Site icon Vistara News

Twitter New Logo: ‘ಹಕ್ಕಿ’ ಹಾರಿ ಹೋತೊ ಗೆಳೆಯ; ಟ್ವಿಟರ್‌ ಹೊಸ ಲೋಗೊ ಅನಾವರಣ, ಮಸ್ಕ್‌ ಮತ್ತೊಂದು ಸಾಹಸ

elon musk

ವಾಷಿಂಗ್ಟನ್:‌ ಟೆಸ್ಲಾ ಕಂಪನಿ ಸಿಇಒ, ಜಾಗತಿಕ ಉದ್ಯಮಿ ಎಲಾನ್‌ ಮಸ್ಕ್‌ ಅವರು ಟ್ವಿಟರ್‌ನಲ್ಲಿ ಮತ್ತೊಂದು ಮಹತ್ವದ ಬದಲಾವಣೆ ಮಾಡಿದ್ದು, ಈಗ ಸಾಮಾಜಿಕ ಜಾಲತಾಣದ ಲೋಗೊವನ್ನು (Twitter New Logo) ಬದಲಾಯಿಸಿದ್ದಾರೆ. ಟ್ವಿಟರ್‌ ಮೈಕ್ರೋಬ್ಲಾಗಿಂಗ್‌ ತಾಣದ ‘ನೀಲಿ ಹಕ್ಕಿ’ ಬದಲಾಗಿ ‘X’ ಎಂಬುದು ಟ್ವಿಟರ್‌ ಹೊಸ ಲೋಗೊ ಆಗಿದೆ. ಟ್ವಿಟರ್‌ ಹೊಸ ಲೋಗೊದ ಕುರಿತು ಎಲಾನ್‌ ಮಸ್ಕ್‌ (Elon Musk) ಅವರೇ ಮಾಹಿತಿ ನೀಡಿದ್ದಾರೆ.

ಎಲಾನ್‌ ಮಸ್ಕ್‌ ಅವರು ಟ್ವಿಟರ್‌ನಲ್ಲಿ ‘X’ ಲೋಗೊದ ಕಿರು ವಿಡಿಯೊ ಪೋಸ್ಟ್‌ ಮಾಡಿದ್ದಾರೆ. ಹಾಗೆಯೇ, ‘X’ ಎಂಬುದಾಗಿ ಟ್ವೀಟ್‌ ಕೂಡ ಮಾಡಿದ್ದಾರೆ. ಇದರ ಜತೆಗೆ ಅವರ ಪ್ರೊಫೈಲ್‌ ಫೋಟೊ ಕೂಡ ‘X’ ಆಗಿದೆ. ಹಾಗಾಗಿ, ಎಲಾನ್‌ ಮಸ್ಕ್‌ ಅವರು ಅಧಿಕೃತವಾಗಿ ‘X’ ಹೊಸ ಲೋಗೊ ಎಂದು ಘೋಷಿಸದಿದ್ದರೂ, ಇದೇ ಲೋಗೊ ಎಂದು ಜಾಗತಿಕ ಮಾಧ್ಯಮಗಳು ವರದಿ ಮಾಡಿವೆ.

ಎಲಾನ್‌ ಮಸ್ಕ್‌ ಟ್ವೀಟ್‌

ಇನ್ನು ಎಲಾನ್‌ ಮಸ್ಕ್‌ ಅವರು ಟ್ವಿಟರ್‌ ಹೊಸ ಲೋಗೊ ಅನಾವರಣಗೊಳಿಸುತ್ತಲೇ ಪರ-ವಿರೋಧ ಚರ್ಚೆಯಾಗಿದೆ. ಮೊದಲಿನ ಲೋಗೊ ಚೆನ್ನಾಗಿತ್ತು, ಬದಲಾಯಿಸಬಾರದಿತ್ತು ಎಂದು ಒಂದಷ್ಟು ಜನ ಹೇಳಿದರೆ, ಇದೇ ಲೋಗೊ ಚೆನ್ನಾಗಿದೆ ಎಂದು ಮತ್ತೊಂದಿಷ್ಟು ಜನ ಪ್ರತಿಕ್ರಿಯಿಸಿದ್ದಾರೆ. ಸದ್ಯ, ಟ್ವಿಟರ್‌ ಹಳೆಯ ಲೋಗೊ ಇದೆ. ಕೆಲವೇ ದಿನಗಳಲ್ಲಿ ಇದು ಬದಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Tesla CEO Elon Musk : ಕರ್ನಾಟಕದಲ್ಲಿ ಹೂಡಿಕೆಗೆ ಎಲಾನ್‌ ಮಸ್ಕ್‌ಗೆ ರಾಜ್ಯ ಸರ್ಕಾರ ಆಹ್ವಾನ, ಕೊಟ್ಟಿರುವ ಆಫರ್‌ ಏನು?

‌ಲೋಗೊ ಗ್ಲಿಂಪ್ಸ್

ಇದನ್ನೂ ಓದಿ: Elon Musk : ಟ್ವಿಟರ್‌ ಬಳಕೆದಾರನ ಕ್ಷಮೆ ಕೋರಿದ ಎಲಾನ್‌ ಮಸ್ಕ್‌, ಕಾರಣವೇನು?

ಈ ಹಿಂದೆ ಏಪ್ರಿಲ್‌ನಲ್ಲಿ ಟ್ವಿಟರ್‌ನ ನೀಲಿ ಹಕ್ಕಿ ಲೋಗೊವನ್ನು ತಾತ್ಕಾಲಿಕವಾಗಿ ಬದಲಿಸಿ ಡಾಗ್‌ ಕಾಯಿನ್‌ನ ಶಿಬಾ ಲೋಗೊವನ್ನು ಅನಾವರಣ ಮಾಡಲಾಗಿತ್ತು. ಇದರ ಪರಿಣಾಮ ಈ ಕ್ರಿಪ್ಟೊ ಕರೆನ್ಸಿಯ ಮಾರುಕಟ್ಟೆ ಮೌಲ್ಯ ಗಗನಕ್ಕೇರಿತ್ತು. ಟ್ವಿಟರ್‌ ಭವಿಷ್ಯದ ದಿನಗಳಲ್ಲಿ ಸ್ವತಂತ್ರ ಕಂಪನಿಯಾಗಿ ಇರುವುದಿಲ್ಲ. ಅದು ನೂತನವಾಗಿ ರಚನೆಯಾಗಲಿರುವ ಎಕ್ಸ್‌ ಕಾರ್ಪ್‌ (X corp) ಕಂಪನಿಯಲ್ಲಿ ವಿಲೀನವಾಗಲಿದೆ.‌ ಚೀನಾದ ವಿ ಚಾಟ್‌ (WeChat) ಮಾದರಿಯಲ್ಲಿ ಸೂಪರ್‌ ಅಪ್ಲಿಕೇಶನ್‌ ತಯಾರಿಸುವ ಇಂಗಿತವೂ ಎಲಾನ್‌ ಮಸ್ಕ್‌ ಅವರಿಗೆ ಇದೆ. ಹಾಗಾಗಿ ನೂತನ ಲೋಗೊ ಎಕ್ಸ್‌ ಆಗಿದೆ ಎಂದು ತಿಳಿದುಬಂದಿದೆ.

Exit mobile version