ಮಲ್ಲಿಕಾರ್ಜುನ ತಿಪ್ಪಾರ, ಬೆಂಗಳೂರು
ಭವ್ಯ ಪರಂಪರೆಯನ್ನು ಹೊಂದಿರುವ ಭಾರತವು ಅದ್ಭುತ ವಾಸ್ತು ವಿನ್ಯಾಸಗಳ ನಿರ್ಮಾಣಗಳ ವಿಷಯದಲ್ಲೂ ಹಿಂದೆ ಬಿದ್ದಿಲ್ಲ. ಪ್ರಾಚೀನ ಕಾಲದ ದೇಗುಲಗಳು, ಅರಮನೆಗಳು, ಕಟ್ಟಡಗಳು ನಮ್ಮ ಸಂಸ್ಕೃತಿ ಹಾಗೂ ವಾಸ್ತುವಿಜ್ಞಾನ ಹಿರಿಮೆಯನ್ನು ಸಾರುತ್ತವೆ. ಹಾಗೆಯೇ ಆಧುನಿಕ ಭಾರತವೂ ಈ ವಿಷಯದಲ್ಲಿ ಮುಂದಿದೆ. ಸ್ವತಂತ್ರ ಭಾರತದಲ್ಲಿ ಅದ್ಭುತ ಎನಿಸಬಹುದಾದಂಥ ಕಟ್ಟಡಗಳು ನಿರ್ಮಾಣವಾಗಿವೆ. ನಮ್ಮ ಪ್ರಾಚೀನ ಮೌಲ್ಯಗಳನ್ನು ಒಳಗೊಂಡು ಆಧುನಿಕತೆಯನ್ನು ಪ್ರತಿಬಿಂಬಿಸುವ ಕಟ್ಟಡಗಳು ಸಾಕಷ್ಟಿವೆ. ಹಲವು ತಮ್ಮ ವಾಸ್ತು ವಿನ್ಯಾಸದಿಂದ ಗಮನ ಸೆಳೆದಿವೆ. ಎಂಜಿನಿಯರ್ಸ್ ಡೇ (Engineer’s Day) ಹಿನ್ನೆಲೆಯಲ್ಲಿ ಅಂಥ ಹತ್ತು ಕಟ್ಟಡಗಳ ಬಗ್ಗೆ ಇಲ್ಲಿದೆ ಮಾಹಿತಿ.
- ವಿಧಾನಸೌಧ, ಬೆಂಗಳೂರು
ಸ್ವತಂತ್ರ ಭಾರತದಲ್ಲಿ ನಿರ್ಮಾಣವಾದ ಅದ್ಭುತ ಕಟ್ಟಡಗಳ ಪೈಕಿ ಬೆಂಗಳೂರಿನ ವಿಧಾನಸೌಧವೂ ಒಂದು. ಇದು ಕರ್ನಾಟಕದ ಶಕ್ತಿಕೇಂದ್ರವೂ ಹೌದು. ಈ ಕಟ್ಟಡ ವಿನ್ಯಾಸಕರು ಬಿ.ಆರ್. ಮಾಣಿಕಮ್. 1956ರಲ್ಲಿ ವಿಧಾನಸೌಧವು ಲೋಕಾರ್ಪಣೆಯಾಯಿತು. ಈ ಕಟ್ಟಡವು ಪುನರುಜ್ಜೀವನವನ್ನು ಸಂಕೇತಿಸುತ್ತದೆ. ನಿಯೋ ದ್ರಾವಿಡಿಯನ್ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. ವಿಧಾನ ಸೌಧವನ್ನು ಹಿಂದಿನ ಕಾಲದ ದೇವಾಲಯದ ವಾಸ್ತುಶಿಲ್ಪಕ್ಕೆ ಗೌರವವಾಗಿ ವಿನ್ಯಾಸಗೊಳಿಸಲಾಗಿದೆ. ಕೆತ್ತಿದ ಕಂಬಗಳು, ತ್ರಿಕೋನಾಕಾರದ ಹಾಗೂ ವಿಸ್ತಾರವಾದ ಕಮಾನುಗಳನ್ನು ಕಾಣಬಹುದು.
