Site icon Vistara News

Droupadi Murmu: ನೀಟ್‌ ಅಕ್ರಮ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಎಂದ ರಾಷ್ಟ್ರಪತಿ ದ್ರೌಪದಿ ಮುರ್ಮು

Droupadi Murmu

Droupadi Murmu

ನವದೆಹಲಿ: 18ನೇ ಲೋಕಸಭೆಯ ಮೊದಲ ಅಧಿವೇಶನ (Parliament Sessions)ದ ನಾಲ್ಕನೇ ದಿನವಾದ ಇಂದು (ಜೂನ್‌ 27) ಲೋಕಸಭೆ ಮತ್ತು ರಾಜ್ಯಸಭೆಗಳ ಜಂಟಿ ಸದನವನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಮಾತನಾಡಿದ್ದಾರೆ. ಈ ವೇಳೆ ಅವರು ಪ್ರಶ್ನೆ ಪತ್ರಿಕೆ ಸೋರಿಕೆ, ಗ್ರೆಸ್‌ ಮಾರ್ಕ್‌ ನೀಡುವ ಮೂಲಕ ವಿವಾದ ಎಬ್ಬಿಸಿದ ನೀಟ್‌ (NEET) ಪರೀಕ್ಷೆ ಬಗ್ಗೆ ಪ್ರಸ್ತಾವಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

“ನೀಟ್‌ ಪರೀಕ್ಷೆಯಲ್ಲಿ ನಡೆದ ಅಕ್ರಮಗಳು ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪರೀಕ್ಷಾ ಪ್ರಕ್ರಿಯೆಯನ್ನು ಸುಧಾರಿಸುವತ್ತ ಸರ್ಕಾರದ ಗಮನ ಹರಿಸಲಿದೆ” ಎಂದು ರಾಷ್ಟ್ರಪತಿ ತಿಳಿಸಿದ್ದಾರೆ. ʼʼಪ್ರಶ್ನೆ ಪತ್ರಿಕೆ ಸೋರಿಕೆ ಹಲವು ರಾಜ್ಯಗಳಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಈ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡದೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದುʼʼ ಎಂದು ಹೇಳಿದ್ದಾರೆ.

“ಸರ್ಕಾರಿ ನೇಮಕಾತಿಗಳು ಮತ್ತು ಪರೀಕ್ಷೆಗಳಲ್ಲಿ ಪಾವಿತ್ರ್ಯತೆ, ಪಾರದರ್ಶಕತೆ ಅತ್ಯಗತ್ಯ. ನ್ಯಾಯಯುತ ತನಿಖೆ ನಡೆಸಲು ಮತ್ತು ಇತ್ತೀಚಿನ ಪ್ರಶ್ನೆ ಪತ್ರಿಕೆ ಸೋರಿಕೆಯ ಘಟನೆಗಳಲ್ಲಿ ತಪ್ಪಿತಸ್ಥರಿಗೆ ಅತ್ಯಂತ ಕಠಿಣ ಶಿಕ್ಷೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಬದ್ಧವಾಗಿದೆ” ಎಂದು ಅವರು ಒತ್ತಿ ಹೇಳಿದ್ದಾರೆ.

