗಿಸಿ ಪುಡಿ ರೂಪದಲ್ಲಿಯೂ ಮಾರಾಟ ಮಾಡಲಾಗುತ್ತದೆ. ಇದರ ಬೆಲೆ ಕೆ.ಜಿ.ಗೆ ಸುಮಾರು ಒಂದು ಲಕ್ಷ ರೂ.ವರೆಗೆ ಇದೆ. ಸದ್ಯ ಅವರ ಫಾರ್ಮ್‌ನಲ್ಲಿ 42 ಕತ್ತೆಗಳಿವೆ. ಇದುವರೆಗೆ ಸುಮಾರು 38 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ. ಇದಕ್ಕಾಗಿ ರಾಜ್ಯ ಸರ್ಕಾರದ ಯಾವುದೇ ನೆರವು ಪಡೆದುಕೊಂಡಿಲ್ಲ ಎಂದು ಅವರು ತಿಳಿಸಿದ್ದಾರೆ.
ಕತ್ತೆ ಹಾಲಿನ ಪ್ರಯೋಜನ
ಕತ್ತೆ ಹಾಲು ಚರ್ಮ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಪ್ರಯೋಜನವನ್ನು ನೀಡುತ್ತದೆ. ಹಸು, ಮೇಕೆ, ಕುರಿ, ಎಮ್ಮೆ ಮತ್ತು ಒಂಟೆಗಳ ಹಾಲಿಗೆ ಹೋಲಿಸಿದರೆ ಕತ್ತೆ ಹಾಲು ಮಾನವನ ಎದೆ ಹಾಲನ್ನು ಹೋಲುತ್ತದೆ ಎನ್ನುವುದು ಹಲವು ಅಧ್ಯಯನಗಳ ಮೂಲಕ ಸಾಬೀತಾಗಿದೆ. ಇದರಲ್ಲಿ ವಿಟಮಿನ್‌ಗಳು, ಖನಿಜ ಮತ್ತು ಪ್ರಮುಖ ಕೊಬ್ಬಿನಾಮ್ಲಗಳಿವೆ. ಜತೆಗೆ ಕ್ಯಾಲ್ಸಿಯಂ, ರಂಜಕ ಮತ್ತು ಪೊಟ್ಯಾಸಿಯಮ್ ಅನ್ನು ಹೊಂದಿದೆ. ಆದರೆ ಕತ್ತೆ ಹಾಲು ವಿರಳವಾಗಿರುವುದರಿಂದ ದುಬಾರಿಯಾಗಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಪ್ರಾಚೀನ ಕಾಲದಲ್ಲೂ ಇತ್ತು ಬಳಕೆ
ಪ್ರಾಚೀನ ಕಾಲದಿಂದಲೇ ಕತ್ತೆ ಹಾಲನ್ನು ವ್ಯಾಪಕವಾಗಿ ಬಳಸಲಾಗುತ್ತಿತ್ತು. ಈಜಿಪ್ಟಿನ ರಾಣಿ ಕ್ಲಿಯೋಪಾತ್ರಾ ಕತ್ತೆ ಹಾಲಿನಲ್ಲಿ ಸ್ನಾನ ಮಾಡುತ್ತಿದ್ದಳು ಎಂದು ಕೆಲವು ದಾಖಲೆಗಳು ಹೇಳುತ್ತವೆ. ವೈದ್ಯಶಾಸ್ತ್ರದ ಪಿತಾಮಹ, ಗ್ರೀಕ್ ವೈದ್ಯ ಹಿಪ್ಪೊಕ್ರೇಟ್ಸ್ ಯಕೃತ್ತಿನ ತೊಂದರೆಗಳು, ಮೂಗಿನ ರಕ್ತಸ್ರಾವ, ವಿಷ, ಸಾಂಕ್ರಾಮಿಕ ರೋಗಗಳು ಮತ್ತು ಜ್ವರಗಳಿಗೆ ಕತ್ತೆ ಹಾಲು ಉತ್ತಮ ಔಷಧ ಎಂದು ಹೇಳಿದ್ದಾನೆ ಎಂದು ಇತಿಹಾಸದ ತಿಳಿಸುತ್ತದೆ.
ಇದನ್ನೂ ಓದಿ: ಮೋದಿ ಇರುವ ಸಿರಿಧಾನ್ಯಗಳ ಹಾಡು ಗ್ರ್ಯಾಮಿ ಅವಾರ್ಡ್‌ಗೆ ನಾಮಿನೇಟ್!
ಅಮೆರಿಕದ ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ವರದಿಯ ಪ್ರಕಾರ, ಹಸುವಿನ ಹಾಲಿಗೆ ಹೋಲಿಸಿದರೆ ಕತ್ತೆ ಹಾಲಿನ ಸಂಯೋಜನೆಯು ಮಾನವ ಹಾಲನ್ನು ಹೆಚ್ಚು ಹೋಲುತ್ತದೆ. ಇದು ಶಿಶುಗಳಿಗೆ, ವಿಶೇಷವಾಗಿ ಹಸುವಿನ ಹಾಲಿನ ಅಲರ್ಜಿ ಹೊಂದಿರುವವರಿಗೆ ಉತ್ತಮ ಆಯ್ಕೆ. ಒಟ್ಟಿನಲ್ಲಿ ಇನ್ನು ಮುಂದೆ ಕತ್ತೆ ಎಂದು ಬೈಯ್ಯುವ ಮುನ್ನ ಎಚ್ಚರಿಕೆ ವಹಿಸಿ.