- ಬಾಂದ್ರಾ-ವರ್ಲಿ ಸೀ ಲಿಂಕ್, ಮುಂಬೈ
ಆಧುನಿಕ ಭಾರತದ ಸಿವಿಲ್ ಎಂಜಿನಿಯರಿಂಗ್ ಅದ್ಭುತಗಳಲ್ಲಿ ಬಾಂದ್ರಾ-ವರ್ಲಿ ಸೀ ಲಿಂಕ್ ಕೂಡ ಒಂದು. ಇದು ದಕ್ಷಿಣ ಮುಂಬೈನ ವರ್ಲಿಯನ್ನು ವೆಸ್ಟರ್ನ್ ಸಬ್ಅರ್ಬ್ ಮುಂಬೈಯನ್ನು ಸಂಪರ್ಕಿಸುತ್ತದೆ. ಅಷ್ಟಪಥವನ್ನು ಹೊಂದಿರುವ ಈ ಸೇತುವೆ ನಯನಮನೋಹರವಾಗಿದೆ. ಇದು ಎರಡೂ ಬದಿಗಳಲ್ಲಿ ಪ್ರಿ-ಸ್ಟ್ರೆಸ್ಡ್ ಕಾಂಕ್ರೀಟ್-ಉಕ್ಕಿನ ವಯಡಕ್ಟ್ಗಳನ್ನು ಹೊಂದಿರುವ ಕೇಬಲ್-ತಡೆಯಿರುವ ಸೇತುವೆಯಾಗಿದೆ. ಭೂಕಂಪನ ನಿರೋಧಕ ವ್ಯವಸ್ಥೆ ಹೊಂದಿರುವ ಮುಂಬೈನ ಮೊದಲ ಮೂಲಸೌಕರ್ಯ ಯೋಜನೆಯಾಗಿದೆ. ಈ ಸೇತುವೆ ರಿಕ್ಟರ್ ಮಾಪಕದಲ್ಲಿ 7.0ವರೆಗಿನ ಭೂಕಂಪಗಳನ್ನು ತಡೆದುಕೊಳ್ಳಲು ಸಾಮರ್ಥ್ಯವನ್ನು ಹೊಂದಿದೆ. ರಾಜೀವ್ ಗಾಂಧಿ ಅವರ ಹೆಸರನ್ನು ಈ ಸೇತುವೆಗೆ ಇಡಲಾಗಿದೆ.
- ಸಿಗ್ನೇಚರ್ ಬ್ರಿಡ್ಜ್, ದಿಲ್ಲಿ
ಸಿಗ್ನೇಚರ್ ಬ್ರಿಡ್ಜ್ ಅನ್ನು ಯಮುನಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ದಿಲ್ಲಿ ನಗರ ಮತ್ತು ವಝೀರಾಬಾದ್ ನಡುವೆ ಸಂಪರ್ಕ ಕಲ್ಪಿಸುತ್ತದೆ. 2018ರಲ್ಲಿ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಈ ಸೇತುವೆಯನ್ನು ಉದ್ಘಾಟಿಸಿದರು. ಇದು ಕುತುಬ್ಮಿನಾರ್ಗಿಂತಲೂ ಎರಡು ಪಟ್ಟು ಎತ್ತರದ ಸೇತುವೆಯಾಗಿದೆ. ಸಿಗ್ನೇಚರ್ ಸೇತುವೆಯನ್ನು ಭಾರತದ ಮೊದಲ ಅಸಮಪಾರ್ಶ್ವದ ಕೇಬಲ್ ತಂಗುವ ಸೇತುವೆ ಎಂದು ಬಿಂಬಿಸಲಾಗಿದೆ.
