Site icon Vistara News

Explainer: ಆಪರೇಷನ್‌ ಬ್ಲೂ ಸ್ಟಾರ್‌ ಎಂಬ ಚಂಡಮಾರುತಕ್ಕೆ ಈಗ 38 ವರ್ಷ!

operation blue star

ಆಪರೇಷನ್‌ ಬ್ಲೂ ಸ್ಟಾರ್-‌ ಈ ಹೆಸರು ಕೇಳಿದರೆ ಇಂದಿಗೂ ಸಿಕ್ಖರು ಮಾತ್ರವಲ್ಲ ಇಡೀ ಭಾರತ ಒಮ್ಮೆ ಕಂಪಿಸುತ್ತದೆ. ಖಲಿಸ್ತಾನ್‌ ಚಳವಳಿ ಎಂಬ ಘೋರ ಉಗ್ರಗಾಮಿ ಚಳವಳಿಯ ಹುಟ್ಟು ಬೆಳವಣಿಗೆ, ಅಳಿವು, ಪುನರ್ಜನ್ಮ ಇವುಗಳೆಲ್ಲಾ ಈ ಆಪರೇಶನ್‌ ಜೊತೆ ತಳುಕು ಹಾಕಿಕೊಂಡಿವೆ. ಅದು ಭಾರತದ ಇತಿಹಾಸದಲ್ಲಿ ಒಂದು ಐತಿಹಾಸಿಕ ಘಟನೆ.

1984ರ ಜೂನ್‌ 3ರಿಂದ 8ರವರೆಗೆ ನಡೆದ ಈ ಆಪರೇಷನ್‌ಗೆ ಈಗ 38 ವರ್ಷ ತುಂಬಿದೆ. ಆಪರೇಷನ್‌ ಬ್ಲೂ ಸ್ಟಾರ್‌ ನಡೆಸಿದವರು ಯಾರು ಮತ್ತು ಯಾಕೆ? ಸಿಖ್‌ ಪ್ರತ್ಯೇಕತಾವಾದ ತಲೆಯೆತ್ತಿದ್ದು ಯಾಕೆ? ಭಯೋತ್ಪಾದಕರನ್ನು ಮಟ್ಟ ಹಾಕಲು ಆಪರೇಶನ್‌ ಬ್ಲೂ ಸ್ಟಾರ್‌ ಯಶಸ್ವಿಯಾಯಿತಾ ಅಥವಾ ಮತ್ತೆ ಪ್ರತ್ಯೇಕತಾವಾದ ತಲೆಯೆತ್ತಿದೆಯಾ? ಪ್ರಧಾನ ಮಂತ್ರಿಯ ಹತ್ಯೆ, ಸಿಕ್ಖರ ನರಮೇಧ ಇತ್ಯಾದಿಗಳಿಗೆ ಈ ಕಾರ್ಯಾಚರಣೆ ಕಾರಣ ಆದದ್ದು ಹೇಗೆ? ನಂತರ ಏನೇನಾಯ್ತು? ಬನ್ನಿ ಇಲ್ಲಿ ವಿವರವಾಗಿ ತಿಳಿಯೋಣ.

ಭಾರತ ಕಂಡ ದಿಟ್ಟ ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರು ಆಪರೇಶನ್‌ ಬ್ಲೂಸ್ಟಾರ್‌ ನಡೆಸಲು ಕಾರಣವಾದದ್ದು ಖಲಿಸ್ತಾನ ಉಗ್ರವಾದಿಗಳು. ಜರ್ನೈಲ್‌ ಸಿಂಗ್‌ ಭಿಂದ್ರಾನ್‌ವಾಲೆ ಎಂಬ ಭಯೋತ್ಪಾದಕ ಸಿಕ್ಖರ ಪವಿತ್ರ ತಾಣವಾದ ಅಮೃತಸರದ ಸ್ವರ್ಣಮಂದಿರವನ್ನೇ ತನ್ನ ಭಯೋತ್ಪಾದಕ ಕಾರ್ಯಾಚರಣೆಗಳ ಕೇಂದ್ರವಾಗಿ ಮಾಡಿಕೊಂಡಾಗ, ಆತನನ್ನು ಮಟ್ಟಹಾಕಲು ಇಂದಿರಾ ಸೈನ್ಯವನ್ನೇ ಕಳಿಸಿ ಮಂದಿರಕ್ಕೆ ನುಗ್ಗಿಸಿದ್ದು ಈಗ ಇತಿಹಾಸ. ಈ ಕ್ರಮದಿಂದ ಆಧುನಿಕ ಭಾರತದ ಇತಿಹಾಸವೇ ಬದಲಾಯಿತು ಎಂದೂ ಹೇಳಬಹುದು.

ಈ ಕಾರ್ಯಾಚರಣೆಗೆ ಕಾರಣವಾದ ಖಲಿಸ್ತಾನ್‌ ಚಳವಳಿಯ ಬಗ್ಗೆ ಮೊದಲು ತಿಳಿಯೋಣ.

