Site icon Vistara News

ED Officer Arrest: ಲಂಚ ಸ್ವೀಕರಿಸಿದ ಆರೋಪದಲ್ಲಿ ತಮಿಳುನಾಡಿನಲ್ಲಿ ಇಡಿ ಅಧಿಕಾರಿ ಬಂಧನ

ED officer arrest

ಚೆನ್ನೈ: ತಮಿಳುನಾಡು ಸರ್ಕಾರ ಹಾಗೂ ಕೇಂದ್ರ ಸರ್ಕಾರದ ನಡುವಿನ ಪ್ರಚ್ಛನ್ನ ಸಮರ ಮುಂದುವರಿದಿದ್ದು, ಇಡಿ (ಜಾರಿ ನಿರ್ದೇಶನಾಲಯ- Enforcement directorate) ಅಧಿಕಾರಿಯನ್ನು ತಮಿಳುನಾಡು ಪೊಲೀಸರು (ED Officer Arrest) ಬಂಧಿಸಿದ್ದಾರೆ.

ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿ ಅಂಕಿತ್ ತಿವಾರಿ ಅವರನ್ನು ಬಂಧಿಸಿದ ನಂತರ ತಮಿಳುನಾಡು ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯದ (ಡಿವಿಎಸಿ) ಅಧಿಕಾರಿಗಳು ಶುಕ್ರವಾರ ರಾತ್ರಿ ಮಧುರೈನಲ್ಲಿರುವ ಜಾರಿ ನಿರ್ದೇಶನಾಲಯದ ಉಪ ವಲಯ ಕಚೇರಿಯಲ್ಲಿ ಶೋಧ ಮುಂದುವರಿಸಿದ್ದಾರೆ. ಅಂಕಿತ್ ತಿವಾರಿ ಶುಕ್ರವಾರ ದಿಂಡುಗಲ್ ಜಿಲ್ಲೆಯಲ್ಲಿ ವೈದ್ಯರೊಬ್ಬರಿಂದ ₹20 ಲಕ್ಷ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಭಾರತೀಯ ಜನತಾ ಪಕ್ಷದ ನೇತೃತ್ವದ ಕೇಂದ್ರ ಸರ್ಕಾರವು 2024ರ ಲೋಕಸಭೆ ಚುನಾವಣೆಗೆ ಮುನ್ನ ತನ್ನ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳಿಗೆ “ಕಿರುಕುಳ” ನೀಡಲು ಇಡಿ ಮತ್ತು ಆದಾಯ ತೆರಿಗೆ ಇಲಾಖೆಯನ್ನು ಬಳಸುತ್ತಿದೆ ಎಂದು ತಮಿಳುನಾಡು ಸರ್ಕಾರ ಆರೋಪಿಸುತ್ತಿರುವ ನಡುವೆಯೇ ಅಂಕಿತ್ ತಿವಾರಿ ಬಂಧನವಾಗಿದೆ.

ಡಿಎವಿಸಿ ಅಧಿಕಾರಿಗಳ ಪ್ರಕಾರ, ಅಂಕಿತ್ ತಿವಾರಿ ತನ್ನ ಇಡಿ ಅಧಿಕಾರಿಗಳ ತಂಡದೊಂದಿಗೆ ಜಾರಿ ನಿರ್ದೇಶನಾಲಯದಲ್ಲಿ ಪ್ರಕರಣ ದಾಖಲಿಸುವ ನೆಪ ನೀಡಿ ಹಲವಾರು ಜನರಿಗೆ ಬೆದರಿಕೆ ಹಾಕುತ್ತಿದ್ದರು ಮತ್ತು ಲಂಚ ಪಡೆಯುತ್ತಿದ್ದರು. ಅವರನ್ನು ದಿಂಡಿಗಲ್‌ನಲ್ಲಿ ವಶಕ್ಕೆ ಪಡೆದ ನಂತರ, ಡಿವಿಎಸಿ ಅಧಿಕಾರಿಗಳ ತಂಡ ಮಧುರೈನ ಉಪ ವಲಯ ಇಡಿ ಕಚೇರಿಯಲ್ಲಿ ವಿಚಾರಣೆ ನಡೆಸಿತು. ಇದಕ್ಕೂ ಮೊದಲು, ಮಧುರೈನಲ್ಲಿರುವ ಕೇಂದ್ರೀಯ ಸಂಸ್ಥೆಯ ಕಚೇರಿಗೆ ಡಿವಿಎಸಿ ಅಧಿಕಾರಿಗಳು ಆಗಮಿಸಿದಾಗ ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಸಿಬ್ಬಂದಿಯನ್ನು ಅಧಿಕಾರಿಗಳು ಇಡಿ ಕಚೇರಿಯೊಳಗೆ ಭದ್ರತಾ ಕ್ರಮವಾಗಿ ನಿಯೋಜಿಸಿದ್ದರು.

ಇಡಿ ಅಧಿಕಾರಿ ಅಂಕಿತ್ ತಿವಾರಿ ಯಾರು?