- ಮಾತೃಮಂದಿರ, ಆರೋವಿಲ್ಲೆ
ಪುದುಚೆರಿಯ ಆರೋವಿಲ್ಲೆಯಲ್ಲಿರುವ ಮಾತೃಮಂದಿರ ತನ್ನ ವಿಶಿಷ್ಟ ವಿನ್ಯಾಸದಿಂದ ಗಮನ ಸೆಳೆಯುತ್ತದೆ. ಇದು ಆರೋವಿಲ್ಲೆಯ ಮಧ್ಯಭಾಗದಲ್ಲಿರುವ ಆಧ್ಯಾತ್ಮಿಕ ಪ್ರಾಮುಖ್ಯತೆಯ ಕಟ್ಟಡವಾಗಿದೆ. ಅಂದ ಹಾಗೆ, ಯಾವುದೇ ನಿರ್ದಿಷ್ಟ ಧರ್ಮ, ಪಂಥಕ್ಕೆ ಸೇರಿದ್ದಲ್ಲ. ಈ ಮಾತೃ ಮಂದಿರ ನಿರ್ಮಾಣಕ್ಕೆ 37 ವರ್ಷ ಹಿಡಿದಿದೆ. 1971ರಲ್ಲಿ ಶಂಕುಸ್ಥಾಪನೆ ಮಾಡಲಾಗಿತ್ತು. 2008ರಲ್ಲಿ ಪೂರ್ಣಗೊಂಡಿದೆ. ಈ ಮಂದಿರವು ಸಿವಿಲ್ ಎಂಜಿನಿಯರಿಂಗ್ನ ಹೊಸ ಸವಾಲು ಹಾಗೂ ಅದ್ಭುತ ವಿನ್ಯಾಸಕ್ಕೆ ಸಾಕ್ಷಿಯಾಗಿದೆ.
- ಏಕತಾ ಪ್ರತಿಮೆ, ಗುಜರಾತ್
ಆಧುನಿಕ ಭಾರತ ಕಂಡ ಅಚ್ಚರಿ ನಿರ್ಮಾಣಗಳಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಭವ್ಯ ಪ್ರತಿಮೆಯೂ ಒಂದು. ಈ ಪ್ರತಿಮೆಯನ್ನು ಏಕತಾ ಪ್ರತಿಮೆ ಎಂದೂ ಕರೆಯಲಾಗುತ್ತದೆ. ಗುಜರಾತ್ನ ವಡೋದರಾ ಸಮೀಪ ಈ ಪ್ರತಿಮೆ ನಿರ್ಮಿಸಲಾಗಿದ್ದು, ಇದು ಜಗತ್ತಿನ ಅತ್ಯಂತ ಎತ್ತರದ ಪ್ರತಿಮೆ ಎಂಬ ಕೀರ್ತಿಗೆ ಸಾಕ್ಷಿಯಾಗಿದೆ. ಒಟ್ಟು 182 ಮೀಟರ್ ಎತ್ತರವಿದೆ. 2018ರಲ್ಲಿ ಈ ಪ್ರತಿಮೆಯನ್ನು ಲೋಕಾರ್ಪಣೆ ಮಾಡಲಾಯಿತು.
- ಮಹಾತ್ಮ ಗಾಂಧಿ ಸೇತು, ಬಿಹಾರ
ಮಹಾತ್ಮಾ ಗಾಂಧಿ ಸೇತು ಭಾರತೀಯ ವಾಸ್ತುಶಿಲ್ಪದಲ್ಲಿ ಕ್ಯಾಂಟಿಲಿವರ್-ಸೆಗ್ಮೆಂಟಲ್ ನಿರ್ಮಾಣಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ. ಈ ಸೇತುವೆಯನ್ನು ಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದು, ಬಿಹಾರದ ಪಟನಾ ಮತ್ತು ಹಾಜಿಪುರವನ್ನು ಸಂಪರ್ಕಿಸುತ್ತದೆ. ಈ ಸೇತುವೆಯು 5 ಕಿ.ಮೀ.ಗೂ ಹೆಚ್ಚು ಉದ್ದವಿದ್ದು, ದೇಶದ ಮೂರನೇ ಅತಿ ಉದ್ದ ಸೇತುವೆ ಎಂಬ ಕೀರ್ತಿಗೆ ಪಾತ್ರವಾಗಿದೆ. ಈ ಸೇತುವೆ ಎರಡು ಲೇನ್ಗಳನ್ನು ಒಳಗೊಂಡಿದೆ. 1982ರಲ್ಲಿ ಈ ಸೇತವೆಯನ್ನು ಲೋಕಾರ್ಪಣೆಗೊಳಿಸಲಾಯಿತು. ಭಾರತೀಯ ಅಂಚೆ ಇಲಾಖೆಯು ಮಹಾತ್ಮ ಗಾಂಧಿ ಸೇತುವೆಯನ್ನು ಒಳಗೊಂಡ “ಭಾರತದ ಹೆಗ್ಗುರುತು ಸೇತುವೆಗಳು” ಎಂಬ ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತು.
