ಟೆಹ್ರಾನ್: ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಭಾನುವಾರ (ಮೇ 19) ಅಜರ್‌ಬೈಜಾನ್‌ನ (Azerbaijan) ಗುಡ್ಡಗಾಡು ಪ್ರದೇಶದಲ್ಲಿ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟಿದ್ದಾರೆ. ಹಂಗಾಮಿ ಅಧ್ಯಕ್ಷರನ್ನಾಗಿ ಮೊಹಮ್ಮದ್ ಮೊಖ್‌ಬೈರ್ (Mohammad Mokhber) ಅವರನ್ನು ನೇಮಿಸಲಾಗಿದೆ. ಇಬ್ರಾಹಿಂ ರೈಸಿ (Ebrahim Raisi) ನಿಧನದ ಹಿನ್ನೆಲೆಯಲ್ಲಿ ಇರಾನ್‌ನಲ್ಲಿ 5 ದಿನ ಶೋಕಾಚರಣೆ ಘೋಷಿಸಲಾಗಿದೆ. ಭಾರತದಲ್ಲೂ ಒಂದು ದಿನ ಶೋಕಾರಣೆ ಘೋಷಿಸಲಾಗಿದೆ. ಇಬ್ರಾಹಿಂ ರೈಸಿ ನಿಧನದ ಬೆನ್ನಲ್ಲೇ, ಜಾಗತಿಕ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗಿದೆ. ಹೌದು, ಇರಾನ್ ಅಧ್ಯಕ್ಷರ ನಿಧನದ ಹಿನ್ನೆಲೆಯಲ್ಲಿ ಜಾಗತಿಕವಾಗಿ ಬಂಗಾರದ ಬೆಲೆ ಜಾಸ್ತಿಯಾಗಿದೆ. ಕೆಲವೇ ದಿನಗಳಲ್ಲಿ ತೈಲ ಹಾಗೂ ಷೇರು ಮಾರುಕಟ್ಟೆ ಮೇಲೆಯೂ ಇದರ ಪರಿಣಾಮ ಆಗಲಿದೆ ಎಂದು ಹೇಳಲಾಗುತ್ತಿದೆ. ಇದು ಭಾರತದ ಮೇಲೂ ಪರಿಣಾಮ ಬೀರಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಚಿನ್ನದ ಬೆಲೆ ಶೇ.1ರಷ್ಟು ಏರಿಕೆ
ಇಬ್ರಾಹಿಂ ರೈಸಿ ನಿಧನದ ಬೆನ್ನಲ್ಲೇ ಚಿನ್ನದ ಬೆಲೆಯು ಶೇ.1ರಷ್ಟು ಏರಿಕೆಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಒಂದು ಔನ್ಸ್‌ಗೆ (Ounce) (ಒಂದು ಔನ್ಸ್ ಎಂದರೆ 28.3 ಗ್ರಾಂ) 2,438.44 ಡಾಲರ್ ಆಗಿದೆ. ಬೆಳ್ಳಿಯ ಬೆಲೆಯೂ ಕಳೆದ 11 ವರ್ಷದಲ್ಲೇ ಗರಿಷ್ಠ ಮಟ್ಟಕ್ಕೆ ತಲುಪಿದೆ. ಜಾಗತಿಕವಾಗಿ ಚಿನ್ನದ ಮಾರುಕಟ್ಟೆಯಲ್ಲಿ ಬೆಲೆ ಜಾಸ್ತಿಯಾದರೆ, ಖಂಡಿತವಾಗಿಯೂ ಭಾರತದಲ್ಲಿ ಚಿನ್ನದ ಬೆಲೆಯೇರಿಕೆ ಆಗಲಿದೆ. ಈಗಾಗಲೇ ಭಾರತದಲ್ಲಿ ಚಿನ್ನದ ಬೆಲೆಯು ಗಗನಕ್ಕೇರಿದ್ದು, ಈಗ ಮತ್ತಷ್ಟು ಏರಿಕೆಯಾಗುವ ಭೀತಿ ಉಂಟಾಗಿದೆ.
ತೈಲ ಮಾರುಕಟ್ಟೆ ಗತಿ ಏನು?
ಇಬ್ರಾಹಿಂ ರೈಸಿ ಅವರ ನಿಧನದ ಹಿನ್ನೆಲೆಯಲ್ಲಿ ಜಾಗತಿಕ ತೈಲ ಮಾರುಕಟ್ಟೆಯಲ್ಲಂತೂ ಹೆಚ್ಚಿನ ಆತಂಕ ಎದುರಾಗಿದೆ. ಜಾಗತಿಕ ರಾಜಕೀಯ ಹಾಗೂ ಹಣಕಾಸು ಸ್ಥಿತಿಯ ಮೇಲೆ ಇಬ್ರಾಹಿಂ ರೈಸಿ ಸಾವು ಪರಿಣಾಮ ಬೀರಿದೆ. ಇಬ್ರಾಹಿಂ ರೈಸಿ ನಿಧನದಿಂದಾಗಿ ಪ್ರಮುಖ ತೈಲೋತ್ಪಾದಿತ ದೇಶಗಳ ರಾಜಕೀಯ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತಿದೆ. ಸೌದಿ ಅರೇಬಿಯಾ ದೊರೆಯು ಜಪಾನ್ ಪ್ರವಾಸವನ್ನು ರದ್ದುಗೊಳಿಸಿದ್ದಾರೆ. ಇರಾನ್‌ನಲ್ಲಿಯೂ ಅಧ್ಯಕ್ಷರ ಬದಲಾವಣೆಯಿಂದಾಗಿ ತೈಲದ ಉತ್ಪಾದನೆ ಕುಸಿಯುವ ಸಾಧ್ಯತೆ ಇದೆ.
ಹೀಗೆ, ತೈಲ ಉತ್ಪಾದಿಸುವ ದೇಶಗಳಲ್ಲಿ ರಾಜಕೀಯ ಸ್ಥಿತ್ಯಂತರಗಳ ಬದಲಾವಣೆಯಿಂದಾಗಿ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತೈಲದ ಬೆಲೆಯು ಏರಿಕೆಯಾಗಲಿದೆ. ಇನ್ನು ಉತ್ಪಾದನೆ ಕಡಿಮೆಯಾಗಿ, ಬೇಡಿಕೆ ಜಾಸ್ತಿಯಾದರೆ ಕಚ್ಚಾತೈಲದ ಬೆಲೆಯು ಗಗನಕ್ಕೇರಲಿದೆ. ಇದರಿಂದ ಸಹಜವಾಗಿಯೇ ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯು ಇನ್ನಷ್ಟು ಏರಿಕೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಚಿನ್ನ, ಇಂಧನದ ಜತೆಗೆ ಷೇರು ಮಾರುಕಟ್ಟೆ ಮೇಲೂ ಪರಿಣಾಮ ಬೀರಲಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: Ebrahim Raisi: ಹೆಲಿಕಾಪ್ಟರ್ ದುರಂತಕ್ಕೂ ಮುಂಚಿನ ಇಬ್ರಾಹಿಂ ರೈಸಿ ವಿಡಿಯೋ ವೈರಲ್