ಅಂಕಿತ್ ತಿವಾರಿ 2016 ಬ್ಯಾಚ್ ಅಧಿಕಾರಿ. ಈ ಹಿಂದೆ ಗುಜರಾತ್ ಮತ್ತು ಮಧ್ಯಪ್ರದೇಶದಲ್ಲಿ ಸೇವೆ ಸಲ್ಲಿಸಿದ್ದಾರೆ. DVAC ಚೆನ್ನೈ ಹೊರಡಿಸಿದ ಅಧಿಕೃತ ಪ್ರಕಟಣೆಯ ಪ್ರಕಾರ, ತಿವಾರಿ ಅವರು ಕೇಂದ್ರ ಸರ್ಕಾರದ ಮಧುರೈ ಜಾರಿ ಇಲಾಖೆ ಕಚೇರಿಯಲ್ಲಿ ಜಾರಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಕ್ಟೋಬರ್‌ನಲ್ಲಿ, ತಿವಾರಿ ಅವರು ದಿಂಡಿಗಲ್‌ನ ಸರ್ಕಾರಿ ವೈದ್ಯರನ್ನು ಸಂಪರ್ಕಿಸಿ ಅವರ ವಿರುದ್ಧ ದಾಖಲಾಗಿರುವ ವಿಜಿಲೆನ್ಸ್ ಪ್ರಕರಣವನ್ನು ವಿಚಾರಣೆಗೆ ಎತ್ತಿಕೊಳ್ಳಲಾಗುತ್ತಿದೆ ಎಂದಿದ್ದರು.

ತಿವಾರಿ ಅವರು, ಪ್ರಧಾನಿ ಕಚೇರಿಯಿಂದ ವಿಚಾರಣೆಗೆ ಸೂಚನೆ ಸ್ವೀಕರಿಸಲಾಗಿದೆ, ಅಕ್ಟೋಬರ್ 30ರಂದು ಮಧುರೈನಲ್ಲಿರುವ ಇಡಿ ಕಚೇರಿಗೆ ಹಾಜರಾಗುವಂತೆ ಸರ್ಕಾರಿ ವೈದ್ಯರನ್ನು ಕೇಳಿಕೊಂಡರು. ವೈದ್ಯರು ಮಧುರೈಗೆ ಹೋದಾಗ, ಪ್ರಕರಣದಲ್ಲಿ ಕಾನೂನು ಕ್ರಮವನ್ನು ತಪ್ಪಿಸಲು ₹3 ಕೋಟಿ ನೀಡುವಂತೆ ತಿವಾರಿ ಕೇಳಿದರು ಎಂದು ಡಿವಿಎಸಿ ಆರೋಪಿಸಿದೆ. ನಂತರ ಮೇಲಧಿಕಾರಿಗಳ ಜತೆ ಮಾತನಾಡಿ ಅವರ ನಿರ್ದೇಶನದಂತೆ ₹51 ಲಕ್ಷ ಲಂಚ ಪಡೆಯಲು ಒಪ್ಪಿಗೆ ಸೂಚಿಸಿದ್ದಾಗಿ ತಿಳಿಸಿದೆ.

ಗುರುವಾರ ದಿಂಡುಗಲ್ ಜಿಲ್ಲಾ ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ಘಟಕದಲ್ಲಿ ಸರ್ಕಾರಿ ವೈದ್ಯರು ದೂರು ದಾಖಲಿಸಿದ್ದಾರೆ. ಶುಕ್ರವಾರ, ಅಂಕಿತ್ ತಿವಾರಿ ದೂರುದಾರರಿಂದ ₹20 ಲಕ್ಷ ಲಂಚ ಪಡೆಯುತ್ತಿದ್ದಾಗ ಡಿವಿಎಸಿಯ ಅಧಿಕಾರಿಗಳಿಗೆ ಸಿಕ್ಕಿಬಿದ್ದರು. ಇತರ ಅಧಿಕಾರಿಗಳಿಗೆ ಬ್ಲ್ಯಾಕ್‌ಮೇಲ್ ಮಾಡಿದ್ದಾರೆಯೇ ಅಥವಾ ಬೆದರಿಕೆ ಹಾಕಿದ್ದಾರೆಯೇ ಮತ್ತು ಇಡಿ ಹೆಸರಿನಲ್ಲಿ ಹಣ ಸಂಗ್ರಹಿಸಿದ್ದಾರೆಯೇ ಎಂಬುದನ್ನು ಸ್ಪಷ್ಟಪಡಿಸಲು ತನಿಖೆ ನಡೆಸಲಾಗುತ್ತಿದೆ ಎಂದು ಡಿಎವಿಸಿ ಹೇಳಿದೆ.

ಇದನ್ನೂ ಓದಿ: Supreme Court: ಇಡಿ ಬಂಧಿಸಿದ ತಮಿಳುನಾಡು ಸಚಿವರಿಗೆ ವೈದ್ಯಕೀಯ ಜಾಮೀನು ನೀಡದ ಸುಪ್ರೀಂ ಕೋರ್ಟ್‌

Exit mobile version