- ಐ-ಫ್ಲೆಕ್ಸ್ ಸಲ್ಯೂಷನ್, ಬೆಂಗಳೂರು
ಐ-ಫ್ಲೆಕ್ಸ್ ಸಲ್ಯೂಷನ್ ಕಂಪನಿಯ ಕಾರ್ಪೊರೇಟ್ ಆಫೀಸ್ ಬೆಂಗಳೂರಿನ ಐಕಾನಿಕ್ ಕಟ್ಟಡಗಳಲ್ಲಿ ಒಂದಾಗಿದೆ. ಬೆಂಗಳೂರಿನ ಸಿ.ವಿ.ರಾಮನ್ ನಗರದ ಬಾಗ್ಮನೆ ಟೆಕ್ಪಾರ್ಕ್ನಲ್ಲಿರುವ ವಿಶಿಷ್ಟ ಕಟ್ಟಡವಾಗಿದೆ. ಭಾರತೀಯ ವಾಸ್ತುಶಿಲ್ಪದ ಈ ಎಂಜಿನಿಯರಿಂಗ್ ಅದ್ಭುತವು ಬೆಂಗಳೂರು ನಗರದ ಅತ್ಯಾಕರ್ಷಕ ಕಟ್ಟಡವಾಗಿದೆ. ಈ ಬಿಲ್ಡಿಂಗ್ನಲ್ಲಿ ಸುಮಾರು ಸಾವಿರಕ್ಕೂ ಅಧಿಕ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಹಾಲಿವುಡ್ ಸಿನಿಮಾಗಳಲ್ಲಿ ಕಾಣಸಿಗುವ ಸೈ ಫೈ ಕಟ್ಟಡ ರೀತಿಯ ಅನುಭವವನ್ನು ಈ ಐ-ಫ್ಲೆಕ್ಸ್ ಸಲ್ಯೂಷನ್ ಕಾರ್ಪೊರೇಟ್ ಆಫೀಸ್ ಕಟ್ಟಡವು ನೀಡುತ್ತದೆ.
- ಇನ್ಫೋಸಿಸ್ ಮಲ್ಟಿಫ್ಲೆಕ್ಸ್, ಮೈಸೂರು
ಬೆಂಗಳೂರು ದೇಶದ ಐಟಿ ರಾಜಧಾನಿಯಾಗುವಲ್ಲಿ ಕನ್ನಡಿಗರೇ ಆದ ನಾರಾಯಣಮೂರ್ತಿ ಅವರ ಇನ್ಫೋಸಿಸ್ ಕಂಪನಿಯ ಕಾಣಿಕೆಯೂ ಅಗಾಧವಾಗಿದೆ. ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಇನ್ಫೋಸಿಸ್ ತನ್ನ ಕಚೇರಿಗಳನ್ನು ಹೊಂದಿದೆ. ಈ ಪೈಕಿ ಮೈಸೂರಿನ ಇನ್ಫೋಸಿಸ್ ಮಲ್ಟಿಫೆಕ್ಲ್ ಕಟ್ಟಡವು ಅತ್ಯಾಕರ್ಷಕವಾಗಿದೆ. ಇದು ಇನ್ಫೋಸಿಸ್ನ ಕ್ಯಾಂಪಸ್ ಮತ್ತು ಆಡಿಟೋರಿಯಂ ಕಾಂಪ್ಲೆಕ್ಸ್ ಎನಿಸಿಕೊಂಡಿದೆ. ಸುಮಾರು 1,300 ಜನರು ಕುಳಿತುಕೊಳ್ಳಬಹುದು. ಮೂರು ಮಲ್ಟಿಫ್ಲೆಕ್ಸ್ ಥಿಯೇಟರ್ಗಳಿದ್ದು, ಪ್ರತಿ ಥಿಯೇಟರ್ 150 ಆಸನಗಳನ್ನು ಹೊಂದಿದೆ.
