ಲಕ್ನೋ: ಬಹು ದಿನಗಳಿಂದ ತಲೆಮರೆಸಿಕೊಂಡಿದ್ದ, ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಗ್ಯಾಂಗ್ಸ್ಟರ್, ಶಾರ್ಪ್ ಶೂಟರ್ ವಿನೋದ್ ಕುಮಾರ್ ಉಪಾಧ್ಯಾಯ ಉತ್ತರ ಪ್ರದೇಶದ ಸುಲ್ತಾನ್ಪುರದಲ್ಲಿ ನಡೆದ ಎನ್ಕೌಂಟರ್ನಲ್ಲಿ ಬಲಿಯಾಗಿದ್ದಾನೆ. ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ (UP STF) ಶುಕ್ರವಾರ (ಜನವರಿ 5) ಮುಂಜಾನೆ ನಡೆಸಿದ ದಾಳಿಯಿಂದ ವಿನೋದ್ ಕುಮಾರ್ ಸಾವನ್ನಪ್ಪಿದ್ದಾನೆ ಎಂದು ವರದಿಗಳು ತಿಳಿಸಿವೆ. ಸುಲ್ತಾನ್ಪುರದ ದೆಹತ್ ಕೊಟ್ವಾಲಿ (Dehat Kotwali) ಪ್ರದೇಶದ ಎಸ್ಟಿಎಫ್ ಪ್ರಧಾನ ಕಚೇರಿಯ ಡಿವೈಎಸ್ಪಿ ದೀಪಕ್ ಕುಮಾರ್ ಸಿಂಗ್ ನೇತೃತ್ವದ ತಂಡ ಈ ಎನ್ಕೌಂಟರ್ ನಡೆಸಿತ್ತು (Encounter in UP).
ವಿನೋದ್ ಕುಮಾರ್ ವಿರುದ್ಧ ಲಕ್ನೋ ಮತ್ತು ಗೋರಖ್ಪುರ ಸೇರಿದಂತೆ ಉತ್ತರ ಪ್ರದೇಶದಾದ್ಯಂತ ಅಪಹರಣ, ದರೋಡೆ, ಸುಲಿಗೆಯ ಅನೇಕ ಪ್ರಕರಣಗಳು ದಾಖಲಾಗಿವೆ. ಆತನನ್ನು ಬಂಧಿಸುವವರಿಗೆ ಗೋರಖ್ಪುರ ಪೊಲೀಸರು 1 ಲಕ್ಷ ರೂ.ಗಳ ಬಹುಮಾನವನ್ನು ಘೋಷಿಸಿದ್ದರು.
ಈತ ಗೋರಖ್ಪುರ, ಬಸ್ತಿ, ಸಂತ ಕಬೀರ್ ನಗರ ಮತ್ತು ಲಕ್ನೋದಲ್ಲಿ ಆತ ಹಲವು ಕೊಲೆಗಳನ್ನು ನಡೆಸಿದ್ದ. ಇದಲ್ಲದೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕ್ಷೇತ್ರವಾದ ಗೋರಖ್ಪುರದ ಗೋರಖನಾಥ್ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ನಾಲ್ಕು ಪ್ರಕರಣಗಳು ದಾಖಲಾಗಿವೆ. ಅಲ್ಲದೆ ವಿನೋದ್ ಕುಮಾರ್ ಹೆಸರಿನಲ್ಲಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಇನ್ನೂ 31 ಪ್ರಕರಣಗಳಿವೆ.