ಪಾಕಿಸ್ತಾನದ ಜೊತೆಗೇ ಹುಟ್ಟಿದ ಖಲಿಸ್ತಾನ್‌ ಚಳವಳಿ

1947ರ ಆಗಸ್ಟ್‌ ತಿಂಗಳಲ್ಲಿ ದೇಶಕ್ಕೆ ಸ್ವಾತಂತ್ರ್ಯ ದೊರೆಯಿತು. ಅದರ ಜೊತೆಗೇ ದೇಶವನ್ನು ಬ್ರಿಟಿಷರು ಎರಡಾಗಿ ಒಡೆದು ಹಾಕಿದರು. ಖಲಿಸ್ತಾನ್‌ ಚಳವಳಿಗೆ ಪರೋಕ್ಷ ಕಾರಣ ಮುಸ್ಲಿಂ ಲೀಗ್.‌ 1940ರಿಂದಲೇ ಮುಸ್ಲಿಂ ಲೀಗ್‌ ಮುಸ್ಲಿಮರಿಗಾಗಿ ಪ್ರತ್ಯೇಕ ಪಾಕಿಸ್ತಾನಕ್ಕೆ ಆಗ್ರಹಿಸತೊಡಗಿತ್ತು. ಆಗ ಸಿಖ್ಕರಲ್ಲಿ ಕೆಲವು ಪ್ರತ್ಯೇಕತಾವಾದಿಗಳು ಸೃಷ್ಟಿಯಾದರು. ತಮಗೂ ಪ್ರತ್ಯೇಕ ಖಲಿಸ್ತಾನ್‌ ಎಂಬ ರಾಷ್ಟ್ರ ಬೇಕು ಎಂದು ಆಗ್ರಹ ಶುರುಮಾಡಿದರು. ಈ ನಡುವೆ ಪಂಜಾಬಿ ಬಹುಸಂಖ್ಯಾತರಿಗಾಗಿ ಪ್ರತ್ಯೇಕ ರಾಜ್ಯ ನೀಡಬೇಕೆಂದು ಅಕಾಲಿ ದಳ ಪಂಜಾಬಿ ಸುಬಾ ಚಳವಳಿ ಆರಂಭಿಸಿತು. 1966ರಲ್ಲಿ ಪಂಜಾಬ್‌ ಅನ್ನು ವಿಭಜಿಸಿ ಹರಿಯಾಣ, ಹಿಮಾಚಲ ಪ್ರದೇಶ ಮತ್ತು ಕೇಂದ್ರಾಡಳಿತ ಪ್ರದೇಶವಾದ ಚಂಡೀಗಢಗಳನ್ನು ಹೊಸದಾಗಿ ರಚಿಸಲಾಯಿತು. ಆಗ ಪಂಜಾಬ್‌ ಪ್ರತ್ಯೇಕತಾವಾದ ಜೋರಾಯಿತು.

1971ರಲ್ಲಿ ಪಂಜಾಬ್‌ನ ಮಾಜಿ ಹಣಕಾಸು ಸಚಿವ ಜಗ್ಜೀತ್‌ ಸಿಂಗ್‌ ಚೌಹಾಣ್‌ ಅಮೆರಿಕದ ಪತ್ರಿಕೆಯೊಂದರಲ್ಲಿ ಖಲಿಸ್ತಾನ್‌ ಸ್ಥಾಪನೆ ಬಗ್ಗೆ ಜಾಹೀರಾತು ನೀಡಿದರು. 1973ರಲ್ಲಿ ಅಕಾಲಿ ದಳ ಮತ್ತು ಇತರ ಸಿಖ್‌ ಗುಂಪುಗಳು ಆನಂದಪುರ ಸಾಹಿಬ್‌ ಗೊತ್ತುವಳಿ ಅಂಗೀಕರಿಸಿ, ಖಲಿಸ್ತಾನ್‌ ಚಳವಳಿ ಹುಟ್ಟುಹಾಕಿದರು.

ಇದನ್ನೂ ಓದಿ: Explainer: Spelling bee- 14 ವರ್ಷಗಳಿಂದ ಭಾರತೀಯರ ಗೆಲುವು, ಏನಿದರ ರಹಸ್ಯ?

ಭಿಂದ್ರಾನ್‌ವಾಲೆ ಎಂಬ ಬಿರುಗಾಳಿ

ಈ ಚಳವಳಿ ಹೆಚ್ಚು ಕಾವು ಪಡೆದುಕೊಂಡದ್ದು 1980ರ ದಶಕದಲ್ಲಿ. ಜರ್ನೈಲ್‌ ಸಿಂಗ್‌ ಭಿಂದ್ರನ್‌ವಾಲೆ ಎಂಬ ಉಗ್ರಗಾಮಿ ಲೀಡರ್‌ ಅಂತಾರಾಷ್ಟ್ರೀಯ ಗಮನ ಸೆಳೆಯುವಂತೆ ಬೆಳೆಯಲಾರಂಭಿಸಿದ್ದು ಅದೇ ದಶಕದಲ್ಲಿ. ಈತ ದಮದಮಿ ತಕ್ಸಲ್‌ ಎಂಬ ಪಂಗಡದ ಧಾರ್ಮಿಕ ನಾಯಕನಾಗಿದ್ದ. ಭಿಂದ್ರನ್‌ವಾಲೆ ಅಂದಿನ ಪಂಜಾಬ್‌ನ ಯುವಕರ ಮೇಲೆ ಭಾರಿ ಪ್ರಭಾವ ಬೀರಿದ್ದ. ತೀವ್ರವಾದಿ ಸಿಖ್‌ ಮತೀಯವಾದಿಯಾಗಿದ್ದ ಇವನು ಸಿಖ್‌ ಧರ್ಮದ ಕಟ್ಟರ್‌ ಪಂಥೀಯನಾಗಿದ್ದ. ಇವನು ಒಂದಷ್ಟು ತೀವ್ರವಾದಿ ಸಿಕ್ಖರನ್ನು ಜತೆಗೆ ಸೇರಿಸಿಕೊಂಡು ಅವರಿಗೆ ಕೆನಡಾ ಮುಂತಾದ ಕಡೆಗಳಿಂದ ಬಂದ ಹಣಕಾಸಿನ ನೆರವಿನ ಮೂಲಕ ಶಸ್ತ್ರಾಸ್ತ್ರ ಕೊಡಿಸಿದ. ಇವನಲ್ಲಿ ಭಾರತ ವಿರೋಧಿ ಗುಣಗಳನ್ನು ಕಂಡ ಪಾಕಿಸ್ತಾನ ಕೂಡ ಭಿಂದ್ರಾನ್‌ವಾಲೆಗೆ ಗಡಿಯಾಚೆಯಿಂದ ಚಹಾಯ ಮಾಡತೊಡಗಿತು.