- ಲೋಟಸ್ ಟೆಂಪಲ್, ದಿಲ್ಲಿ
ಲೋಟಸ್ ಟೆಂಪಲ್ ದಿಲ್ಲಿಯ ಮತ್ತೊಂದು ಆಕರ್ಷಣೆಯಾಗಿದೆ. ಅತಿ ಹೆಚ್ಚು ಜನರು ಭೇಟಿ ನೀಡುವ ಜಗತ್ತಿನ ಪ್ರಮುಖ ಕಟ್ಟಡಗಳ ಪೈಕಿ ಇದು ಕೂಡ ಒಂದು. ವಾಸ್ತುಶಿಲ್ಪ ವಿಭಾಗದಲ್ಲಿ ಸಾಕಷ್ಟು ಗೌರವವಗಳಿಗೆ ಈ ಲೋಟಸ್ ಟೆಂಪಲ್ ಬಾಜನವಾಗಿದೆ. ವರ್ಷಕ್ಕೆ ಲಕ್ಷಾಂತರ ಜನರು ಭೇಟಿ ನೀಡುತ್ತಾರೆ. ಕಮಲದ ವಿನ್ಯಾಸದಲ್ಲಿ ನಿರ್ಮಾಣ ಮಾಡಿರುವುದು ಈ ಟೆಂಪಲ್ನ ಪ್ರಮುಖ ಆಕರ್ಷಣೆಯಾಗಿದೆ.
- ಎನ್ಸಿಡಿಸಿ ಬಿಲ್ಡಿಂಗ್, ದಿಲ್ಲಿ
ತನ್ನ ವಿಚಿತ್ರ ವಿನ್ಯಾಸದಿಂದಲೇ ಈ ಬಿಲ್ಡಿಂಗ್ ಹೆಚ್ಚು ಗಮನ ಸೆಳೆಯುತ್ತದೆ. ಈ ಕಟ್ಟಡವನ್ನು ಪೈಜಾಮಾ ಬಿಲ್ಡಿಂಗ್ ಎಂದೂ ಕರೆಯಲಾಗುತ್ತದೆ. ಕುಲ್ದೀಪ್ ಸಿಂಗ್ ಅವರು ಈ ಕಟ್ಟಡ ವಿನ್ಯಾಸಕರು. ಕಟ್ಟಡವು ತೆರೆದ ಕಾಂಕ್ರೀಟಿನಿಂದ ಮಾಡಲ್ಪಟ್ಟಿದೆ ಮತ್ತು ಸೆಂಟ್ರಲ್ ಕೋರ್ ಇದೆ. ಇದು ರಚನಾತ್ಮಕವಾಗಿ ಸಂಕೀರ್ಣವಾದ ಕಟ್ಟಡವಾಗಿದೆ. ಆದರೆ ಆಧುನಿಕ ಆಲೋಚನೆಗಳನ್ನು ಹೊಂದಿರುವ ನೆಹರೂ ಅವರ ದೃಷ್ಟಿ ಮತ್ತು ಶಕ್ತಿ, ಇಚ್ಛೆ ಮತ್ತು ಶಕ್ತಿಯನ್ನು ಪ್ರತಿನಿಧಿಸುವ ಪ್ರತಿಬಿಂಬವಾಗಿ ಈ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ.