ಹೊಸದಿಲ್ಲಿ: ಕ್ಯಾನ್ಸರ್ (Cancer) ಉಂಟುಮಾಡುವ ಕೀಟನಾಶಕ (pesticide) ಅಂಶಗಳನ್ನು ಹೊಂದಿರುವ ಕಾರಣಕ್ಕಾಗಿ ಸಿಂಗಾಪುರ (Singapore) ಮತ್ತು ಹಾಂಕಾಂಗ್‌ಗಳಲ್ಲಿ (Hongkong) ಆಹಾರ ನಿಗಾ ಸಂಸ್ಥೆಗಳ ತೀವ್ರ ನಿಗಾಕ್ಕೆ (Spices Row) ಕಾರಣವಾಗಿರುವ ಭಾರತೀಯ ಮೂಲದ ಎವರೆಸ್ಟ್ (Everest spices) ಮಸಾಲೆ ಉತ್ಪನ್ನಗಳ ಕಂಪನಿ, ಇದೀಗ ತಮ್ಮ ಉತ್ಪನ್ನಗಳು ಬ್ಯಾನ್ (ban) ಆಗಿಲ್ಲ ಎಂದಿವೆ. ಭಾರತೀಯ ಮಸಾಲೆ ಮಂಡಳಿ ಮತ್ತು ಎಫ್‌ಎಸ್‌ಎಸ್‌ಎಐನಂತಹ ಶಾಸನಬದ್ಧ ಸಂಸ್ಥೆಗಳು ನಿಗದಿಪಡಿಸಿದ ಆಹಾರ ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿದ್ದೇವೆ ಎಂದು ಕಂಪನಿ ಹೇಳಿದೆ.
ಎರಡೂ ದೇಶಗಳಲ್ಲಿ ತಮ್ಮ ಮಸಾಲೆಗಳನ್ನು ನಿಷೇಧಿಸಲಾಗಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ. ಕಂಪನಿಯು ತನ್ನ ಎಲ್ಲಾ ಉತ್ಪನ್ನಗಳನ್ನು ರವಾನೆ ಮಾಡುವ ಮೊದಲು ಮತ್ತು ರಫ್ತು ಮಾಡುವ ಮೊದಲು ಕಟ್ಟುನಿಟ್ಟಾದ ತಪಾಸಣೆಗೆ ಒಳಪಡಿಸುತ್ತೇವೆ ಎಂದು ಹೇಳಿದೆ. ಪ್ರತಿ ಸಾಗಣೆಯೂ ಭಾರತೀಯ ಮಸಾಲೆ ಮಂಡಳಿಯಿಂದ ಗುಣಮಟ್ಟದ ತಪಾಸಣೆಗೆ ಒಳಗಾಗುತ್ತದೆ. ಪ್ರಸ್ತುತ ಸಮಸ್ಯೆಯ ನಿವಾರಣೆಗೆ ಅಧಿಕೃತ ಸಂವಹನಕ್ಕಾಗಿ ಕಾಯುತ್ತಿದ್ದು, ನಮ್ಮ ಗುಣಮಟ್ಟ ನಿಯಂತ್ರಣ ತಂಡವು ಈ ವಿಷಯವನ್ನು ಪರಿಶೀಲಿಸುತ್ತಿದೆ ಎಂದಿದೆ.
ತಮ್ಮ ಮಸಾಲೆಗಳನ್ನು ಸಿಂಗಾಪುರ ಅಥವಾ ಹಾಂಕಾಂಗ್‌ನಲ್ಲಿ ನಿಷೇಧಿಸಲಾಗಿಲ್ಲ ಎಂದು ಎವರೆಸ್ಟ್‌ನ ವಕ್ತಾರರು ತಿಳಿಸಿದ್ದಾರೆ. “ಸಿಂಗಾಪುರದ ಆಹಾರ ಸುರಕ್ಷತಾ ಪ್ರಾಧಿಕಾರವು ಹಾಂಕಾಂಗ್‌ನ ಉತ್ಪನ್ನ ವಾಪಸಾತಿ ಎಚ್ಚರಿಕೆಯನ್ನು ಉಲ್ಲೇಖಿಸಿದೆ ಮತ್ತು ಹೆಚ್ಚಿನ ತಪಾಸಣೆಗಾಗಿ ಉತ್ಪನ್ನವನ್ನು ಮರುಪಡೆಯಲು ಮತ್ತು ತಾತ್ಕಾಲಿಕವಾಗಿ ಹಿಡಿದಿಡಲು ನಮ್ಮ ಸಿಂಗಾಪುರ್ ಆಮದುದಾರರನ್ನು ಕೇಳಿದೆ” ಎಂದು ವಕ್ತಾರರು ಸ್ಪಷ್ಟಪಡಿಸಿದರು.
