ಹೊಸದಿಲ್ಲಿ: ಚುನಾವಣಾ ಬಾಂಡ್ (Electoral bonds – EB) ಯೋಜನೆಯು ʼಆಯ್ದ ದಾನಿಗಳ ಅನಾಮಧೇಯತೆʼಯನ್ನು ನೀಡುವ ಮೂಲಕ “ಮಾಹಿತಿ ರಂಧ್ರ”ವನ್ನು ಸೃಷ್ಟಿಸಿದೆ ಎಂದಿರುವ ಸುಪ್ರೀಂ ಕೋರ್ಟ್, ರಾಜಕೀಯ ಪಕ್ಷಗಳಿಗೆ ʼಸಮಬಲದ ಆಟದ ಮೈದಾನʼವನ್ನು ಒದಗಿಸುವಲ್ಲಿ ವಿಫಲವಾಗಿದೆ ಎಂದಿದೆ. ಬಾಂಡ್‌ಗಳು ರಾಜಕೀಯ ಪಕ್ಷಗಳಿಗೆ ಧನಸಹಾಯಕ್ಕಾಗಿ “ಕಾನೂನುಬದ್ಧ ಕಿಕ್‌ಬ್ಯಾಕ್” ಆಗಿದೆಯೇ ಎಂದು ಕೋರ್ಟ್ (Supreme court) ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಧನಂಜಯ ವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು, ಚುನಾವಣಾ ಬಾಂಡ್‌ಗಳ ಕುರಿತ ಅರ್ಜಿಗಳ ವಿಚಾರಣೆಯನ್ನು ನಡೆಸುತ್ತಿದೆ. ಈ ಯೋಜನೆಯನ್ನು ಸ್ಥಗಿತಗೊಳಿಸಿದರೆ ಅದು ನಗದು ರಾಜಕೀಯ ದೇಣಿಗೆಗಳ ಮತ್ತು ಕಪ್ಪುಹಣದ ಯುಗಕ್ಕೆ ತಳ್ಳುವುದು ಎಂದರ್ಥವಲ್ಲ. ಏಕೆಂದರೆ ಸರ್ಕಾರ ಕೂಡ ಇದರಿಂದ ಹೊರತಲ್ಲ. ಪಾರದರ್ಶಕ ಯೋಜನೆ ಅಥವಾ ಸಮಬಲದ ಆಟದ ಮೈದಾನವನ್ನು ಹೊಂದಿರುವ ಯೋಜನೆ ರೂಪಿಸಬೇಕಾಗುತ್ತದೆ ಎಂದು ಪೀಠ ಹೇಳಿದೆ.
ಇಬಿ ಯೋಜನೆಯ ಸಿಂಧುತ್ವವನ್ನು ಪ್ರಶ್ನಿಸುವ ಅರ್ಜಿಗಳನ್ನು ಒಟ್ಟಾಗಿ ವಿಚಾರಣೆ ನಡೆಸುತ್ತಿರುವ ಪೀಠ, ಸಾರ್ವಜನಿಕರು ಅಥವಾ ದಾನಿ ಕಂಪನಿಯ ಷೇರುದಾರರು ರಾಜಕೀಯ ಪಕ್ಷಗಳಿಗೆ ನೀಡಿದ ಕೊಡುಗೆಯ ವಿವರಗಳನ್ನು ಪಡೆಯುವುದನ್ನು ತಡೆಯುವ ಯೋಜನೆಯ ಗೌಪ್ಯತೆಯ ಷರತ್ತಿನ ಬಗ್ಗೆ ಸರ್ಕಾರವನ್ನು ಪ್ರಶ್ನಿಸಿತು.
