Site icon Vistara News

Archana Patil: ಕಾಂಗ್ರೆಸ್‌ಗೆ ಶಾಕ್, ಕೇಂದ್ರದ ಮಾಜಿ ಸಚಿವನ ಸೊಸೆ ಬಿಜೆಪಿ ಸೇರ್ಪಡೆ!

Archana Patil Chakurkar

Ex Union Minister Shivraj Patil's Daughter Archana Patil Chakurkar Joins BJP

ಮುಂಬೈ: ಲೋಕಸಭೆ ಚುನಾವಣೆಗೆ (Lok Sabha Election 2024) ಕೆಲವೇ ದಿನಗಳು ಬಾಕಿ ಇರುವಾಗಲೇ ಕಾಂಗ್ರೆಸ್‌ಗೆ ಮಹಾರಾಷ್ಟ್ರದಲ್ಲಿ (Maharashtra) ಭಾರಿ ಹಿನ್ನಡೆಯಾಗಿದೆ. ಕೇಂದ್ರದ ಮಾಜಿ ಸಚಿವ, ಲೋಕಸಭೆ ಸ್ಪೀಕರ್‌, ಕಾಂಗ್ರೆಸ್‌ ನಾಯಕರೂ ಆದ ಶಿವರಾಜ್‌ ಪಾಟೀಲ್‌ ಅವರ ಸೊಸೆ ಡಾ.ಅರ್ಚನಾ ಪಾಟೀಲ್‌ ಚಕುರ್ಕರ್‌ (Dr Archana Patil Chakurkar) ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ಸಮ್ಮುಖದಲ್ಲಿ ಡಾ.ಅರ್ಚನಾ ಪಾಟೀಲ್‌ ಚಕುರ್ಕರ್‌ ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ.

ದೇವೇಂದ್ರ ಫಡ್ನವಿಸ್‌ ಅವರ ಅಧಿಕೃತ ನಿವಾಸ ‘ಸಾಗರ್‌’ದಲ್ಲಿ ಡಾ.ಅರ್ಚನಾ ಪಾಟೀಲ್‌ ಚಕುರ್ಕರ್‌ ಅವರು ಬಿಜೆಪಿ ಸೇರಿದರು. ಇವರನ್ನು ದೇವೇಂದ್ರ ಫಡ್ನವಿಸ್‌ ಅವರು ಸ್ವಾಗತಿಸಿದರು. “ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದ ನಾರಿಶಕ್ತಿ ವಂದನ್‌ ಅಧಿನಿಯಮ ಯೋಜನೆಯನ್ನು ಮೆಚ್ಚಿ ನಾನು ಬಿಜೆಪಿ ಸೇರ್ಪಡೆಯಾಗಿದ್ದೇನೆ. ಈ ಯೋಜನೆಯು ಮಹಿಳೆಯರಿಗೆ ಸಮಾನ ಅವಕಾಶಗಳನ್ನು ನೀಡುತ್ತದೆ. ಮೋದಿ ಅವರ ನಾಯಕತ್ವವೂ ನನಗೆ ಇಷ್ಟವಾಗಿದೆ. ಮುಂದಿನ ದಿನಗಳಲ್ಲಿ ಜನಪರವಾಗಿ ಕೆಲಸ ಮಾಡುತ್ತೇನೆ” ಎಂದು ಹೇಳಿದರು.

ಕಳೆದ ಸೋಮವಾರವೇ ಶಿವರಾಜ್‌ ಪಾಟೀಲ್‌ ಆಪ್ತರೂ ಆದ ಮಾಜಿ ಸಚಿವ ಬಸವರಾಜ್‌ ಮುರುಮ್ಕಾರ್‌ ಅವರ ಜತೆಗೆ ಡಾ.ಅರ್ಚನಾ ಪಾಟೀಲ್‌ ಅವರು ಬಿಜೆಪಿ ಸೇರ್ಪಡೆಯಾಗಬೇಕಿತ್ತು. ಆದರೆ, ಮಗಳ ಮದುವೆ ಇದ್ದ ಹಿನ್ನೆಲೆಯಲ್ಲಿ ಬಿಜೆಪಿ ಸೇರ್ಪಡೆಯನ್ನು ಅವರು ಮುಂದೂಡಿದ್ದರು. ಡಾ.ಅರ್ಚನಾ ಪಾಟೀಲ್‌ ಅವರು ಲೈಫ್‌ಕೇರ್‌ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಚೇರ್‌ಪರ್ಸನ್‌ ಆಗಿದ್ದಾರೆ. ಇವ ಪತಿ ಶೈಲೇಶ್‌ ಪಾಟೀಲ್‌ ಅವರು ಮಹಾರಾಷ್ಟ್ರ ಕಾಂಗ್ರೆಸ್‌ ಕಾರ್ಯದರ್ಶಿಯಾಗಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಭಾರತೀಯ ವಾಯುಪಡೆಯ ಮಾಜಿ ಮುಖ್ಯಸ್ಥ ಆರ್​ಕೆಎಸ್​ ಬದೌರಿಯಾ ಬಿಜೆಪಿಗೆ ಸೇರಿದ್ದರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಅವರು ಭಾರತೀಯ ವಾಯುಪಡೆಯಲ್ಲಿ ಬದೌರಿಯಾ ಅವರ ಸುದೀರ್ಘ ಸೇವೆಯನ್ನು ಶ್ಲಾಘಿಸಿ ಪಕ್ಷಕ್ಕೆ ಬರ ಮಾಡಿಕೊಂಡಿದ್ದರು. ಇನ್ನು ಜಿಂದಾಲ್‌ ಕಂಪನಿ ಚೇರ್ಮನ್‌ ನವೀನ್‌ ಜಿಂದಾಲ್‌ ಅವರು ಕೂಡ ಕಾಂಗ್ರೆಸ್‌ಗೆ ವಿದಾಯ ಹೇಳಿದ್ದು, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್‌ ಕೂಡ ಗಿಟ್ಟಿಸಿಕೊಂಡಿದ್ದಾರೆ.

ಇದನ್ನೂ ಓದಿ: Lok Sabha Election: ಬಿಜೆಪಿ ಸ್ಟಾರ್‌ ಪ್ರಚಾರಕರ ಪಟ್ಟಿ ಬಿಡುಗಡೆ; ಇವರೇ ನೋಡಿ ಆ ಸ್ಟಾರ್‌ಗಳು

ಇದಕ್ಕೂ ಮೊದಲು ಖ್ಯಾತ ಬಾಲಿವುಡ್ ಗಾಯಕಿ ಅನುರಾಧಾ ಪೌಡ್ವಾಲ್ ಅವರು ಮಾರ್ಚ್ 16ರಂದು ಬಿಜೆಪಿ ಸೇರಿದ್ದಾರೆ. ದೆಹಲಿಯಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ಬಿಜೆಪಿ ಮುಖಂಡರೊಂದಿಗೆ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪೌಡ್ವಾಲ್, ಪ್ರಧಾನಿ ನರೇಂದ್ರ ಮೋದಿ ಅವರನ್ನು (Anuradha Paudwal joins BJP) ಹಾಡಿ ಹೊಗಳಿದ್ದರು. ʻʻಮೋದಿ ನೇತೃತ್ವದಲ್ಲಿ ಪಕ್ಷಕ್ಕೆ ಸೇರಲು ನನಗೆ ಸಂತೋಷವಾಗಿದೆ’’ ಎಂದಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version