ಖಾರಿಫ್ ಬೆಳೆಗಳ ಬೆಂಬಲ ಬೆಲೆ ಹೆಚ್ಚಳ

ಇತ್ತೀಚೆಗೆ ಕೇಂದ್ರ ಸರ್ಕಾರ ಖಾರಿಫ್ ಬೆಳೆಗಳ ಬೆಂಬಲ ಬೆಲೆ ಹೆಚ್ಚಿಸಿರುವ ಬಗ್ಗೆ ಪ್ರಸ್ತಾವಿಸಿದ ದ್ರೌಪದಿ ಮುರ್ಮು ಅವರು, ʼʼಪ್ರಸ್ತುತ ದಿನಗಳಲ್ಲಿ ಸಾವಯವ ಉತ್ಪನ್ನಗಳಿಗೆ ಬೇಡಿಕೆ ವೃದ್ಧಿಸುತ್ತಿದೆ. ಈ ಬೇಡಿಕೆಯನ್ನು ಪೂರೈಸಲು ಭಾರತೀಯ ರೈತರು ಅಪಾರ ಸಾಮರ್ಥ್ಯವನ್ನು ಹೊಂದಿದ್ದಾರೆ. ಸರ್ಕಾರ ಖಾರಿಫ್ ಬೆಳೆಗಳ ಬೆಂಬಲ ಬೆಲೆಯನ್ನೂ ಹೆಚ್ಚಿಸಿದೆ. ನಾವು ಹೆಚ್ಚು ಹೆಚ್ಚು ಸ್ವಾವಲಂಬಿಗಳಾಗಬೇಕು ಎಂಬ ಕಲ್ಪನೆಯನ್ನು ಇಟ್ಟುಕೊಂಡು ನೀತಿಯನ್ನು ರೂಪಿಸಲಾಗಿದೆʼʼ ಎಂದು ಹೇಳಿದ್ದಾರೆ.

ಭಾರತವು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ ಮತ್ತು ಆರ್ಥಿಕತೆಯ ಗಾತ್ರದ ದೃಷ್ಟಿಯಿಂದ 2014ರ 11ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಏರಿದೆ ಎಂದ ಅವರು ʼʼಭಾರತವನ್ನು ಮೂರನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡುವ ಗುರಿಯತ್ತ ಸರ್ಕಾರ ಈಗ ಗಮನ ಹರಿಸಿದೆ. ಉತ್ಪಾದನೆ, ಸೇವೆ ಮತ್ತು ಕೃಷಿ ಈ ಮೂರೂ ವಿಭಾಗಗಳಿಗೆ ಸರ್ಕಾರ ಸಮಾನ ಆದ್ಯತೆ ನೀಡುತ್ತಿದೆ. ಭಾರತವು ಪ್ರತಿಯೊಂದು ಕ್ಷೇತ್ರದಲ್ಲೂ ತ್ವರಿತಗತಿಯಲ್ಲಿ ಆತ್ಮನಿರ್ಭರವಾಗುತ್ತಿದೆʼʼ ಎಂದು ನುಡಿದಿದ್ದಾರೆ.

ಸಂಸತ್ತು ಸುಗಮವಾಗಿ ನಡೆಯುವ ಅಗತ್ಯವನ್ನು ಒತ್ತಿ ಹೇಳಿದ ಅವರು, “ಸಂಸತ್ತು ತನ್ನ ವ್ಯವಹಾರವನ್ನು ಸುಗಮವಾಗಿ ನಡೆಸಿದಾಗ, ಇಲ್ಲಿ ಆರೋಗ್ಯಕರ ಚರ್ಚೆಗಳು ನಡೆದಾಗ, ದೂರಗಾಮಿ ನಿರ್ಧಾರಗಳನ್ನು ತೆಗೆದುಕೊಂಡಾಗ, ಜನರು ಸರ್ಕಾರದ ಮೇಲೆ ಮಾತ್ರವಲ್ಲದೆ ಇಡೀ ವ್ಯವಸ್ಥೆಯ ಮೇಲೆ ವಿಶ್ವಾಸವನ್ನು ಇಡುತ್ತಾರೆ. ಆದ್ದರಿಂದ ಪ್ರತಿಯೊಬ್ಬರೂ ಸಂಸತ್ತಿನ ಪ್ರತಿ ಕ್ಷಣವನ್ನು ಸಂಪೂರ್ಣವಾಗಿ ಬಳಸಿಕೊಳ್ಳುತ್ತಾರೆ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ಆದ್ಯತೆ ನೀಡುತ್ತಾರೆ ಎನ್ನುವ ವಿಶ್ವಾಸವಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Droupadi Murmu: ತುರ್ತು ಪರಿಸ್ಥಿತಿ ಸಂವಿಧಾನದ ಮೇಲೆ ನಡೆದಿರುವ ಅತಿದೊಡ್ಡ ದಾಳಿ; ದ್ರೌಪದಿ ಮುರ್ಮು

Exit mobile version