2018ರಲ್ಲಿ ಪರಿಚಯಿಸಲಾದ ಇಬಿಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ನೀಡುತ್ತದೆ. ಕಾರ್ಪೊರೇಟ್ ಮತ್ತು ವಿದೇಶಿ ಸಂಸ್ಥೆಗಳು ಭಾರತೀಯ ಅಂಗಸಂಸ್ಥೆಗಳ ಮೂಲಕ 100% ತೆರಿಗೆ ವಿನಾಯಿತಿಯನ್ನು ಪಡೆಯುತ್ತವೆ. ದಾನಿಗಳ ಗುರುತನ್ನು ಬ್ಯಾಂಕ್ ಮತ್ತು ಸ್ವೀಕರಿಸುವ ರಾಜಕೀಯ ಪಕ್ಷಗಳು ಗೌಪ್ಯವಾಗಿ ಇಡುತ್ತವೆ. ಆದರೆ ಸಾರ್ವಜನಿಕ ವಲಯದ ಬ್ಯಾಂಕ್, ನ್ಯಾಯಾಲಯದ ಆದೇಶ ಅಥವಾ ಕಾನೂನು ಜಾರಿ ಏಜೆನ್ಸಿಗಳ ವಿನಂತಿಯಿದ್ದರೆ ವಿವರಗಳನ್ನು ಬಹಿರಂಗಪಡಿಸಬೇಕಾಗುತ್ತದೆ.
“ಯೋಜನೆಯ ಸಮಸ್ಯೆಯೆಂದರೆ ಅದು ಕೆಲವರಿಗೆ ಮಾತ್ರ ಅನಾಮಧೇಯತೆಯನ್ನು ಒದಗಿಸುತ್ತದೆ. ಇದು ಸಂಪೂರ್ಣ ಅನಾಮಧೇಯವಾಗಿಲ್ಲ. ಇದು ಎಸ್‌ಬಿಐ ಅಥವಾ ಕಾನೂನು ಜಾರಿ ಸಂಸ್ಥೆಗಳಲ್ಲಿ ಗೌಪ್ಯವಾಗಿಲ್ಲ. ಆದ್ದರಿಂದ, ರಾಜಕೀಯ ಪಕ್ಷಕ್ಕೆ ಹಣ ನೀಡಲು ಬಾಂಡ್‌ಗಳನ್ನು ತಾನೇ ಖರೀದಿಸುವ ಅಪಾಯವನ್ನು ದೊಡ್ಡ ದಾನಿ ಎಂದಿಗೂ ಮೈಮೇಲೆ ಎಳೆದುಕೊಳ್ಳುವುದಿಲ್ಲ. ಬದಲು ಹಲವಾರು ಜನರ ಮೂಲಕ ಸಣ್ಣ ಮೊತ್ತಗಳೊಂದಿಗೆ ದೇಣಿಗೆಯನ್ನು ವಿಂಗಡಿಸಿ ಅಧಿಕೃತ ಬ್ಯಾಂಕಿಂಗ್ ಚಾನೆಲ್ EB ಅನ್ನು ಖರೀದಿಸುತ್ತಾರೆ. ದೊಡ್ಡ ದಾನಿಯು ಎಸ್‌ಬಿಐ ಖಾತೆಯ ಪುಸ್ತಕಗಳಲ್ಲಿ ಎಂದಿಗೂ ಕಾಣಿಸಿಕೊಳ್ಳುವುದಿಲ್ಲ. ಇದು ಸೆಲೆಕ್ಟೆಡ್ ಅನಾಮಧೇಯತೆಯನ್ನು ಒದಗಿಸುವ ಕಾರಣ ಯೋಜನೆಯು ಸಮರ್ಥವಾಗಿದೆ” ಎಂದು ಪೀಠವು ಹೇಳಿದೆ.
ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿಆರ್ ಗವಾಯಿ, ಜೆಬಿ ಪರ್ದಿವಾಲಾ ಮತ್ತು ಮನೋಜ್ ಅವರನ್ನು ಪೀಠ ಒಳಗೊಂಡಿದೆ. ಕೇಂದ್ರದಲ್ಲಿ ಅಥವಾ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಪಕ್ಷಕ್ಕೆ ಹೆಚ್ಚಿನ ನಿಧಿ ಬರುತ್ತದೆ ಎಂದು ಪೀಠ ಗಮನಿಸಿದೆ.