ದಿವಂಗತ ವಾದಿಲಾಲ್ ಭಾಯ್ ಶಾ ಸ್ಥಾಪಿಸಿದ 57 ವರ್ಷ ಹಳೆಯ ಮಸಾಲೆ ಬ್ರಾಂಡ್ ಎವರೆಸ್ಟ್ ಕಂಪನಿಯು ಶುದ್ಧ ಮತ್ತು ಮಿಶ್ರಿತ ಮಸಾಲೆಗಳ ಭಾರತದ ಅತಿದೊಡ್ಡ ತಯಾರಕ. ಜಾಗತಿಕವಾಗಿ 80ಕ್ಕೂ ಹೆಚ್ಚು ದೇಶಗಳಲ್ಲಿ ಚಲಾವಣೆಯಲ್ಲಿದೆ.
ಎವರೆಸ್ಟ್ ಜೊತೆಗೆ, ʼMDH’ ಎಂದು ಜನಪ್ರಿಯವಾಗಿರುವ ಮಹಾಶಿಯಾನ್ ಡಿ ಹಟ್ಟಿಯ ಮಸಾಲೆಗಳು ಸಹ ವಿವಾದದಲ್ಲಿ ಸಿಲುಕಿಕೊಂಡಿವೆ. MDH ನವದೆಹಲಿ ಮೂಲದ ಭಾರತೀಯ ಮಸಾಲೆ ಉತ್ಪಾದಕ ಮತ್ತು ಮಾರಾಟಗಾರ. ಎವರೆಸ್ಟ್ ನಂತರ ಇದು ಭಾರತೀಯ ಮಾರುಕಟ್ಟೆಯಲ್ಲಿ ಎರಡನೇ ಅತಿದೊಡ್ಡ ಮಸಾಲೆ ಬ್ರಾಂಡ್.
ವಿವಾದ ಏನು?
ಹಾಂಕಾಂಗ್ ಮತ್ತು ಸಿಂಗಾಪುರಗಳು ಭಾರತೀಯ ಬ್ರಾಂಡ್‌ಗಳಾದ ಎಂಡಿಹೆಚ್ ಮತ್ತು ಎವರೆಸ್ಟ್‌ನ ನಾಲ್ಕು ಮಸಾಲೆ ಉತ್ಪನ್ನಗಳ ಮಾರಾಟದ ಮೇಲೆ ನಿರ್ಬಂಧಗಳನ್ನು ವಿಧಿಸಿವೆ. ಇವುಗಳಲ್ಲಿ ನಿಗದಿತ ಮಿತಿಯನ್ನು ಮೀರಿ ಕೀಟನಾಶಕ ʼಎಥಿಲೀನ್ ಆಕ್ಸೈಡ್ʼ ಇದೆ ಎಂದು ಆರೋಪಿಸಲಾಗಿದೆ. ಹಾಂಕಾಂಗ್‌ನ ಆಹಾರ ಸುರಕ್ಷತೆ ಕೇಂದ್ರ (CFS) ಗ್ರಾಹಕರನ್ನು ಈ ಉತ್ಪನ್ನಗಳನ್ನು ಖರೀದಿಸದಂತೆ ಮತ್ತು ವ್ಯಾಪಾರಿಗಳನ್ನು ಮಾರಾಟ ಮಾಡದಂತೆ ಕೇಳಿಕೊಂಡಿದೆ. ಸಿಂಗಾಪುರ್ ಫುಡ್ ಏಜೆನ್ಸಿ, ಈ ಮಸಾಲೆಗಳನ್ನು ಮರುಪಡೆಯಲು ಕಂಪನಿಗೆ ನಿರ್ದೇಶಿಸಿದೆ.
