ನವದೆಹಲಿ: ಎಲಾನ್ ಮಸ್ಕ್ (Elon Musk) ಅವರು ಕಳೆದ ವರ್ಷ ಟ್ವಿಟರ್‌ಅನ್ನು (ಈಗ X) ಖರೀದಿಸಿದ ಬಳಿಕ ಹತ್ತಾರು ಬದಲಾವಣೆಗಳಿಗೆ ನಾಂದಿ ಹಾಡಿದ್ದಾರೆ. ಟ್ವಿಟರ್ ಲೋಗೋ, ಹೆಸರು ಬದಲಾವಣೆಯಿಂದ ಹಿಡಿದು ಹಲವು ಬದಲಾವಣೆ ಮಾಡಿರುವ ಎಲಾನ್ ಮಸ್ಕ್ ಈಗ ಪತ್ರಕರ್ತರಿಗೆ ಹೊಸ ಆಫರ್ ಘೋಷಿಸಿದ್ದಾರೆ. ಪತ್ರಕರ್ತರು (Journalists) ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಲೇಖನ ಬರೆಯುವ ಮೂಲಕ ಹಣ ಗಳಿಸಬಹುದು ಎಂದು ಎಲಾನ್ ಮಸ್ಕ್ ತಿಳಿಸಿದ್ದಾರೆ.
ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಎಲಾನ್ ಮಸ್ಕ್ ಮಾಹಿತಿ ಹಂಚಿಕೊಂಡಿದ್ದಾರೆ. “ನೀವೊಬ್ಬ ಪತ್ರಕರ್ತರಾಗಿದ್ದು, ಮುಕ್ತವಾಗಿ ಬರೆಯುವ ಹಾಗೂ ಅದರಿಂದ ಹಣ ಗಳಿಸುವ ಮನಸ್ಸಿದ್ದರೆ ನಿಮಗೊಂದು ಅವಕಾಶ ಇಲ್ಲಿದೆ. ನೇರವಾಗಿ ನಿಮ್ಮ ಲೇಖನಗಳನ್ನು ಎಕ್ಸ್‌ನಲ್ಲಿ ಪಬ್ಲಿಶ್ ಮಾಡುವ ಮೂಲಕ ಹಣ ಗಳಿಸಿರಿ” ಎಂದು ಎಲಾನ್ ಮಸ್ಕ್ ತಿಳಿಸಿದ್ದಾರೆ. ಆ ಮೂಲಕ ಪತ್ರಕರ್ತರ ಕಂಟೆಂಟ್‌ಗೂ ಹಣ ನೀಡುವುದಾಗಿ (ಮಾನಿಟೈಸೇಷನ್) ಮಸ್ಕ್ ಘೊಷಿಸಿದ್ದಾರೆ.
ಎಲಾನ್ ಮಸ್ಕ್ ಆಫರ್
ಇದಕ್ಕೂ ಮೊದಲು ಕೂಡ ಎಲಾನ್ ಮಸ್ಕ್ ಅವರು ಪತ್ರಕರ್ತರ ಕಂಟೆಂಟ್‌ಗಳಿಗೆ ಹಣ ನೀಡುವುದಾಗಿ ತಿಳಿಸಿದ್ದಾರೆ. ಪತ್ರಕರ್ತರು ಎಕ್ಸ್‌ನಲ್ಲಿ ಪಬ್ಲಿಶ್ ಮಾಡುವ ಲೇಖನಗಳನ್ನು ಓದುವವರಿಗೆ ಇಂತಿಷ್ಟು ಎಂದು ಶುಲ್ಕ ವಿಧಿಸಲಾಗುತ್ತದೆ. ಲೇಖನದ ರೀಚ್ ಆಧಾರದ ಮೇಲೆ ಅವರಿಗೆ ಹಣ ನೀಡಲಾಗುವುದು ಎಂದು ತಿಳಿಸಿದ್ದರು. ಈಗ ಅಧಿಕೃತವಾಗಿ ಎಲಾನ್ ಮಸ್ಕ್ ಅವರು ಈ ಕುರಿತು ಘೋಷಣೆ ಮಾಡಿದ್ದಾರೆ. ಮುಂದಿನ ತಿಂಗಳಿಂದ ಹೊಸ ಯೋಜನೆ ಜಾರಿಗೆ ಬರಲಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Twitter New Logo: ‘ಹಕ್ಕಿ’ ಹಾರಿ ಹೋತೊ ಗೆಳೆಯ; ಟ್ವಿಟರ್ ಹೊಸ ಲೋಗೊ ಅನಾವರಣ, ಮಸ್ಕ್ ಮತ್ತೊಂದು ಸಾಹಸ
ಸುದ್ದಿಯ ಹೆಡ್‌ಲೈನ್ ಮಸ್ಕ್ ಕತ್ತರಿ
ಎಕ್ಸ್‌ನಲ್ಲಿ ಅಪ್‌ಲೋಡ್ ಮಾಡುವ ವೆಬ್‌ಸೈಟ್ ಸುದ್ದಿಗಳ ಹೆಡ್‌ಲೈನ್‌ಗಳಿಗೂ ಎಲಾನ್ ಮಸ್ಕ್ ಕತ್ತರಿ ಹಾಕಲಿದ್ದಾರೆ ಎಂದು ಬೇರೊಂದು ವರದಿ ತಿಳಿಸಿದೆ. ಉದಾಹರಣೆಗೆ, ಯಾವುದಾದರೊಂದು ಸುದ್ದಿಯ ಲಿಂಕ್‌ಅನ್ನು ಎಕ್ಸ್‌ನಲ್ಲಿ ಅಪ್‌ಲೋಡ್ ಮಾಡಿದರೆ ಆಗ ಸುದ್ದಿಯ ಹೆಡ್‌ಲೈನ್ ಡಿಸ್‌ಪ್ಲೇ ಆಗುತ್ತದೆ. ಆದರೆ, ಮುಂದಿನ ದಿನಗಳಲ್ಲಿ ಈ ಸೌಲಭ್ಯ ಇರುವುದಿಲ್ಲ ಎಂದು ತಿಳಿದುಬಂದಿದೆ. ಸುದ್ದಿ ಲಿಂಕ್ ಹಾಗೂ ಒಂದು ಇಮೇಜ್ ಮಾತ್ರ ಡಿಸ್‌ಪ್ಲೇ ಆಗುತ್ತದೆ. ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಮಾತ್ರ ಲಿಂಕ್ ಮೂಲಕ ವೆಬ್‌ಸೈಟ್ ಓಪನ್ ಆಗುತ್ತದೆ ಎಂದು ವರದಿ ತಿಳಿಸಿದೆ.