ಭಿಂದ್ರನ್‌ವಾಲೆಯಿಂದಾಗಿ ಖಲಿಸ್ತಾನ್‌ ಚಳವಳಿಗೆ ಶಸ್ತ್ರಾಸ್ತ್ರ ಹೋರಾಟದ ಸ್ವರೂಪ ಬಂದಿತು. 1980ರ ಏಪ್ರಿಲ್‌ನಲ್ಲಿ ಇವನು ಸಹಚರರ ಜೊತೆಗೆ ಅಮೃತಸರದ ಹರ್ಮಿಂದಿರ್‌ ಸಾಹಿಬ್‌ಗೆ ನುಗ್ಗಿದ. ಭಾರತ ಸರಕಾರದ ವಿರುದ್ಧ ದಂಗೆ ಆರಂಭಿಸಲೆಂದು ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ದೇವಾಲಯದೊಳಗೆ ಬಚ್ಚಿಟ್ಟಿದ್ದ. 1981ರಲ್ಲಿ ಇವನ ಸಹಚರರು ಭಿಂದ್ರನ್‌ವಾಲೆಯ ಕಟ್ಟಾ ಟೀಕಾಕಾರನಾಗಿದ್ದ ಕಾಂಗ್ರೆಸ್‌ ನಾಯಕ ಮತ್ತು ‘ಪಂಜಾಬ್‌ ಕೇಸರಿ’ ಪತ್ರಿಕೆಯ ಸಂಸ್ಥಾಪಕ ಲಾಲಾ ಜಗತ್‌ ನಾರಾಯಣ್‌ ಅವರನ್ನು ಕೊಂದುಹಾಕಿದರು. 1982ರಲ್ಲಿ ಆನಂದಪುರ ಸಾಹಿಬ್‌ ಗೊತ್ತುವಳಿ ಅನುಷ್ಠಾನಕ್ಕೆ ಸಂಬಂಧಿಸಿ ಭಿಂದ್ರನ್‌ವಾಲೆ ʼಧರ್ಮ ಯುದ್ಧ ಮೋರ್ಚಾʼ ಆರಂಭಿಸಿದ. ಸಾವಿರಾರು ಜನರು ಈ ಚಳವಳಿಗೆ ಧುಮುಕಿದರು.

ಉಪ ಪೊಲೀಸ್‌ ಮಹಾ ನಿರ್ದೇಶಕರ ಹತ್ಯೆ

1983ರ ಏಪ್ರಿಲ್‌ನಲ್ಲಿ ಪಂಜಾಬ್‌ನ ಡೆಪ್ಯೂಟಿ ಪೊಲೀಸ್‌ ಮಹಾನಿರ್ದೇಶಕರಾಗಿದ್ದ ಎ.ಎಸ್‌. ಅಟ್ವಾಲ್‌ ಅವರನ್ನು ಖಲಿಸ್ತಾನ್‌ ಉಗ್ರರು ಗುಂಡಿಕ್ಕಿ ಕೊಂದರು. ಅಕ್ಟೋಬರ್‌ನಲ್ಲಿ ಹಿಂದೂಗಳಿದ್ದ ಬಸ್‌ ಮೇಲೆ ದಾಳಿ ನಡೆಸಿ 6 ಮಂದಿಯನ್ನು ಕೊಂದು ಹಾಕಿದರು. ಚಳವಳಿಯನ್ನು ಹತ್ತಿಕ್ಕಲು ಕೇಂದ್ರ ಸರಕಾರ ಪಂಜಾಬ್‌ ಮೇಲೆ ರಾಷ್ಟ್ರಪತಿ ಆಡಳಿತ ಹೇರಿತು. 1984 ಫೆಬ್ರವರಿಯಲ್ಲಿ ಸಂವಿಧಾನದಲ್ಲಿ ಸಿಕ್ಖರಿಗೆ ಹಿಂದೂ ಎಂದು ಸಂಬೋಧಿಸಬಾರದು ಎಂದು ಆಗ್ರಹಿಸಿ ಅಕಾಲಿ ದಳ ಪ್ರತಿಭಟನೆ ಆರಂಭಿಸಿತು.

