ಭಾರತದ ರಾಷ್ಟ್ರಪತಿಯಾದ ಮೊದಲ ಬುಡಕಟ್ಟು ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರವಾಗುವತ್ತ ಮೊದಲ ಹೆಜ್ಜೆ ಇಟ್ಟಿದ್ದಾರೆ ದ್ರೌಪದಿ ಮುರ್ಮು ಅವರು. ಇವರು ಎನ್‌ಡಿಎ ಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ರಾಷ್ಟ್ರಪತಿ ಅಭ್ಯರ್ಥಿ.
1958ರಲ್ಲಿ ಜನಿಸಿದ ಮುರ್ಮು ಅವರಿಗೆ ಈಗ 64 ವರ್ಷ. ಒಡಿಶಾದ ಮಯೂರ್‌ಭಂಜ್ ಎಂಬಲ್ಲಿನ ಬುಡಕಟ್ಟು ಸಮುದಾಯ ಒಂದರಲ್ಲಿ ಜನನ. ಬಿಎ ವರೆಗೂ ಶಿಕ್ಷಣ ಪಡೆದಿದ್ದು, ರಾಜಕಾರಣ ಸೇರುವ ಮುನ್ನ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. 1997ರಲ್ಲಿ ಬಿಜೆಪಿಗೆ ಸೇರ್ಪಡೆಯಾದರು.
1997ರಲ್ಲಿ ರಾಯ್‌ರಂಗ್‌ಪುರದಲ್ಲಿ ಕೌನ್ಸಿಲರ್ ಆಗಿ ಆಯ್ಕೆಯಾದರು. 2000ದಲ್ಲಿ ಇದೇ ಕ್ಷೇತ್ರದ ಶಾಸಕಿಯಾಗಿ ಆಯ್ಕೆಯಾದರು. ನವೀನ್ ಕುಮಾರ್ ಪಾಟ್ನಾಯಿಕ್ ಅವರ ಸಚಿವ ಸಂಪುಟದಲ್ಲಿ ಸಾರಿಗೆ, ವಾಣಿಜ್ಯ, ಮೀನುಗಾರಿಕೆ ಸಚಿವರಾಗಿ ಕಾರ್ಯ ನಿರ್ವಹಿಸಿದರು. 2004ರಲ್ಲಿ ಮತ್ತೆ ಶಾಸಕಿಯಾಗಿ ಆರಿಸಿ ಬಂದರು. 2006ರಲ್ಲಿ ಬಿಜೆಪಿ ಪರಿಶಿಷ್ಟ ಪಂಗಡ ಮೋರ್ಛಾದ ಅಧ್ಯಕ್ಷೆಯಾದರು.
2015ರಲ್ಲಿ ಮುರ್ಮು ಅವರನ್ನು ಜಾರ್ಖಂಡ್‌ನ ರಾಜ್ಯಪಾಲರನ್ನಾಗಿ ಆಯ್ಕೆ ಮಾಡಲಾಯಿತು. ನರೇಂದ್ರ ಮೋದಿ ಹಾಗೂ ಅಟಲ್ ಬಿಹಾರಿ ವಾಜಪೇಯಿ ಅವರು ಇವರ ನೆಚ್ಚಿನ ರಾಜಕೀಯ ನಾಯಕರು.
ಶ್ಯಾಮ್‌ಚರಣ್ ಮುರ್ಮು ಎಂಬವರನ್ನು ಮದುವೆಯಾಗಿದ್ದು, ಪತಿ ಬದುಕಿಲ್ಲ. ಇತಿಶ್ರೀ ಮುರ್ಮು ಎಂಬ ಮಗಳಿದ್ದಾರೆ. ಇನ್ನಿಬ್ಬರು ಗಂಡುಮಕ್ಕಳು ಮೃತಪಟ್ಟಿದ್ದಾರೆ. ಇವರ ಹೆಸರು ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಕಳೆದ ಎರಡು ಸರದಿಯಲ್ಲೂ ಕೇಳಿಬಂದಿತ್ತು. ಈ ಬಾರಿ ಈಶಾನ್ಯ ಭಾರತದ ಹಿನ್ನೆಲೆ, ಬುಡಕಟ್ಟು ಹಾಗೂ ಮಹಿಳಾ ಹಿನ್ನೆಲೆ- ಇವೆಲ್ಲವೂ ಮುರ್ಮು ಅವರಿಗೆ ಪೂರಕವಾಗಿ ಒದಗಿಬರಲಿವೆ.