Site icon Vistara News

ED Raid: ಹೀರೋ ಮೋಟೋಕಾರ್ಪ್‌ ಮಾಲಿಕನ ಆಸ್ತಿ ಮುಟ್ಟುಗೋಲು, ಇಡಿ ತನಿಖೆ

Pawan Munjal

ಹೊಸದಿಲ್ಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ (Prevention of Money Laundering Act) ಸಂಬಂಧಿಸಿ ಹೀರೋ ಮೋಟೋಕಾರ್ಪ್‌ನ ಅಧ್ಯಕ್ಷ (Hero MotoCorp chairman) ಪವನ್ ಮುಂಜಾಲ್ (Pawan Munjal) ಅವರ ₹24.95 ಕೋಟಿ ಮೌಲ್ಯದ ಮೂರು ಆಸ್ತಿಗಳನ್ನು ಜಾರಿ ನಿರ್ದೇಶನಾಲಯ (enforcement directorate) ಮುಟ್ಟುಗೋಲು (ED raid, ED seizure) ಹಾಕಿಕೊಂಡಿದೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ- 2002ರ ವಿವಿಧ ನಿಬಂಧನೆಗಳ ಅಡಿಯಲ್ಲಿ ಜಾರಿ ನಿರ್ದೇಶನಾಲಯ (ED) ಪವನ್‌ ಮುಂಜಾಲ್‌ ಅವರ ಸ್ವತ್ತುಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಮುಂಜಾಲ್ ಮತ್ತು ಇತರರ ವಿರುದ್ಧ ಭಾರತದಿಂದ ಅಕ್ರಮವಾಗಿ ವಿದೇಶಿ ವಿನಿಮಯ ಕರೆನ್ಸಿಯನ್ನು ವರ್ಗಾಯಿಸಿದ್ದಕ್ಕಾಗಿ ಕಸ್ಟಮ್ಸ್ ಆಕ್ಟ್- 1962ರ ಸೆಕ್ಷನ್ 135ರ ಅಡಿಯಲ್ಲಿ ಆದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಸಲ್ಲಿಸಿದ ಪ್ರಾಸಿಕ್ಯೂಷನ್ ದೂರಿನ ಆಧಾರದ ಮೇಲೆ ಇಡಿ ತನಿಖೆಯನ್ನು ಪ್ರಾರಂಭಿಸಿದೆ ಎಂದು ತನಿಖಾ ಸಂಸ್ಥೆ ತಿಳಿಸಿದೆ.

ಮುಂಜಾಲ್ ವಿರುದ್ಧ ವಿದೇಶಿ ಕರೆನ್ಸಿಗೆ ಸಂಬಂಧಿಸಿದ ಪ್ರಕ್ರಿಯೆಗಳಿಗೆ ದೆಹಲಿ ಹೈಕೋರ್ಟ್ ತಡೆಯಾಜ್ಞೆ ನೀಡಿದ ಒಂದು ದಿನದ ನಂತರ ಈ ಮುಟ್ಟುಗೋಲು ನಡೆದಿದೆ. ಮುಂದಿನ ವಿಚಾರಣೆಯ ದಿನಾಂಕದವರೆಗೆ ಇದಕ್ಕೆ ಸಂಬಂಧಿಸಿದ ಎಲ್ಲಾ ಪ್ರಕರಣಗಳಿಗೆ ತಡೆಯಾಜ್ಞೆ ಅನ್ವಯಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ. ಇದು 2018ರಷ್ಟು ಹಿಂದಿನ ಪ್ರಕರಣ. ಪವನ್ ಮುಂಜಾಲ್ ಅವರ ಆಪ್ತ ಸಹಾಯಕ ಅಮಿತ್ ಬಾಲಿ 81 ಲಕ್ಷ ರೂಪಾಯಿಗಳಷ್ಟು ಹಣವನ್ನು ವಿಮಾನ ನಿಲ್ದಾಣದಲ್ಲಿ ಸಾಗಿಸುತ್ತಿದ್ದಾಗ ಅವರನ್ನು ಬಂಧಿಸಲಾಗಿತ್ತು.

“ರೂ. 54 ಕೋಟಿಗೆ ಸಮಾನವಾದ ವಿದೇಶಿ ಕರೆನ್ಸಿಯನ್ನು ಅಕ್ರಮವಾಗಿ ಭಾರತದಿಂದ ಹೊರಕ್ಕೆ ಕೊಂಡೊಯ್ಯಲಾಗಿದೆ ಎಂದು ಪ್ರಾಸಿಕ್ಯೂಷನ್ ದೂರಿನಲ್ಲಿ ಹೇಳಿದೆ. ಮುಂಜಾಲ್ ಇತರ ವ್ಯಕ್ತಿಗಳ ಹೆಸರಿನಲ್ಲಿ ವಿದೇಶಿ ವಿನಿಮಯ/ವಿದೇಶಿ ಕರೆನ್ಸಿ ಪಡೆದಿದ್ದಾರೆ ಮತ್ತು ನಂತರ ವಿದೇಶದಲ್ಲಿ ಅವರ ವೈಯಕ್ತಿಕ ಖರ್ಚಿಗೆ ಬಳಸಿಕೊಂಡರು ಎಂದು ತನಿಖೆಯಿಂದ ತಿಳಿದುಬಂದಿದೆʼʼ ಎಂದು ಇಡಿ ಹೇಳಿದೆ.