ಸ್ವರ್ಣಮಂದಿರವೇ ಅಡಗುದಾಣ

1980ರಿಂದಲೇ ಭಿಂದ್ರನ್‌ವಾಲೆ ಸ್ವರ್ಣಮಂದಿರವನ್ನು ತನ್ನ ಅಡಗುದಾಣವನ್ನಾಗಿ ಮಾಡಿಕೊಂಡಿದ್ದ. ನೂರಾರು ಖಲಿಸ್ತಾನ್‌ ಉಗ್ರರು ಈ ತಾಣವನ್ನು ತಮ್ಮ ಕೇಂದ್ರವನ್ನಾಗಿ ಮಾಡಿಕೊಂಡಿದ್ದರು. ಹಿಂದೂಗಳ ವಿರುದ್ಧ, ಮುಸ್ಲಿಮರ ವಿರುದ್ಧ ಭಯೋತ್ಪಾದಕ ಕೃತ್ಯಗಳನ್ನು ನಡೆಸುತ್ತಿದ್ದರು. ಇದರ ವಿರುದ್ಧ ಪ್ರಜ್ಞಾವಂತ ಸಿಕ್ಖರು ಧ್ವನಿ ಎತ್ತಿದ್ದರು. ಆದರೆ ಖಲಿಸ್ತಾನ್‌ವಾದಿಗಳು ಈ ಮಾತನ್ನು ಕೇಳುವವರಾಗಿರಲಿಲ್ಲ. ಅವರು ತಮ್ಮ ಉಗ್ರವಾದವನ್ನು ಇನ್ನೂ ತೀವ್ರವಾಗಿಸಿದರು. ಸಿಖ್ಖರ ಅತ್ಯಂತ ಪವಿತ್ರ ಸ್ಥಳವಾದ ಸ್ವರ್ಣಮಂದಿರ ದೇಗುಲದ ಅಕಾಲ್‌ ತಖ್ತ್‌ ಸಂಕೀರ್ಣ ಪೂರ್ತಿ ಭಿಂದ್ರನ್‌ವಾಲೆಯ ಭದ್ರಕೋಟೆಯಾಗಿತ್ತು. ಇಲ್ಲಿ ಭಿಂದ್ರನ್‌ವಾಲೆ ಹಾಗೂ ಆತನ ಸಹಚರರು ಶಸ್ತ್ರಾಸ್ತ್ರಗಳೊಂದಿಗೆ ಆಶ್ರಯ ಪಡೆದಿದ್ದರು. ಆತ ಪಂಜಾಬಿನಾದ್ಯಂತ ಹಾವಳಿ ಎಬ್ಬಿಸುತ್ತಿದ್ದ. ಅಕ್ಷರಶಃ ಅಲ್ಲಿಂದಲೇ ತನ್ನದೇ ಆದ ಸರಕಾರವನ್ನು ನಡೆಸುತ್ತಿದ್ದ. ಅವನಿಗೆ ಪಾಕಿಸ್ತಾನದ ಕುಮ್ಮಕ್ಕು ಇತ್ತು. ಅವನನ್ನು ಹಾಗೇ ಬಿಟ್ಟಿದ್ದರೆ ಪಂಜಾಬ್‌ ಪ್ರತ್ಯೇಕ ರಾಷ್ಟ್ರ ಎಂದು ಕೆಲವೇ ದಿನಗಳಲ್ಲಿ ಘೋಷಿಸಿಕೊಂಡುಬಿಡುತ್ತಿದ್ದನೇನೋ? ಆಗ ಪಾಕಿಸ್ತಾನಕ್ಕೆ ಪಂಜಾಬ್‌ಗೆ ತನ್ನ ಸೈನ್ಯ ನುಗ್ಗಿಸುವುದು ಸುಲಭವಾಗುತ್ತಿತ್ತು. ಆತ ಭಾರತದ ಸಾರ್ವಭೌಮತ್ವಕ್ಕೆ ಸವಾಲಾಗಿದ್ದ. ಅವನನ್ನು ಹಿಮ್ಮೆಟ್ಟಿಸುವುದು ಸರಕಾರಕ್ಕೆ ತುರ್ತು ಅಗತ್ಯವಾಗಿತ್ತು. ಆತನನ್ನೂ ಚಳವಳಿಯನ್ನೂ ಒಂದೇ ಬಾರಿಗೆ ಮಟ್ಟ ಹಾಕೋಣ ಎಂದು ಆಗ ಪ್ರಧಾನಮಂತ್ರಿ ಆಗಿದ್ದ ಇಂದಿರಾ ಗಾಂಧಿ ನಿರ್ಧರಿಸಿದರು. ಆಗ ಆರಂಭವಾಯಿತು ಆಪರೇಷನ್‌ ಬ್ಲೂಸ್ಟಾರ್‌.

ಹಂತ ಹಂತವಾಗಿ ನಡೆದ ಆಪರೇಷನ್‌

ಆಪರೇಷನ್‌ ಬ್ಲೂ ಸ್ಟಾರ್‌ ಶುರುವಾದದ್ದು 1984ರ ಜೂನ್‌ 1ರಂದು. ಇದು ಹಂತ ಹಂತಗಳಲ್ಲಿ ನಡೆಯಿತು. ಆರಂಭವಾಗಿ ಪೂರ್ತಿಯಾಗಿ ಮುಕ್ತಾಯವಾಗಿದ್ದು ಜೂನ್‌ 10ಕ್ಕೆ. ಆಪರೇಷನ್‌ ಮುಖ್ಯವಾಗಿ ನಡೆದಿದ್ದು ಜೂನ್‌ 3ರಿಂದ 8ರವರೆಗೆ. ಇದರಲ್ಲಿ 2 ಭಾಗಗಳಿವೆ. ಮೊದಲನೆಯ ಭಾಗ ಆಪರೇಷನ್‌ ಮೆಟಲ್‌ನಲ್ಲಿ ಹರ್ಮಂದಿರ್‌ ಸಾಹಿಬ್‌ ಕಾಂಪ್ಲೆಕ್ಸ್‌ ಅನ್ನು ಭಾರತೀಯ ಮಿಲಿಟರಿ ಸುತ್ತುವರಿಯಿತು. ಇದರ ನಂತರ ನಡೆದ ಆಪರೇಷನ್‌ ಶಾಪ್‌ನಲ್ಲಿ ಪಂಜಾಬ್‌ನ ಗ್ರಾಮಾಂತರ ಪ್ರದೇಶಗಳಲ್ಲಿ ದಾಳಿ ನಡೆಸಿ ಬಂಡುಕೋರರನ್ನು ಸೆರೆ ಹಿಡಿಯಲಾಯಿತು. ಇದಾದ ಬಳಿಕ ಆಪರೇಷನ್‌ ವುಡ್‌ರೋಸ್‌ ನಡೆಯಿತು. ಪಂಜಾಬ್‌ ಪೂರ್ತಿ ನಡೆದ ಈ ಕಾರ್ಯಾಚರಣೆಯಲ್ಲಿ ಖಲಿಸ್ತಾನ್‌ ಸಹಾನುಭೂತಿ ಪರರನ್ನೂ ಬಂಧಿಸಲಾಯಿತು. ಕಾರ್ಯಾಚರಣೆಯ ಸಂದರ್ಭದಲ್ಲಿ ಏನಾಗುತ್ತಿದೆ ಎಂಬುದು ಹೊರಲೋಕಕ್ಕೆ ತಿಳಿಯದಂತೆ ಮಾಡಿತ್ತು ಇಂದಿರಾ ಸರ್ಕಾರ. ಪಂಜಾಬ್‌ನಲ್ಲಿ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಲಾಯಿತು. ರಾಜ್ಯ ಪೂರ್ತಿ ಕರ್ಫ್ಯೂ ವಿಧಿಸಲಾಗಿತ್ತು. ಮುಖ್ಯ ಆಪರೇಷನ್‌ನಲ್ಲಿ ಭಾರತೀಯ ಸೈನ್ಯದ ಟ್ಯಾಂಕ್‌ಗಳು, ಹೆಲಿಕಾಪ್ಟರ್‌ಗಳು, ಶಸ್ತ್ರಸಜ್ಜಿತ ವಾಹನಗಳು ಮತ್ತು ಫಿರಂಗಿದಳ ಭಾಗವಹಿಸಿದವು. ಹಿಂದೆ ಎಂದೂ ಈ ಪ್ರಮಾಣದ ಬಲಪ್ರಯೋಗವನ್ನು ಯಾವುದೇ ಉಗ್ರರ ಮೇಲೆ ಯಾವ ಸರಕಾರವೂ ಮಾಡಿರಲಿಲ್ಲ, ಮುಂದೆಯೂ ಮಾಡಲಿಲ್ಲ. ಈ ಸಂದರ್ಭದಲ್ಲಿ ಘನಘೋರವಾದ ಗುಂಡಿನ ಕಾಳಗ ನಡೆಯಿತು. ಭಿಂದ್ರಾನ್‌ವಾಲೆಯನ್ನು ಶರಣಾಗಲು ಆಗ್ರಹಿಸಲಾಯಿತು. ಆದರೆ ಅವನು ಅದಕ್ಕೆ ಒಪ್ಪಲಿಲ್ಲ. ಗುಂಡಿನ ಕಾಳಗದಲ್ಲಿ ಭಿಂದ್ರಾನ್‌ವಾಲೆ ಮತ್ತು ಅವನ ಸಹಚರರೆಲ್ಲ ಸತ್ತುಹೋದರು.