“ನಾವು ಈಗ ಏನು ಮಾಡುತ್ತಿದ್ದೇವೆ ಎಂದರೆ ಚುನಾವಣಾ ಪ್ರಕ್ರಿಯೆಯಲ್ಲಿ ಬಿಳಿ ಹಣವನ್ನು ತರುವ ಪ್ರಯತ್ನದಲ್ಲಿ, ನಾವು ಸಂಪೂರ್ಣ ಮಾಹಿತಿ ರಂಧ್ರವನ್ನು ಒದಗಿಸುತ್ತಿದ್ದೇವೆ. ಅದು ಸಮಸ್ಯೆ. ಯೋಜನೆಯ ಉದ್ದೇಶ ಸಂಪೂರ್ಣವಾಗಿ ಶ್ಲಾಘನೀಯ. ಆದರೆ ನೀವು ಅದಕ್ಕನುಗುಣವಾದ ವಿಧಾನಗಳನ್ನು ಅಳವಡಿಸಿಕೊಂಡಿದ್ದೀರಾ ಅಥವಾ ವಿಧಾನಗಳು ಆರ್ಟಿಕಲ್ 14 (ಸಮಾನತೆಯ ಹಕ್ಕು) ಪರೀಕ್ಷೆಯನ್ನು ಪೂರೈಸುತ್ತದೆಯೇ ಎಂಬುದು ಪ್ರಶ್ನೆʼʼ ಎಂದಿರುವ ಪೀಠ, ಬುಧವಾರಕ್ಕೆ ಪ್ರಕರಣದ ವಿಚಾರಣೆಯನ್ನು ಮುಂದೂಡಿದೆ.
ಆದರೆ ಯೋಜನೆಯ ದುರುಪಯೋಗವು ಅದನ್ನು ರದ್ದುಗೊಳಿಸಲು ಕಾರಣವಾಗದು ಎಂದು ಸರ್ಕಾರದ ಪರ ವಾದಿಸಿದ ಸಾಲಿಟಿಸರ್ ಜನರಲ್ ತುಷಾರ್ ಮೆಹ್ತಾ ವಾದಿಸಿದರು. ಅವರು ಗೌಪ್ಯತೆಯ ಷರತ್ತನ್ನು EB ಯೋಜನೆಯ “ಹೃದಯ ಮತ್ತು ಆತ್ಮ” ಎಂದು ಕರೆದರು. ದಾನಿಗಳ ಗುರುತನ್ನು ರಕ್ಷಿಸುವುದು ನಗದು-ಆಧಾರಿತ ಆರ್ಥಿಕತೆಯನ್ನು ನಿಯಂತ್ರಿತ ಕಾನೂನು ಆರ್ಥಿಕತೆಗೆ ವರ್ಗಾಯಿಸಲು ಪ್ರೋತ್ಸಾಹಿಸುವುದು. ಜೊತೆಗೆ ದೇಣಿಗೆ ಪಡೆಯದ ಪಕ್ಷಗಳಿಂದ ದ್ವೇಷವನ್ನು ಎದುರಿಸುವುದು ತಪ್ಪಿಸಿಕೊಳ್ಳುತ್ತಾರೆ ಎಂದರು.
ಪ್ರಸ್ತುತ ಆಡಳಿತಾರೂಢ ಪಕ್ಷವು ಯೋಜನೆಯ ಫಲಾನುಭವಿಯಾಗಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ನಮಗೆ ಚಿಂತೆಯಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ. “ನಾವು ಸಾಂವಿಧಾನಿಕತೆಯ ಪ್ರಶ್ನೆಯನ್ನು ಪರೀಕ್ಷಿಸುತ್ತಿದ್ದೇವೆ. ಯೋಜನೆಯನ್ನು ಕನಿಷ್ಠ ಸುಧಾರಿಸಲು ಪ್ರಯತ್ನಿಸುತ್ತಿದ್ದೇವೆ” ಎಂದಿದೆ.
