ನವ ದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) 2022-23ರ ಆರ್ಥಿಕ ವರ್ಷಕ್ಕೆ ಉದ್ಯೋಗಿಗಳ ಭವಿಷ್ಯ ನಿಧಿಯ ಮೇಲೆ 8.15% ಬಡ್ಡಿ ದರವನ್ನು ನಿಗದಿಪಡಿಸಿದೆ.
“ಮಂಗಳವಾರ ನಡೆದ ನೌಕರರ ಭವಿಷ್ಯ ನಿಧಿ ಸಂಘಟನೆಯ ಟ್ರಸ್ಟಿಗಳ ಸೆಂಟ್ರಲ್ ಬೋರ್ಡ್ ಸಭೆಯಲ್ಲಿ 2022-23ಕ್ಕೆ ಇಪಿಎಫ್‌ಗೆ ಶೇಕಡಾ 8.15 ಬಡ್ಡಿದರವನ್ನು ನಿಗದಿಪಡಿಸಲು ನಿರ್ಧರಿಸಿದೆ” ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿಮಾಡಿದೆ.
2021-22ರಲ್ಲಿ EPF ಮೇಲಿನ ಬಡ್ಡಿದರವನ್ನು ಶೇಕಡಾ 8.1 ಕ್ಕೆ ಇಳಿಸಲಾಗಿತ್ತು. ಅದಕ್ಕೂ ಹಿಂದಿನ ವರ್ಷ ಅದು ಶೇಕಡಾ 8.5ರಷ್ಟಿತ್ತು. ಇದು ನಾಲ್ಕು ದಶಕಗಳ ಅತ್ಯಂತ ಕಡಿಮೆ ಬಡ್ಡಿದರವಾಗಿದೆ. 1977-78ರಲ್ಲಿ ಇಪಿಎಫ್ ಬಡ್ಡಿ ದರ ಶೇ 8ರಷ್ಟಿತ್ತು. ಅದರ ನಂತರ ಎಂದೂ ಇಷ್ಟು ಇಳಿದಿರಲಿಲ್ಲ. ಮಾರ್ಚ್ 2021ರ ಮಾರ್ಚ್‌ನಲ್ಲಿ ಇದನ್ನು ಪರಿಷ್ಕರಿಸಿ 8.5 ಶೇಕಡಾ ಬಡ್ಡಿ ದರಕ್ಕೆ ತರಲಾಗಿತ್ತು.
ಸುಮಾರು ಐದು ಕೋಟಿ ಇಪಿಎಫ್ ಚಂದಾದಾರರಿದ್ದಾರೆ. CBTಯ ನಿರ್ಧಾರದ ನಂತರ, 2022-23ರ EPF ಠೇವಣಿಗಳ ಮೇಲಿನ ಬಡ್ಡಿ ದರವನ್ನು ಒಪ್ಪಿಗೆಗಾಗಿ ಹಣಕಾಸು ಸಚಿವಾಲಯಕ್ಕೆ ಕಳುಹಿಸಲಾಗುತ್ತದೆ. ಸರ್ಕಾರದ ಅನುಮೋದನೆಯ ನಂತರ 2022-23ರ ಬಡ್ಡಿ ದರವನ್ನು EPFOನ ಚಂದಾದಾರರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ಹಣಕಾಸು ಸಚಿವಾಲಯದ ಮೂಲಕ ಸರ್ಕಾರ ಅನುಮೋದಿಸಿದ ನಂತರವೇ EPFO ಬಡ್ಡಿದರವನ್ನು ಒದಗಿಸುತ್ತದೆ.
2015-16ರಲ್ಲಿ ಇಪಿಎಫ್ ಬಡ್ಡಿ ದರ ಅತ್ಯಧಿಕ, ಅಂದರೆ 8.8 ಶೇಕಡದ ಆಸುಪಾಸಿನಲ್ಲಿತ್ತು.
ಇದನ್ನೂ ಓದಿ: EPFO : ಉದ್ಯೋಗಿಗಳಿಗೆ ಹೆಚ್ಚಿನ ಪಿಂಚಣಿ ಪಡೆಯುವ ಆಯ್ಕೆಗೆ ಮೇ 3ರ ಗಡುವು ನಿಗದಿ