ಇದನ್ನೂ ಓದಿ: Explainer: ಹಿಮಾಚಲದಲ್ಲಿ ಖಲಿಸ್ತಾನ್‌ ಹೆಜ್ಜೆ: ಏನಿದರ ಹಕೀಕತ್?‌

ಹಾಗಿದ್ದರೆ ಈ ಗುಂಡಿನ ಕಾಳಗದಲ್ಲಿ ಸತ್ತವರೆಷ್ಟು? ಸರಕಾರದ ಅಧಿಕೃತ ಅಂಕಿ ಅಂಶಗಳ ಪ್ರಕಾರ ಸತ್ತವರು 575 ಮಂದಿ. ಆದರೆ ಪ್ರತ್ಯಕ್ಷ ಸಾಕ್ಷಿಗಳ ಪ್ರಕಾರ ಸಾವಿರಾರು ಮಂದಿ ಸತ್ತುಹೋದರು. ಸ್ವರ್ಣಮಂದಿರದಲ್ಲಿ ರಕ್ತದ ಕೋಡಿ ಹರಿದಿತ್ತು. ಇವರಲ್ಲಿ ಉಗ್ರಗಾಮಿಗಳ ಜೊತೆಗೆ, ಸ್ವರ್ಣಮಂದಿರಕ್ಕೆ ಭೇಟಿ ನೀಡಿದ್ದ ಹಲವಾರು ಭಕ್ತಾದಿಗಳೂ ಕೂಡ ಇದ್ದರು. ಯಾಕೆಂದರೆ ಈ ಭಕ್ತಾದಿಗಳನ್ನು ಉಗ್ರಗಾಮಿಗಳು ಮಾನವ ಗುರಾಣಿಗಳ ಥರ ಬಳಸಿಕೊಂಡಿದ್ದರು. ಆದ್ದರಿಂದ ಮೊದಲ ಗುಂಡುಗಳು ಈ ಭಕ್ತರಿಗೇ ಬಿದ್ದವು. ಉಗ್ರರ ಶಸ್ತ್ರಾಸ್ತ್ರ ಸಾಮರ್ಥ್ಯವನ್ನು ಮಿಲಿಟರಿ ಕಡಿಮೆ ಅಂದಾಜು ಮಾಡಿತ್ತು. ಅವರ ಬಳಿಕ ಗ್ರೆನೇಡ್‌ ಲಾಂಚರ್‌ಗಳು ಮುಂತಾದ ಆಧುನಿಕ ಆಯುಧಗಳಿದ್ದವು. ಅವರೂ ಸಾಕಷ್ಟು ಪ್ರತಿದಾಳಿ ನಡೆಸಿದರು. ಮಿಲಿಟರಿಯನ್ನೂ ಸಾಕಷ್ಟು ಸಾವುನೋವು ಉಂಟಾಯಿತು. ಜಗತ್ತಿನಾದ್ಯಂತ ಈ ಕಾರ್ಯಾಚರಣೆಗೆ ಸಿಖ್‌ ಸಮುದಾಯ ಆಘಾತ ವ್ಯಕ್ತಪಡಿಸಿತು. ಸ್ವರ್ಣಮಂದಿರವನ್ನು ಇಂದಿರಾ ಗಾಂಧಿ ಸರ್ಕಾರ ಅಪವಿತ್ರಗೊಳಿಸಿದೆ ಎಂದು ಹೇಳಿತು.