ಘಟನೆ ವಿವರ
ಸುಲ್ತಾನ್ಪುರ ಜಿಲ್ಲೆಯ ಕೊಟ್ವಾಲಿ ಪ್ರದೇಶದಲ್ಲಿ ವಿನೋದ್ ಕುಮಾರ್ ಮತ್ತು ಯುಪಿ ಎಸ್ಟಿಎಫ್ ನಡುವೆ ಎನ್ ಕೌಂಟರ್ ನಡೆದಿತ್ತು. ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ವಿನೋದ್ ಕುಮಾರ್ನನ್ನು ಬಳಿಕ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಅಷ್ಟರಲ್ಲಿ ಆತ ಸಾವನ್ನಪ್ಪಿದ್ದ ಎಂದು ವೈದ್ಯರು ತಿಳಿಸಿದ್ದರು. ನಿಖರವಾದ ಗುರಿಗೆ ಹೆಸರುವಾಸಿಯಾದ ವಿನೋದ್ ಕುಮಾರ್ ಅಪರಾಧ ಜಗತ್ತಿನಲ್ಲಿ ಕೋಲಾಹಲ ಸೃಷ್ಟಿಸಿದ್ದ. ಹೀಗಾಗಿ ಈತನ ಹತ್ಯೆ ಎಸ್ಟಿಎಫ್ ಸಿಕ್ಕ ಯಶಸ್ಸು ಎಂದು ಪರಿಗಣಿಸಲಾಗಿದೆ. ಎನ್ಕೌಂಟರ್ ಬಳಿಕ 30 ಚೀನಿ ಕಂಪನಿ ನಿರ್ಮಿತ ಪಿಸ್ತೂಲ್, ಕಾರ್ಖಾನೆ ನಿರ್ಮಿತ 9 ಎಂಎಂ ಸ್ಟೆನ್ ಗನ್ ಮತ್ತು ಖಾಲಿ ಕಾರ್ಟಿಡ್ಜ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಜತೆಗೆ ಪೊಲೀಸರು ಸ್ವಿಫ್ಟ್ ಕಾರನ್ನು ಸಹ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ವಿನೋದ್ ಕುಮಾರ್ ವಿರುದ್ಧ 1999ರಿಂದಲೂ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ಗೋರಖ್ಪುರ ಹೆಚ್ಚುವರಿ ಡಿಜಿಪಿ ಅಖಿಲ್ ಕುಮಾರ್ ಕಳೆದ ವರ್ಷ ಸೆಪ್ಟೆಂಬರ್ 8ರಂದು ಈತನ ಸುಳಿವು ನೀಡಿದವರಿಗೆ 1 ಲಕ್ಷ ರೂ.ಗಳ ಬಹುಮಾನವನ್ನು ಘೋಷಿಸಿದ್ದರು.
ಚುನಾವಣೆಯಲ್ಲಿಯೂ ಸ್ಪರ್ಧಿಸಿದ್ದ
ಕುತೂಹಲ ಸಂಗತಿ ಎಂದರೆ ವಿನೋದ್ ಕುಮಾರ್ ವಿಧಾನಸಭಾ ಚುನಾವಣೆಯಲ್ಲೂ ಸ್ಪರ್ಧಿಸಿದ್ದ. ಆತ 2007ರಲ್ಲಿ ಗೋರಖ್ಪುರ ಕ್ಷೇತ್ರದಿಂದ ಬಹುಜನ ಸಮಾಜ ಪಕ್ಷದ ಅಭ್ಯರ್ಥಿಯಾಗಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದ. ರಾಜ್ಯ ಪೊಲೀಸರು ಬಿಡುಗಡೆ ಮಾಡಿದ 68 ಮೋಸ್ಟ್ ವಾಂಟೆಡ್ ಕ್ರಿಮಿನಲ್ಗಳ ಪಟ್ಟಿಯಲ್ಲಿ ಆತನ ಹೆಸರೂ ಇತ್ತು.
ಇದನ್ನೂ ಓದಿ: ಎನ್ಕೌಂಟರ್ ವೇಳೆ ಯುವ ಪೊಲೀಸ್ ಅಧಿಕಾರಿ ಸಾವು; ಕೆಲವೇ ದಿನಗಳಲ್ಲಿ ಅವರ ಮದುವೆ ಇತ್ತು!