ಕೈರೋ: ಪ್ರಧಾನಿ ನರೇಂದ್ರ ಮೋದಿ ಅವರು ಯಾವ ದೇಶಕ್ಕೆ ತೆರಳಿದರೂ ಅದ್ಧೂರಿ ಸ್ವಾಗತ ದೊರೆಯುತ್ತದೆ. ಮೋದಿ ನಾಯಕತ್ವವನ್ನು ಆ ದೇಶದ ನಾಯಕರು ಮೆಚ್ಚುತ್ತಾರೆ. ಇದೇ ಕಾರಣಕ್ಕೆ, ಕೆಲವು ದಿನಗಳ ಹಿಂದಷ್ಟೇ ಮೋದಿ ಅವರು ಅಮೆರಿಕಕ್ಕೆ ತೆರಳಿದ್ದಾಗ ಅದ್ಭುತ ಆತಿಥ್ಯ ದೊರೆಯಿತು. ಈಗ ಈಜಿಪ್ಟ್ ಗ್ರ್ಯಾಂಡ್ ಮುಫ್ತಿ (ಈಜಿಪ್ಟ್ ಸರ್ಕಾರದ ಧಾರ್ಮಿಕ ಪ್ರತಿನಿಧಿ) ಶಾಕಿ ಇಬ್ರಾಹಿಂ ಅಬ್ದೆಲ್-ಕರೀಮ್ ಅಲ್ಲಂ (Shawki Ibrahim Abdel-Karim Allam) ಅವರು ಕೂಡ (Modi Egypt Visit) ಮೋದಿ ನಾಯಕತ್ವವನ್ನು ಬಣ್ಣಿಸಿದ್ದಾರೆ.
“ನರೇಂದ್ರ ಮೋದಿ ಅವರನ್ನು ಎರಡು ಬಾರಿ ಭೇಟಿ ಮಾಡಿದೆ. ಪ್ರತಿ ಬಾರಿ ಭೇಟಿಯಾದಾಗಲೂ ಮೋದಿ ಅವರಲ್ಲಿ ಅದ್ಭುತ ನಾಯಕತ್ವದ ಪ್ರತಿಬಿಂಬ ಕಾಣಿಸಿತು. ಮೋದಿ ಅವರು ಭಾರತದಲ್ಲಿ ಜಾಣ ನೀತಿಗಳ ಮೂಲಕ ದೇಶವನ್ನು ಅಭಿವೃದ್ಧಿಗೊಳಿಸುತ್ತಿದ್ದಾರೆ. ಭಾರತದಂತಹ ಬೃಹತ್ ರಾಷ್ಟ್ರಕ್ಕೆ ಮೋದಿ ಉತ್ತಮ ನಾಯಕರಾಗಿದ್ದಾರೆ. ಇದೇ ಕಾರಣಕ್ಕೆ ಭಾರತ ಅಭಿವೃದ್ಧಿಯತ್ತ ಸಾಗುತ್ತಿದೆ” ಎಂದು ಗ್ರ್ಯಾಂಡ್ ಮುಫ್ತಿ ವರ್ಣಿಸಿದ್ದಾರೆ.
ಗ್ರ್ಯಾಂಡ್ ಮುಫ್ತಿ ಭೇಟಿ ಕುರಿತು ಮೋದಿ ಟ್ವೀಟ್
Honoured to have met the Grand Mufti of Egypt, His Eminence Prof. Shawky Ibrahim Allam. Had enriching discussions on India-Egypt ties, notably cultural and people-to-people linkages. pic.twitter.com/GMx4FCx2E0
— Narendra Modi (@narendramodi) June 24, 2023
“ಮೋದಿ ಅವರು ಭಾರತದಲ್ಲಿ ಉತ್ತಮ ನೀತಿಗಳನ್ನು ಜಾರಿಗೆ ತಂದಿದ್ದಾರೆ. ಭಾರತವನ್ನು ಹಲವು ಸ್ತರಗಳಲ್ಲಿ ಅವರು ಅಭಿವೃದ್ಧಿಗೊಳಿಸುತ್ತಿದ್ದಾರೆ. ಈಜಿಪ್ಟ್‌ಗೂ ಭಾರತದ ಸಹಕಾರ, ನೆರವು ಉತ್ತಮವಾಗಿದೆ. ಮೋದಿ ಅವರು ಧಾರ್ಮಿಕ ಸಹಕಾರವನ್ನೂ ನೀಡುತ್ತಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಎರಡೂ ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧವು ಮತ್ತಷ್ಟು ವೃದ್ಧಿಯಾಗಲಿದೆ” ಎಂದು ಹೇಳಿದ್ದಾರೆ.
ಗ್ರ್ಯಾಂಡ್ ಮುಫ್ತಿ ಅವರನ್ನು ಭೇಟಿಯಾದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರೂ ಮಾಹಿತಿ ನೀಡಿದ್ದಾರೆ. “ಈಜಿಪ್ಟ್ ಗ್ರ್ಯಾಂಡ್ ಮುಫ್ತಿ ಶಾಕಿ ಇಬ್ರಾಹಿಂ ಅಬ್ದೆಲ್-ಕರೀಮ್ ಅಲ್ಲಂ ಅವರನ್ನು ಭೇಟಿಯಾಗಿದ್ದು ಸಂತಸವಾಯಿತು. ಭಾರತ ಹಾಗೂ ಈಜಿಪ್ಟ್ ಸಂಬಂಧ ವೃದ್ಧಿ, ದ್ವಿಪಕ್ಷೀಯ ಒಪ್ಪಂದಗಳು, ಸಾಂಸ್ಕೃತಿಕ ಸಹಕಾರ ಸೇರಿ ಹಲವು ಮಹತ್ವದ ವಿಚಾರಗಳ ಕುರಿತು ಚರ್ಚಿಸಲಾಯಿತು” ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Modi Egypt Visit: ಈಜಿಪ್ಟ್‌ನಲ್ಲಿ ಸಾವಿರ ವರ್ಷ ಇತಿಹಾಸವಿರುವ ಮಸೀದಿಗೆ ಮೋದಿ ಭೇಟಿ, ಸೌಹಾರ್ದ ಸಂದೇಶ ರವಾನೆ
ಎರಡು ದಿನಗಳ ಈಜಿಪ್ಟ್ ಪ್ರವಾಸದಲ್ಲಿರುವ ನರೇಂದ್ರ ಮೋದಿ ಅವರು ಭಾನುವಾರ ಕೈರೋದಲ್ಲಿರುವ ಐತಿಹಾಸಿಕ ಅಲ್-ಹಕೀಂ ಮಸೀದಿಗೂ ಭೇಟಿ ನೀಡಲಿದ್ದಾರೆ. ಈಗಾಗಲೇ ಅನಿವಾಸಿ ಭಾರತೀಯರು ಹಾಗೂ ಈಜಿಪ್ಟ್‌ನ ದಾವೂದಿ ಬೋಹ್ರಾ ಮುಸ್ಲಿಮರನ್ನು ಭೇಟಿ ಮಾಡಿದ್ದಾರೆ. ಹಾಗೆಯೇ, “ಮೋದಿ ಭಾರತದ ಹೀರೊ” ಎಂದು ಅನಿವಾಸಿ ಭಾರತೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.