ಪ್ರತೀಕಾರದ ಕಾಳ್ಗಿಚ್ಚು

ಈ ಕಾರ್ಯಾಚರಣೆಯಿಂದಾಗಿ ಖಲಿಸ್ತಾನ ಚಳವಳಿಯೇನೋ ಕೆಲಕಾಲದ ಮಟ್ಟಿಗೆ ತಣ್ಣಗಾಯಿತು. ಯಾಕೆಂದರೆ ನರರಾಕ್ಷಸನಂತಿದ್ದ ಭಿಂದ್ರಾನ್‌ವಾಲೆ ಸತ್ತುಹೋಗಿದ್ದ. ಆದರೆ ಸಿಕ್ಖರಲ್ಲಿ ಪ್ರತೀಕಾರದ ಹೊಗೆ ಆಡತೊಡಗಿತ್ತು. ಕೆಲವು ಸಿಖ್‌ ಸೈನ್ಯಾಧಿಕಾರಿಗಳು ಕೂಡ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದರು. ಪ್ರಧಾನಿ ಇಂದಿರಾ ಅವರ ಅಂಗರಕ್ಷಕರ ಬಳಗದಲ್ಲಿ ಸಿಖ್‌ ಯೋಧರಿದ್ದರು. ಅವರನ್ನು ಅಲ್ಲಿಂದ ತೆಗೆಯಬೇಕು ಎಂದು ಗುಪ್ತಚರ ಇಲಾಖೆ ಹೇಳಿತು. ಆದರೆ ಹೀಗೆ ಮಾಡಿದರೆ ಸಿಕ್ಖರನ್ನು ಅವಮಾನ ಮಾಡಿದಂತಾಗುತ್ತದೆ ಎಂದು ಇಂದಿರಾ ಭಾವಿಸಿದರು. ಇದು ಮುಂದಿನ ದುರಂತಗಳಿಗೆ ಕಾರಣವಾಯಿತು.

1984ರ ಅಕ್ಟೋಬರ್‌ 31ರಂದು ಮನೆಯಿಂದ ಹೊರಗೆ ಬರುತ್ತಿದ್ದ ಇಂದಿರಾ ಗಾಂಧಿಯವರ ಮೇಲೆ ಅವರ ಅಂಗರಕ್ಷಕರಾದ ಸತ್ವಂತ್‌ ಸಿಂಗ್‌ ಹಾಗೂ ಬಿಯಾಂತ್‌ ಸಿಂಗ್‌ ಗುಂಡಿನ ಮಳೆ ಸುರಿಸಿದರು. ಇಂದಿರಾ ಅವರಿಗೆ 33 ಬಾರಿ ಗುಂಡು ಹೊಡೆಯಲಾಗಿತ್ತು. 23 ಗುಂಡುಗಳು ಅವರ ದೇಹವನ್ನು ಸೀಳಿ ಹೊರಗೆ ಬಂದರೆ, 7 ಗುಂಡುಗಳು ದೇಹದಲ್ಲೇ ಇದ್ದವು. ದೇಶ ಕಂಡ ದಿಟ್ಟ ಪ್ರಧಾನಿ, ಆಪರೇಷನ್‌ ಬ್ಲೂ ಸ್ಟಾರ್‌ ನಡೆದ ಕೆಲವೇ ತಿಂಗಳಲ್ಲಿ ಹತ್ಯೆಯಾಗಿದ್ದರು. ಕೊಲೆಗಾರರನ್ನೂ ಸ್ಥಳದಲ್ಲೇ ಸಾಯಿಸಲಾಯಿತು. ಈ ಕೃತ್ಯ, ದಿಲ್ಲಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ವಾಸಿಸುತ್ತಿದ್ದ ಅಮಾಯಕ ಸಿಕ್ಖರ ಮೇಲೆ ದುರಂತವನ್ನು ತಂದಿಟ್ಟಿತು. ಇಂದಿರಾ ಹತ್ಯೆಗೆ ಪ್ರತೀಕಾರವಾಗಿ 1981ರ ನವೆಂಬರ್‌ 1ರಿಂದ ಮೂರ್ನಾಲ್ಕು ದಿನಗಳ ಕಾಲ ದೆಹಲಿ ಸೇರಿದಂತೆ ದೇಶಾದ್ಯಂತ ಸಿಖ್ಖರ ಮಾರಣಹೋಮವೇ ನಡೆಯಿತು. ಆಗ 3000ಕ್ಕೂ ಹೆಚ್ಚು ಸಿಖ್ಖರ ಹತ್ಯೆಯಾಯಿತು ಎಂದು ಹೇಳಲಾಗುತ್ತದೆ. ಕಂಡ ಕಂಡಲ್ಲಿ ಸಿಖ್ಖರನ್ನು ಜೀವಂತವಾಗಿ ಸುಡಲಾಯಿತು. ದೆಹಲಿಯಲ್ಲಿ ಹೆಚ್ಚಿನ ಪ್ರಮಾಣದ ಸಿಖ್ಖರು ಸಾವಿಗೀಡಾದರು. ಈ ಗಲಭೆಯ ಕೈವಾಡ ವಹಿಸಿದ್ದ ಕೆಲವು ಕಾಂಗ್ರೆಸ್‌ ನಾಯಕರಿಗೆ ಎಷ್ಟೋ ವರ್ಷಗಳ ನಂತರ ಶಿಕ್ಷೆಯಾಯಿತು. ಕೆಲವರು ಖುಲಾಸೆಯಾದರು.

ಇಷ್ಟೆಲ್ಲ ಆದ ಬಳಿಕ ಖಲಿಸ್ತಾನ ಚಳವಳಿಯ ಚಟುವಟಿಕೆಗಳು ನಿಂತವೇ ಎಂದು ನೀವು ಕೇಳಬಹುದು. ಸ್ವಲ್ಪ ಕಾಲ ಅವು ತಣ್ಣಗಾದವು ನಿಜ. ಆದರೆ ಮತ್ತೆ ಪ್ರತ್ಯೇಕತಾವಾದ ತನ್ನ ಹೆಡೆಗಳನ್ನು ಎತ್ತಿ ಫೂತ್ಕರಿಸಿತು. 1985ರ ಜೂನ್‌ನಲ್ಲಿ ಕೆನಡಾದಿಂದ ಬಾಂಬೆಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನವನ್ನು ಸಿಖ್‌ ಬಂಡುಕೋರರು ಆಕಾಶದಲ್ಲೇ ಸ್ಫೋಟಿಸಿದರು. ಅದರಲ್ಲಿದ್ದ ಎಲ್ಲ 329 ಪ್ರಯಾಣಿಕರು ಸುಟ್ಟುಹೋದರು.

ಮತ್ತೆ ಹೆಡೆ ಎತ್ತುತ್ತಲೇ ಇರುವ ಸರ್ಪ

1985ರ ಜುಲೈಯಲ್ಲಿ ಪ್ರಧಾನಿ ರಾಜೀವ್‌ ಗಾಂಧಿ ಮತ್ತು ಮೃದು ಧೋರಣೆಯ ಅಕಾಲಿ ದಳದ ನಾಯಕ ಹರ್ಚರಣ್‌ ಸಿಂಗ್‌ ಲೊಂಗ್ವೊಲಾ ಅವರು ಪಂಜಾಬ್‌ ಒಪ್ಪಂದಕ್ಕೆ ಸಹಿ ಹಾಕಿದರು. ಈ ಒಪ್ಪಂದದ ಪ್ರಕಾರ, ಕೇಂದ್ರ ಸರ್ಕಾರ ಅಕಾಲಿಗಳ ಕೆಲವು ಬೇಡಿಕೆ ಈಡೇರಿಕೆಗೆ ಒಪ್ಪಿತು. ಇದಕ್ಕೆ ಬದಲಾಗಿ ರಾಜಕೀಯ ಪ್ರತಿಭಟನೆಯನ್ನು ಅಕಾಲಿ ದಳ ಹಿಂಪಡೆಯಿತು. ಆದರೆ ಪ್ರತ್ಯೇಕತಾವಾದಿ ಚಟುವಟಿಕೆಗಳು ಮುಂದುವರಿದವು. ಅದೇ ವರ್ಷ ಆಗಸ್ಟ್‌ನಲ್ಲಿ ಲೊಂಗೋವಾಲ್ ಅವರನ್ನು ಉಗ್ರರು ಹತ್ಯೆ ಮಾಡಿದರು. ಆಪರೇಷನ್‌ ಬ್ಲೂಸ್ಟಾರ್‌ ನಡೆದ ಸಮಯದಲ್ಲಿ ಸೇನಾ ಮುಖ್ಯಸ್ಥರಾಗಿದ್ದ ಜನರಲ್‌ ಎ.ಎಸ್‌.ವೈದ್ಯ ಅವರನ್ನು 1986ರ ಆಗಸ್ಟ್‌ನಲ್ಲಿ ಪುಣೆಯಲ್ಲಿ ಭಯೋತ್ಪಾದಕರು ಹತ್ಯೆ ಮಾಡಿದರು.

ಇಷ್ಟಾದರೂ ಖಲಿಸ್ತಾನಿ ಚಟುವಟಿಕೆಗಳೆಲ್ಲ ನಿಲ್ಲಲಿಲ್ಲ. ಇದಾದ ನಂತರ ಆಪರೇಷನ್‌ ಬ್ಲೂ ಸ್ಟಾರ್‌ ಅನ್ನೇ ಹೋಲುವ, ಆಪರೇಷನ್‌ ಬ್ಲ್ಯಾಕ್‌ ಥಂಡರ್‌ ಎಂಬ ಹೆಸರಿನ ಕಾರ್ಯಾಚರಣೆಗಳನ್ನೂ ಭಾರತ ಸರ್ಕಾರ ನಡೆಸಿತು. ಆಪರೇಷನ್‌ ಬ್ಲೂ ಸ್ಟಾರ್‌ ವೇಳೆ ಅಳಿದುಳಿದ ಖಲಿಸ್ತಾನ್ ಉಗ್ರರು ಮತ್ತೆ ತಮ್ಮ ಕಾರ್ಯಾಚರಣೆಗೆ ಸ್ವರ್ಣಮಂದಿರವನ್ನೇ ಬಳಸಿಕೊಳ್ಳಲಾರಂಭಿಸಿದರು. ಇವರನ್ನು ಮಟ್ಟಹಾಕಲು ‘ಆಪರೇಷನ್‌ ಬ್ಲ್ಯಾಕ್‌ ಥಂಡರ್‌’ ನಡೆಸಲಾಯಿತು. 1986 ಏಪ್ರಿಲ್‌ನಲ್ಲಿ ಹಾಗೂ 1988 ಮೇ ತಿಂಗಳಲ್ಲಿ ಎರಡು ಬಾರಿ ಈ ಆಪರೇಷನ್‌ಗಳು ನಡೆದವು. ಇದಕ್ಕೆ ರಾಷ್ಟ್ರೀಯ ಭದ್ರತಾ ದಳದ ʼಬ್ಲ್ಯಾಕ್‌ ಕ್ಯಾಟ್‌’ ಕಮಾಂಡೊ ಯೋಧರನ್ನು ಬಳಸಿಕೊಳ್ಳಲಾಯಿತು. ಎರಡೂ ಆಪರೇಷನ್‌ಗಳ ನೇತೃತ್ವವನ್ನು ಪಂಜಾಬ್‌ ಪೊಲೀಸ್‌ ಡಿಜಿಪಿ ಆಗಿದ್ದ ಕೆ.ಪಿ.ಎಸ್.‌ ಗಿಲ್‌ ವಹಿಸಿದರು. ಅಳಿದುಳಿದ ಬಂಡುಕೋರರನ್ನು ಈ ಕಾರ್ಯಾಚರಣೆಗಳು ಮಟ್ಟಹಾಕುವಲ್ಲಿ ಯಶಸ್ವಿಯಾದವು ಎಂದು ಭಾವಿಸಲಾಯಿತು.