ಎಲ್ಲಾ ದೇಣಿಗೆಗಳನ್ನು ಸಂಬಂಧಪಟ್ಟ ಪಕ್ಷಗಳಿಗೆ ವಿತರಿಸಲು ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ಹಸ್ತಾಂತರಿಸುವ ಯೋಜನೆಯನ್ನು ಕೇಂದ್ರವು ಪರಿಗಣಿಸಬಹುದು ಎಂದು ಪೀಠವು ಸೂಚಿಸಿತು. “ನೀವು ನಿಜವಾಗಿಯೂ ಯೋಜನೆಯನ್ನು ಸಮಬಲದ ಆಟದ ಮೈದಾನದಲ್ಲಿಡಲು ಬಯಸಿದರೆ, ಈ ಎಲ್ಲಾ ದೇಣಿಗೆಗಳು ಭಾರತದ ಚುನಾವಣಾ ಆಯೋಗಕ್ಕೆ (election commission) ಹೋಗಬೇಕು ಮತ್ತು ಅದನ್ನು ವಿತರಿಸಲು ಅವಕಾಶ ಮಾಡಿಕೊಡಬೇಕು. ಆಗ ಯಾವುದೇ ದೇಣಿಗೆ ಬರುವುದಿಲ್ಲ ಎಂದು ನೀವು ಅರಿತುಕೊಳ್ಳುತ್ತೀರಿ” ಎಂದು ಪೀಠ ಮೆಹ್ತಾಗೆ ತಿಳಿಸಿತು. ಚುನಾವಣಾ ಆಯೋಗದ ಮೂಲಕ ದೇಣಿಗೆ ನೀಡಲು ಯಾರೂ ಮುಂದೆ ಬರಲಾರರು ಎಂದು ಮೆಹ್ತಾ ಒಪ್ಪಿಕೊಂಡರು.
ಅಕ್ಟೋಬರ್ 16ರಂದು, ನ್ಯಾಯಾಲಯವು EB ಯೋಜನೆಯ ವಿರುದ್ಧದ ಅರ್ಜಿಗಳನ್ನು ಐದು ನ್ಯಾಯಾಧೀಶರ ಸಂವಿಧಾನ ಪೀಠಕ್ಕೆ ವರ್ಗಾಯಿಸಿತು. ಅರ್ಜಿದಾರರಲ್ಲಿ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್), ಲಾಭರಹಿತ ಕಾಮನ್ ಕಾಸ್, ಕಾಂಗ್ರೆಸ್ ನಾಯಕ ಜಯ ಠಾಕೂರ್ ಮತ್ತು ಸಿಪಿಐ (ಎಂ) ಸೇರಿದ್ದಾರೆ. ಸೋಮವಾರ ವಾದ ಮಂಡಿಸಿದ ಅರ್ಜಿದಾರರು, ಇದು ರಾಜಕೀಯ ಪಕ್ಷಗಳಿಗೆ ಅನಿಯಮಿತ ಕಾರ್ಪೊರೇಟ್ ದೇಣಿಗೆಗಳಿಗೆ, ಭಾರತೀಯ ಮತ್ತು ವಿದೇಶಿ ಕಂಪನಿಗಳಿಂದ ಅನಾಮಧೇಯ ಹಣಕಾಸಿನ ಪ್ರವಾಹವನ್ನು ತೆರೆದಿದೆ ಎಂದು ವಾದಿಸಿದರು.
2018ರ ಇಬಿ ಯೋಜನೆಯಡಿ ಯಾವುದೇ ಎಸ್‌ಬಿಐ ಶಾಖೆಯಲ್ಲಿ ₹1,000, ₹10,000, ₹1 ಲಕ್ಷ, ₹10 ಲಕ್ಷ ಮತ್ತು ₹1 ಕೋಟಿಗಳ ಬಾಂಡ್‌ಗಳು ಖರೀದಿಗೆ ಲಭ್ಯವಿವೆ. ಕೆವೈಸಿ ಸಹಿತ ಖಾತೆಯ ಮೂಲಕ ಖರೀದಿಸಬಹುದು. ಒಬ್ಬ ವ್ಯಕ್ತಿ ಅಥವಾ ಕಂಪನಿ ಖರೀದಿಸಬಹುದಾದ ಚುನಾವಣಾ ಬಾಂಡ್‌ಗಳ ಸಂಖ್ಯೆಗೆ ಯಾವುದೇ ಮಿತಿಯಿಲ್ಲ.
ಇದನ್ನೂ ಓದಿ: Electoral Bonds: ಚುನಾವಣಾ ಬಾಂಡ್ ಮೂಲ ತಿಳಿಯುವ ಹಕ್ಕು ಜನರಿಗಿಲ್ಲ ಎಂದ ಕೇಂದ್ರ ಸರ್ಕಾರ