“ವಿವಿಧ ಉದ್ಯೋಗಿಗಳ ಹೆಸರಿನಲ್ಲಿ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಯಿಂದ ಅಧಿಕೃತ ವಿತರಕರಿಂದ ವಿದೇಶಿ ಕರೆನ್ಸಿಯನ್ನು ಪಡೆಯಲಾಗಿದೆ ಮತ್ತು ನಂತರ ಪವನ್ ಕಾಂತ್ ಮುಂಜಾಲ್ ಅವರ ವ್ಯವಸ್ಥಾಪಕರಿಗೆ ಹಸ್ತಾಂತರಿಸಲಾಗಿದೆ. ವ್ಯವಸ್ಥಾಪಕರು ಪವನ್ ಕಾಂತ್ ಮುಂಜಾಲ್ ಅವರ ವೈಯಕ್ತಿಕ/ವ್ಯಾಪಾರ ಪ್ರವಾಸಗಳ ಸಮಯದಲ್ಲಿ ಅವರ ವೈಯಕ್ತಿಕ ಖರ್ಚಿಗಾಗಿ ಆ ವಿದೇಶಿ ಕರೆನ್ಸಿಯನ್ನು ನಗದು/ಕಾರ್ಡ್‌ನಲ್ಲಿ ರಹಸ್ಯವಾಗಿ ಸಾಗಿಸಿದರು. ಉದಾರೀಕೃತ ರವಾನೆ ಯೋಜನೆಯಡಿಯಲ್ಲಿ ಪ್ರತಿ ವ್ಯಕ್ತಿಗೆ ವಾರ್ಷಿಕ USD 2.5 ಲಕ್ಷದವರೆಗೆ ವಿದೇಶಿ ವಿನಿಮಯದ ಮಿತಿ ಸಡಿಲಿಸಲಾಗಿದೆ. ಅದಕ್ಕಿಂತ ಹೆಚ್ಚಿನ ನಗದು ವ್ಯವಹಾರ ತನಿಖೆಗೆ ಅರ್ಹ” ಎಂದು ಕೇಂದ್ರೀಯ ತನಿಖಾ ಸಂಸ್ಥೆ ವಿವರಿಸಿದೆ.

ತೆರಿಗೆ ವಂಚನೆ ತನಿಖೆಯ ಭಾಗವಾಗಿ ಕಳೆದ ವರ್ಷ ಮಾರ್ಚ್‌ನಲ್ಲಿ ಆದಾಯ ತೆರಿಗೆ ಇಲಾಖೆ ಮುಂಜಾಲ್ ಮತ್ತು ಹೀರೋ ಮೋಟಾರ್‌ಕಾರ್ಪ್ ಆಸ್ತಿಗಳ ಮೇಲೆ ದಾಳಿ ನಡೆಸಿತ್ತು. ಐಟಿ ಇಲಾಖೆಯ ಆಡಳಿತಾತ್ಮಕ ಪ್ರಾಧಿಕಾರವಾದ ನೇರ ತೆರಿಗೆಗಳ ಕೇಂದ್ರ ಮಂಡಳಿಯು 800 ಕೋಟಿ ರೂಪಾಯಿಗೂ ಹೆಚ್ಚು ಅಕ್ರಮ ವ್ಯವಹಾರಗಳು ಮತ್ತು ದೆಹಲಿಯಲ್ಲಿ ಭೂಮಿ ಖರೀದಿಸಲು ಬಳಸಿದ 60 ಕೋಟಿ ರೂಪಾಯಿ ಮೌಲ್ಯದ “ಲೆಕ್ಕರಹಿತ” ನಗದು ಮತ್ತು ಕೆಲವು ಅಕ್ರಮ ವಹಿವಾಟಿನ ದಾಖಲೆಗಳನ್ನು ಪತ್ತೆ ಮಾಡಿತ್ತು.

Hero MotoCorp ವಿಶ್ವದ ಅತಿ ಹೆಚ್ಚು ಮಾರಾಟವಾಗುವ ದ್ವಿಚಕ್ರ ವಾಹನ ತಯಾರಕ ಎಂಬ ಹೆಗ್ಗಳಿಕೆಯನ್ನು ಕಳೆದ 20 ವರ್ಷಗಳಿಂದ ಉಳಿಸಿಕೊಂಡು ಬಂದಿದೆ. ಕಂಪನಿಯು ಏಷ್ಯಾ, ಆಫ್ರಿಕಾ ಮತ್ತು ದಕ್ಷಿಣ ಮತ್ತು ಮಧ್ಯ ಅಮೆರಿಕದ 40 ದೇಶಗಳಲ್ಲಿ ಅಸ್ತಿತ್ವವನ್ನು ಹೊಂದಿದೆ.

ಇದನ್ನೂ ಓದಿ: Hero Motocorp : ಹೀರೊ ಮೊಟೊ ಕಂಪನಿಯ ಚೇರ್ಮನ್‌ ಮನೆಗೆ ಇ.ಡಿ ದಾಳಿ, ಕಾರಣವೇನು?

Exit mobile version