ಸೈನ್ಯದ ಮೇಜರ್‌ ಜನರಲ್‌ ಆಗಿದ್ದ ಲೆಫ್ಟಿನೆಂಟ್‌ ಕರ್ನಲ್‌ ಕುಲ್ದೀಪ್‌ ಸಿಂಗ್‌ ಬ್ರಾರ್‌ ಮತ್ತು ಪಂಜಾಬ್‌ನ ಪೊಲೀಸ್‌ ಮುಖ್ಯಸ್ಥರಾಗಿದ್ದ, ನಂತರ ರೊಮೇನಿಯಾದಲ್ಲಿ ಭಾರತೀಯ ರಾಯಭಾರಿಯಾದ ಜ್ಯೂಲಿಯೊ ರೆಬೆರೊ ಅವರ ಮೇಲೂ ಹಲವು ಬಾರಿ ಹತ್ಯೆ ಯತ್ನಗಳು ನಡೆದವು. 1995ರ ಆಗಸ್ಟ್‌ನಲ್ಲಿ ಪಂಜಾಬ್‌ನ ಮುಖ್ಯಮಂತ್ರಿಯಾಗಿದ್ದ ಬಿಯಂತ್‌ ಸಿಂಗ್‌ ಅವರನ್ನು ಖಲಿಸ್ತಾನಿ ಪ್ರೇರಿತ ಉಗ್ರಗಾಮಿಯೊಬ್ಬ ಆತ್ಮಹತ್ಯಾ ದಾಳಿ ನಡೆಸಿ ಹತ್ಯೆ ಮಾಡಿದ. ಇದರ ನಂತರ ಖಲಿಸ್ತಾನ ಚಳವಳಿ ಬಹುತೇಕ ತಣ್ಣಗಾಗಿದೆ ಎಂದೇ ಭಾವಿಸಲಾಗಿತ್ತು. ಆದರೆ ಕೆನಡಾದಲ್ಲಿ ನೆಲೆಯೂರಿ ಕುಳಿತ ಕೆಲವು ಖಲಿಸ್ತಾನ್‌ ಸಹಾನುಭೂತಿಪರ ನಾಯಕರು, ರಾಜ್ಯದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಲೇ ಇದ್ದಾರೆ. ಅದಕ್ಕೆ ಪಾಕಿಸ್ತಾನ ಕೂಡಾ ಕುಮ್ಮಕ್ಕು ಕೊಡುತ್ತಿದೆ. ಇತ್ತೀಚಿನ ಉದಾಹರಣೆ ಎಂದರೆ ಸಿಖ್‌ ರೈತರು ದಿಲ್ಲಿಯಲ್ಲಿ ನಡೆಸಿದ ರೈತಕಾಯಿದೆ ವಿರೋಧಿ ಪ್ರತಿಭಟನೆಗಳಲ್ಲಿ ಸೇರಿಕೊಂಡ ಖಲಿಸ್ತಾನ್‌ ಶಕ್ತಿಗಳು. ಗಣರಾಜ್ಯೋತ್ಸವ ದಿನದಂದು ನಡೆದ ಹಿಂಸಾತ್ಮಕ ಪ್ರತಿಭಟನೆಗಳಲ್ಲಿ ಖಲಿಸ್ತಾನ್ ಧ್ವಜ ಹಾಗೂ ಭಿಂದ್ರನ್‌ವಾಲೆ ಪೋಸ್ಟರ್‌ಗಳು ರಾರಾಜಿಸಿದವು. ಇತ್ತೀಚೆಗೆ ಹಿಮಾಚಲ ಪ್ರದೇಶದಲ್ಲಿ ಸಹ ಖಲಿಸ್ತಾನ್‌ ಚಟುವಟಿಕೆ ಕಂಡುಬಂದಿದೆ. ʼಸಿಖ್ಸ್‌ ಫಾರ್‌ ಜಸ್ಟಿಸ್‌ʼ ಎಂಬ ಸಂಘಟನೆಯ ನಾಯಕ ಗುರುಪತವಂತ್‌ ಸಿಂಗ್‌ ಪನ್ನು ಎಂಬಾತನ ಮೇಲೆ ಈ ಕುರಿತು ಕೇಸುಗಳು ದಾಖಲಾಗಿವೆ. ಈ ಸಂಘಟನೆಯನ್ನು ನಿಷೇಧಿಸಲಾಗಿದೆ.

ಖಲಿಸ್ತಾನ್‌ ಚಳವಳಿ ಸತ್ತಿದೆ ನಿಜ. ಆದರೆ ಪ್ರತ್ಯೇಕತಾವಾದಿ ಶಕ್ತಿಗಳು ಆಗಾಗ ತಲೆ ಎತ್ತುತ್ತಲೇ ಇವೆ. ಆಪರೇಶನ್‌ ಬ್ಲೂಸ್ಟಾರ್‌ ದೇಶದ ಇತಿಹಾಸವನ್ನೇ ರಕ್ತದಲ್ಲಿ ಅದ್ದಿ ತೆಗೆದ ಘಟನೆ. ಪ್ರತ್ಯೇಕತಾವಾದ ಹೇಗೆ ಬೆಳೆಯುತ್ತದೆ, ಹೇಗೆ ದುರಂತದಲ್ಲಿ ಕೊನೆಗೊಳ್ಳುತ್ತದೆ ಎಂಬುದಕ್ಕೆ ಸಾಕ್ಷಿಯಾಗಿ ಆ ದುರಂತಮಯ ಸನ್ನಿವೇಶಗಳು ಸಾಕ್ಷಿಯಾಗಿ ನಿಂತಿವೆ.

ಇದನ್ನೂ ಓದಿ: Vistara Explainer: ಇಸ್ಲಾಮಿಕ್ ದೇಶಗಳ ಅಧಿಕ ಪ್ರಸಂಗ!

Exit mobile version