ಸಿಂಗಾಪುರವು ‘ಎವರೆಸ್ಟ್ ಫಿಶ್ ಕರಿ ಮಸಾಲಾ’ವನ್ನು ಹಿಂಪಡೆದಿದೆ. MDHನ ಮದ್ರಾಸ್ ಕರಿ ಪೌಡರ್ (ಮದ್ರಾಸ್ ಮೇಲೋಗರ ಮಸಾಲೆ ಮಿಶ್ರಣ), ಎವರೆಸ್ಟ್ ಫಿಶ್ ಕರಿ ಮಸಾಲಾ, MDH ಸಾಂಬಾರ್ ಮಸಾಲಾ ಮಿಶ್ರಿತ ಮಸಾಲಾ ಪೌಡರ್ ಮತ್ತು MDH ಕರಿ ಪುಡಿ ಮಿಶ್ರಿತ ಮಸಾಲಾ ಪೌಡರ್ ಅನ್ನು ಖರೀದಿಸದಂತೆ ಹಾಂಕಾಂಗ್ ಗ್ರಾಹಕರನ್ನು ಕೇಳಿದೆ.
ಈಗ ಭಾರತದಲ್ಲಿ ಪರೀಕ್ಷೆ
ಇದರ ನಡುವೆ, ಭಾರತದಲ್ಲಿ ಮಾರಾಟವಾಗುವ ಮಸಾಲೆಗಳ ಗುಣಮಟ್ಟವನ್ನು ಪರಿಶೀಲಿಸಲು ಆಹಾರ ಸುರಕ್ಷತಾ ನಿಯಂತ್ರಕ ಎಫ್‌ಎಸ್‌ಎಸ್‌ಎಐ (FSSAI) ಮುಂದಾಗಿದೆ. ಸಿಂಗಾಪುರ ಮತ್ತು ಹಾಂಕಾಂಗ್‌ಗಳು ಎತ್ತಿರುವ ಕಾಳಜಿಯ ಹಿನ್ನೆಲೆಯಲ್ಲಿ, ದೇಶದಾದ್ಯಂತ MDH ಮತ್ತು ಎವರೆಸ್ಟ್ ಸೇರಿದಂತೆ ಎಲ್ಲಾ ಬ್ರಾಂಡ್‌ಗಳ ಪುಡಿ ರೂಪದ ಮಸಾಲೆಗಳ ಮಾದರಿಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದೆ.
“ಪ್ರಸ್ತುತ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು, FSSAI ಎಮ್‌ಡಿಹೆಚ್ ಮತ್ತು ಎವರೆಸ್ಟ್ ಸೇರಿದಂತೆ ಎಲ್ಲಾ ಬ್ರಾಂಡ್‌ಗಳ ಮಸಾಲೆಗಳ ಮಾದರಿಗಳನ್ನು ಮಾರುಕಟ್ಟೆಯಿಂದ ತೆಗೆದುಕೊಳ್ಳುತ್ತಿದೆ. ಅವುಗಳು ಎಫ್‌ಎಸ್‌ಎಸ್‌ಎಐ ಮಾನದಂಡಗಳನ್ನು ಪೂರೈಸುತ್ತವೆಯೇ ಎಂದು ಪರಿಶೀಲಿಸುತ್ತಿದೆ” ಎಂದು ಸರ್ಕಾರಿ ಮೂಲ ತಿಳಿಸಿದೆ.
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (FSSAI) ರಫ್ತು ಮಾಡುವ ಮಸಾಲೆಗಳ ಗುಣಮಟ್ಟವನ್ನು ನಿಯಂತ್ರಿಸುವುದಿಲ್ಲ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ FSSAI, ದೇಶೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಉತ್ಪನ್ನದ ಗುಣಮಟ್ಟವನ್ನು ಪರಿಶೀಲಿಸಲು ಮಾರುಕಟ್ಟೆಯಿಂದ ನಿಯಮಿತವಾಗಿ ಮಸಾಲೆಗಳ ಮಾದರಿಗಳನ್ನು ತೆಗೆದುಕೊಳ್ಳುತ್ತದೆ.
ಇದನ್ನೂ ಓದಿ: Everest Spices: ಸಿಂಗಾಪುರ ಬಳಿಕ ಹಾಂಕಾಂಗ್‌ನಲ್ಲೂ ಎವರೆಸ್ಟ್, ಎಂಡಿಎಚ್ ಮಸಾಲೆ ಪೌಡರ್ ಬ್ಯಾನ್!